ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Election Results | 12 ಅಭ್ಯರ್ಥಿಗಳಿಗೆ ‘ನೋಟಾ’ಕ್ಕಿಂತಲೂ ಕಡಿಮೆ ಮತ!

ಕಾಂಗ್ರೆಸ್‌, ಬಿಜೆಪಿ ಹೊರತುಪಡಿಸಿ ಮೂರನೇ ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಹಡಪದ
Published 6 ಜೂನ್ 2024, 5:21 IST
Last Updated 6 ಜೂನ್ 2024, 5:21 IST
ಅಕ್ಷರ ಗಾತ್ರ

ಕೊಪ್ಪಳ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳು ಲಕ್ಷಾಂತರ ಮತಗಳನ್ನು ಪಡೆದರೆ ಕಣದಲ್ಲಿದ್ದ ಒಟ್ಟು 19 ಜನ ಅಭ್ಯರ್ಥಿಗಳ ಪೈಕಿ 12 ಜನ ನೋಟಾ (ಮೇಲಿನವರು ಯಾರೂ ಅಲ್ಲ) ಕ್ಕಿಂತಲೂ ಕಡಿಮೆ ಮತಗಳನ್ನು ಪಡೆದುಕೊಂಡಿದ್ದಾರೆ. ಐವರಷ್ಟೇ ನೋಟಾಕ್ಕಿಂತ ಹೆಚ್ಚು ಮತಗಳನ್ನು ಗಳಿಸಿಕೊಂಡಿದ್ದಾರೆ.

ಕಳೆದ ತಿಂಗಳು ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಮಂಗಳವಾರ ಮುಗಿದಿದ್ದು, ಕಾಂಗ್ರೆಸ್‌ ಪಕ್ಷದ ರಾಜಶೇಖರ ಹಿಟ್ನಾಳ 6,63,511 ಮತಗಳನ್ನು ಪಡೆದು ಸಂಸದರಾದರೆ, ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಡಾ.ಬಸವರಾಜ ಕ್ಯಾವಟರ್‌ 6,17,154 ಎರಡನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡರು.

ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ ಹಾಗೂ ಯಾದಗಿರಿ ಜಿಲ್ಲೆಗಳಿಂದ ಅಭ್ಯರ್ಥಿಗಳು ಇಲ್ಲಿನ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದರು. ಆದರೂ ಈ ಯಾವ ಅಭ್ಯರ್ಥಿಗಳಿಗೂ ನನ್ನ ಸಹಮತವಿಲ್ಲವೆಂದು 3,519 ಮತದಾರರು ಹಕ್ಕು ಚಲಾಯಿಸಿದ್ದಾರೆ.

ಸರ್ವ ಜನತಾ ಪಾರ್ಟಿಯಿಂದ ಸ್ಪರ್ಧೆ ಮಾಡಿದ್ದ ಅನೋಜಿರಾವ್ ಜಿ. 1117, ಚಾಲೆಂಜರ್ಸ್‌ ಪಾರ್ಟಿಯ ಡಿ. ದುರ್ಗಾಪ್ರಸಾದ್ ಬ್ಯಾಟರಾಯನಜಿ 799, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಕಣಕ್ಕಿಳಿದಿದ್ದ ಸಿಂಧನೂರಿನ ನಿರುಪಾದಿ ಕೆ. ಗೋಮರ್ಸಿ 900, ಆಲ್‌ ಇಂಡಿಯಾ ಉಲಾಮಾ ಕಾಂಗ್ರೆಸ್‌ ಪಕ್ಷದ ರಮನಾಜಬಿ ಅವರಿಗೆ 806, ಎಸ್‌ಯುಸಿಐ ಸೋಷಲಿಸ್ಟ್‌ ಪಕ್ಷದ ಶರಣಪ್ಪ ಗಡ್ಡಿ 1106, ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾದ ಸಿ. ಶರಣಬಸಪ್ಪ 776 ಮತಗಳನ್ನು ಪಡೆದುಕೊಂಡಿದ್ದಾರೆ. ಕೆಲ ಅಭ್ಯರ್ಥಿಗಳಿಗೆ ಸ್ಥಳೀಯತೆ ಹಾಗೂ ಪಕ್ಷದ ಹೆಸರು ಜೊತೆಯಲ್ಲಿದ್ದರೂ ’ನೋಟಾ ದಾಖಲೆ’ ಮೀರಲು ಸಾಧ್ಯವಾಗಿಲ್ಲ. ಅನೋಜಿರಾವ್ ಕಳೆದ ಸಲ 5,681 ಮತಗಳನ್ನು ಗಳಿಸಿದ್ದರು.

ಪಕ್ಷೇತರರಾಗಿ ಕಣಕ್ಕಿಳಿದಿದ್ದ ಇಮಾಮಸಾಬ್‌ ಜಂಗ್ಲಿಸಾಬ್‌ ಮುಲ್ಲಾ 733, ಕರೀಂಪಾಶ ಗಚ್ಚಿನಮನಿ 1,238, ಕಾಳಪ್ಪ ಬಡಿಗೇರ 1,982, ಪ.ಯ.ಗಣೇಶ 1,895, ನಾಗರಾಜ್ ಕಲಾಲ್‌ 1,994 ಮತ್ತು ಹನಮೇಶ ಎಸ್‌.ಎಚ್‌. 1,248 ಮತಗಳನ್ನು ಪಡೆದುಕೊಂಡಿದ್ದಾರೆ. ಕರೀಂಪಾಶ ಪ್ರಚಾರಕ್ಕಾಗಿ ಪ್ರತ್ಯೇಕ ವಾಹನವನ್ನೇ ನಿಗದಿ ಮಾಡಿಕೊಂಡಿದ್ದರೂ ಜನರ ಮನಸೆಳೆದಿಲ್ಲ.

ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದ ಕೊಪ್ಪಳದ ಮಲ್ಲಿಕಾರ್ಜುನ ಹಡಪದ 7,314 ಮತಗಳನ್ನು ಪಡೆಯುವ ಮೂಲಕ ಹೆಚ್ಚು ಮತಗಳನ್ನು ಪಡೆದ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 2019ರ ಚುನಾವಣೆಯಲ್ಲಿ ಮಲ್ಲಿಕಾರ್ಜುನ 2,408 ಮತಗಳನ್ನು ಪಡೆದಿದ್ದು, ಈ ಬಾರಿ ಮತಗಳಿಕೆ ಪ್ರಮಾಣ ಹೆಚ್ಚಿಸಿಕೊಂಡಿದ್ದಾರೆ. ಹಿಂದೆ ಹಲವು ವಿಧಾನಸಭಾ ಚುನಾವಣೆಗಳಲ್ಲಿಯೂ ಅವರು ಸ್ಪರ್ಧೆ ಮಾಡಿದ್ದರು.

ಬಹುಜನ ಸಮಾಜ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಶಂಕರ 7043, ಪಕ್ಷೇತರರಾಗಿದ್ದ ಕರಡಿ ಬಸವರಾಜ 5,877, ರುಕ್ಮಿಣಿ  5,282 ಮತ್ತು ಸುರೇಶಗೌಡ ಮುಂದಿನಮನಿ 4,642 ಮತಗಳನ್ನು ಪಡೆದು ’ನೋಟಾ’ ಗಡಿ ದಾಟಿದ್ದಾರೆ.

ನೋಟಾ ಸಂಖ್ಯೆ ಮೊದಲ ಬಾರಿಗೆ ಇಳಿಕೆ 

2014ರ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ನೋಟಾ ಬಳಕೆ ಮಾಡಲಾಯಿತು. ಆ ವರ್ಷ ಕ್ಷೇತ್ರದಲ್ಲಿ 10813 ಮತಗಳು ನೋಟಾಕ್ಕೆ ಬಂದಿದ್ದವು. 2019ರಲ್ಲಿ 12947 ನೋಟಾ ಮತಗಳು ಚಲಾವಣೆಯಾಗಿದ್ದವು. ಇದೇ ಮೊದಲ ಬಾರಿಗೆ ಕಡಿಮೆ ಸಂಖ್ಯೆಯಲ್ಲಿ (3519) ನೋಟಾಕ್ಕೆ ಮತದಾರರು ಮುದ್ರೆ ಒತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT