ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ: 27 ಅಭ್ಯರ್ಥಿಗಳಿಗೆ ಠೇವಣಿ ನಷ್ಟ

ಠೇವಣಿ ಉಳಿಸಿಕೊಳ್ಳದ ಸಿಪಿಎಂ, ಬಿಎಸ್‌ಪಿ ಅಭ್ಯರ್ಥಿಗಳು
Published 6 ಜೂನ್ 2024, 6:52 IST
Last Updated 6 ಜೂನ್ 2024, 6:52 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಾ ಕಣಕ್ಕಿಳಿದು ತೊಡೆ ತಟ್ಟಿದ 29 ಅಭ್ಯರ್ಥಿಗಳ ಪೈಕಿ 27 ಹುರಿಯಾಳುಗಳಿಗೆ ಠೇವಣಿ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಸೋತವರ ಪೈಕಿ ಕಾಂಗ್ರೆಸ್‌ ಅಭ್ಯರ್ಥಿ ರಕ್ಷಾ ರಾಮಯ್ಯ ಅವರಿಗೆ ಮಾತ್ರ ಠೇವಣಿ ಉಳಿದಿದೆ.

ಈ ಚುನಾವಣೆಗೆ 32 ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದರು. ಈ ಪೈಕಿ ಮೂವರು ತಮ್ಮ ಉಮೇದುವಾರಿಕೆ ಹಿಂದಕ್ಕೆ ಪಡೆದರು. ಅಂತಿಮವಾಗಿ ಸ್ಪರ್ಧಾ ಕಣದಲ್ಲಿ 29 ಅಭ್ಯರ್ಥಿಗಳು ಉಳಿದಿದ್ದರು. 

ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಚುನಾವಣಾ ಅಖಾಡಕ್ಕೆ ಇಳಿದಿದ್ದರು. ಈ ಮೂಲಕ 2024 ರ ಲೋಕಸಭೆ ಚುನಾವಣೆ ಹೊಸ ದಾಖಲೆ ಸೃಷ್ಟಿಸಿತು. ಎರಡು ಬ್ಯಾಲೆಟ್‌ಗಳನ್ನು ಈ ಬಾರಿ ಬಳಸಲಾಯಿತು. 2019ರ ಲೋಕಸಭಾ ಚುನಾವಣೆಯಲ್ಲಿ 15 ಮಂದಿ ಅಭ್ಯರ್ಥಿಗಳು  ಕಣದಲ್ಲಿದ್ದರು.

ಏನಿದು ಠೇವಣಿ ನಷ್ಟ: 

ಚುನಾವಣೆಗಳಲ್ಲಿ ಪಕ್ಷೇತರರ ಅಭ್ಯರ್ಥಿಗಳ ಹಾವಳಿ ತಡೆಯುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಠೇವಣಿ ಪದ್ಧತಿ ಜಾರಿಗೆ ತಂದಿದೆ. ಅದರಂತೆ ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಪರಿಶಿಷ್ಟ ಸಮುದಾಯದ ಅಭ್ಯರ್ಥಿಗಳು ₹12,5000 ಮತ್ತು ಇತರೆ ವರ್ಗದವರು ₹25 ಸಾವಿರ ಠೇವಣಿ ಮೊತ್ತವನ್ನು ನಾಮಪತ್ರದೊಂದಿಗೆ ಚುನಾವಣಾಧಿಕಾರಿ ಅವರಿಗೆ ಸಲ್ಲಿಸಿದ್ದರು.

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪೈಕಿ ಕ್ಷೇತ್ರದಲ್ಲಿ ಒಟ್ಟು ಚಲಾವಣೆಯಾದ ಮತಗಳ ಆರನೇಯ ಒಂದು ಭಾಗ ಮತ ಪಡೆದ ಅಭ್ಯರ್ಥಿಗಳಿಗೆ ಮಾತ್ರ ಠೇವಣಿ ಮೊತ್ತ ಹಿಂದಿರುಗಿಸಲಾಗುತ್ತದೆ. ಅದಕ್ಕಿಂತ ಕಡಿಮೆ ಮತ ಪಡೆದವರ ಠೇವಣಿ ಮೊತ್ತವನ್ನು ಚುನಾವಣಾ ಆಯೋಗ ಮುಟ್ಟುಗೋಲು ಹಾಕಿಕೊಳ್ಳುತ್ತದೆ.

ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ (8,22,619 ಮತಗಳು) ಮತ್ತು ಪರಾಭವಗೊಂಡ ರಕ್ಷಾ ರಾಮಯ್ಯ (6,59,159 ಮತಗಳು) ಅವರನ್ನು ಹೊರತುಪಡಿಸಿದಂತೆ ಉಳಿದ ಯಾವ ಅಭ್ಯರ್ಥಿಗಳಿಗೂ ಠೇವಣಿ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.

ಬಿಎಸ್‌ಪಿಯ ಮಹದೇವ್ ಪಿ., ಸಿಪಿಎಂನ ಮುನಿವೆಂಕಟಪ್ಪ ಎಂ.ಪಿ. ಅವರು ಸಹ ಠೇವಣಿ ಕಳೆದುಕೊಂಡಿದ್ದಾರೆ. 

ಕಣದಲ್ಲಿ ಇರುವ ಯಾವುದೇ ಅಭ್ಯರ್ಥಿಗೆ ಮತವನ್ನು ನೀಡಲು ಮತದಾರರು ಇಚ್ಛಿಸದಿದ್ದಲ್ಲಿ ನೋಟಾಕ್ಕೆ ಮತವನ್ನು ಚಲಾಯಿಸಬಹುದು. ಹೀಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ 6,596 ನೋಟಾ ಮತಗಳು ಚಲಾವಣೆ ಆಗಿವೆ. 

ಕಣದಲ್ಲಿ ಒಟ್ಟು 29 ಅಭ್ಯರ್ಥಿಗಳು ಇದ್ದು ಈ ಪೈಕಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಯನ್ನು ಹೊರತುಪಡಿಸಿದರೆ ಅತಿ ಹೆಚ್ಚು ಮತಗಳು ಬಿದ್ದಿರುವುದು ನೋಟಾಕ್ಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT