ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ, ಬೆಳಗಾವಿ ಮಹಾರಾಷ್ಟ್ರದ ಭಾಗವಾಗಲಿ: ಎಂಇಎಸ್ ಕಾರ್ಯಕರ್ತರಿಂದ ಘೋಷಣೆ

Published 15 ಏಪ್ರಿಲ್ 2024, 7:42 IST
Last Updated 15 ಏಪ್ರಿಲ್ 2024, 7:42 IST
ಅಕ್ಷರ ಗಾತ್ರ

ಕಾರವಾರ: ಹಲವು ದಶಕಗಳಿಂದ ತಣ್ಣಗಾಗಿರುವ ಗಡಿ ವಿವಾದ ಕೆಣಕಲು ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್) ಖಾನಾಪುರ ಘಟಕ ಮುಂದಾಗಿದೆ.

ಎಂಇಎಸ್ ಅಭ್ಯರ್ಥಿಯಾಗಿ ನಿರಂಜನ ಸರ್ದೇಸಾಯಿ ಹಾಗೂ ರಣಜಿತ್ ಪಾಟೀಲ ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಯಲು ಸೋಮವಾರ ನಾಮಪತ್ರ ಸಲ್ಲಿಸುವ ಮುನ್ನ ನಗರದಲ್ಲಿ ಮೆರವಣಿಗೆ ನಡೆಸಿದ ಎಂಇಎಸ್ ಕಾರ್ಯಕರ್ತರು 'ಕಾರವಾರ, ನಿಪ್ಪಾಣಿ, ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು. ಸಂಯುಕ್ತ ಮಹಾರಾಷ್ಟ್ರ ರಚನೆಯಾಗಬೇಕು' ಎಂದು ಘೋಷಣೆ ಕೂಗಿದರು.

'ಸೇರುವುದಾದರೆ ಮಹಾರಾಷ್ಟ್ರವನ್ನೇ ಸೇರುತ್ತೇವೆ. ಇಲ್ಲವಾದರೆ ಜೈಲಿನಲ್ಲಿ ಇರುತ್ತೇವೆ' ಎಂದೂ ಘೋಷಣೆ ಮೊಳಗಿಸಿದರು.

ಇದೇ ಮೊದಲ ಬಾರಿಗೆ ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಿಂದ ಎಂಇಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಸಮಿತಿಯ ಖಾನಾಪುರ ಘಟಕದ ಕಾರ್ಯಾಧ್ಯಕ್ಷರಾಗಿರುವ ನಿರಂಜನ ಸರ್ದೇಸಾಯಿ ಹಾಗೂ ಹೆಚ್ಚುವರಿ ಅಭ್ಯರ್ಥಿಯಾಗಿ ರಣಜಿತ್ ಪಾಟೀಲ ನಾಮಪತ್ರ ಸಲ್ಲಿಸಿದರು.

'ಕಾರವಾರ, ಬೆಳಗಾವಿಯನ್ನು ದ್ವಿಭಾಷಿಕ ಪ್ರದೇಶವಾಗಿ ಘೋಷಿಸಬೇಕು ಎಂದು ಹಲವು ವರ್ಷಗಳಿಂದ ಒತ್ತಾಯಿಸುತ್ತ ಬರಲಾಗಿದೆ. ಆಡಳಿತದಲ್ಲಿ ಕನ್ನಡ, ಮರಾಠಿ ಭಾಷೆ ಬಳಸುವಂತೆ ಒತ್ತಾಯಿಸುತ್ತಾ ಬರಲಾಗಿದ್ದರೂ ಕರ್ನಾಟಕ ಸರ್ಕಾರ ಬೇಡಿಕೆ ಮನ್ನಿಸಿಲ್ಲ' ಎಂದು ಎಂ.ಇ.ಎಸ್ ಅಭ್ಯರ್ಥಿ ನಿರಂಜನ ಸರ್ದೇಸಾಯಿ ಆರೋಪಿಸಿದರು.

'ಕಾರವಾರ, ಜೊಯಿಡಾ, ಹಳಿಯಾಳ ಭಾಗದಲ್ಲಿ ನೂರಾರು ಮರಾಠಿ ಮಾಧ್ಯಮದ ಶಾಲೆಗಳಿದ್ದವು. ಸರ್ಕಾರ ಅವುಗಳನ್ನು ಮುಚ್ಚಿ ಹಾಕಿದೆ. ಮರಾಠಿ ಭಾಷಿಕ ಶಿಕ್ಷಕರ ಬದಲು ಕನ್ನಡ ಭಾಷಿಕ ಶಿಕ್ಷಕರನ್ನೇ ಗಡಿ ಭಾಗದ ಶಾಲೆಗೆ ನಿಯೋಜಿಸಲಾಗುತ್ತಿದೆ. ಮರಾಠಿ ಭಾಷಿಕರ ಹಕ್ಕು ರಕ್ಷಿಸುವ ಕೆಲಸ ಆಗುತ್ತಿಲ್ಲ. ಇದೇ ಕಾರಣಕ್ಕೆ ಮರಾಠಿ ಭಾಷಿಕರು, ಮರಾಠಾ ಸಮುದಾಯದ ಹಕ್ಕುಗಳ ರಕ್ಷಣೆಗೆ ಸ್ಪರ್ಧಿಸಿದ್ದೇವೆ' ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ಮೆರವಣಿಗೆಯಲ್ಲಿ ಖಾನಾಪುರದಿಂದ ಬಂದಿದ್ದ ಸುಮಾರು 120 ಜನರು ಪಾಲ್ಗೊಂಡಿದ್ದರು.

ಎಂಇಎಸ್ ಖಾನಾಪುರ ಘಟಕದ ಅಧ್ಯಕ್ಷ ಗೋಪಾಲ ದೇಸಾಯಿ, ಪ್ರಮುಖರಾದ ರಮೇಶ ದಬಾಲೆ, ಬಾಳಾಸಾಹೇಬ ಶೇಲಾರ, ಗೋಪಾಲ ಪಾಟೀಲ, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT