ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ED, IT ಮೂಲಕ ಬ್ಲ್ಯಾಕ್‌ಮೇಲ್‌ ರಾಜಕೀಯ: ಬಿಜೆಪಿ ವಿರುದ್ಧ ಹನುಮಂತಯ್ಯ ವಾಗ್ದಾಳಿ

Published 11 ಏಪ್ರಿಲ್ 2024, 22:58 IST
Last Updated 11 ಏಪ್ರಿಲ್ 2024, 22:58 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಚುನಾವಣಾ ಬಾಂಡ್‌ ಮೂಲಕ ಬಿಜೆಪಿಯು ಭ್ರಷ್ಟಾಚಾರ ವನ್ನು ಕಾನೂನು ಬದ್ಧಗೊಳಿಸಲು ಮುಂದಾಗಿದೆ’ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಉಪಾಧ್ಯಕ್ಷ ಎಲ್. ಹನುಮಂತಯ್ಯ ವಾಗ್ದಾಳಿ ನಡೆಸಿದರು. 

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಕ್ಕಳು ಅಪೌಷ್ಟಿಕತೆಯಿಂದ ಬಳುತ್ತಿದ್ದಾರೆ. ಆದರೆ ಈ‌ ಅಂಕಿ‌–ಅಂಶ ತಪ್ಪು ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಇದು ನಾಗರಿಕ ಸರ್ಕಾರದ ಲಕ್ಷಣವಲ್ಲ’ ಎಂದರು. 

‘ಕರ್ನಾಟಕವಷ್ಟೇ ಅಲ್ಲ ಬೇರೆ ಬೇರೆ ರಾಜ್ಯಗಳಲ್ಲಿಯೂ ಎದುರಾಳಿ ಪಕ್ಷಗಳ ನಾಯಕರನ್ನು ಐ.ಟಿ, ಇ.ಡಿ ತನಿಖೆ ಹೆಸರಿನಲ್ಲಿ ಬ್ಲಾಕ್‌ಮೇಲ್ ಮಾಡ ಲಾಗುತ್ತಿದೆ. ಈ ಹಿಂದೆ ತತ್ವ, ಸಿದ್ಧಾಂತದ ಪಕ್ಷ ಬಿಜೆಪಿ ಎನ್ನುತ್ತಿದ್ದರು. ಆದರೆ ಈಗ ಬೆದರಿಸುವುದೇ ತಂತ್ರವಾಗಿದೆ’ ಎಂದು ದೂರಿದರು.

‘ಬಿಜೆಪಿ ಕಳೆದ 20 ವರ್ಷದಿಂದ ರಾಜ್ಯದಲ್ಲಿ ಪ್ರವರ್ಧಮಾನಕ್ಕೆ ಬಂದಿತು. ಆದರೆ ಎಂದಿಗೂ ರಾಜ್ಯದ ಜನರು ಬಹುಮತ ನೀಡಿಲ್ಲ. ಶಾಸಕರಿಗೆ ಆಮಿಷವೊಡ್ಡಿ, ರಾಜೀನಾಮೆ ಕೊಡಿಸಿ ಸರ್ಕಾರ ಮಾಡಿದ್ದಾರೆ. ರಾಜ್ಯದ ಜನರು ಬಿಜೆಪಿಯನ್ನು ಮಾನ್ಯ ಮಾಡಿಲ್ಲ. ಜನಾಭಿಪ್ರಾಯ ಇಲ್ಲದೇ ಇದ್ದರೂ ವಾಮಮಾರ್ಗದ ಮೂಲಕ ಸರ್ಕಾರ ರಚಿಸಿದ್ದಾರೆ’ ಎಂದು ದೂರಿದರು.

‘ಜಿಎಸ್‌ಟಿ ಜಾರಿಗೆ ಮುಂದಾಗಿದ್ದು ಕಾಂಗ್ರೆಸ್. ಆ ಸಮಯದಲ್ಲಿ ಬಿಜೆಪಿ ಆಡಳಿತದ ರಾಜ್ಯ ಸರ್ಕಾರಗಳು ಜಿಎಸ್‌ಟಿ ವಿರೋಧಿಸಿದ್ದವು. ಆದರೆ ನಂತರ ಜಿಎಸ್‌ಟಿ ಹೆಸರಿನಲ್ಲಿ ಬಿಜೆಪಿ ಸರ್ಕಾರ ಜನರ ರಕ್ತ ಹೀರುವ ಕೆಲಸ ಮಾಡುತ್ತಿದೆ. ಅವೈಜ್ಞಾನಿಕವಾಗಿ ತೆರಿಗೆ ವಿಧಿಸಲಾಗುತ್ತಿದೆ. ಇಡ್ಲಿ, ಕಾಫಿ ಮೇಲೂ ತೆರಿಗೆ. ಇದನ್ನು ಪರಾಮರ್ಶಿಸಬೇಕು ಎನ್ನುವುದು ನಮ್ಮ ಒತ್ತಾಯ’ ಎಂದರು.

‘ವಿಶ್ವದಲ್ಲಿಯೇ ಜನರು ಅತಿ ಹೆಚ್ಚು ತೆರಿಗೆ ಪಾವತಿಸುವ ದೇಶ ಭಾರತ. ಇಷ್ಟು ತೆರಿಗೆ ಪಡೆದರು ಕಳೆದ 10 ವರ್ಷಗಳಲ್ಲಿ 3 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಬಡವರ ಸಂಖ್ಯೆ ಕಡಿಮೆ ಆಗಿಲ್ಲ. ಮತ್ತೆ ಬಿಜೆಪಿಗೆ ಅಧಿಕಾರ ಕೊಟ್ಟರೆ ₹ 50 ಲಕ್ಷ ಕೋಟಿ ಸಾಲದ ಹೊರೆ ಹೆಚ್ಚುತ್ತದೆ’ ಎಂದರು.

‘ಬಡಕುಟುಂಬಗಳಿಗೆ ವಾರ್ಷಿಕ ₹ 1 ಲಕ್ಷ ನೆರವು ಸೇರಿದಂತೆ ಜನರ ಬದುಕನ್ನು ಉತ್ತಮಗೊಳಿಸುವ ವಿಚಾರಗಳು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಇವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಜೀವನಕ್ಕೆ ತೊಂದರೆ ಆಗದ ರೀತಿಯಲ್ಲಿ ಜನರನ್ನು ನೇರವಾಗಿ ತಲುಪುತ್ತಿವೆ.‌ ಯುವಕರಿಗೆ ಉದ್ಯೋಗ, ಮಹಿಳಾ ಸಬಲೀಕರಣ ಸೇರಿದಂತೆ ಪ್ರಮುಖ ವಿಷಯಗಳು ಕಾಂಗ್ರೆಸ್
ಪ್ರಣಾಳಿಕೆಯಲ್ಲಿ ಇವೆ’ ಎಂದು ಹೇಳಿದರು. 

‘ಬಿಜೆಪಿ ಆಡಳಿತದಲ್ಲಿ ಅಭಿವೃದ್ಧಿಯು ಶ್ರೀಮಂತರಿಗೆ ಮಾತ್ರ ಎನ್ನುವ ಸ್ಥಿತಿ ಇದೆ. ನವದೆಹಲಿಯಲ್ಲಿ ರೈತರು ಹಕ್ಕುಗಳಿಗಾಗಿ ಒಂದು ವರ್ಷ ಹೋರಾಟ ಮಾಡಿದರೂ ಸಮಸ್ಯೆ ಪರಿಹಾರಕ್ಕೆ ಗಮನ ನೀಡಲಿಲ್ಲ’ ಎಂದರು.

‘400 ಸ್ಥಾನಗಳನ್ನು ಗೆಲ್ಲುವುದಾಗಿ ಬಿಜೆಪಿ ಹೇಳುತ್ತಿದೆ. ಆದರೆ ಆರ್‌ಎಸ್‌ಎಸ್ ಸರ್ವೆ ಪ್ರಕಾರ 200 ಸ್ಥಾನಗಳನ್ನು ಗೆಲ್ಲುವುದು ಕಷ್ಟವಿದೆ. 400 ಸ್ಥಾನ ಗೆಲ್ಲುತ್ತೇವೆ ಎನ್ನುವುದು ಸಹ ಚುನಾವಣಾ ತಂತ್ರದ ಭಾಗ. ಈ ಬಾರಿ ಮತದಾರರು ಉತ್ತಮ ಆಡಳಿತಕ್ಕಾಗಿ ಕಾಂಗ್ರೆಸ್ ಬೆಂಬಲಿಸಬೇಕು. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ರಕ್ಷಾ ರಾಮಯ್ಯ ಅವರಿಗೆ ಮತ ನೀಡಬೇಕು’ ಎಂದು ಮನವಿ ಮಾಡಿದರು. 

ಮಾಜಿ ಶಾಸಕ ಎಸ್‌.ಎಂ. ಮುನಿಯಪ್ಪ, ಮುಖಂಡರಾದ ನಂದಿ ಆಂಜನಪ್ಪ, ಯಲುವಳ್ಳಿ ರಮೇಶ್, ಮರಸನಹಳ್ಳಿ ಪ್ರಕಾಶ್ ಮತ್ತಿತರರು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT