ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

60 ವರ್ಷಗಳಿಂದ ಚೊಂಬು ಕೊಟ್ಟ ಕಾಂಗ್ರೆಸ್‌: ಎಚ್‌.ಡಿ. ರೇವಣ್ಣ

ಕಾಂಗ್ರೆಸ್‌ ನಾಯಕರಿಗೆ ಮತ ಕೇಳುವ ನೈತಿಕತೆ ಇಲ್ಲ
Published 20 ಏಪ್ರಿಲ್ 2024, 15:31 IST
Last Updated 20 ಏಪ್ರಿಲ್ 2024, 15:31 IST
ಅಕ್ಷರ ಗಾತ್ರ

ಬೇಲೂರು: ಎಚ್.ಡಿ. ಕುಮಾರಸ್ವಾಮಿ ಹೆಣ್ಣು ಮಕ್ಕಳಿಗಾಗಿ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ ಯೋಜನೆ, ಸೈಕಲ್ ವಿತರಣೆಯನ್ನು ಕಾಂಗ್ರೆಸ್ ಸರ್ಕಾರ ರದ್ದುಗೊಳಿಸಿ, ಭಿಕ್ಷುಕರಿಗೆ ನೀಡಿದಂತೆ ₹ 2000 ನೀಡುತ್ತಿದೆ ಎಂದು ಶಾಸಕ ಎಚ್.ಡಿ.ರೇವಣ್ಣ ಲೇವಡಿ ಮಾಡಿದರು.

ಇಲ್ಲಿನ ಶಾಸಕರ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 60 ವರ್ಷದಿಂದ ದೇಶವನ್ನಾಳಿದ ಕಾಂಗ್ರೆಸ್ ಕೊಡುಗೆ ಏನಿದೆ ಎಂದು ಪ್ರಶ್ನಿಸಿದರು.

ಅರವತ್ತು ವರ್ಷದಿಂದ‌ ಚೊಂಬು ಕೊಟ್ಟಿದಾರೆ. ಮೋದಿಯವರು ಚೊಂಬು ತುಂಬಿದ್ದಾರೆ. ಅದನ್ನು ಇವರು ಖಾಲಿ ಮಾಡುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಅವರೇ ಈ ಜಿಲ್ಲೆಗೆ ನಿಮ್ಮ ಕೊಡುಗೆ ಏನು ಹೇಳಿ? ಇಂಧನ ಸಚಿವರಾಗಿ ₹ 48 ಸಾವಿರ ಕೋಟಿ ಸಾಲ ಮಾಡಿದ್ದೇ ನಿಮ್ಮ ಕೊಡುಗೆ, ನಾನು ₹ 500 ಕೋಟಿ ಹಣ ಇಟ್ಟು ಬಂದಿದ್ದೆ. ₹ 5 ಸಾವಿರಕ್ಕೆ ಒಂದು ಟಿಸಿ ಕೊಡುತ್ತಿದ್ದೆ. ನಾನು ಕೆಇಬಿಯನ್ನು ಹೇಗೆ ಬಲಪಡಿಸಿದ್ದೆ ಸ್ವಲ್ಪ ತೆಗೆದು ನೋಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುಮಾರಣ್ಣನ ಕಾಲು ಹಿಡಿದು ಐದು ವರ್ಷ ಅಧಿಕಾರ ಎಂದು ನಂಬಿಸಿ ಮೋಸ ಮಾಡಿದರು. ನಾವು ಎಂದೂ ಅಧಿಕಾರದ ಹಿಂದೆ ಹೋದವರಲ್ಲ. ಮೋದಿಯವರು ಅಂದೇ ನಮಗೆ ಆಹ್ವಾನ ನೀಡಿದ್ದರು. ಆದರೂ ನಾವು ಅವರ ಜೊತೆ ಹೋಗದೇ ನಿಮ್ಮನ್ನು ನಂಬಿದ್ದೇವು ಎಂದರು.

ಮೋದಿಯವರ ಐದು ಕೆ.ಜಿ. ಅಕ್ಕಿ ಬರುತ್ತಿದೆ. ಇವರು 3 ಕೆ.ಜಿ. ಕೊಟ್ಟು ಅದರಲ್ಲಿ ಅರ್ಧ ಕೆ.ಜಿ. ಮಣ್ಣು ಕೊಟ್ಟಿದಾರೆ. ಇವರು ರೈತರನ್ನು ಹಾಳು ಮಾಡುತ್ತಿರುವ ದಗಾಕೋರರು. ಮಾನ, ಮರ್ಯಾದೆ ಇದ್ದರೆ ಕಾಂಗ್ರೆಸ್ ನಾಯಕರು ಮತ ಕೇಳಬಾರದು. ಜನರು ಇವರಿಗೆ ಬುದ್ದಿ ಕಲಿಸುತ್ತಾರೆ ಎಂದರು.

ದೇವೇಗೌಡರು ರಾಜ್ಯಸಭೆಯಲ್ಲಿ ಈ ರಾಜ್ಯಕ್ಕೆ ನೀರು ಕೊಡಿ ಎಂದು ಕೈ ಮುಗಿದು ಕೇಳಿದರು. ಮಲ್ಲಿಕಾರ್ಜುನ ಖರ್ಗೆ ಯಾವತ್ತಾದ್ರೂ ‌ಕೇಳಿದ್ರಾ ಎಂದು ಪ್ರಶ್ನಿಸಿದರು.

ಡಿ.ಕೆ.ಸುರೇಶ್ ಸಂಸತ್‌ನಲ್ಲಿ ಎಷ್ಟು ಬಾರಿ ಮಾತನಾಡಿದ್ದಾರೆ, ಪ್ರಜ್ವಲ್ ಎಷ್ಟು ಬಾರಿ‌ ಮಾತನಾಡಿದ್ದಾರೆ ಎಂದು ಡಿಕೆಶಿ ತಿಳಿದುಕೊಳ್ಳಲಿ. ಮತದಾರರು ರೇವಣ್ಣ, ಪ್ರಜ್ವಲ್‌ಗೆ ಅಂತ ಅಲ್ಲ, ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲಿಕ್ಕಾಗಿ ಮತ ನೀಡಿ ಎಂದು ಮನವಿ ಮಾಡಿದರು.

ಶಾಸಕ ಎಚ್.ಕೆ. ಸುರೇಶ್ ಮಾತನಾಡಿ, ಮೋದಿಯವರನ್ನು ಪ್ರಧಾನಿ ಮಾಡಲು ಅವರಿಗೆ ಮೊದಲ ಕೊಡುಗೆಯೇ ಹಾಸನ ಕ್ಷೇತ್ರವಾಗಲಿದೆ. ಪ್ರಜ್ವಲ್ ಮೂರು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ನಾವು ರಾಜ್ಯದ 28 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ತೋ.ಚ. ಅನಂತ ಸುಬ್ಬರಾಯ, ಎಚ್.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಎಂ.ಎ. ನಾಗರಾಜ್, ಮುಖಂಡರಾದ ಟಿ.ಎ. ಶ್ರೀನಿಧಿ, ಸಿ.ಎಚ್. ಲೋಕೇಗೌಡ, ಸಿ.ಎಚ್. ಮಹೇಶ್, ಎಸ್.ಕೆ. ನಾಗೇಶ್ ಯಾದವ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT