ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls 2024: ಪ್ರಧಾನಿ ಮೋದಿ ಕೆಳಗಿಳಿಸುವುದೇ ನಮ್ಮ ಗುರಿ: ಬಿ.ಕೆ.ಹರಿಪ್ರಸಾದ್

Published 12 ಏಪ್ರಿಲ್ 2024, 12:42 IST
Last Updated 12 ಏಪ್ರಿಲ್ 2024, 12:42 IST
ಅಕ್ಷರ ಗಾತ್ರ

ಬೆಳಗಾವಿ: ‘ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲದಂತೆ ನೋಡಿಕೊಳ್ಳುವುದು. ನರೇಂದ್ರ ಮೋದಿ ಅವರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸುವುದೇ ನಮ್ಮ ಗುರಿ’ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರೂಪಿಸುತ್ತಿರುವ ತಂತ್ರದಿಂದ ‘ಇಂಡಿ’ ಒಕ್ಕೂಟ ದುರ್ಬಲಗೊಂಡಿದೆ. ಬಿಜೆಪಿ ವಿರುದ್ಧ ಎದ್ದಿರುವ ಧ್ವನಿ ಹತ್ತಿಕ್ಕಲು ಅವರು, ಇಡಿ, ಐಟಿ ಮತ್ತು ಸಿಬಿಐಯಂತಹ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ವಿರುದ್ಧವೂ ಆರೋಪ ಹೊರಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ರಾಹುಲ್ ಗಾಂಧಿ ನಡೆಸಿದ ಭಾರತ್ ಜೋಡೋ ಯಾತ್ರೆ ಮತ್ತು ನ್ಯಾಯ ಯಾತ್ರೆ ವೇಳೆ, ಜನರಿಂದ ವ್ಯಕ್ತವಾದ ಅಭಿಪ್ರಾಯ ಆಧರಿಸಿ ಕಾಂಗ್ರೆಸ್ ತನ್ನ ಚುನಾವಣೆ ಪ್ರಣಾಳಿಕೆ ಬಿಡುಗಡೆಗೊಳಿಸಿದೆ. ದೇಶ ‘ಅಮೃತ ಕಾಲ’ದತ್ತ ಸಾಗುತ್ತಿದೆ ಎಂದು ಮೋದಿ ಹೇಳುತ್ತಿದ್ದಾರೆ. ಆದರೆ, 10 ವರ್ಷಗಳಲ್ಲಿ ಜನರು ಅಮೃತ ಕಾಲ ನೋಡಿಲ್ಲ. ಬದಲಿಗೆ, ಅನ್ಯಾಯ ಕಾಲ ನೋಡಿದ್ದಾರೆ. ಕಳೆದೊಂದು ದಶಕದಿಂದ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ, ಜನರ ಯಾವ ಬೇಡಿಕೆಯನ್ನೂ ಈಡೇರಿಸಿಲ್ಲ. ಈ ದಶಕ ಬರ್ಬಾದ್‌ ದಶಕವಾಗಿದೆ’ ಎಂದು ಆರೋಪಿಸಿದರು.

‘2014ರಲ್ಲಿ ಮೋದಿ ಅಧಿಕಾರಕ್ಕೆ ಬಂದ ನಂತರ, ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ, ರೈತರ ಕೃಷಿ ಸಾಲ, ಕೂಲಿ–ಕಾರ್ಮಿಕರ ಸಾಲ ಮನ್ನಾ ಮಾಡಿಲ್ಲ. ಆದರೆ, ಬಂಡವಾಳಶಾಹಿಗಳಿಗೆ ‘ಸಾಲ ಮನ್ನಾ’ದ ಲಾಭ ಸಿಕ್ಕಿದೆ. ಮಣಿಪುರದಲ್ಲಿ ಅರಾಜಕತೆ ಉಂಟಾಗಿದೆ’ ಎಂದು ದೂರಿದರು.

‘ಕಾಂಗ್ರೆಸ್ ಪ್ರಣಾಳಿಕೆ ಮುಸ್ಲಿಂ ಲೀಗ್‌ನಂತಿದೆ’ ಎಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಕ್ಕೆ ಪ್ರತಿಕ್ರಿಯಿಸಿದ ಹರಿಪ್ರಸಾದ, ‘ಬಿಜೆಪಿಗೆ ಮುಸ್ಲಿಂ ಲೀಗ್‌ನ ಮೇಲೆ ಬಹಳ ಪ್ರೀತಿ ಇದೆ. ಶಾಮಪ್ರಸಾದ್ ಮುಖರ್ಜಿ ನೇತೃತ್ವದ ಹಿಂದೂ ಮಹಾಸಭೆ ಪಾಕಿಸ್ತಾನ ನಿರ್ಮಾಣಕ್ಕೆ ಕೈಜೋಡಿಸಿತ್ತು. ಸಮಾನತೆ ವಿರೋಧಿಗಳಾದ ಬಿಜೆಪಿಯವರು ಈ ರೀತಿ ಸುಳ್ಳು ಹೇಳುತ್ತಿದ್ದಾರೆ’ ಎಂದು ಆಪಾದಿಸಿದರು.

‘ಲೋಕಸಭೆ ಚುನಾವಣೆ ನಂತರ ಮುಖ್ಯಮಂತ್ರಿ ಬದಲಾವಣೆಯಾಗಲಿದ್ದಾರೆಯೇ’ ಎಂಬ ಪ್ರಶ್ನೆಗೆ, ‘ಲೋಕಸಭೆ ಚುನಾವಣೆ ರಾಷ್ಟ್ರೀಯ ವಿಷಯಗಳ ಮೇಲೆ ನಡೆಯುತ್ತದೆಯೇ ಹೊರತು, ರಾಜ್ಯದ ಸಮಸ್ಯೆಗಳ ಮೇಲೆ ಅಲ್ಲ. ಇದರ ಫಲಿತಾಂಶ ರಾಜ್ಯ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದರು.

‘ಕಾಂಗ್ರೆಸ್‌ನಲ್ಲಿ ನಿಮ್ಮನ್ನು ಬದಿಗೆ ಸರಿಸಲಾಗುತ್ತಿದೆಯೇ’ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ನಾನು ಈಗ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ಇಂಥ ಪ್ರಶ್ನೆಗಳಿಗೆಲ್ಲ ಚುನಾವಣೆ ನಂತರವೇ ಉತ್ತರ ಕೊಡುತ್ತೇನೆ’ ಎಂದು ಹೇಳಿದರು.

‘ಬಿಜೆಪಿಯವರು ಅಬ್‌ ಕಿ ಬಾರ್‌ ಚಾರ್‌ಸೋ ಪಾರ್‌’ ಎನ್ನುತ್ತಿರುವ ಕುರಿತು ಪ್ರತಿಕ್ರಿಯಿಸಿದ ಹರಿಪ್ರಸಾದ, ‘ಬಿಜೆಪಿಯವರು 400 ಗೆಲ್ಲುತ್ತಾರೋ ಅಥವಾ 420 ಗೆಲ್ಲುತ್ತಾರೋ ಗೊತ್ತಿಲ್ಲ. ಆದರೆ, ಸರ್ಕಾರ ರಚನೆಗೆ ಬೇಕಾದಷ್ಟು ಸ್ಥಾನಗಳನ್ನು ಗೆಲ್ಲುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT