ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆದ್ದ ಕ್ಷೇತ್ರವನ್ನೇ ಕುಮಾರಸ್ವಾಮಿಗೆ ಬಿಟ್ಟು ಕೊಟ್ಟಿಲ್ಲವೇ: ಸುಮಲತಾ ಪ್ರಶ್ನೆ

Published 20 ಏಪ್ರಿಲ್ 2024, 13:10 IST
Last Updated 20 ಏಪ್ರಿಲ್ 2024, 13:10 IST
ಅಕ್ಷರ ಗಾತ್ರ

ಮೈಸೂರು: ‘ಗೆದ್ದ ಕ್ಷೇತ್ರವನ್ನೇ ಕುಮಾರಸ್ವಾಮಿ ಅವರಿಗೆ ಬಿಟ್ಟುಕೊಟ್ಟಿದ್ದೇನೆ. ಅದಕ್ಕಿಂತ ದೊಡ್ಡ ಸಹಕಾರ ಏನು ಬೇಕು’ ಎಂದು ಮಂಡ್ಯ ಸಂಸದೆ ಸುಮಲತಾ ಪ್ರಶ್ನಿಸಿದರು.

ಮಂಡ್ಯದಲ್ಲಿ ಎನ್‌ಡಿಎ ಅಭ್ಯರ್ಥಿ ಎಚ್‌.ಡಿ. ಕುಮಾರಸ್ವಾಮಿ ಪರ ಪ್ರಚಾರದಲ್ಲಿ ಪಾಲ್ಗೊಳ್ಳದ ಕುರಿತು ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

‘ಎರಡು ವಾರದ ಹಿಂದೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಮ್ಮ ಮನೆಗೆ ಬಂದು ಸಹಕಾರ ಕೇಳಿದ್ದರು. ನಾನು ಬಿಜೆಪಿಗೆ ಸೇರ್ಪಡೆಗೊಳ್ಳುವುದಲ್ಲದೇ ಮನಃಪೂರ್ವಕವಾಗಿ ನನ್ನ ಸ್ಥಾನವನ್ನೇ ಬಿಟ್ಟು ಕೊಟ್ಟಿದ್ದೇನೆ. ನನ್ನ ಈ ನಿರ್ಧಾರವು ಎನ್‌ಡಿಎ ಅಭ್ಯರ್ಥಿ ಪರವಾಗಿಯೇ ಇದೆ. ಅದನ್ನು ಅನುಮಾನಿಸುವ ಅಗತ್ಯವಿಲ್ಲ’ ಎಂದರು.

‘ನಾನು ಎಲ್ಲಿ ಪ್ರಚಾರ ಕೈಗೊಳ್ಳಬೇಕು ಎಂಬುದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. ಬಿಜೆಪಿ ವರಿಷ್ಠರು ಎಲ್ಲೆಲ್ಲಿ ಪ್ರಚಾರಕ್ಕೆ ಸೂಚಿಸಿದ್ದಾರೋ ಅಲ್ಲೆಲ್ಲ ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆ ಮಾಡುತ್ತಿದ್ದೇನೆ. ಮಂಡ್ಯದಲ್ಲಿ ಪ್ರಚಾರಕ್ಕೆ ಇನ್ನೂ ಆಹ್ವಾನ ಬಂದಿಲ್ಲ. ನನ್ನ ಬೆಂಬಲಿಗರು ಅಲ್ಲಿ ಎನ್‌ಡಿಎ ಪರ ಪ್ರಚಾರ ನಡೆಸಿದ್ದಾರೆ. ಯಾವುದೇ ಒಳ ಏಟಿನ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟನೆ ನೀಡಿದರು.

ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ನಟ ದರ್ಶನ್‌ ಪ್ರಚಾರ ಕುರಿತು ಪ್ರತಿಕ್ರಿಯಿಸಿ ‘ದರ್ಶನ್‌ ಸಣ್ಣ ಮಗುವಲ್ಲ, ಅವರು ನಿರ್ಧಾರ ಕೈಗೊಳ್ಳುವಲ್ಲಿ ಸ್ವತಂತ್ರರು’ ಎಂದರು.

‘ಕಳೆದ ಬಾರಿಯೂ ದರ್ಶನ್‌ ಬೇರೆ ಬೇರೆ ಪಕ್ಷಕ್ಕೆ ಪ್ರಚಾರ ಮಾಡಿದ್ದರು. ನಾನು ಸ್ಪರ್ಧೆ ಮಾಡಿದ್ದರೆ ನನ್ನ ಪರ ಪ್ರಚಾರ ಮಾಡುತ್ತಿದ್ದರು. ಅದು ಅವರ ವೈಯಕ್ತಿಕ ಆಯ್ಕೆ’ ಎಂದರು.

‘ ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ಹತ್ಯೆ ಬೇಸರದ ಸಂಗತಿ. ಆದರೆ ಅದನ್ನೇ ಇಟ್ಟುಕೊಂಡು ಆಕೆಯ ತೇಜೋವಧೆ ಮಾಡುವುದು ಸರಿಯಲ್ಲ. ವೈಯಕ್ತಿಕ ಕಾರಣಕ್ಕೆ ಕೊಲೆ ಆದರೆ ಅದು ಕೊಲೆ ಅಲ್ಲವೇ? ಈ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು. ಒಂದು ಸಮುದಾಯವನ್ನು ಓಲೈಸುವ ಪ್ರಯತ್ನವನ್ನೂ ಮಾಡಬಾರದು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT