ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ಕಾಂಗ್ರೆಸ್‌ಗೆ ಬೆಂಬಲ: ಶಾಸಕ ಎಸ್.ಟಿ. ಸೋಮಶೇಖರ್

Published 5 ಏಪ್ರಿಲ್ 2024, 16:14 IST
Last Updated 5 ಏಪ್ರಿಲ್ 2024, 16:14 IST
ಅಕ್ಷರ ಗಾತ್ರ

ಕೆಂಗೇರಿ: ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್, ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ಸೂಚಿಸುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ಬಹಿರಂಗ ಸಮರ ಸಾರಿದ್ದಾರೆ.

ರಾಜ್ಯಸಭೆ, ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿಸಿದ್ದ ಎಸ್.ಟಿ. ಸೋಮಶೇಖರ್, ಕೆಂಗೇರಿ ಉಪನಗರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಸಹಕರಿಸುವಂತೆ ತಮ್ಮ ಬೆಂಬಲಿಗರಿಗೆ ಸೂಚಿಸಿದರು.

‘ಕ್ಷೇತ್ರದಿಂದ ಕ್ಷೇತ್ರಕ್ಕೆ ಹಾರುವ ವಲಸಿಗರನ್ನು ಹಾಗೂ ಕ್ಷೇತ್ರದಿಂದಲೇ ತಿರಸ್ಕೃತರಾದ ಅಭ್ಯರ್ಥಿಗಳನ್ನು ಒಪ್ಪಿಕೊಳ್ಳಲು ಯಶವಂತಪುರ ಕ್ಷೇತ್ರ ಪುಕ್ಸಟ್ಟೆ ಬಿದ್ದಿದೆಯೇ‘ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ತಮ್ಮ ಬೆಂಬಲಿಗರ ಮೂಲಕ ‘ಗೋ ಬ್ಯಾಕ್ ಶೋಭಾ’ ಎಂದು ಘೋಷಣೆಯನ್ನೂ ಕೂಗಿಸಿದರು.

‘ನಾನು ಯಾವುದೇ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿರಲಿಲ್ಲ. ಕ್ಷೇತ್ರದ ಅಭಿವೃದ್ದಿಗಾಗಿ ಹಾಗೂ ಅನುದಾನಕ್ಕಾಗಿ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರೊಂದಿಗೆ ಸಮನ್ವಯ ಸಾಧಿಸಿದೆ. ಕುಡಿಯುವ ನೀರು ಹಾಗೂ ಯುಜಿಡಿ ಕಾಮಗಾರಿಗೆ ₹27 ಕೋಟಿಗೂ ಅಧಿಕ ಅನುದಾನ ಪಡೆದಿದ್ದೇನೆ. ಇದನ್ನೇ ಅನುಮಾನದಿಂದ ನೋಡಲಾಯಿತು. ಚುನಾವಣೆಯ ಸಮಯದಲ್ಲಿ ನನ್ನ ಸೋಲಿಗೆ ಬಿಜೆಪಿ ಸ್ಥಳೀಯ ನಾಯಕರೇ ಪ್ರಯತ್ನಿಸಿದರು. ಅವರ ವಿರುದ್ಧ ದೂರು ಸಲ್ಲಿಸಿದರೂ ಕ್ರಮವಾಗಲಿಲ್ಲ. ಸ್ಥಳೀಯ ನಾಯಕರಿಂದಲೇ ಪಕ್ಷ ವಿರೋಧಿ ಚಟುವಟಿಕೆಯಾಗುತ್ತಿದೆ’ ಎಂದು ದೂರಿದರು.

‘ಸಮ್ಮಿಶ್ರ ಸರ್ಕಾರದ ಅವಧಿಯ ಕಹಿ ಘಟನೆಗಳು ಅಂದು ಕಾಂಗ್ರೆಸ್‌ ತೊರೆಯುವಂತೆ ಮಾಡಿತು. ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದು ನನ್ನ ರಾಜಕೀಯ ಜೀವನದ ಅತಿ ಕೆಟ್ಟ ನಿರ್ಧಾರ. ಪಕ್ಷ ಸೇರ್ಪಡೆಯ ಆರಂಭದಲ್ಲಿ ಬಿಜೆಪಿ ನನಗೆ ಜಾಮೂನು, ಜಿಲೇಬಿ ನೀಡಿ ಸ್ವಾಗತ ನೀಡಿತು. ಕಾಲ ಕಳೆದಂತೆ ವಿಷ ಪ್ರಾಷನದ ಅನುಭವವಾಯಿತು’ ಎಂದು ದೂರಿದರು.

‘ಸೋಮಶೇಖರ್ ಬೆಂಬಲ ನಿರಾಕರಿಸುವ ಮೂಲಕ ಶೋಭಾ ಕರಂದ್ಲಾಜೆ ಅವರು ಯಶವಂತಪುರ ಕ್ಷೇತ್ರದ ಮತದಾರರಿಗೆ ಅಪಮಾನ ಮಾಡಿದ್ದಾರೆ. ಚುನಾವಣೆಯಲ್ಲಿ ಮತದಾರರು ಅವರಿಗೆ ಸೂಕ್ತ ಉತ್ತರ ನೀಡಬೇಕು‘ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರೊ ಎಂ.ವಿ.ರಾಜೀವ್ ಗೌಡ, ನೆಲಮಂಗಲ ಶಾಸಕ ಶ್ರೀನಿವಾಸ್, ಮುಖಂಡರಾದ ಆರ್ಯ ಶ್ರೀನಿವಾಸ್, ರಾಜಣ್ಣ, ರಾಜ್ ಕುಮಾರ್, ಚಿಕ್ಕರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT