ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ: ಎಲ್ಲ ಹಂತದಲ್ಲಿ ಸಮನ್ವಯಕ್ಕೆ ಅಮಿತ್‌ ಶಾ ಸೂಚನೆ

ಬಿಜೆ‍ಪಿ– ಜೆಡಿಎಸ್‌ ರಾಜ್ಯ ಮಟ್ಟದ ಜಂಟಿ ಕೋರ್‌ ಕಮಿಟಿ ಸಭೆಯಲ್ಲಿ ಚರ್ಚೆ
Published 3 ಏಪ್ರಿಲ್ 2024, 0:28 IST
Last Updated 3 ಏಪ್ರಿಲ್ 2024, 0:28 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿಕೂಟದಲ್ಲಿ ಎಲ್ಲ ಹಂತದಲ್ಲಿ ಸಮನ್ವಯ ಸಾಧಿಸಲು ತಕ್ಷಣದಿಂದಲೇ ಕಾರ್ಯಪ್ರವೃತ್ತರಾಗಬೇಕು. ಸ್ಥಳೀಯವಾಗಿ ಇರುವ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಎಲ್ಲ ಕ್ಷೇತ್ರಗಳಲ್ಲೂ ಜಂಟಿ ಸಮನ್ವಯ ಸಮಿತಿ ರಚಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಎರಡೂ ಪಕ್ಷಗಳ ನಾಯಕರಿಗೆ ಸೂಚಿಸಿದ್ದಾರೆ.

ನಗರದ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಮಂಗಳವಾರ ಬಿಜೆಪಿ–ಜೆಡಿಎಸ್‌ ಜಂಟಿ ಕೋರ್‌ ಕಮಿಟಿ ಸಭೆ ನಡೆಸಿದ ಅವರು, ಲೋಕಸಭಾ ಚುನಾವಣಾ ಸಿದ್ಧತೆ ಕುರಿತು ಎರಡೂ ಪಕ್ಷಗಳ ಪ್ರಮುಖರ ಜತೆ ಚರ್ಚಿಸಿದರು. ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ, ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ, ಜೆಡಿಎಸ್‌ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ, ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ, ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪೂರ, ವೆಂಕಟರಾವ್‌ ನಾಡಗೌಡ ಸೇರಿದಂತೆ ಎರಡೂ ಪಕ್ಷಗಳ ಹಲವು ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.

‘ಕೆಲವು ಕ್ಷೇತ್ರಗಳಲ್ಲಿ ಪೂರ್ಣ ಪ್ರಮಾಣದ ಹೊಂದಾಣಿಕೆಯ ವಾತಾವರಣ ಸೃಷ್ಟಿಯಾಗದೇ ಇರುವ ಕುರಿತು ಕುಮಾರಸ್ವಾಮಿ ಅವರು ಅಮಿತ್‌ ಶಾ ಗಮನಕ್ಕೆ ತಂದರು. ಅಂತಹ ಕ್ಷೇತ್ರಗಳನ್ನು ಗುರುತಿಸಿ ಸ್ಥಳೀಯ ಬಿಜೆಪಿ ಮುಖಂಡರ ಜತೆ ಚರ್ಚಿಸಿ ಸಮನ್ವಯ ಸಾಧಿಸಲು ಕ್ರಮ ಕೈಗೊಳ್ಳುವಂತೆ ತಮ್ಮ ಪಕ್ಷದ ನಾಯಕರಿಗೆ ಶಾ ಸೂಚಿಸಿದರು’ ಎಂದು ಸಭೆಯಲ್ಲಿದ್ದ ಜೆಡಿಎಸ್‌ ನಾಯಕರೊಬ್ಬರು ತಿಳಿಸಿದರು.

‘ಎರಡೂ ಪಕ್ಷಗಳ ಮುಖಂಡರು ವೈಯಕ್ತಿಕ ಪ್ರತಿಷ್ಠೆ ಬದಗಿಟ್ಟು ಒಗ್ಗಟ್ಟಿನಿಂದ ಚುನಾವಣೆ ಎದುರಿಸಬೇಕು. 28 ಕ್ಷೇತ್ರಗಳಲ್ಲೂ ಗೆಲುವಿನ ಗುರಿಯೊಂದಿಗೆ ಕೆಲಸ ಮಾಡಬೇಕು. ಯಾವುದೇ ಕ್ಷೇತ್ರದಲ್ಲಿ ಮಿತ್ರಪಕ್ಷಗಳ ಮಧ್ಯೆ ಸಮನ್ವಯದ ಕೊರತೆ, ಗೊಂದಲ ಉದ್ಭವಿಸಿದಲ್ಲಿ ತಕ್ಷಣ ತಮ್ಮ ಗಮನಕ್ಕೆ ತರಬೇಕು ಎಂಬ ಸೂಚನೆ ನೀಡಿದರು’ ಎಂದರು.

ವರದಿ ವಿನಿಮಯಕ್ಕೆ ಸೂಚನೆ:

‘ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ ಪಕ್ಷದ ವತಿಯಿಂದ ನಡೆಸಿರುವ ಸಮೀಕ್ಷೆಯ ವರದಿಯನ್ನು ಕುಮಾರಸ್ವಾಮಿ ಅವರು ಅಮಿತ್‌ ಶಾ ಅವರಿಗೆ ನೀಡಿದರು. ಪ್ರತಿ ಕ್ಷೇತ್ರದಲ್ಲಿನ ಸವಾಲುಗಳ ಕುರಿತು ತಮಗಿರುವ ಮಾಹಿತಿಯನ್ನೂ ಹಂಚಿಕೊಂಡರು. ಬಿಜೆಪಿ ನಡೆಸಿರುವ ಸಮೀಕ್ಷೆಯ ವರದಿಯನ್ನು ಜೆಡಿಎಸ್‌ ನಾಯಕರ ಜತೆ ಹಂಚಿಕೊಳ್ಳುವಂತೆ ಪಕ್ಷದ ನಾಯಕರಿಗೆ ಸೂಚಿಸಿದರು’ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

ಎಲ್ಲ ಹಂತದ ಚುನಾವಣಾ ಪ್ರಚಾರ ಸಭೆಗಳಲ್ಲೂ ಎರಡೂ ಪಕ್ಷದ ನಾಯಕರು ವೇದಿಕೆ ಹಂಚಿಕೊಳ್ಳಬೇಕು. ಯಾವುದೇ ಹಂತದಲ್ಲಿ ಸಮಸ್ಯೆ ಇದ್ದರೂ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಗಮನಕ್ಕೆ ತರಬೇಕು. ಅವರ ಹಂತದಲ್ಲೇ ಸಮಸ್ಯೆ ಪರಿಹರಿಸಲು ಪ್ರಯತ್ನಿಸಬೇಕು. ದೊಡ್ಡ ಪ್ರಮಾಣದ ಬಿಕ್ಕಟ್ಟು ಇದ್ದಲ್ಲಿ ತಮ್ಮ ಗಮನಕ್ಕೆ ತರಬೇಕು ಎಂಬ ಸೂಚನೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ಎರಡೂ ಪಕ್ಷಗಳ ಮುಖಂಡರ ಮಧ್ಯೆ ಸಮನ್ವಯ ಸಾಧಿಸಲು ಕುಮಾರಸ್ವಾಮಿ ಅವರ ಪ್ರಯತ್ನವನ್ನು ಅಮಿತ್ ಶಾ ಶ್ಲಾಘಿಸಿದ್ದಾರೆ. ಅದೇ ಮಾದರಿಯಲ್ಲಿ ಬಿಜೆಪಿ ನಾಯಕರು ಕೂಡ ಜೆಡಿಎಸ್‌ ನಾಯಕರ ಮನೆಗಳಿಗೆ ಭೇಟಿ ನೀಡುವಂತೆ ನಿರ್ದೇಶನ ನೀಡಿದ್ದಾರೆ ಎಂದು ಜೆಡಿಎಸ್‌ ನಾಯಕರು ತಿಳಿಸಿದ್ದಾರೆ.

ಬೆಂ. ಗ್ರಾಮಾಂತರದಲ್ಲಿ ಬಿಗಿ ಕ್ರಮಕ್ಕೆ ಆಗ್ರಹ
ತಮ್ಮ ಬಾವ ಡಾ.ಸಿ.ಎನ್‌. ಮಂಜುನಾಥ್‌ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮತ್ತು ಅವರ ಸಹೋದರ ವ್ಯಾಪಕವಾದ ಚುನಾವಣಾ ಅಕ್ರಮಗಳನ್ನು ನಡೆಸುತ್ತಿದ್ದು ತಕ್ಷಣ ಬಿಗಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಚ್‌.ಡಿ. ಕುಮಾರಸ್ವಾಮಿ ಅವರು ಅಮಿತ್‌ ಶಾ ಅವರನ್ನು ಸಭೆಯಲ್ಲಿ ಒತ್ತಾಯಿಸಿದ್ದಾರೆ. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ಶಾ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT