ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿದ ಪ್ರಧಾನಿ

ರಾತ್ರಿ 10.5ಕ್ಕೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮನ, ಸ್ವಾಗತ ಕೋರಿದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌
Published 27 ಏಪ್ರಿಲ್ 2024, 18:11 IST
Last Updated 27 ಏಪ್ರಿಲ್ 2024, 18:11 IST
ಅಕ್ಷರ ಗಾತ್ರ

ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಶನಿವಾರ ರಾತ್ರಿ 10.5ರ ಸುಮಾರಿಗೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಹಾಗೂ ಕೆಲ ಮುಖಂಡರು ಅವರನ್ನು ಸ್ವಾಗತಿಸಿದರು.

ಮಹಾರಾಷ್ಟ್ರದ ಕೊಲ್ಹಾಪುರದಿಂದ ಸಂಜೆ 7.30ಕ್ಕೆ ಅವರು ಬೆಳಗಾವಿಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ ಎಂದು ತಿಳಿಸಲಾಗಿತ್ತು. ಆದರೆ, ಕೊಲ್ಹಾಪುರದಿಂದ ಅವರು ಗೋವಾಗೆ ತೆರಳಿದರು. ಅಲ್ಲಿ ಚುನಾವಣಾ ಪ್ರಚಾರ ನಡೆಸಿ, ರಾತ್ರಿ ಬೆಳಗಾವಿ ಬಳಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದರು.

ಅಲ್ಲಿಂದ ರಸ್ತೆಯ ಮೂಲಕ ಬೆಳಗಾವಿ ನಗರ ಪ್ರವೇಶಿಸಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ, ಕಾಕತಿ ಸಮೀಪದ ಐಟಿಸಿ ವೆಲ್‌ಕಮ್‌ ಹೋಟೆಲ್‌ನತ್ತ ತೆರಳಿದರು.

ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಳಗಾವಿ ಹಾಗೂ ನಗರದಿಂದ ಕಾಕತಿಯವರೆಗೆ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಯಿತು. ಒಂದು ತಾಸು ಸಂಚಾರ ಸಂಪೂರ್ಣ ಬಂದ್‌ ಮಾಡಲಾಯಿತು.

ವಿಶೇಷ ರಕ್ಷಣಾ ದಳ (ಎಸ್‌ಪಿಜಿ), ನಗರ ಪೊಲೀಸ್‌ ಕಮಿಷನರೇಟ್‌, ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಸಾಕಷ್ಟು ಬಿಗಿ ಬಂದೋಬಸ್ತ್‌ ಮಾಡಲಾಯಿತು. ಮೋದಿ ಅವರ ವಾಹನದ ಹಿಂದೆ ಹಲವಾರು ಕಾರುಗಳು ಸಾಗಿದವು. ರಸ್ತೆಯಲ್ಲಿ ಅಲ್ಲಲ್ಲಿ ಜನ ನಿಂತು ನೋಡಿದರು.

ಇದಕ್ಕೂ ಮುನ್ನ ಎರಡು ಬಾರಿ ‘ಡ್ರೈ ರನ್‌’ ಮಾಡಿದ ಭದ್ರತಾ ಸಿಬ್ಬಂದಿ ತಪಾಸಣೆ ಮಾಡಿದ್ದರು. ಮೋದಿ ಅವರು ತಂಗಲಿರುವ ಹೋಟೆಲ್‌ ಸುತ್ತಲಿನ ಎಲ್ಲ ಚಟುವಟಿಕೆಗಳನ್ನು ಬಂದ್‌ ಮಾಡಲಾಗಿದೆ. ಹೋಟೆಲ್‌ ಹಿಂಬದಿಯಲ್ಲಿ ಗುಡ್ಡದ ಪ್ರದೇಶವಿದ್ದು ಅಲ್ಲಿಯೂ ಭದ್ರತೆ ನಿಯೋಜಿಸಲಾಗಿದೆ. ಸ್ನಿಪರ್ಸ್‌ ತಂಡ ಕೂಡ ಅಲರ್ಟ್‌ ಸ್ಥಿತಿಯಲ್ಲಿದೆ. ಗುಡ್ಡದಲ್ಲಿ ಪವನಯಂತ್ರಗಳಿದ್ದು ಅವುಗಳನ್ನೂ ಸ್ಥಗಿತಗೊಳಿಸಲಾಗಿದೆ.

ಭಾನುವಾರ (ಏ.28) ಬೆಳಿಗ್ಗೆ 10.30ಕ್ಕೆ ಪ್ರಧಾನಿ ಅವರು ನಗರದ ಮಾಲಿನಿಸಿಟಿ ಮೈದಾನದಲ್ಲಿ ಬೃಹತ್ ಸಮಾವೇಶದಲ್ಲಿ ಮಾತನಾಡಲಿದ್ದಾರೆ. ಬೆಳಗಾವಿ ಲೋಕಸಭೆ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌, ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರವಾಗಿ ಮತ ಯಾಚಿಸಲಿದ್ದಾರೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಯಕರು ಕೂಡ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ.

ಆದರೆ, ಶನಿವಾರ ತಡರಾತ್ರಿ ಬೆಳಗಾವಿಗೆ ಬಂದ ಅವರು ಸ್ಥಳೀಯ ನಾಯಕರೊಂದಿಗೆ ಯಾವುದೇ ಚರ್ಚೆಗೆ ಅವಕಾಶ ಕೊಟ್ಟಿಲ್ಲ ಎಂದು ಮೂಲಗಳು ತಿಳಿಸಿವೆ.

ಬೆಳಗಾವಿ ನಗರ, ಪುಣೆ– ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಬೆಳಗಾವಿ– ಬಾಗಲಕೋಟೆ ರಾಜ್ಯ ಹೆದ್ದಾರಿಗಳಲ್ಲಿ ಸಂಚಾರ ಮಾರ್ಗಗಳನ್ನು ಬದಲಾಯಿಸಲಾಗಿದೆ.

ಮೋದಿ ಆಗಮನದಿಂದ ಜಿಲ್ಲೆಯ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿತು.

ಎಳನೀರು ಸೇವಿಸಿ ಮಲಗಿದ ಪ್ರಧಾನಿ

ಪ್ರಧಾನ ನರೇಂದ್ರ ಮೋದಿ ಅವರ ರಾತ್ರಿ ಊಟಕ್ಕಾಗಿ 36 ನಮೂನೆಯ ಆಹಾರ ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು. ಆದರೆ ಅವರು ಎಳನೀರು ಮಾತ್ರ ಸೇವಿಸಿದರು ಎಂದು ಮೂಲಗಳು ತಿಳಿಸಿವೆ. ಉತ್ತರ ಕರ್ನಾಟಕ ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಶೈಲಿಯ ಬಗೆಬಗೆಯ ಅಡುಗೆಗಳನ್ನು ಉಣಬಡಿಸಬೇಕು ಎಂದು ಜಿಲ್ಲೆಯ ಬಿಜೆಪಿ ನಾಯಕರು ಸಿದ್ಧತೆ ಮಾಡಿಕೊಂಡಿದ್ದರು. ಜತೆಗೆ ಉತ್ತರ ಭಾರತ ಶೈಲಿಯ ಖಾದ್ಯಗಳೂ ಇದ್ದವು ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT