ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ಖಟಕಚಿಂಚೋಳಿ: ಗ್ರಾಮಗಳಲ್ಲಿ ಚುನಾವಣೆ ಚರ್ಚೆ ಜೋರು

ಒಟ್ಟಾರೆ ದೇಶದ ಫಲಿತಾಂಶ ಬಗ್ಗೆಯೂ ಗಂಭೀರ ಸಮಾಲೋಚನೆ
Published 23 ಏಪ್ರಿಲ್ 2024, 5:16 IST
Last Updated 23 ಏಪ್ರಿಲ್ 2024, 5:16 IST
ಅಕ್ಷರ ಗಾತ್ರ

ಖಟಕಚಿಂಚೋಳಿ: ಲೋಕಸಭಾ ಚುನಾವಣೆಯ ಮತದಾನಕ್ಕೆ ಇನ್ನೂ ಕೆಲ ದಿನಗಳು ಬಾಕಿ ಇರುವಾಗಲೇ ಗ್ರಾಮಗಳಲ್ಲಿ ಚುನಾವಣೆ ಚರ್ಚೆ ಜೋರು ನಡೆದಿದೆ.

ಹೋಬಳಿಯ ಹೋಟೆಲ್, ದೇವಸ್ಥಾನಗಳ ಕಟ್ಟೆ, ಚಿಂತಕರ ಚಾವಡಿ, ಮದುವೆ ಸಮಾರಂಭದಲ್ಲಿ ಚುನಾವಣೆಯ ಸೋಲು–ಗೆಲುವಿನದ್ದೇ ಚರ್ಚೆಗಳು ನಡೆದಿವೆ. ಒಬ್ಬೊಬ್ಬರು ಒಂದೊಂದು ತರಹದ ವಿಶ್ಲೇಷಣೆ ಮಾಡುವುದು ಕಂಡುಬರುತ್ತಿದೆ.

‘ಸ್ಥಳೀಯ ಲೋಕಸಭಾ ಕ್ಷೇತ್ರದ ಫಲಿತಾಂಶವಷ್ಟೇ ಅಲ್ಲದೇ ಒಟ್ಟಾರೆ ದೇಶದ ಫಲಿತಾಂಶ ಬಗ್ಗೆಯೂ ಗಂಭೀರ ಸಮಾಲೋಚನೆಗಳು ನಡೆಯುತ್ತಿವೆ. ಅಲ್ಲಿರುವವರಲ್ಲಿ ಕೆಲವರು ಆಯಾ ಪಕ್ಷಗಳ ಕಾರ್ಯಕರ್ತರಿರುವುದರಿಂದ ತಮ್ಮ ಪಕ್ಷಗಳ ಬಗ್ಗೆ ಸಮರ್ಥನೆ ಮಾಡಿಕೊಳ್ಳುವುದು, ವಾದಿಸುವುದು ಕಾಣುತ್ತಿದ್ದೇವೆ. ದೇಶದಲ್ಲಿ ಈ ಬಾರಿ ಮೋದಿ ಅಲೆ ಇದೆ. ಹಾಗಾಗಿ ಬಿಜೆಪಿ ಅಭ್ಯರ್ಥಿಗಳಿಗೆ ಇದು ಅನುಕೂಲವಾಗಬಹುದು. ಕಳೆದ ಹತ್ತು ವರ್ಷಗಳ ಕಾಲ ಸಂಸದರಾಗಿ ಹಾಗೂ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿರುವ ಭಗವಂತ ಖೂಬಾಗೆ ಮೋದಿ ಅಲೆಯೇ ಶ್ರೀರಕ್ಷೆ. ಕಾಂಗ್ರೆಸ್‌ನಿಂದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಪುತ್ರ ಸಾಗರ್ ಖಂಡ್ರೆ ಚುನಾವಣಾ ಅಖಾಡಕ್ಕಿಳಿದಿರುವುದರಿಂದ ಖೂಬಾಗೆ ಜಯ ಅಷ್ಟೊಂದು ಸುಲಭವಲ್ಲ’ ಎನ್ನುವುದು ಸಾರ್ವಜನಿಕರ ಮಾತಾಗಿದೆ.

‘ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಜಿಲ್ಲೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕಳೆದ ಲೋಕಸಭಾ ಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ಖಂಡ್ರೆಗೆ ಇದು ಪ್ರತಿಷ್ಠೆಯ ಕಣ ಒಂದೆಡೆಯಾದರೆ ಇದು ಮಗನ ರಾಜಕೀಯ ಭವಿಷ್ಯದ ಮೇಲೆ ತೀವ್ರ ಪರಿಣಾಮ ಬೀರಲಿದೆ ಎನ್ನುವುದು ಖಂಡ್ರೆ ಅವರಿಗೆ ಚೆನ್ನಾಗಿ ಗೊತ್ತಿದೆ. ಆದ್ದರಿಂದ ಅವರು ಮಗನ ಗೆಲುವಿಗೆ ಹಗಲಿರುಳು ಕ್ಷೇತ್ರದಾದ್ಯಂತ ಸುತ್ತಾಡುತ್ತಿದ್ದಾರೆ. ಇನ್ನು ಬಿಜೆಪಿಯ ಖೂಬಾ ಕಳೆದ ಬಾರಿ ತಂದೆಗೆ ಹೀನಾಯವಾಗಿ ಸೋಲಿಸಿದ್ದೇನೆ. ಈಗ ಮಗನ ಸರದಿ. ಮಗ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುತ್ತಾ ಹುಮ್ಮಸ್ಸಿನಿಂದ ಓಡಾಡುತ್ತಿದ್ದಾರೆ. ಹೀಗೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಸಮಬಲ ಏರ್ಪಟ್ಟಿದೆ’ ಎಂಬ ಮಾತುಗಳು ಕೇಳಿಬರುತ್ತಿವೆ.

‘ಬಿಜೆಪಿಯ ಭಗವಂತ ಖೂಬಾ ಕಾರ್ಯಕರ್ತರೊಂದಿಗೆ, ಜನರೊಂದಿಗೆ ಅಷ್ಟೊಂದು ಸಂಪರ್ಕ ಹೊಂದಿಲ್ಲ ಎನ್ನುವ ಮಾತುಗಳು ದಟ್ಟವಾಗಿದೆ. ಪ್ರಚಾರದಲ್ಲಿ ಕೇವಲ ಮೋದಿ ನಾಮಜಪ ಮಾಡುತ್ತಾ ಹೊರಟಿದ್ದಾರೆ. ಅಧಿಕಾರ ಇದ್ದಾಗ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಿಲ್ಲ. ಚುನಾವಣಾ ಪ್ರಚಾರದಲ್ಲಿ ದೇಶಕ್ಕೆ ಮೋದಿ ಅವಶ್ಯಕ. ಮೋದಿಗಾಗಿ ನೀವು ಬಿಜೆಪಿಗೆ ಮತ ನೀಡಿ ಎನ್ನುತ್ತಾ ಹೊರಟಿದ್ದಾರೆ’ ಎಂದು ಹೆಸರು ಹೇಳಲು ಇಚ್ಚಿಸದ ಬಿಜೆಪಿ ಕಾರ್ಯಕರ್ತ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿರುವುದರಿಂದ ಜೆಡಿಎಸ್ ಅಭ್ಯರ್ಥಿ ಇಲ್ಲದಂತಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಕಚ್ಚಾಟದಲ್ಲಿ ಕಾಂಗ್ರೆಸ್ ಸುಲಭವಾಗಿ ಜಯ ಸಾಧಿಸಿದೆ. ಸದ್ಯ ಎರಡೂ ಒಂದಾಗಿವೆ. ಕಾರ್ಯಕರ್ತರು ಮಾತ್ರ ಅತಂತ್ರರಾಗಿದ್ದಾರೆ. ಜೆಡಿಎಸ್ ಮತಗಳು ಬಿಜೆಪಿಗೆ ವರದಾನವಾಗಲಿವೆಯಾ ಎನ್ನುವುದು ಪ್ರಶ್ನೆಯಾಗಿದೆ. ರಾಜಕೀಯ ಎನ್ನುವುದು ಎಷ್ಟು ಹೊಲಸು ಆಗೋಯ್ತು. ರಾಜಕೀಯದಲ್ಲಿ ನಂಬಿಕೆ, ವಿಶ್ವಾಸ ಎನ್ನುವುದು ಇಲ್ಲದಂತಾಗಿದೆ’ ಎಂದು ಸಾರ್ವಜನಿಕರು ಗೊಣಗುತ್ತಾರೆ.

ಸದ್ಯದ ಪರಿಸ್ಥಿತಿ ನೋಡಿದರೆ ಯಾರಿಗೆ ಗೆಲುವು ಎಂದು ಹೇಳುವುದು ಕಷ್ಟ. ರಾಜಕೀಯ ತಂತ್ರಗಾರಿಕೆ, ಹಣಬಲ, ಜಾತಿ ಲೆಕ್ಕಾಚಾರ ಹೇಗೆಲ್ಲ ಕೆಲಸ ಮಾಡುತ್ತೋ ಏನೋ ಎಂದು ನೋಡಬೇಕಾಗುತ್ತೇ ಎಂಬ ಮಾತುಗಳು ಬಾಯಿಯಿಂದ ಬಾಯಿಗೆ ಹರಿದಾಡುತ್ತಿವೆ.

‘ಸಾಗರ ಖಂಡ್ರೆ ಗೆಲುವು ಖಚಿತ’

ಸದ್ಯ ಕಾಂಗ್ರೆಸ್ ಪಕ್ಷದ ಕಚೇರಿಯಿಂದ ಸಾಗರ ಖಂಡ್ರೆ ಅವರಿಗೆ ಮತ ಹಾಕಿ ಎನ್ನುವ ಸಂದೇಶದ ಆಡಿಯೊ ತುಣುಕು ಎಲ್ಲೆಡೆ ಹರಿದಾಡುತ್ತಿದೆ. ಆಡಿಯೊದಲ್ಲಿ ಮಾತನಾಡಿದ ವ್ಯಕ್ತಿ ಕಾಂಗ್ರೆಸ್‌ಗೆ ಮತ ಏಕೆ ಹಾಕಬೇಕು? ಸಾಗರ ಖಂಡ್ರೆ ಇನ್ನೂ ಚಿಕ್ಕವರು ಅವರ ಮನೆಯಲ್ಲಿಯೇ ಅಧಿಕಾರವಿರಬೇಕಾ ಎನ್ನುವ ಸರದಿ ಸಾಲಿನಲ್ಲಿ ಪ್ರಶ್ನೆಗಳನ್ನು ಕೇಳಿರುವುದು ಎಲ್ಲೆಡೆ ಹರಿದಾಡಿದೆ. ಇದು ಉದ್ದೇಶಪೂರ್ವಕವಾಗಿ ಬಿಜೆಪಿಯವರು ಸಿದ್ಧಪಡಿಸಿದ ಆಡಿಯೊ. ನಮ್ಮ ಕಚೇರಿ ಸಿಬ್ಬಂದಿಯೊಂದಿಗೆ ಯಾರೊಬ್ಬರೂ ಈ ರೀತಿ ಮಾತನಾಡಿಲ್ಲ. ಎಲ್ಲರೂ ಸಾಗರ ಖಂಡ್ರೆ ಯುವಕರು ಉತ್ಸಾಹಿಯಾಗಿದ್ದಾರೆ. ಅವರ ಗೆಲುವು ಖಚಿತ ಎನ್ನುವ ಮಾತುಗಳನ್ನಾಡಿದ್ದಾರೆ’ ಎಂದು ಕಾಂಗ್ರೆಸ್‌ನ ಮಲ್ಲಿಕಾರ್ಜುನ ಪಾಟೀಲ ಮುಗನೂರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT