ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

HDK ತೋಟದಲ್ಲಿ ಬಾಡೂಟ ವ್ಯವಸ್ಥೆ: ಶಾಮಿಯಾನ, ಕುರ್ಚಿ ತೆಗೆಸಿದ ಅಧಿಕಾರಿಗಳು

Published 10 ಏಪ್ರಿಲ್ 2024, 8:41 IST
Last Updated 10 ಏಪ್ರಿಲ್ 2024, 8:41 IST
ಅಕ್ಷರ ಗಾತ್ರ

ರಾಮನಗರ: ತಾಲ್ಲೂಕಿನ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿರುವ ಮಂಡ್ಯ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಚ್‌.ಡಿ. ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ರಾಜಕೀಯ ಮುಖಂಡರಿಗೆ ಬಾಡೂಟ ವ್ಯವಸ್ಥೆ ಮಾಡಲಾಗಿದೆ ಎಂಬ ದೂರಿನ ಕಾರಣ ಚುನಾವಣಾ ಅಧಿಕಾರಿಗಳ ತಂಡ ಬುಧವಾರ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಮಾಗಡಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ, ಕ್ಷಿಪ್ರ ಕಾರ್ಯಪಡೆ ತಂಡ (ಎಫ್‌ಎಸ್‌ಟಿ) ಹಾಗೂ ವಿಡಿಯೊ ನಿಗಾ ತಂಡ (ವಿಎಸ್‌ಟಿ) ಸ್ಥಳಕ್ಕೆ ಭೇಟಿ ನೀಡಿದಾಗ ತೋಟದಲ್ಲಿ ಶಾಮಿಯಾನ ಹಾಕಿ ಸುಮಾರು 50 ಕುರ್ಚಿ ಹಾಗೂ ಊಟದ ಟೇಬಲ್‌ ಹಾಕಲಾಗಿತ್ತು. ಮಧ್ಯಾಹ್ನದ ಊಟಕ್ಕೆ ಬಾಣಸಿಗರು ಬಾಡೂಟ ಸಿದ್ಧಪಡಿಸುತ್ತಿದ್ದರು.

‘ತೋಟದೊಳಗೆ ರಾಜಕೀಯ ಮುಖಂಡರಿಗೆ ಬಾಡೂಟ ಸಿದ್ಧಪಡಿಸ ಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಎಫ್‌ಎಸ್‌ಟಿ ತಂಡದವರು ತೋಟದ ಮನೆಗೆ ತೆರಳಲು ಮುಂದಾದಾಗ ಗೇಟ್‌ನಲ್ಲಿದ್ದ ಸಿಬ್ಬಂದಿ ಒಳಗೆ ಬಿಡುತ್ತಿಲ್ಲ ಎಂಬ ವಿಷಯ ಗೊತ್ತಾಯಿತು. ಹಾಗಾಗಿ, ನಾನೇ ಅಲ್ಲಿಗೆ ಪೊಲೀಸರೊಂದಿಗೆ ತೆರಳಿ ಶಾಮಿಯಾನ ಹಾಕಿದ್ದ ಜಾಗವನ್ನೆಲ್ಲಾ ಪರಿಶೀಲನೆ ನಡೆಸಿದೆ’ ಎಂದು ಮಾಗಡಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿ ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯುಗಾದಿ ಪ್ರಯುಕ್ತ ಮನೆಗೆ ಬರುವ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಮಧ್ಯಾಹ್ನದ ಊಟ ಸಿದ್ಧಪಡಿಸಲಾಗುತ್ತಿತ್ತು. ಅದಕ್ಕಾಗಿ, ಹೊರಗಡೆ ಶಾಮಿಯಾನ ವ್ಯವಸ್ಥೆ ಮಾಡಿ, ಕುರ್ಚಿ ಮತ್ತು ಟೇಬಲ್ ಹಾಕಲಾಗಿತ್ತು ಎಂದು ಸ್ಥಳದಲ್ಲಿದ್ದವರು ಹೇಳಿದರು’ ಎಂದರು.

‘ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಊಟದ ವ್ಯವಸ್ಥೆಗೆ ಅವಕಾಶವಿಲ್ಲ ಎಂದು ಸ್ಥಳದಲ್ಲಿದ್ದವರಿಗೆ ಎಚ್ಚರಿಕೆ ನೀಡಲಾಯಿತು’ ಎಂದು ಹೇಳಿದರು.

ಶಾಸಕ ಮುನಿರತ್ನ ಸೇರಿದಂತೆ ಕೆಲ ಮುಖಂಡರು ಮಧ್ಯಾಹ್ನದ ಹೊತ್ತಿಗೆ ತೋಟದ ಮನೆಗೆ ಭೇಟಿ ನೀಡಿದರು. ಚುನಾವಣಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಇರುವುದನ್ನು ನೋಡು ತ್ತಿದ್ದಂತೆಯೇ ಸ್ಥಳದಿಂದ ತೆರಳಿದರು.

‘ಭಯೋತ್ಪಾದನೆಯಂತೆ ಬಾಡೂಟ ವೈಭವೀಕರಣ’

ಬಾಡೂಟಕ್ಕೆ ಅಧಿಕಾರಿಗಳ ತಡೆ ಕುರಿತು ಪ್ರತಿಕ್ರಿಯಿಸಿರುವ ಜೆಡಿಎಸ್, ‘ಯುಗಾದಿ ಹೊಸತೊಡಕು ಸಂಭ್ರಮಕ್ಕೆ ಅಡ್ಡಿ ಮಾಡುವ ಮೂಲಕ ಕಾಂಗ್ರೆಸ್ ಪಕ್ಷವು ಹಿಂದೂ ಸಂಸ್ಕೃತಿಯ ಮೇಲೆ ತನ್ನ ಕಾಕದೃಷ್ಟಿ ಬೀರಿದೆ. ಕಾಂಗ್ರೆಸ್ ಪಕ್ಷ ನಮ್ಮ ಸಂಪ್ರದಾಯ, ಸಂಸ್ಕೃತಿ, ಆಚರಣೆಯ ಮೇಲೆಯೂ ಕಾಕದೃಷ್ಟಿ ಬೀರಿದೆ. ಬಾಡೂಟವನ್ನು ಭಯೋತ್ಪಾದನೆಯಂತೆ ವೈಭವೀಕರಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.

‘ಯುಗಾದಿ ಹಿಂದೂಗಳ ಹೊಸ ವರ್ಷವಾಗಿದ್ದು, ಹಿಂದೂಗಳ ಸಾಂಸ್ಕೃತಿಕ ಮತ್ತು ಧಾರ್ಮಿಕ ಅಸ್ಮಿತೆ. ಈ ಹಬ್ಬದ ಮರುದಿನದ ಸಂಭ್ರಮ ಹೊಸತೊಡಕು ಆಚರಣೆ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಹಿಂದೂ ಮನೆಯಲ್ಲಿ ನಡೆಯುವಂತೆ ಕುಮಾರಸ್ವಾಮಿ ಅವರ ಮನೆಯಲ್ಲಿಯೂ ಹೊಸತೊಡಕು ಆಚರಣೆ ನಡೆಯುತ್ತಿದೆ. ಅದರಲ್ಲಿ ವಿಶೇಷವೇನೂ ಇಲ್ಲ. ಸಂಬಂಧಿಕರು, ಸ್ನೇಹಿತರು ಹಾಗೂ ರಾಜಕೀಯ ಸಹಪಾಠಿಗಳನ್ನು ಅವರು ಊಟಕ್ಕೆ ಆಹ್ವಾನಿಸಿದ್ದಾರೆ. ಮಾಂಸದ ಅಡುಗೆ ಈ ದಿನದ ಸಾಮಾನ್ಯ ತಿನಿಸು. ಈ ಊಟಕ್ಕೂ ಕಾಂಗ್ರೆಸ್ ಕಲ್ಲು ಹಾಕಿ ವಿಕೃತಿ ಮೆರೆದಿದೆ’ ಎಂದು ಕಿಡಿಕಾರಿದೆ.

‘ಮತಕ್ಕಾಗಿ ಹಣ, ಹೆಂಡ, ಸೀರೆ, ಕುಕ್ಕರ್, ಪ್ರಿಜ್‌, ಕೂಪನ್ ಹಂಚುವ ಸತ್ಸಂಪ್ರದಾಯ ಹೊಂದಿರುವ ಕಾಂಗ್ರೆಸ್‌ಗೆ, ಕಾವೇರಿ ಹೆಸರಿನಲ್ಲಿ ನಡೆಸಿದ ಮೇಕೆದಾಟು ಪಾದಯಾತ್ರೆಯಲ್ಲಿ ನದಿಯಂತೆ ಹರಿದ ಮಾಂಸ, ಮದ್ಯದ ಹೊಳೆಯನ್ನು ಕಾಣದವರು ಯಾರೂ ಇಲ್ಲ. ಆದರೆ, ಆ ಪಕ್ಷದ ಕಾಮಾಲೆ ಕಣ್ಣು ಹಿಂದೂಗಳ ಹಬ್ಬಗಳ ಮೇಲೆಯೇ ಬಿದ್ದಿದೆ. ಜಾತಿ, ಧರ್ಮಗಳ ತುಷ್ಟೀಕರಣ ಜಾಡ್ಯ ಕಾಂಗ್ರೆಸ್ ಪಕ್ಷವನ್ನು ಅಂಟಿಕೊಂಡಿದೆ’ ಎಂದು ದೂರಿದೆ.

‘ಕಾಂಗ್ರೆಸ್ ಸೋಲಿನ ಹತಾಶೆಯಿಂದ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳನ್ನು ಟೀಕಿಸುವ ಬರದಲ್ಲಿ ನಮ್ಮ ಹಿಂದೂ ಸಂಪ್ರದಾಯದ ಬಗ್ಗೆ ಅವಹೇಳನ ಮಾಡಿದೆ. ಅದರ ಕೊಳಕುತನ ಅದರ ಟ್ವೀಟ್‌ನಲ್ಲಿ ಎದ್ದು ಕಾಣುತ್ತಿದೆ. ನಿರಂತರವಾಗಿ ಹಿಂದೂ ವಿರೋಧಿ ಮತ್ತು ದ್ರೋಹಿ ಆಗಿರುವ ಕಾಂಗ್ರೆಸ್ ಪಕ್ಷಕ್ಕೆ ಹೊಸತೊಡಕಿಗಿಂತ ಇಫ್ತಾರ್ ಕೂಟದಲ್ಲಿಯೇ ಹೆಚ್ಚು ಪ್ರೀತಿ. ಜನ್ಮದಾರಭ್ಯ ಬಂದಿದ್ದನ್ನು ನಾವಂತೂ ಅವಹೇಳನ ಮಾಡುವುದಿಲ್ಲ’ ಎಂದು ವ್ಯಂಗ್ಯವಾಡಿದೆ.

‘ರಾಜಕಾರಣಿಗಳು ಇರಲಿಲ್ಲ’

‘ತೋಟದ ಮನೆಗೆ ಭೇಟಿ ನೀಡಿದಾಗ ಎಚ್‌.ಡಿ. ಕುಮಾರಸ್ವಾಮಿ ಅವರು ಸೇರಿದಂತೆ ಕುಟುಂಬದ ಸದಸ್ಯರು ಹಾಗೂ ರಾಜಕೀಯ ಮುಖಂಡರು ಇರಲಿಲ್ಲ. ಕೆಲಸ ಮಾಡುವ ಕಾರ್ಮಿಕರು ಹಾಗೂ ಕೆಲ ಸಿಬ್ಬಂದಿ ಮಾತ್ರ ಇದ್ದರು.  ಸ್ಥಳದಲ್ಲಿ ರಾಜಕೀಯ ಪಕ್ಷದ ಬಾವುಟ, ಚಿಹ್ನೆ ಹಾಗೂ ಯಾವುದೇ ಸಾಮಗ್ರಿ ಕಂಡುಬಂದಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಎಫ್‌ಎಸ್‌ಟಿ ಮತ್ತು ವಿಎಸ್‌ಟಿ ತಂಡ ಸ್ಥಳದಲ್ಲೇ ಸಂಜೆವರೆಗೆ ಬೀಡು ಬಿಟ್ಟಿತ್ತು. ತಂಡಗಳು ನೀಡುವ ವರದಿ ಮೇರೆಗೆ  ಒಂದು ವೇಳೆ ರಾಜಕೀಯ ಮುಖಂಡರಿಗೆ ಬಾಡೂಟ ಆಯೋಜನೆ ಮಾಡಿರುವುದು ಖಚಿತವಾದರೆ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು’ ಎಂದು ಸಹಾಯಕ ಚುನಾವಣಾ ಅಧಿಕಾರಿ ರಮೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT