ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ‘ನಿರ್ದಿಷ್ಟ ಸಮೂಹ’ ಮನವೊಲಿಕೆಗೆ ತಂತ್ರ

ಬಿಜೆಪಿ, ಕಾಂಗ್ರೆಸ್‌ ಅಭ್ಯರ್ಥಿಗಳಿಂದ ಹಲವು ಕಸರತ್ತು
Published 7 ಏಪ್ರಿಲ್ 2024, 0:02 IST
Last Updated 7 ಏಪ್ರಿಲ್ 2024, 0:02 IST
ಅಕ್ಷರ ಗಾತ್ರ

ಮೈಸೂರು: ಜಿದ್ದಾಜಿದ್ದಿಯ ಕಣವಾಗಿರುವ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಪ್ರಮುಖ ಅಭ್ಯರ್ಥಿಗಳಾದ ಬಿಜೆಪಿಯ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಮತ್ತು ಕಾಂಗ್ರೆಸ್‌ನ ಎಂ.ಲಕ್ಷ್ಮಣ ‘ಒಮ್ಮೆಲೇ ಹೆಚ್ಚು ಜನರನ್ನು ತಲುಪುವ’ ಪ್ರಚಾರ ಕಾರ್ಯತಂತ್ರಕ್ಕೆ ಮೊರೆ ಹೋಗಿದ್ದಾರೆ.

ಕ್ಷೇತ್ರವು ಮೈಸೂರು ಹಾಗೂ ಕೊಡಗು ಜಿಲ್ಲೆಗಳ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, 10,17,120 ಪುರುಷರು, 10,55,035 ಮಹಿಳೆಯರು, 182 ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ಒಟ್ಟು 20,72,337 ಮತದಾರರಿದ್ದಾರೆ. ಇವರೆಲ್ಲರನ್ನೂ ವೈಯಕ್ತಿಕವಾಗಿ ತಲುಪುವುದು ಕಷ್ಟದ ಕೆಲಸವಾದ್ದರಿಂದ, ‘ನಿರ್ದಿಷ್ಟ ಸಮೂಹ’ಗಳನ್ನು ಗುರಿಯಾಗಿಸಿಕೊಂಡು ಪ್ರಚಾರ ಕಾರ್ಯದಲ್ಲಿ ಅವರು ತೊಡಗಿದ್ದಾರೆ. ಇವರಿಗೆ ಪಕ್ಷಗಳಲ್ಲಿನ ಸ್ಥಳೀಯ ಮುಖಂಡರು ‘ಸಾಥ್‌’ ನೀಡುತ್ತಿದ್ದಾರೆ.

ಹೆಚ್ಚಿನ ಮತದಾರರರು ಲಭ್ಯವಾಗುವ ಮಾರುಕಟ್ಟೆಗಳಿಗೆ ಭೇಟಿ, ದೇವಸ್ಥಾನಗಳಿಗೆ ಹೋಗುವುದು, ಮಠ–ಮಾನ್ಯಗಳಿಗೆ– ಶ್ರದ್ಧಾಕೇಂದ್ರಗಳಿಗೆ ತೆರಳುವುದು, ವಕೀಲರು, ವೈದ್ಯರು, ಕೈಗಾರಿಕೋದ್ಯಮಿಗಳು, ಕಾಲೇಜುಗಳು, ಶಿಕ್ಷಣ ಸಂಸ್ಥೆಗಳಿಗೆ, ಕೆಲಸದ ಸ್ಥಳಗಳಿಗೆ ಭೇಟಿ ನೀಡುವುದು ಅಲ್ಲಿನವರಿಂದ ಮೊದಲಾದವುಗಳಿಗೆ ಆದ್ಯತೆ ಕೊಟ್ಟು, ಬೆಂಬಲ ಯಾಚಿಸುವ ಕೆಲಸ ಮಾಡುತ್ತಿದ್ದಾರೆ. ಕೆಲವು ಪ್ರಮುಖ ಬಡಾವಣೆಗಳಲ್ಲಿ ಪಾದಯಾತ್ರೆ ಅಥವಾ ರೋಡ್‌ಶೋ ನಡೆಸುವುದು ಮಾತ್ರವೇ ಕಂಡುಬರುತ್ತಿದೆ. ಮನೆ ಮನೆಗಳಿಗೆ ತೆರಳಿ ಮತ ಯಾಚಿಸುವ ಪ್ರಕ್ರಿಯೆಯನ್ನು ಅವರು ಇನ್ನೂ ಆರಂಭಿಸಿಲ್ಲ. ‘ನಿರ್ದಿಷ್ಟ ಕ್ಷೇತ್ರ’ದವರಿಂದ ಅಭ್ಯರ್ಥಿಗಳಿಗೆ ದೊಡ್ಡ ಮಟ್ಟದಲ್ಲಿ ಸ್ವಾಗತವೇನೋ ದೊರೆಯುತ್ತಿದೆ. ಅದನ್ನು ‘ಮತ’ವಾಗಿ ಪರಿವರ್ತಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಕಣದಲ್ಲಿರುವ ಹುರಿಯಾಳುಗಳು ಮತ್ತು ರಾಜಕೀಯ ಪಕ್ಷದವರು ಬೆವರು ಹರಿಸುತ್ತಿದ್ದಾರೆ.

ಸಾಂಪ್ರದಾಯಿಕ ಮತ ಬುಟ್ಟಿಗೆ ಕೈ: ಯದುವೀರ್ ಈವರೆಗೆ ಹಲವು ಜಾತ್ರೆ, ಊರಹಬ್ಬ ಮೊದಲಾದವುಗಳಿಗೂ ಭೇಟಿ ನೀಡಿದ್ದಾರೆ. ದೇವಸ್ಥಾನಗಳಿಗೆ ಭೇಟಿಗೆ ಆದ್ಯತೆ ಕೊಡುವ ಮೂಲಕ ಬಿಜೆಪಿಯ ಸಾಂಪ್ರದಾಯಿಕ ಮತಗಳನ್ನು ಕ್ರೋಢೀಕರಿಸಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್‌ನ ಲಕ್ಷ್ಮಣ ಕೂಡ ಪಕ್ಷದ ಸಾಂಪ್ರದಾಯಿಕ ಮತಗಳಾದ ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಹಾಗೂ ದಲಿತರು) ಮತಗಳನ್ನು ತಮ್ಮದಾಗಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ. ಬಿರುಬಿಸಿಲನ್ನೂ ಲೆಕ್ಕಿಸದೇ ಪ್ರಚಾರದಲ್ಲಿ ತೊಡಗಿದ್ದಾರೆ.

ಯಾವ ಏರಿಯಾದಲ್ಲಿ ನಮ್ಮ ಪರವಾದ ಬೆಂಬಲ, ಅಲೆ ಅಥವಾ ಸಹಕಾರ ಇದೆ ಎಂಬುದನ್ನು ಅರಿತುಕೊಂಡೇ ಅಭ್ಯರ್ಥಿಗಳ ಪ್ರವಾಸ ಕಾರ್ಯಕ್ರಮವನ್ನು ಸಿದ್ಧಪಡಿಸಲಾಗುತ್ತಿದೆ. ಪಕ್ಷ ಅಥವಾ ತಮಗಿರುವ ಬೆಂಬಲವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುವುದು; ಸಾಂಪ್ರದಾಯಿಕ ಮತ ಬುಟ್ಟಿಯನ್ನು ನಮ್ಮದಾಗಿಸಿಕೊಳ್ಳುವುದು ಇದರ ಉದ್ದೇಶವಾಗಿದೆ ಎನ್ನುತ್ತಾರೆ ಪಕ್ಷದ ಮುಖಂಡರು.

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಕುರಿಮಂಡಿಯಲ್ಲಿ ಮತ ಯಾಚಿಸಿದರು
ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಕುರಿಮಂಡಿಯಲ್ಲಿ ಮತ ಯಾಚಿಸಿದರು

ಆರೋಪ–ಪ್ರತ್ಯಾರೋಪದಲ್ಲಿ ತೊಡಗಿಲ್ಲ!

ವಿಶೇಷವೆಂದರೆ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ತಮ್ಮ ಚಿಂತನೆಗಳನ್ನು ಮತದಾರರ ಮುಂದೆ ಹೇಳಿಕೊಳ್ಳುತ್ತಿದ್ದಾರೆಯೇ ಹೊರತು ಈವರೆಗೆ ಪರಸ್ಪರ ಆರೋಪ–ಪ್ರತ್ಯಾರೋಪದಲ್ಲಿ ತೊಡಗಿಲ್ಲ! ಇಬ್ಬರಿಗೂ ಎಲ್ಲ ಕಡೆಯೂ ಜನರು ಆದರದಿಂದ ಬರ ಮಾಡಿಕೊಳ್ಳುತ್ತಿದ್ದಾರೆ. ಎಲ್ಲಿಯೂ ವಿರೋಧ ವ್ಯಕ್ತವಾಗಿಲ್ಲ ಮುಜುಗರವಾಗಿಲ್ಲ! ಆರೋಗ್ಯಕರವಾದ ರೀತಿಯಲ್ಲಿ ಪ್ರಚಾರ ನಡೆಸುವ ಮೂಲಕ ಗಮನಸೆಳೆಯುತ್ತಿದ್ದಾರೆ. ಕೆಸರೆರಚಾಟಕ್ಕೆ ಅವರು ಅದ್ಯತೆ ನೀಡಿಲ್ಲದಿರುವುದು ಮತ್ತೊಂದು ವಿಶೇಷ. ಕಾಂಗ್ರೆಸ್‌ನ ಲಕ್ಷ್ಮಣ ರಾಜ್ಯ ಸರ್ಕಾರ ಯೋಜನೆಗಳು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಧನೆ–ಮೈಸೂರಿಗೆ ನೀಡಿದ ಕೊಡುಗೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ತಾವು ನಡೆಸಿದ ಸಮಾಜಮುಖಿ ಹೋರಾಟಗಳನ್ನು ನೆನಪಿಸುತ್ತಾ ಮತ ಯಾಚಿಸುತ್ತಿದ್ದಾರೆ. ಸೇವೆಗೆ ಅವಕಾಶ ಕೊಡಿ ಎಂದು ಮನವಿ ಮಾಡುತ್ತಿದ್ದಾರೆ. ಹಾಗೆಯೇ ಯದುವೀರ್‌ ಅವರು ಪ್ರಧಾನಿ ನರೇಂದ್ರ ಮೋದಿ ಜಾರಿಗೊಳಿಸಿದ ‘ಮೇಕ್‌ ಇನ್‌ ಇಂಡಿಯಾ’ ಮೊದಲಾದ ಕಾರ್ಯಕ್ರಮಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ಮೈಸೂರು ರಾಜವಂಶಸ್ಥರು ನೀಡಿದ ಕೊಡುಗೆಗಳನ್ನು ತಿಳಿಸುತ್ತಾ ನನ್ನ ಮೇಲೆ ನೀವು ಇಟ್ಟಿರುವ ಪ್ರೀತಿಗೆ ಪ್ರತಿಯಾಗಿ ನಿಮ್ಮ ಋಣ ತೀರಿಸಲು ಅವಕಾಶ ಕೊಡಿರೆಂದು ಕೇಳಿಕೊಳ್ಳುತ್ತಿದ್ದಾರೆ. ಅವರು ಮುಖ್ಯವಾಗಿ ಯುವಜನರನ್ನು ಗುರಿಯಾಗಿಸಿಕೊಂಡು ಪ್ರಚಾರ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿರುವುದು ಕಂಡುಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT