ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ‘ದಕ್ಷಿಣ’ ಗೆಲ್ಲಲು ‘ಸೂರ್ಯ’ ಸಂಚಾರ

ಬಿಜೆಪಿ–ಜೆಡಿಎಸ್ ಮುಖಂಡರು, ಕಾರ್ಯಕರ್ತರ ಸಾಥ್ * ಬೈಕ್ ರ‍್ಯಾಲಿ, ತೆರೆದ ವಾಹನದಲ್ಲಿ ಮತಯಾಚನೆ
Published 22 ಏಪ್ರಿಲ್ 2024, 0:16 IST
Last Updated 22 ಏಪ್ರಿಲ್ 2024, 0:16 IST
ಅಕ್ಷರ ಗಾತ್ರ

ಬೆಂಗಳೂರು: ಬೆಳ್ಳಂಬೆಳಿಗ್ಗೆ ಉದ್ಯಾನದಲ್ಲಿ ವಾಯುವಿಹಾರಿಗಳ ಜೊತೆ ಮಾತುಕತೆ. ನಂತರ, ಬಿಜೆಪಿ– ಜೆಡಿಎಸ್ ಕಾರ್ಯಕರ್ತರ ಸಮ್ಮುಖದಲ್ಲಿ ತೆರೆದ ವಾಹನದಲ್ಲಿ ‘ಮತಯಾಚನೆ’ ರ‍್ಯಾಲಿ. ರಸ್ತೆಯುದ್ದಕ್ಕೂ ಬಿಜೆಪಿ – ಜೆಡಿಎಸ್ ಪಕ್ಷದ ಪರ ಘೋಷಣೆಗಳು. ನರೇಂದ್ರ ಮೋದಿ ಪರ ಜೈಕಾರಗಳು...

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ಭಾನುವಾರ ನಡೆಸಿದ ಪ್ರಚಾರದ ವೈಖರಿ ಇದು.

2019ರ ಚುನಾವಣೆಯಲ್ಲಿ ವಿಜಯಶಾಲಿಯಾಗಿದ್ದ ತೇಜಸ್ವಿ ಸೂರ್ಯ, 28ನೇ ವಯಸ್ಸಿಗೆ ಲೋಕಸಭೆ ಪ್ರವೇಶಿಸಿದ್ದರು. ಈ ಬಾರಿಯೂ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಪುನರಾಯ್ಕೆ ಬಯಸಿ ಕ್ಷೇತ್ರದಲ್ಲಿ ಮತಯಾಚನೆ ಮಾಡುತ್ತಿದ್ದಾರೆ.

ಬಿಳಿ ಅಂಗಿ– ಪಂಚೆ ತೊಟ್ಟು ಗಿರಿನಗರ ಮನೆಯಿಂದ ಬೆಳಿಗ್ಗೆ 7 ಗಂಟೆಗೆ ಹೊರಟ ತೇಜಸ್ವಿ ಸೂರ್ಯ, ಚನ್ನಮ್ಮನ ಕೆರೆ ಉದ್ಯಾನದಲ್ಲಿ ವಾಯುವಿಹಾರಿಗಳನ್ನು ಭೇಟಿಯಾದರು. ಸಭೆ ನಡೆಸಿ, ‘ನಿಮ್ಮದೊಂದು ಮತ ನೀಡಿ, ಪ್ರಧಾನಿ ಮೋದಿ ಕೈ ಬಲಪಡಿಸಿ’ ಎಂದು ಕೋರಿದರು. ಐದು ವರ್ಷಗಳ ಅಧಿಕಾರ ಅವಧಿಯಲ್ಲಿ ಕೈಗೊಂಡ ಕೆಲಸಗಳ ಬಗ್ಗೆ ವಿವರಿಸಿದರು.

ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಬೈಕ್‌ ರ‍್ಯಾಲಿ ಸ್ಥಳಕ್ಕೆ ಬೆಳಿಗ್ಗೆ 8 ಗಂಟೆಗೆ ತೇಜಸ್ವಿ ಸೂರ್ಯ ಹಾಜರಾದರು. ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಸಹ ಸಾಥ್ ನೀಡಿದರು. ಇಬ್ಬರೂ ಸ್ಥಳೀಯ ಮುಖಂಡರ ಜೊತೆ ಸೇರಿ ತೆರೆದ ವಾಹನ ಏರಿ ಮತಯಾಚನೆ ಮಾಡಿದರು. ಬಿಜೆಪಿ ಹಾಗೂ ಜೆಡಿಎಸ್ ಬಾವುಟ ಹಿಡಿದಿದ್ದ ಕಾರ್ಯಕರ್ತರು ಬೈಕ್‌ನಲ್ಲಿ ಹಿಂಬಾಲಿಸಿದರು. ‘ದೇಶಕ್ಕೆ ಮೋದಿ, ದಕ್ಷಿಣಕ್ಕೆ ಸೂರ್ಯ’ ಘೋಷಣೆ ಕೂಗಿದರು.

ಗೋವಿಂದರಾಜನಗರ ಕ್ಷೇತ್ರ ವ್ಯಾಪ್ತಿಯ ಚಂದ್ರಾಲೇಔಟ್‌ ಪ್ರಸನ್ನ ಗಣಪತಿ ದೇವಸ್ಥಾನದಿಂದ ಬೈಕ್‌ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು. ತೇಜಸ್ವಿ ಸೂರ್ಯ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಜೊತೆಯಾಗಿಯೇ ಬೆಳಿಗ್ಗೆ 10.45ಕ್ಕೆ ಸ್ಥಳಕ್ಕೆ ಆಗಮಿಸಿದರು. ತುರ್ತು ಕಾರ್ಯಕ್ರಮದ ನಿಮಿತ್ತ ಕುಮಾರಸ್ವಾಮಿ ಸ್ಥಳದಿಂದ ತೆರಳಿದರು. ತೇಜಸ್ವಿ ಸೂರ್ಯ ಹಾಗೂ ಸ್ಥಳೀಯ ಮುಖಂಡರು, ರ‍್ಯಾಲಿ ಮುಂದುವರಿಸಿದರು.

ನಾಗರಬಾವಿ ವೃತ್ತ, ನಾಯಂಡನಹಳ್ಳಿ, ಚಂದ್ರಾ ಲೇಔಟ್‌ನಲ್ಲಿ ಸಂಚರಿಸಿದ ತೇಜಸ್ವಿ ಸೂರ್ಯ, ಮತದಾರರತ್ತ ಕೈ ಬೀಸಿ ಕೈ ಮುಗಿದು ಮತಯಾಚಿಸಿದರು. ಮುಖಂಡರಾದ ಅರುಣ್ ಸೋಮಣ್ಣ, ಕೆ. ಉಮೇಶ್ ಶೆಟ್ಟಿ, ಆರ್‌. ಪ್ರಕಾಶ್ ಜೊತೆಯಲ್ಲಿದ್ದರು. ರಸ್ತೆಯಲ್ಲಿ ನೆರೆದಿದ್ದ ಕೆಲವರು, ತೇಜಸ್ವಿ ಸೂರ್ಯ ಅವರಿಂದ ಹಸ್ತಾಕ್ಷರ ಪಡೆದರು. ಸೆಲ್ಫಿ ಸಹ ಕ್ಲಿಕ್ಕಿಸಿಕೊಂಡರು.

ಬಿಟಿಎಂ ಕ್ಷೇತ್ರದಲ್ಲಿ ಮಧ್ಯಾಹ್ನ ಆಯೋಜಿಸಿದ್ದ ತಿಗಳರ ಜನಾಂಗದ ಸಮಾವೇಶದಲ್ಲಿ ಪಾಲ್ಗೊಂಡು ಮತಯಾಚಿಸಿದರು. ಬಿಡುವಿಲ್ಲದ ಕಾರ್ಯಕ್ರಮಗಳಿಂದಾಗಿ ಬೆಳಿಗ್ಗೆಯಿಂದ ತಿಂಡಿ ಸಹ ತಿನ್ನದ ತೇಜಸ್ವಿ ಸೂರ್ಯ, ಸಂಜೆ 5 ಗಂಟೆ ಸುಮಾರಿಗೆ ಜಯನಗರದ ಹೋಟೆಲ್‌ವೊಂದರಲ್ಲಿ ಉಪಾಹಾರ ಸೇವಿಸಿದರು.

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಸಂಜೆ ಹಾಗೂ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ರಾತ್ರಿ ಆಯೋಜಿಸಿದ್ದ ಬೈಕ್‌ ರ‍್ಯಾಲಿಯಲ್ಲೂ ತೇಜಸ್ವಿ ಸೂರ್ಯ ಭಾಗವಹಿಸಿದರು. ನಂತರ, ಹಲವು ಅಪಾರ್ಟ್‌ಮೆಂಟ್ ಸಮುಚ್ಚಯಗಳ ನಿವಾಸಿಗಳ ಜೊತೆ ಮಾತುಕತೆ ನಡೆಸಿ ಮತ ಕೇಳಿ ತಡರಾತ್ರಿ ಗಿರಿನಗರದ ಮನೆಯತ್ತ ಹೊರಟರು.

ಚಂದ್ರಾಲೇಔಟ್‌ನಲ್ಲಿ ಭಾನುವಾರ ಆಯೋಜಿಸಿದ್ದ ಪ್ರಚಾರ ರ‍್ಯಾಲಿಯಲ್ಲಿ ತೆರೆದ ವಾಹನದಲ್ಲಿ ಸಾಗಿದ ತೇಜಸ್ವಿ ಸೂರ್ಯ ಜನರತ್ತ ಕೈ ಬೀಸಿ ಮತಯಾಚನೆ ಮಾಡಿದರು – ಪ್ರಜಾವಾಣಿ ಚಿತ್ರ
ಚಂದ್ರಾಲೇಔಟ್‌ನಲ್ಲಿ ಭಾನುವಾರ ಆಯೋಜಿಸಿದ್ದ ಪ್ರಚಾರ ರ‍್ಯಾಲಿಯಲ್ಲಿ ತೆರೆದ ವಾಹನದಲ್ಲಿ ಸಾಗಿದ ತೇಜಸ್ವಿ ಸೂರ್ಯ ಜನರತ್ತ ಕೈ ಬೀಸಿ ಮತಯಾಚನೆ ಮಾಡಿದರು – ಪ್ರಜಾವಾಣಿ ಚಿತ್ರ

’ಮೋದಿ–ಬಿಜೆಪಿ ಮೇಲೆ ಜನರ ಅಭಿಮಾನ–ಪ್ರೀತಿ’

‘ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಬಗ್ಗೆ ಜನರಲ್ಲಿರುವ ಅಭಿಮಾನ–ಪ್ರೀತಿ ಈ ಬಾರಿಯ ಚುನಾವಣೆಯಲ್ಲಿ ಮತಗಳಾಗಿ ಪರಿವರ್ತನೆಯಾಗಲಿವೆ. ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಲಿದೆ’ ಎಂದು ತೇಜಸ್ವಿ ಸೂರ್ಯ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಚಾರದ ವೇಳೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ಸಂಸದನಾಗಿ ಆಯ್ಕೆಯಾದ ದಿನದಿಂದಲೂ ಜನರ ಜೊತೆಗಿದ್ದೇನೆ. ಸರ್ವ ಜನಾಂಗದ ಜನರು ಈ ಬಾರಿ ಬಿಜೆಪಿ ಬೆಂಬಲಿಸಲಿದ್ದಾರೆ. ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲ ಉತ್ತಮ ಸ್ಪಂದನೆ ಸಿಗುತ್ತಿದೆ’ ಎಂದರು. ‘ಎನ್‌ಡಿಎ ಮೈತ್ರಿಕೂಟಕ್ಕೆ ಜೆಡಿಎಸ್ ಸೇರ್ಪಡೆಗೊಂಡಿರುವುದರಿಂದ ಹೆಚ್ಚಿನ ಬಲ ಬಂದಿದೆ. ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಒಟ್ಟಿಗೆ ಸೇರಿ ‘ಮತ್ತೊಮ್ಮೆ ಮೋದಿ’ ಎಂಬ ಕೂಗು ಮೊಳಗಿಸುತ್ತಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT