ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಕ್ಕೇನು ಕೊಡುಗೆ ನೀಡಿದ್ದೀರಿ ತಿಳಿಸಿ: ಮೋದಿಗೆ ಸಿಎಂ ಸವಾಲು

‘ಯಾವ ಮುಖ ಹೊತ್ಕೊಂಡು ಮತ ಕೇಳಲು ಬರುತ್ತಿದ್ದೀರಾ?’
Published 14 ಏಪ್ರಿಲ್ 2024, 0:30 IST
Last Updated 14 ಏಪ್ರಿಲ್ 2024, 0:30 IST
ಅಕ್ಷರ ಗಾತ್ರ

ಮೈಸೂರು: ‘ಲೋಕಸಭಾ ಚುನಾವಣೆ ಪ್ರಚಾರಕ್ಕೆ ಭಾನುವಾರ (ಏ.14) ಮೈಸೂರು ಹಾಗೂ ಮಂಗಳೂರಿಗೆ ಬರುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು, ರಾಜ್ಯಕ್ಕೆ ಏನೇನು ಕೊಡುಗೆಗಳನ್ನು ನೀಡಿದ್ದಾರೆಂಬುದನ್ನು ತಿಳಿಸಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.

ಇಲ್ಲಿ ಪತ್ರಕರ್ತರೊಂದಿಗೆ ಶನಿವಾರ ಮಾತನಾಡಿ, ‘ಪ್ರಚಾರಕ್ಕೆಂದು ಅವರು ಬರಲು ನಮ್ಮ ಅಭ್ಯಂತರವೇನಿಲ್ಲ. ನಿರುದ್ಯೋಗ ನಿವಾರಣೆಗೆ ಏನು ಮಾಡಿದ್ದಾರೆ? ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಪರಿಹರಿಸಲು ಏನು ಮಾಡಿದ್ದಾರೆ? ಬರ ಪರಿಹಾರವನ್ನು ಈವರೆಗೂ ಕೊಟ್ಟಿಲ್ಲವೇಕೆ ಎಂಬುದನ್ನೆಲ್ಲ ತಿಳಿಸಬೇಕು’ ಎಂದು ಒತ್ತಾಯಿಸಿದರು.

‘ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ’ ಎಂಬ ಮೋದಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ‘ಬಿಜೆಪಿ ಎಂದಿಗೂ ಸಂವಿಧಾನದ ಪರವಾಗಿಲ್ಲ. ಸಂವಿಧಾನ ಬದಲಾಯಿಸುತ್ತೇವೆ ಎಂದು ಸಂಸದ ಅನಂತ್‌ಕುಮಾರ್ ಹೆಗಡೆ ಹೇಳುತ್ತಲೇ ಇದ್ದರು. ಅವರ ಮೇಲೆ ಕ್ರಮ‌ ಕೈಗೊಳ್ಳಲಿಲ್ಲವೇಕೆ? ಅವರು ಕೇಂದ್ರ ಸಚಿವರೂ ಆಗಿದ್ದರು. ಅವರನ್ನೇಕೆ ಸ್ಥಾನದಿಂದ ತೆಗೆಯಲಿಲ್ಲ. ಅವರು ಉತ್ತರಕನ್ನಡದಲ್ಲಿ ಏನೂ ಅಭಿವೃದ್ಧಿ ಕೆಲಸ ಮಾಡಿರಲಿಲ್ಲ. ಮನೆಯಲ್ಲೇ ಕುಳಿತಿದ್ದರು. ಚುನಾವಣೆ ಸಮಯದಲ್ಲಿ ಹೊರಗೆ ಬಂದಿದ್ದರು. ಸೋಲುತ್ತಾರೆಂದು ವರದಿ ಬಂದಿದ್ದರಿಂದಲೇ ಅವರಿಗೆ ಟಿಕೆಟ್ ಕೊಟ್ಟಿಲ್ಲ’ ಎಂದು ಟೀಕಿಸಿದರು.

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಗಳನ್ನು ಸೆರೆ ಹಿಡಿದಿದ್ದಕ್ಕೆ ಎನ್‌ಐಎ ಮತ್ತು ರಾಜ್ಯ ಪೊಲೀಸರಿಗೆ ಧನ್ಯವಾದ ಹೇಳಿದ ಮುಖ್ಯಮಂತ್ರಿ, ‘ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ ನಂತರ ಹೆಚ್ಚಿನ ವಿವರ ತಿಳಿದುಬರಲಿದೆ’ ಎಂದು ಪ್ರತಿಕ್ರಿಯಿಸಿದರು.

‘ದೇಶದಲ್ಲಿ ಎನ್‌ಡಿಎಗೆ ಬಹುಮತ ಬರುವುದಿಲ್ಲ. ಐಎನ್‌ಡಿಐಎ ಒಕ್ಕೂಟಕ್ಕೆ ಬಹುಮತ ಸಿಗುವ ನಿರೀಕ್ಷೆ ಇದೆ. ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನ ಸಿಗಲಿದೆ. 400ಕ್ಕೂ ಹೆಚ್ಚು ಸ್ಥಾನ ಪಡೆಯುವುದಾಗಿ ಹೇಳಿಕೊಳ್ಳುತ್ತಿರುವ ಬಿಜೆಪಿಯದ್ದು ಜನರ ದಾರಿತಪ್ಪಿಸುವ ಕಾರ್ಯತಂತ್ರ’ ಎಂದು ದೂರಿದರು.

‘ಕೇವಲ ಸುಳ್ಳುಗಳ ಮೇಲೆ ಸವಾರಿ ಮಾಡಿಕೊಂಡು 10 ವರ್ಷ ಮುಗಿಸಿದ ಮೋದಿಯವರು ಯಾವ ಮುಖ ಹೊತ್ತುಕೊಂಡು ಮೈಸೂರಿಗೆ ಮತ ಕೇಳುವುದಕ್ಕಾಗಿ ಬರುತ್ತಿದ್ದಾರೆ?’ ಎಂದು ನಂತರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಕೇಳಿದರು.

‘ಪ್ರವಾಹದಿಂದ ಹಾನಿಯಾದಾಗ ನೋಡುವುದಕ್ಕೂ ಬರಲಿಲ್ಲ. ಈಗ ಮತಕ್ಕಾಗಿ ಬರುತ್ತಿದ್ದೀರಿ. ಕರ್ನಾಟಕದ ಬಗ್ಗೆ ನಿಮಗೆ ದ್ವೇಷವಿದೆ’ ಎಂದು ಮೋದಿ ವಿರುದ್ಧ ಹರಿಹಾಯ್ದರು.

‘ಸುಳ್ಳು ಹೇಳಿದರೂ ಜನ ಮೋದಿ ಮೋದಿ ಎಂದು ಕೂಗುತ್ತಾರೆಂದು, ಅವರು ಸುಳ್ಳು ಹೇಳೋದನ್ನು ಮತ್ತಷ್ಟು ಹೆಚ್ಚಿಸಿದ್ದಾರೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT