ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ | ಬಿಜೆಪಿಯತ್ತ ರೆಡ್ಡಿ: ಬದಲಾದ ಲೆಕ್ಕಾಚಾರ

ಕೇಸರಿ ಪಾಳಯಕ್ಕೆ ಬೆಂಬಲಿಗರು–ಕಾರ್ಯಕರ್ತರ ಹೊಂದಾಣಿಕೆಯ ಸವಾಲು
Published 25 ಮಾರ್ಚ್ 2024, 6:09 IST
Last Updated 25 ಮಾರ್ಚ್ 2024, 6:09 IST
ಅಕ್ಷರ ಗಾತ್ರ

ಬಳ್ಳಾರಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 46 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದ ಶಾಸಕ ಜನಾರ್ದನ ರೆಡ್ಡಿ ಅವರ ನೇತೃತ್ವದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ(ಕೆಆರ್‌ಪಿಪಿ) ಕೆಲವು ಕಡೆ ಬಿಜೆಪಿ ಸೋಲಿಗೂ, ಇನ್ನು ಕೆಲವು ಕಡೆ ಕಾಂಗ್ರೆಸ್‌ ಗೆಲುವಿಗೂ ಕಾರಣವಾಗಿತ್ತು. ಈಗ ಬಿಜೆಪಿಯಲ್ಲಿ ವಿಲೀನವಾಗುತ್ತಿದ್ದು, ರಾಜಕೀಯ ಲೆಕ್ಕಾಚಾರಗಳು ಬದಲಾಗುವ ಸಾಧ್ಯತೆಗಳಿವೆ.  

ವಿಧಾನಸಭಾ ಚುನಾವಣೆಯಲ್ಲಿನ ಸಾಧನೆಯ ಆಧಾರದಲ್ಲೇ ಈ ಬಾರಿ ಕೊಪ್ಪಳ, ಚಿತ್ರದುರ್ಗ, ಬಳ್ಳಾರಿ, ರಾಯಚೂರು, ಬೀದರ್, ಬಾಗಲಕೋಟೆ, ಚಿಕ್ಕಬಳ್ಳಾಪುರ ಹಾಗೂ ವಿಜಯಪುರ ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕೆಆರ್‌ಪಿಪಿ ಚಿಂತನೆ ನಡೆಸಿತ್ತು. ಇದು ಬಿಜೆಪಿಗೆ ದಿಗಿಲು ಹುಟ್ಟಿಸಿತ್ತು. ಹೀಗಿರುವಾಗಲೇ ಬಿಜೆಪಿಯ ವರಿಷ್ಠರ ಕರೆ ಮೇರೆಗೆ ದೆಹಲಿಗೆ ತೆರಳಿದ್ದ ಜನಾರ್ದನ ರೆಡ್ಡಿ ಮಾ.14ರಂದು ಮಾತುಕತೆ ನಡೆಸಿ ಬಂದಿದ್ದರು. 

ಬಿಜೆಪಿಯನ್ನು ಸೇರಿಕೊಳ್ಳುವುದು ರೆಡ್ಡಿ ಅವರ ಇಚ್ಛೆಯಾಗಿತ್ತಾದರೂ, ಅಮಿತ್‌ ಶಾ ಅವರನ್ನು ಭೇಟಿಯಾಗಿ ಬಂದು 10 ದಿನ ಕಳೆದರೂ ನಿರ್ಧಾರ ಕೈಗೊಳ್ಳದೇ ಇದ್ದದ್ದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಮಾತುಕತೆ ರೆಡ್ಡಿ ಅವರಿಗೆ ತೃಪ್ತಿ ತಂದಿಲ್ಲ ಎಂದು ಹೇಳಲಾಗುತ್ತಿತ್ತು.

ಎಲ್ಲಾ ರಾಜ್ಯಗಳ ಅಸಮಾಧಾನಿತರನ್ನು ಕರೆದಂತೇ ರೆಡ್ಡಿಯವರನ್ನು ಅಮಿತ್‌ ಶಾ ಕರೆದು ಮಾತನಾಡಿಸಿದ್ದರು. ‘ಪಕ್ಷಕ್ಕೆ ಸೇರುವುದಾದರೆ ಸೇರಿ, ಬೆಂಬಲಿಸುವುದಾದರೆ ಬೆಂಬಲಿಸಿ’ ಎಂಬ ಅಮಿತ್‌ ಶಾ ಅವರ ಮಾತಿನ ಧಾಟಿಯ ಬಗ್ಗೆ ರೆಡ್ಡಿಗೆ ಬೇಸರವಿತ್ತು ಎನ್ನಲಾಗಿದೆ. ಆದರೂ, ಅಂತಿಮವಾಗಿ ಭಾನುವಾರ ಕಾರ್ಯಕರ್ತರ ಸಭೆ ಕರೆದ ರೆಡ್ಡಿ ಬಿಜೆಪಿ ಸೇರುವ ನಿರ್ಧಾರ ಪ್ರಕಟಿಸಿದ್ದಾರೆ. 

ಬಿಜೆಪಿ ಸೇರುವ, ಪಕ್ಷವನ್ನು ವಿಲೀನ ಮಾಡುವ ಜನಾರ್ದನ ರೆಡ್ಡಿ ಅವರ ನಿರ್ಧಾರವು ಬಿಜೆಪಿಗೆ ಅನುಕೂಲ ಮಾಡಿಕೊಡುವ ನಿರೀಕ್ಷೆಯೇನೋ ಇದೆ. ಮುಖ್ಯವಾಗಿ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವ ಸಾಧ್ಯತೆಗಳಿವೆ. ಇನ್ನುಳಿದಂತೆ ಕೊಪ್ಪಳ, ಚಿತ್ರದುರ್ಗ, ರಾಯಚೂರುಗಳಲ್ಲಿ ಮತ ವಿಭಜನೆಯಿಂದ ಎದುರಾಗಬಹುದಾದ ಅಪಾಯ ತಕ್ಕಮಟ್ಟಿಗೆ ದೂರವಾದ ನಿರಾಳತೆ ಬಿಜೆಪಿಯ ಕೆಲ ನಾಯಕರಲ್ಲಿ ಮೂಡಿದೆ.

‘ಜನಾರ್ದನ ರೆಡ್ಡಿ ಅವರು ಈ ಭಾಗದ ಪ್ರಭಾವಿ ನಾಯಕರು. ಅವರು ಪಕ್ಷಕ್ಕೆ ಸೇರಿದರೆ ಬಿಜೆಪಿಗೆ ಶಕ್ತಿ ಬರಲಿದೆ‘ ಎಂದು ಶ್ರೀರಾಮುಲು ಅವರೂ ಮೂರ್ನಾಲ್ಕು ತಿಂಗಳಿಂದ ಹೇಳುತ್ತಲೇ ಬಂದಿದ್ದರು. ‌ಆದರೆ, ಸ್ಥಳೀಯವಾಗಿ ರೆಡ್ಡಿ ಬೆಂಬಲಿಗರು, ಬಿಜೆಪಿ ಕಾರ್ಯಕರ್ತರು ಯಾವ ಹಂತಕ್ಕೆ ಹೊಂದಿಕೊಳ್ಳಲಿದ್ದಾರೆ ಎಂಬ ಪ್ರಶ್ನೆ ಸದ್ಯ ಎದುರಾಗಿದೆ. ‘ರೆಡ್ಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂದು ಶ್ರೀರಾಮುಲು ಅವರು ವ್ಯಕ್ತಪಡಿಸಿರುವ ಅಭಿಪ್ರಾಯಗಳೆಲ್ಲವೂ ಬಾಯುಪಚಾರದ ಮಾತುಗಳಷ್ಟೇ. ಅವರಿಗೆ ರೆಡ್ಡಿ ಬೆಂಬಲ ಬೇಕಷ್ಟೇ‘ ಎಂಬ ಅಸಮಾಧಾನದ ಮಾತುಗಳೂ ಇವೆ.

ಜನಾರ್ದನ ರೆಡ್ಡಿ ಆಗಮನವು ಪಕ್ಷಕ್ಕೆ ಒಳ್ಳೆಯದನ್ನೇ ಮಾಡಲಿದೆ. ಲೋಕಸಭಾ ಚುನಾವಣೆಯಲ್ಲಿ ಈ ಅಂಶವೂ ಕೆಲಸ ಮಾಡಲಿದೆ. ಬಳ್ಳಾರಿಯಲ್ಲಿ ಪಕ್ಷ ಕಟ್ಟಲು ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರ ಪಾತ್ರ ಮಹತ್ವದ್ದು. 
– ಸೋಮಶೇಖರ ರೆಡ್ಡಿ ಮಾಜಿ ಶಾಸಕ
ಮುಂದಿನ ರಾಜಕೀಯ ನಡೆಯ ಕುರಿತು ಚರ್ಚಿಸಲು ಬೆಂಗಳೂರಿನಲ್ಲಿ ಸಭೆ ನಡೆಯಿತು. ಬಿಜೆಪಿ ಸೇರುವ ಜನಾರ್ದನ ರೆಡ್ಡಿ ಅವರ ನಿರ್ಧಾರವನ್ನು ಪಕ್ಷದ ಕಾರ್ಯಕರ್ತರು ನಾಯಕರು ಒಕ್ಕೊರಲಿನಿಂದ ಬೆಂಬಲಿಸಿದ್ದಾರೆ. 
– ದಮ್ಮುರು ಶೇಖರ್‌ ಕೆಆರ್‌ಪಿಪಿ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ 
ಅವರು ಬಿಜೆಪಿಯಲ್ಲೇ ಇದ್ದರು. ಬಿಜೆಪಿಯ ಸಿದ್ಧಾಂತಗಳನ್ನು ಒಪ್ಪಿದ್ದವರು. ಅವರು ಬಿಜೆಪಿಗೇ ಸೇರಲಿದ್ದಾರೆ ಎಂಬುದು ಮೊದಲೇ ಗೊತ್ತಿತ್ತು. ಇದರಿಂದ ಯಾವುದೇ ಪರಿಣಾಮವಾಗುವುದಿಲ್ಲ. 
– ಮಹಮೊದ್‌ ರಫೀಕ್‌ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ 
ಕೆಆರ್‌ಪಿಸಿ ಸಾಧನೆ
ಬಳ್ಳಾರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ವಿಧಾನ ಸಭಾ ಕ್ಷೇತ್ರಗಳಲ್ಲಿ ಕೆಆರ್‌ಪಿಸಿ ಸಾಧನೆ  ಬಳ್ಳಾರಿ ನಗರ– 48577 ಸಂಡೂರು 31375 ಹೂವಿನಹಡಗಲಿ– 286 ಹಗರಿಬೊಮ್ಮನಹಳ್ಳಿ– 185 (ಬಳ್ಳಾರಿ ಗ್ರಾಮಾಂತರ ಕಂಪ್ಲಿ ವಿಜಯನಗರ ಮತ್ತು ಕೂಡ್ಲಿಗಿಗಳಲ್ಲಿ ಸ್ಪರ್ಧೆ ಇರಲಿಲ್ಲ)
ಕಾಂಗ್ರೆಸ್‌ ಒಲವು ನಿಜಯವೇ? 
ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಅವರು ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕಿ ಅಚ್ಚರಿ ಮೂಡಿಸಿದ್ದರು. ಹೀಗಾಗಿ ಅವರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿಸಲಿದ್ದಾರೆ ಎಂಬ ಮಾತುಗಳು ವ್ಯಕ್ತವಾಗಿತ್ತಾದರೂ ಅದು ಈಗ ಹುಸಿಯಾಗಿದೆ. ಗಂಗಾವತಿ ಕ್ಷೇತ್ರಕ್ಕೆ ದೊರೆತ ಅನುದಾನದ ಋಣ ಸಂದಾಯಕ್ಕಷ್ಟೇ ಅವರ ಬೆಂಬಲ ಸೀಮಿತ ಎಂದು ಬಲ್ಲ ಮೂಲಗಳು ತಿಳಿಸಿವೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT