ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯಕ್ಕೆ ಜಯ ಸಿಗಬೇಕು: ಸಿದ್ದರಾಮಯ್ಯ

ಯಲ್ಲಾಪುರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮುಖ್ಯಮಂತ್ರಿ
Published 24 ಏಪ್ರಿಲ್ 2024, 5:50 IST
Last Updated 24 ಏಪ್ರಿಲ್ 2024, 5:50 IST
ಅಕ್ಷರ ಗಾತ್ರ

ತುಮಕೂರು: ಸತ್ಯಕ್ಕೆ ಜಯ ಸಿಗಬೇಕು. ನುಡಿದಂತೆ ನಡೆದು, ಸತ್ಯ ಹೇಳುವವರನ್ನು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬೆಂಬಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

ನಗರದ ಹೊರ ವಲಯದ ಯಲ್ಲಾಪುರದಲ್ಲಿ ಮಂಗಳವಾರ ರಾತ್ರಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಪರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದರು.

‘ನಾವು ಸತ್ಯ ಹೇಳುತ್ತಿದ್ದೇವೆ. ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಲಾಗುವುದು. ಲೋಕಸಭೆ ಚುನಾವಣೆ ನಂತರ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಹೇಳಿದ್ದೇವೆ. ಧೈರ್ಯದಿಂದ ಸತ್ಯ ಹೇಳುವವರನ್ನು ಬೆಂಬಲಿಸಬೇಕು. ಸುಳ್ಳು ಹೇಳುವ ಬಿಜೆಪಿಯವರನ್ನು ತಿರಸ್ಕರಿಸಬೇಕು’ ಎಂದು ಕೇಳಿಕೊಂಡರು.

ಪ್ರಧಾನಿ ನರೇಂದ್ರ ಮೋದಿ ಎದುರು ರಾಜ್ಯದ ಸಂಸದರು ಬಾಯಿ ಬಿಡಲಿಲ್ಲ. ಮೋದಿ ಕಂಡರೆ ನಡುಗುತ್ತಾರೆ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಸಂಸತ್‌ನಲ್ಲಿ ಪ್ರಶ್ನಿಸಲಿಲ್ಲ. ಇಂತಹವರನ್ನು ಮತ್ತೆ ಸಂಸತ್‌ಗೆ ಕಳುಹಿಸಿದರೆ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ಸಾಧ್ಯವಿಲ್ಲ. ನಮ್ಮ ಪರವಾಗಿ ಮಾತನಾಡುವ, ನ್ಯಾಯ ಕೇಳುವ ಸಾಮರ್ಥ್ಯ ಇರುವ ಎಸ್.ಪಿ.ಮುದ್ದಹನುಮೇಗೌಡ ಅವರನ್ನು ಆಯ್ಕೆ ಮಾಡಿದರೆ, ಸಂಸತ್‌ನಲ್ಲಿ ಜನರ ಧ್ವನಿಯಾಗಿ ನಿಲ್ಲುತ್ತಾರೆ ಎಂದು ಹೇಳಿದರು.

‘ಅಭಿವೃದ್ಧಿಯ ಹರಿಕಾರ, ಕೆಲಸಗಾರ, ಗೆಲ್ಲಿಸಿ’ ಎಂದು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಕೇಳುತ್ತಿದ್ದಾರೆ. ವಸತಿ ಸಚಿವರಾಗಿದ್ದಾಗ ಹೊಸದಾಗಿ ಒಂದು ಮನೆಯನ್ನೂ ಕಟ್ಟಿಸಲಿಲ್ಲ. ಇದ್ದರೆ ದಾಖಲೆ ತೋರಿಸಲಿ. ಸುಮ್ಮನೆ ಬೊಗಳೆ ಬಿಡುತ್ತಿದ್ದಾರೆ. ಹಿಂದೆ ಇದ್ದ ಸಂಸದರು ಬಾಯಿ ಬಿಡಲಿಲ್ಲ. ಸೋಮಣ್ಣ ಅವರನ್ನು ಕಳುಹಿಸಿದರೆ ಅವರೂ ಬಾಯಿ ಬಿಚ್ಚುವುದಿಲ್ಲ. ಅಂತಹವರನ್ನು ತಿರಸ್ಕರಿಸಿ, ಯೋಗ್ಯ, ಅರ್ಹ ವ್ಯಕ್ತಿಯನ್ನು ಆಯ್ಕೆ ಮಾಡಬೇಕು’ ಎಂದು ಮನವಿ ಮಾಡಿದರು.

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಬಿಚ್ಚಿಟ್ಟರು. ಕೊಟ್ಟ ಭರವಸೆ ಈಡೇರಿಸದೆ ಸುಳ್ಳು ಹೇಳುತ್ತಿದ್ದಾರೆ ಎಂದು ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಸಹಕಾರ ಸಚಿವ ಕೆ.ಎನ್.ರಾಜಣ್ಣ, ‘ಟೂರಿಂಗ್ ಟಾಕೀಸ್ ಅಭ್ಯರ್ಥಿಯಾಗಿರುವ ಸೋಮಣ್ಣ ಅವರನ್ನು ದೂರ ಇಡಬೇಕು. ವರುಣಾ, ಚಾಮರಾಜನಗರದಲ್ಲಿ ಸೋತು ಬಂದು ಇಲ್ಲಿನ ಜನರಿಗೆ ಆಸೆ, ಆಮಿಷ ಒಡ್ಡುತ್ತಿದ್ದಾರೆ. ಇನ್ನಿಲ್ಲದಂತೆ ಅಪಪ್ರಚಾರ ಮಾಡುತ್ತಿದ್ದಾರೆ. ಇಂತಹವರಿಗೆ ಸರಿಯಾಗಿ ಬುದ್ಧಿ ಕಲಿಸಬೇಕು’ ಎಂದು ಹೇಳಿದರು.

ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕರಾದ ಎಸ್.ಆರ್.ಶ್ರೀನಿವಾಸ್, ಕೆ.ಷಡಕ್ಷರಿ, ಎಚ್.ವಿ.ವೆಂಕಟೇಶ್, ವಿಧಾನ ಪರಿಷತ್ ಸದಸ್ಯ ಕೆ.ಆರ್.ರಾಜೇಂದ್ರ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್‌ಗೌಡ, ಮಾಜಿ ಶಾಸಕರಾದ ಕೆ.ಎಸ್.ಕಿರಣ್ ಕುಮಾರ್, ರಫಿಕ್ ಅಹಮದ್, ಡಿ.ಸಿ.ಗೌರಿಶಂಕರ್, ಗಂಗಹನುಮಯ್ಯ, ಬೆಮಲ್ ಕಾಂತರಾಜು, ಮುಖಂಡರಾದ ಎಂ.ಸಿ.ವೇಣುಗೋಪಾಲ್, ಎನ್.ಗೋವಿಂದರಾಜು, ಆರ್.ರಾಮಕೃಷ್ಣ, ಇಕ್ಬಾಲ್ ಅಹಮದ್, ಗೀತಾ ರಾಜಣ್ಣ, ಮುರಳೀಧರ್ ಹಾಲಪ್ಪ, ನಿಕೇತ್‌ರಾಜ್ ಮೌರ್ಯ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು

ಹೊರಗಿನಿಂದ ಕರೆ ತಂದಿದ್ದಾರೆ

ಬಿಜೆಪಿಯವರಿಗೆ ಅಭ್ಯರ್ಥಿ ಸಿಗದೆ ಹೊರಗಿನಿಂದ ಕರೆತಂದು ನಿಲ್ಲಿಸಿದ್ದಾರೆ. ತುಮಕೂರಿಗೆ ಸಂಬಂಧವೇ ಇಲ್ಲ. ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಅಂತಹವರನ್ನು ನಿಲ್ಲಿಸಿದ್ದಾರೆ? ಜಿಲ್ಲೆಗೆ ನಿಮ್ಮ ಕೊಡುಗೆ ಏನು? ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಪ್ರಶ್ನಿಸಿದರು. ಸೋಮಣ್ಣ ಹೆಸರು ಹೇಳದೆ ಟೀಕಿಸಿದರು. ಯಾವುದೋ ಊರಿನಿಂದ ಬಂದವರು ಕೈಗೆ ಸಿಗದ ವ್ಯಕ್ತಿ ಬೇಕೆ ಇಲ್ಲೇ ನಿಮ್ಮ ಜತೆಯಲ್ಲೇ ಇರುವ ಎಸ್.ಪಿ.ಮುದ್ದಹನುಮೇಗೌಡ ಬೇಕೆ? ಎಂಬುದನ್ನು ಜನರು ನಿರ್ಧರಿಸಬೇಕು ಎಂದರು. ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಗುಡುಗಿದರು. 2014ರಲ್ಲಿ ಹಸಿವಿನ ಸೂಚ್ಯಂಕದಲ್ಲಿ ಭಾರತ 55ನೇ ಸ್ಥಾನದಲ್ಲಿ ಇತ್ತು. ಕಳೆದ ಹತ್ತು ವರ್ಷಗಳಿಂದ ಮೋದಿ ಆಡಳಿತ ನಡೆಸಿದ್ದು ಈಗ ಈ ಸೂಚ್ಯಂಕ 111ನೇ ಸ್ಥಾನಕ್ಕೆ ಇಳಿದಿದೆ. ಹಸಿವಿನಿಂದ ಬಳಲಿದವರನ್ನು ಮತ್ತೆ ಹಸಿವಿನ ಕಡೆಗೆ ಕರೆದುಕೊಂಡು ಹೋಗಿದ್ದೀರಿ. ನಿಮ್ಮ ಸರ್ಕಾರದಲ್ಲಿ ಬಡವರನ್ನು ಮತ್ತಷ್ಟು ಬಡವರನ್ನಾಗಿ ಮಾಡಲಾಗಿದೆ ಎಂದು ಆರೋಪಿಸಿದರು.

ವೇದಿಕೆಗೆ ಬಾರದ ಮುದ್ದಹನುಮೇಗೌಡ

ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಅವರು ವೇದಿಕೆಗೆ ಬರಲಿಲ್ಲ. ವೇದಿಕೆಯ ಕೆಳಭಾಗದಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸಿದರು. ಕಾಂಗ್ರೆಸ್ ವತಿಯಿಂದ ಕಾರ್ಯಕರ್ತರ ಸಭೆ ಹಾಗೂ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮುದ್ದಹನುಮೇಗೌಡ ಅವರು ವೇದಿಕೆ ಏರಿ ಪ್ರಚಾರ ಮಾಡಿದ್ದರೆ ಕಾರ್ಯಕ್ರಮದ ಖರ್ಚುವೆಚ್ಚ ಅವರ ಚುನಾವಣೆ ಲೆಕ್ಕಕ್ಕೆ ಬರುತ್ತದೆ. ಹಾಗಾಗಿ ವೇದಿಕೆಗೆ ಬಾರದೆ ಕೆಳಗೆ ಕುಳಿತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT