ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಂಗ್ಯಭರಿತ ಮೊನಚು ಮಾತುಗಳಿಂದ ಪ್ರಧಾನಿ ಮೋದಿ ನಿಂದಿಸಿದ ನಟ ಪ್ರಕಾಶ್‌ ರಾಜ್‌

Published 30 ಏಪ್ರಿಲ್ 2024, 15:33 IST
Last Updated 30 ಏಪ್ರಿಲ್ 2024, 15:33 IST
ಅಕ್ಷರ ಗಾತ್ರ

ಗದಗ: ‘‘ಈ ದೇಶದ ಮಹಾಪ್ರಭು ‘ಮ’ಕಾರ ಪ್ರಿಯ. ಅವನ ಹೆಸರು ಕೂಡ ‘ಮ’ಯಿಂದಲೇ ಶುರುವಾಗುತ್ತದೆ. ಅದಕ್ಕಾಗಿಯೇ ಅವನು ಈ ಚುನಾವಣೆಯಲ್ಲಿ ಮಂದಿರ್‌, ಮಸ್ಜೀದ್‌, ಮಾಂಗಲ್ಯ ಅಂತ ಹೇಳಿಕೊಂಡು ತಿರುಗುತ್ತಿದ್ದಾನೆ’’ ಎಂದು ಬಹುಭಾಷಾ ನಟ ಪ್ರಕಾಶ್‌ ರಾಜ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಏಕವಚನದಲ್ಲಿ, ವ್ಯಂಗಭರಿತ ಮೊನಚು ಮಾತುಗಳಿಂದ ನಿಂದಿಸಿದರು.

ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೇಟಿ ಪಡಾವೊ; ಬೇಟಿ ಬಚಾವೊ, ನಾರಿ ಶಕ್ತಿ ಅಂತೆಲ್ಲಾ ಹೇಳುವ ಮಹಾಪ್ರಭುವಿಗೆ ಮಣಿಪುರ ಹೆಣ್ಣುಮಕ್ಕಳ ನೋವು ಕೇಳಿಸಲಿಲ್ಲವೇ? ದೇಶಕ್ಕಾಗಿ ಆಡಿ, ಕುಸ್ತಿಯಲ್ಲಿ ಚಿನ್ನ ಗೆದ್ದ ಯುವತಿಯರ ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಮಹಾಪ್ರಭುವಿಗೆ ಅವನದ್ದೇ ಪಕ್ಷದ ಸಂಸದನೊಬ್ಬ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಅಂತ ಆ ಹೆಣ್ಣುಮಕ್ಕಳು ಬೀದಿಗೆ ಬಂದು ಪ್ರತಿಭಟಿಸಿದರೂ ಒಂದು ಮಾತು ಆಡಲಿಲ್ಲ ಯಾಕೆ?’ ಎಂದು ಪ್ರಶ್ನಿಸಿದರು.

‘ಮತ್ತೊಮ್ಮೆ ಮೋದಿ ಸರ್ಕಾರ್‌; 400 ಸ್ಥಾನ ಗೆಲ್ಲುತ್ತೇವೆ ಎಂದು ಅಹಂಕಾರದಿಂದ ಹೇಳುತ್ತಾನೆ. ನೀನು ಮಾಡಿದ ಕೆಲಸದ ಬಗ್ಗೆ ನಂಬಿಕೆ, ವಿಶ್ವಾಸ ಇದ್ದರೆ ಸುಳ್ಳರು, ಭ್ರಷ್ಟರನ್ನೆಲ್ಲಾ ಪಕ್ಷಕ್ಕೆ ಯಾಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದೀಯಾ? ನಿನ್ನ ಪಾರ್ಟಿ ಏನು ಜೈಲೇ?’ ಎಂದು ಕೇಳಿದರು.

‘ಬ್ರಿಜ್‌ಭೂಷಣ್‌ನಿಂದ ಹಿಡಿದು ಪ್ರಜ್ವಲ್‌ ರೇವಣ್ಣನವರೆಗೆ ಎಲ್ಲ ಕಾಮುಕರೇಕೆ ನಿನ್ನ ಪಾರ್ಟಿಗೆ ಸೇರುತ್ತಿದ್ದಾರೆ. ಪ್ರಜ್ವಲ್‌ ಬಗ್ಗೆ ಎಲ್ಲ ಗೊತ್ತಿದ್ದೂ ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಂಡಿದ್ದು ಯಾಕೆ? ಹೆಣ್ಣುಮಕ್ಕಳ ಬಗ್ಗೆ ನಿಜವಾದ ಪ್ರೀತಿ ಇದ್ದರೆ ವಿಕೃತಕಾಮಕ್ಕೆ ಬಲಿಯಾದ ಎರಡು ಸಾವಿರಕ್ಕೂ ಹೆಚ್ಚು ಹೆಣ್ಣುಮಕ್ಕಳ ನೋವಿನ ಬಗ್ಗೆ ಯಾಕೆ ತುಟಿ ಬಿಚ್ಚುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ಜನರು ಯಾವುದೇ ಪಕ್ಷವನ್ನು ಆರಿಸುವುದು ಆಡಳಿತ ನಡೆಸುವುದಕ್ಕೇ ಹೊರತು; ಜನರನ್ನು ಆಳ್ವಿಕೆ ಮಾಡುವುದಕ್ಕೆ ಅಲ್ಲ. ಮಹಾಪ್ರಭು ತನ್ನ 10 ವರ್ಷಗಳ ಆಡಳಿತದಲ್ಲಿ ಏನೇನು ಕಿಸಿದಿದ್ದೀಯಾ ಹೇಳು ಎಂದು ನಾವು ಪ್ರಶ್ನಿಸಬೇಕು. ಕೊಟ್ಟ ಆಶ್ವಾಸನೆ ಈಡೇರಿಸಿದ್ದಾನಾ? ಇಲ್ಲವಾದರೆ ಯಾಕೆ ಎಂದು ಪ್ರಶ್ನಿಸಬೇಕು’ ಎಂದು ತಿಳಿಸಿದರು.

‘ಮಹಾಪ್ರಭುಗಳು ಮಂದಿರ ಕಟ್ಟಿದ್ದೇವೆ ಅಂತ ಹೇಳುತ್ತಿದ್ದಾರೆ. ಮಂದಿರ ಕಟ್ಟಲು ನಾವು ಅವರನ್ನು ಆರಿಸಿದ್ದೆವಾ? ಮಂದಿರ, ಗುಡಿ ಕಟ್ಟಿಕೊಳ್ಳಲಿ. ಯುವಜನರ ಉದ್ಯೋಗವಕಾಶ ಏನಾಯಿತು. ದೇಶದಲ್ಲಿ ಎಂದಿಗಿಂತ ಇಂದು ಹೆಚ್ಚು ಯುವಜನರಿದ್ದು ಅವರ ಆಕ್ರೋಶ ಕಾಣಿಸುತ್ತಿಲ್ಲವೇ? ವರ್ಷಕ್ಕೆ ಎರಡು ಕೋಟಿ ಉದ್ಯೋಗ ಎಲ್ಲಿ ಸೃಷ್ಟಿಸಿದರು’ ಎಂದು ಹರಿಹಾಯ್ದರು.

‘100 ಸ್ಮಾರ್ಟ್‌ ಸಿಟಿಗಳನ್ನು ನಿರ್ಮಿಸುವುದಾಗಿ ಹೇಳಿದ್ದರು. ಅದರಲ್ಲಿ 10 ಸ್ಮಾರ್ಟ್‌ ಸಿಟಿಗಳನ್ನು ತೋರಿಸಲಿ. ದೇಶದಲ್ಲಿ 303 ಮಂದಿ ಬಿಜೆಪಿ ಸಂಸದರು ಇದ್ದಾರೆ. ಪ್ರತಿಯೊಬ್ಬರೂ ಒಂದೊಂದು ಹಳ್ಳಿ ದತ್ತು ಪಡೆದು, ಆದರ್ಶ ಗ್ರಾಮ ನಿರ್ಮಾಣ ಮಾಡುವ ಭರವಸೆ ನೀಡಿದ್ದರು. ಮೂರು ಆದರ್ಶ ಗ್ರಾಮಗಳನ್ನು ತೋರಿಸಲಿ’ ಎಂದು ಸವಾಲೆಸೆದರು.

‘ಭಾರತೀಯ ರೈತರಿಗೆ ಘನತೆ ಬೇಕಿದೆ. ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿದ್ದ ನೀನು, ಅವರನ್ನು ಸಾಲದ ಸುರುಳಿಗೆ ಸಿಲುಕಿಸಿದೆ. ಅವರ ನೋವು ಅರ್ಥ ಆಗುವುದಿಲ್ಲವೇ? ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಿ ಎಂದು ಪ್ರತಿಭಟನೆಗೆ ಇಳಿದರೆ ರಸ್ತೆಗೆ ಮೊಳೆ ಹೊಡೆಸಿದೆ. ರಸ್ತೆ ಅಗೆಸಿದೆ. ಇದನ್ನು ಪ್ರಶ್ನಿಸಿದರೆ ಖಲಿಸ್ಥಾನಿ, ಆತಂಕವಾದಿ ಎನ್ನುತ್ತೀಯಾ. ಯುವಜನರು ಪ್ರಶ್ನಿಸಿದರೆ ತುಕಡೆ ತುಕಡೆ ಗ್ಯಾಂಗ್‌, ಅರ್ಬನ್‌ ನಕ್ಸಲ್‌ ಎಂದು ಹೇಳುತ್ತೀಯಾ’ ಎಂದು ಹರಿಹಾಯ್ದರು.

‘ದೇಶದಲ್ಲಿ ಅಶಾಂತಿ ಧಗಧಗಿಸುತ್ತಿದ್ದರೆ ವಂದೇ ಭಾರತ್‌ ರೈಲಿಗೆ ನಿಶಾನೆ ತೋರಿಸುತ್ತ ನಿಲ್ಲುತ್ತೀಯಲ್ಲಾ ನೀನೇನು ಪ್ರಧಾನಿಯೋ, ಸ್ಟೇಷನ್‌ ಮಾಸ್ಟ್ರೋ’ ಎಂದು ಜರಿದರು.

‘ಫಾಸ್ಟ್‌ಟ್ಯಾಗ್‌ ಅಕೌಂಟ್‌ನಲ್ಲಿ ಮಿನಿಮಂ ಬ್ಯಾಲೆನ್ಸ್‌ ₹200 ಇಡಬೇಕಂತೆ. ಇದೊಂದು ದೊಡ್ಡ ಹಗರಣ. ತನಿಖೆ ಆಗಬೇಕು. ಕೋವಿಶೀಲ್ಡ್‌ನ ಅಡ್ಡಪರಿಣಾಮಗಳಿಂದ ಮೃತಪಟ್ಟ ಜೀವಗಳಿಗೆ ಹೊಣೆ ಯಾರು? ಅವರ ಮಾಂಗಲ್ಯ ಕಿತ್ತುಕೊಂಡವ ನೀನು’ ಎಂದು ದೂರಿದರು.

‘ಒಂದು ಭಾಷೆ, ಒಂದು ದೇಶ, ಒಂದು ಪಕ್ಷ ಎನ್ನುವ ಈ ಮಹಾಪ್ರಭುವಿಗೆ ಎರಡು ನಾಲಿಗೆ. ಅದೂ ಸುಳ್ಳು ನಾಲಗೆ. ಬರೀ ಸುಳ್ಳು ಹೇಳಿಕೊಂಡು ಅಡ್ಡಾಡುತ್ತಿದ್ದಾನೆ. ರೈತರು, ಕಾರ್ಮಿಕರು, ಯುವಕರು, ಮಕ್ಕಳ ಭವಿಷ್ಯ, ಸಮಾನ ಶಿಕ್ಷಣ, ಆರೋಗ್ಯ ವ್ಯವಸ್ಥೆಗಾಗಿ ಈ ಬಾರಿಯ ಚುನಾವಣೆಯಲ್ಲಿ ಹೋರಾಡಬೇಕು. ಕೆಲಸ ಮಾಡದಿದ್ದರೆ ಕೆಳಗಿಳಿಸುತ್ತೇವೆ ಎಂಬ ನಮ್ಮ ಶಕ್ತಿಯನ್ನು ಅವರಿಗೆ ತೋರಿಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT