ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಂದ್ರದ ಜತೆ ಸಂಘರ್ಷ ರಾಜ್ಯಕ್ಕೆ ಹಾನಿ: ಆರ್‌. ಅಶೋಕ

Published 24 ಮಾರ್ಚ್ 2024, 15:53 IST
Last Updated 24 ಮಾರ್ಚ್ 2024, 15:53 IST
ಅಕ್ಷರ ಗಾತ್ರ

ಚಿಂಚೋಳಿ: ‘ಪ್ರಸ್ತುತ ಲೋಕಸಭಾ ಚುನಾವಣೆ ಭಾರತದ ಭವಿಷ್ಯ ರೂಪಿಸುವ ಚುನಾವಣೆಯಾಗಿದೆ. ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತ ಬೂತ್‌ನಲ್ಲಿ ಕೆಲಸ ಮಾಡಿ, ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಶ್ರಮಿಸಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದರು.

ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರಜಾಪ್ರಭುತ್ವದ ಪವಿತ್ರ ದೇಗುಲ ವಿಧಾನಸೌಧದಲ್ಲಿಯೇ ಕಾಂಗ್ರೆಸ್ಸಿಗರು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದಾರೆ. ಇದು ತಲೆ ತಗ್ಗಿಸುವ ಘಟನೆ. ಇದನ್ನು ಮರುಕಳಿಸಬಾರದು, ಸುತ್ತಲಿನ ದೇಶಗಳಿಂದ ಭಾರತಕ್ಕೆ ಆಪತ್ತು ಬರಬಾರದು, ಭಾರತ ದೇಶ ಸುರಕ್ಷಿತವಾಗಿರಬೇಕು ಎನ್ನುವುದಾದರೆ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು’ ಎಂದರು.

‘ರಾಜ್ಯ ಸರ್ಕಾರ ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿದೆ’ ಎಂದು ವಾಗ್ದಾಳಿ ನಡೆಸಿದ ಆರ್.ಅಶೋಕ, ‘ಕೇಂದ್ರ ಸರ್ಕಾರ ಬರ ಪರಿಹಾರ ನೀಡಿಲ್ಲ ಎಂದು ಕೋರ್ಟ್‌ ಮೆಟ್ಟಿಲೇರಿ ಸಂಘರ್ಷದ ಹಾದಿ ಹಿಡಿದಿರುವುದು ಸರಿಯಲ್ಲ. ಇದರಿಂದ ರಾಜ್ಯಕ್ಕೆ ನಷ್ಟವಾಗಲಿದೆ. ಯುಪಿಎ ಅವಧಿಯಲ್ಲಿ ಪ್ರಧಾನಿಯಾಗಿದ್ದ ಮನಮೋಹನ ಸಿಂಗ್ ಅವರು 11 ತಿಂಗಳ ನಂತರ ಹಣ ಬಿಡುಗಡೆ ಮಾಡಿದ್ದರು’ ಎಂದರು.

ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿ, ‘ಕಳೆದ 10 ವರ್ಷಗಳಲ್ಲಿ ಬೀದರ್ ಮತಕ್ಷೇತ್ರಕ್ಕೆ ಕೇಂದ್ರದಿಂದ ಹೆಚ್ಚು ಯೋಜನೆಗಳನ್ನು ತಂದು ಅನುಷ್ಠಾನಗೊಳಿಸಿದ್ದೇನೆ. ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಆಳಂದ ಮತ್ತು ಚಿಂಚೋಳಿಗೆ ತಲಾ ₹8 ಕೋಟಿ ವೆಚ್ಚ ಮಾಡಿದ್ದೇನೆ. ನನ್ನಿಂದ ಸಾಧ್ಯವಾದಷ್ಟು ಕೆಲಸಗಳನ್ನು ಮಾಡಿದ್ದೇನೆ. ಹೀಗಾಗಿ ಮತ್ತೊಮ್ಮೆ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ಶಾಸಕ ಡಾ.ಅವಿನಾಶ ಜಾಧವ ಮಾತನಾಡಿ, ‘ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಿಂತುಹೋಗಿವೆ. ಗ್ಯಾರಂಟಿ ಯೋಜನೆ ಹಳ್ಳ ಹಿಡಿದಿವೆ. ಅಸಮರ್ಪಕ ಅನುಷ್ಠಾನದಿಂದ ಜನ ರೋಸಿ ಹೋಗಿದ್ದಾರೆ. ಗ್ಯಾರಂಟಿ ದೂರವಿರಲಿ ಆದರೆ ಸಂಧ್ಯಾಸುರಕ್ಷಾ ಮಾಸಾಶನವೂ ಬರುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಪಾಠ ಕಲಿಸಲು ಬಿಜೆಪಿ ಕಾರ್ಯಕರ್ತರು ಸಂಕಲ್ಪದಿಂದ ಕೆಲಸ ಮಾಡಬೇಕು. ಹಿಂದಿಗಿಂತಲೂ ಈ ಬಾರಿ ಚಿಂಚೋಳಿ ಮತಕ್ಷೇತ್ರದಿಂದ ಭಗವಂತ ಖೂಬಾ ಅವರಿಗೆ 30 ಸಾವಿರ ಮತಗಳ ಮುನ್ನಡೆ ಕೊಡಲು ಬಿಜೆಪಿ ಕಾರ್ಯಕರ್ತರು ಶ್ರಮಿಸಬೇಕು’ ಎಂದರು.

ಶಾಸಕ ಸಿದ್ದಲಿಂಗಪ್ಪ ಪಾಟೀಲ, ಡಾ.ಶೈಲೇಂದ್ರ ಬೆಲ್ದಾಳೆ, ಮುಖಂಡರಾದ ಅಮರನಾಥ ಪಾಟೀಲ, ಶರಣಪ್ಪ ತಳವಾರ, ಈಶ್ವರಸಿಂಗ್ ಠಾಕೂರ, ಜಗಜೀವನರಡ್ಡಿ ಪಾಟೀಲ, ಶಶಿಕಲಾ ಟೆಂಗಳಿ, ಮಹಾನಂದಾ ರೊಟ್ಟಿ, ನೀಲಾ ರಾಠೋಡ್, ಮೋತಿರಾಮ ನಾಯಕ, ಗೌತಮ ಪಾಟೀಲ, ವಿಜಯಕುಮಾರ ಚೇಂಗಟಿ, ಗಿರಿರಾಜ ನಾಟಿಕಾರ, ರಾಮರೆಡ್ಡಿ ಪಾಟೀಲ, ಜಗನ್ನಾಥ ಪಾಟೀಲ, ಸಂತೋಷ ಗಡಂತಿ, ಮೊದಲಾದವರು ಹಾಜರಿದ್ದರು.

ಮಹಾಗಾಂವ್ ಸುಲೇಪೇಟ ಸೇಡಂ ರಾಯಚೂರು ರಾಷ್ಟ್ರೀಯ ಹೆದ್ದಾರಿಯಾಗಿ ಮಾಡಿಸಿದ್ದೇವೆ. ಐನಾಪುರ ಏತ ನೀರಾವರಿ ಯೋಜನೆ ಮಂಜೂರು ಮಾಡಿಸಿದ್ದೇನೆ
- ಭಗವಂತ ಖೂಬಾ ಕೇಂದ್ರ ಸಚಿವ
ಒಂದು ಮನೆಯಲ್ಲಿ ಅಣ್ಣ ತಮ್ಮಂದಿರ ಮಧ್ಯೆ ವ್ಯತ್ಯಾಸಗಳು ಎದುರಾಗುವುದು ಸಹಜ. ದೇಶದ ಹಿತದೃಷ್ಟಿಯಿಂದ ವ್ಯತ್ಯಾಸ ಮರೆತು ಒಂದಾಗಿ ಚುನಾವಣೆ ಮಾಡುವುದು ಅತಿ ಅಗತ್ಯವಾಗಿದೆ
ಆರ್. ಅಶೋಕ ಪ್ರತಿಪಕ್ಷ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT