ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಬಳಿಕ ರಾಜ್ಯ ಸರ್ಕಾರ ಇರುವುದಿಲ್ಲ: CM ಸಿದ್ದರಾಮಯ್ಯ ವಿರುದ್ಧ ಖೂಬಾ ಕಿಡಿ

Published 2 ಏಪ್ರಿಲ್ 2024, 14:22 IST
Last Updated 2 ಏಪ್ರಿಲ್ 2024, 14:22 IST
ಅಕ್ಷರ ಗಾತ್ರ

ಬೀದರ್‌: ‘ಲೋಕಸಭೆ ಚುನಾವಣೆ ನಂತರ ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿ ಇರುವುದಿಲ್ಲ. ‘ಆಪರೇಷನ್‌ ಕಮಲ’ ಮಾಡುವ ಪ್ರಮೇಯ ಇಲ್ಲ. ಕಾಂಗ್ರೆಸ್ಸಿನವರೇ ಸರ್ಕಾರ ಬೀಳಿಸುತ್ತಾರೆ’ ಎಂದು ಬೀದರ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆದ ಕೇಂದ್ರ ಸಚಿವ ಭಗವಂತ ಖೂಬಾ ಭವಿಷ್ಯ ನುಡಿದರು.

ಲೋಕಸಭೆ ಚುನಾವಣೆ ಫಲಿತಾಂಶ ನಂತರ ಕಾಂಗ್ರೆಸ್‌ ಶಾಸಕರ ಅಸಮಾಧಾನ ಸ್ಫೋಟವಾಗಿ ಸರ್ಕಾರ ಬೀಳುತ್ತದೆ ಎಂದು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿಕೂಟ 28 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ರಾಜ್ಯಕ್ಕೆ ಕಾಂಗ್ರೆಸ್‌ ಸರ್ಕಾರದ ಸಾಧನೆ ಶೂನ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಹತ್ತು ವರ್ಷಗಳ ಆಡಳಿತದ ಅವಧಿಯಲ್ಲಿ ದೇಶ ಪ್ರಗತಿಯತ್ತ ದಾಪುಗಾಲು ಇಟ್ಟಿದೆ. ಎಲ್ಲ ರಂಗಗಳಲ್ಲಿ ಉತ್ತಮ ಸಾಧನೆ ಮಾಡಿದೆ ಎಂದರು.

9 ತಿಂಗಳಿಂದ ಯಾವ ನೈತಿಕತೆಯಿಂದ ಕಾಂಗ್ರೆಸ್ಸಿಗರು ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದಾರೆ ಗೊತ್ತಿಲ್ಲ. ಕೇಂದ್ರ ಸರ್ಕಾರದ ನಿಯಮದ ಪ್ರಕಾರ ಪರಿಹಾರ ಕೊಡಲಾಗುತ್ತದೆ. ರಾಜ್ಯಕ್ಕೆ ಎಲ್ಲವೂ ಸಂದಾಯವಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರೇ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೇಂದ್ರದತ್ತ ಬೊಟ್ಟು ಮಾಡುವ ಕೆಟ್ಟ ಚಾಳಿ ಇದೆ. ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರವನ್ನು ಟೀಕಿಸುತ್ತಾರೆ. ಇವರ ಒಂಬತ್ತು ತಿಂಗಳ ದುರಾಡಳಿತದಿಂದ ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತಗೊಂಡಿದೆ ಎಂದು ಆರೋಪಿಸಿದರು.

ಸಚಿವ ಈಶ್ವರ ಖಂಡ್ರೆಯವರು ಅಹಂಕಾರ, ದರ್ಪ ಬೆಳೆಸಿಕೊಂಡಿದ್ದಾರೆ. ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ನನ್ನ ಶ್ರಮದಿಂದ ಬೀದರ್‌ನಿಂದ ವಿಮಾನಯಾನ ಸೇವೆ ಆರಂಭಗೊಂಡಿತ್ತು. ಆದರೆ, ನಾವು ಮಾಡಿದ್ದು ಎಂದು ಖಂಡ್ರೆಯವರು ಹೇಳಿದ್ದು ನಾಚಿಕೆಗೇಡಿನ ಸಂಗತಿ. ಖಂಡ್ರೆಯವರು ಜವಾಬ್ದಾರಿಯಿಂದ ಮಾತನಾಡಬೇಕು. ಅವರ ಯೋಗ್ಯತೆಗೆ ಭಾಲ್ಕಿಯಲ್ಲಿ ಒಂದು ಕ್ರೀಡಾಂಗಣ ನಿರ್ಮಿಸಲು ಸಾಧ್ಯವಾಗಿಲ್ಲ ಎಂದು ಕುಟುಕಿದರು.

ಔರಾದ್‌ ತಾಲ್ಲೂಕಿನ ಬಲ್ಲೂರ ಗ್ರಾಮದಲ್ಲಿ ‘ಸಿಪೆಟ್‌’ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ₹50 ಕೋಟಿ ಅನುದಾನ ಬಿಡುಗಡೆಗೊಳಿಸಿದೆ. ರಾಜ್ಯ ಸರ್ಕಾರದ ಪಾಲಿನ ಅನುದಾನ ಇದುವರೆಗೆ ಬಿಡುಗಡೆಗೊಳಿಸಿಲ್ಲ. ಒಂದು ಸಲ ಕಟ್ಟಡ ನಿರ್ಮಾಣಗೊಂಡರೆ ಹುದ್ದೆಗಳ ಮಂಜೂರಾತಿ ಸೇರಿದಂತೆ ಎಲ್ಲವೂ ಆಗುತ್ತದೆ ಎಂದರು.

ಬೀದರ್ ದಕ್ಷಿಣ ಕೇತ್ರದ ಶಾಸಕ ಡಾ.ಶೈಲೇಂದ್ರ ಕೆ.ಬೆಲ್ದಾಳೆ, ಬಸವಕಲ್ಯಾಣ ಶಾಸಕ ಶರಣು ಸಲಗರ್‌, ವಿಧಾನ ಪರಿಷತ್ ಸದಸ್ಯ ರಘುನಾಥರಾವ್‌ ಮಲ್ಕಾಪುರೆ, ಮಾಜಿಶಾಸಕ ಪ್ರಕಾಶ ಖಂಡ್ರೆ, ಮುಖಂಡರಾದ ರಾಜಕುಮಾರ ಪಾಟೀಲ ತೇಲ್ಕುರ್, ಈಶ್ವರ ಸಿಂಗ್ ಠಾಕೂರ್, ಜೈಕುಮಾರ ಕಾಂಗೆ, ನಗರಸಭೆ ಸದಸ್ಯ ಶಶಿ ಹೊಸಳ್ಳಿ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕಿರಣ ಪಾಟೀಲ, ಪೀರಪ್ಪ ಯರನಳ್ಳಿ ಹಾಜರಿದ್ದರು.

‘ಪ್ರಭು ಚವಾಣ್‌ 3 ತಿಂಗಳು ಓಡಾಡುವಂತಿಲ್ಲ’

‘ಔರಾದ್‌ ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಚವಾಣ್‌ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂರು ತಿಂಗಳು ಅವರು ಎಲ್ಲೂ ಓಡಾಡುವಂತಿಲ್ಲ. ಆದರೆ, ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಈಗಾಗಲೇ ಔರಾದ್‌ ಕ್ಷೇತ್ರದಲ್ಲಿ ಬಿಜೆಪಿ ಸಭೆ ನಡೆಸಿದ್ದು, ಎಲ್ಲರೂ ಬೆಂಬಲ ಕೊಟ್ಟಿದ್ದಾರೆ. ಬಿಜೆಪಿಯಲ್ಲಿ ಯಾವುದೇ ಗೊಂದಲಗಳಿಲ್ಲ’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಸ್ಪಷ್ಟಪಡಿಸಿದರು.

‘ಅಭ್ಯರ್ಥಿ ಘೋಷಣೆಗೂ ಮುನ್ನ ಬಿಜೆಪಿಯಲ್ಲಿ ಗೊಂದಲ ಇತ್ತು. ಈಗ ಯಾವುದೇ ಗೊಂದಲವಿಲ್ಲ. ಶಾಸಕ ಪ್ರಭು ಚವಾಣ್‌ ಅವರ ಆರೋಗ್ಯ ವಿಚಾರಿಸಿದ್ದೇವೆ’ ಎಂದು ಹುಮನಾಬಾದ್‌ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ ತಿಳಿಸಿದರು.

‘ಪದ್ಮಾಕರ ಪಾಟೀಲ ವೈಯಕ್ತಿಕ ಲಾಭ’

‘ಮರಾಠ ಸಮುದಾಯದವರಿಗೆ ಏನೆಲ್ಲ ಸವಲತ್ತುಗಳನ್ನು ಕೊಡಬೇಕಿತ್ತೋ ಕೊಡಲಾಗಿದೆ. ಆದರೆ, ಬಿಜೆಪಿ ಮುಖಂಡ ಪದ್ಮಾಕರ ಪಾಟೀಲ ಅವರು ವೈಯಕ್ತಿಕ ಲಾಭಕ್ಕಾಗಿ ಮರಾಠ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮಾತುಗಳನ್ನು ಆಡುತ್ತಿದ್ದಾರೆ’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಈಗಾಗಲೇ ಪಕ್ಷದ ಮುಖಂಡರು ಪದ್ಮಾಕರ ಪಾಟೀಲ ಅವರ ಜೊತೆ ಮಾತನಾಡಿದ್ದಾರೆ. ಸಮಾಜಕ್ಕಾಗಿ ಪ್ರಾತಿನಿಧ್ಯ ಕೇಳುವುದು ತಪ್ಪಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT