ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜರನ್ನು ನಿಂದಿಸುವ ಕಾಂಗ್ರೆಸ್‌ ನವಾಬ್‌ರನ್ನು ಟೀಕಿಸಲ್ಲ: ನರೇಂದ್ರ ಮೋದಿ

Published : 28 ಏಪ್ರಿಲ್ 2024, 7:02 IST
Last Updated : 28 ಏಪ್ರಿಲ್ 2024, 7:02 IST
ಫಾಲೋ ಮಾಡಿ
Comments

ಬೆಳಗಾವಿ: ‘ರಾಜ, ಮಹಾರಾಜರ ಆಳ್ವಿಕೆಯನ್ನು ಕೀಳಾಗಿ ಕಾಣುವ ಮತ್ತು ನಿಂದಿಸುವ ಕಾಂಗ್ರೆಸ್‌ನವರು ನವಾಬ್‌, ನಿಜಾಮರ ಆಳ್ವಿಕೆಯನ್ನು ಕಿಂಚಿತ್ತೂ ಟೀಕಿಸುವುದಿಲ್ಲ. ಸ್ವಾತಂತ್ರ್ಯ ಪೂರ್ವದ ದಿನಗಳಿಂದಲೂ ತುಷ್ಟೀಕರಣದ ನೀತಿಯನ್ನು ಕಾಂಗ್ರೆಸ್ ಈಗಲೂ ಮುಂದುವರೆಸಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದರು.

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಬಿಜೆಪಿ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ‘ರಾಜ, ಮಹಾರಾಜರ ಕೊಡುಗೆಯನ್ನು ಪ್ರಸ್ತಾಪಿಸದ ಕಾಂಗ್ರೆಸ್‌ನವರಿಗೆ ಯಾವುದೂ ಒಳ್ಳೆಯದು ಕಾಣುವುದೇ ಇಲ್ಲ’ ಎಂದರು.

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಹೆಸರನ್ನು ಪ್ರಸ್ತಾಪಿಸದೇ ಭಾಷಣದುದ್ದಕ್ಕೂ ಪರೋಕ್ಷವಾಗಿ ಟೀಕಿಸಿದ ಅವರು, ‘ರಾಜ, ಮಹಾರಾಜರು ಜನರ ಆಸ್ತಿ, ಜಮೀನು ಕಬಳಿಸುತ್ತಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್‌ನವರು ರಾಜಪರಂಪರೆಯನ್ನು ಅವಮಾನಿಸಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜ, ಕಿತ್ತೂರು ರಾಣಿ ಚನ್ನಮ್ಮ ಅವರ ಶೌರ್ಯ, ದೇಶಭಕ್ತಿಯನ್ನು ಕಡೆಗಣಿಸಿದ್ದಾರೆ. ಮೈಸೂರು ರಾಜಸಂಸ್ಥಾನದ ಕೊಡುಗೆಯನ್ನೂ ಮರೆತಿದ್ದಾರೆ’ ಎಂದರು.

‘ಔರಂಗಜೇಬ್‌ನಂತಹವರು ದೇಶದ ಸಂಪತ್ತು ಲೂಟಿ ಮಾಡಿರುವುದನ್ನು ಕಾಂಗ್ರೆಸ್‌ ಹೇಳಲ್ಲ. ಅಂಥವರು ದೇವಾಲಯವನ್ನು ಧ್ವಂಸ ಮಾಡಿದ್ದು, ಪ್ರಾರ್ಥನಾ ಮಂದಿರಗಳನ್ನು ಕೆಡುವುದು ಪ್ರಸ್ತಾಪಿಸಲ್ಲ. ದೇಶ ವಿಭಜನೆಗೆ ಕಾರಣರಾದರೂ ಅಂಥವರ ಬಗ್ಗೆ ಏನನ್ನೂ ಕೆಟ್ಟದ್ದು ಹೇಳಲ್ಲ. ತುಷ್ಟೀಕರಣದ ನೀತಿ ಆಧರಿಸಿಯೇ ದೇಶದ ಇತಿಹಾಸವನ್ನು ರಚಿಸುವ ಕಾಂಗ್ರೆಸ್‌ನವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲೂ ಮುಂದುವರೆಸಿದ್ದಾರೆ’ ಎಂದರು.

‘ಒಂದು ವೇಳೆ ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದರೆ, ನಿಮ್ಮೆಲ್ಲರ ಸಂಪತ್ತಿನ ಮೇಲೆ ಕಣ್ಣಿಡಲಿದೆ. ದೇಶದ ಮನೆಮನೆಗೂ ದಾಳಿ ನಡೆಸಿ, ನೀವು ಕೂಡಿಸಿಟ್ಟ ಹಣ, ಧನ, ಚಿನ್ನಾಭರಣ ಅಲ್ಲದೇ ಮಾಂಗಲ್ಯಸೂತ್ರವನ್ನು ತೆಗೆದುಕೊಳ್ಳಲಿದೆ. ನಂತರ ತನ್ನ ವೋಟ್‌ಬ್ಯಾಂಕ್‌ನವರಿಗೆ ಖುಷಿ ಪಡಿಸಲು ಸಂಪತ್ತನ್ನು ಪುನರ್‌ ಹಂಚಿಕೆ ಮಾಡಲಿದೆ? ನೀವು ಕೂಡಿಟ್ಟ ಹಣವನ್ನು ಭವಿಷ್ಯದಲ್ಲಿ ಮಕ್ಕಳಿಗೆ ಕೊಡಲೂ ಸಹ ಸರ್ಕಾರ ತೆರಿಗೆ ಕಟ್ಟಬೇಕು’ ಎಂದು ಅವರು ಟೀಕಿಸಿದರು.

ಭಾಷಣದುದ್ದಕ್ಕೂ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಎಲ್ಲೆಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿ ಇದೆಯೋ, ಅಲ್ಲೆಲ್ಲ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ. ಭ್ರಷ್ಟಾಚಾರ ಹೆಚ್ಚಳವಾಗಿದೆ. ಮಹಿಳೆಯರ ಮೇಲೆ ಅತ್ಯಾಚಾರ, ಶೋಷಣೆ ನಡೆದಿದೆ. ಹುಬ್ಬಳ್ಳಿಯಲ್ಲಿ ಕಾಲೇಜಿನ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಯ ಕೂಲೆ ಕೂಡ ನಡೆಯುತ್ತದೆ. ಇಂತಹ ಅಸುರಕ್ಷಿತ ವಾತಾವರಣ ಕಾಂಗ್ರೆಸ್‌ ಸರ್ಕಾರ ಇರುವ ಕಡೆ ಇರುತ್ತದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಶಂಕರ ಜೊಲ್ಲೆ ಪರ ಮತ ಯಾಚಿಸಿದ ಅವರು, ‘ನೀವೆಲ್ಲರೂ ಮನೆಮನೆಗೆ ತೆರಳಿ ಮೋದಿ ಸರ್ಕಾರದ ಅಭಿವೃದ್ಧಿ ವಿಷಯಗಳನ್ನು ತಿಳಿಸಿ. ಪ್ರತಿಯೊಂದು ಕುಟುಂಬದಿಂದ ಸಿಗುವ ಆಶೀರ್ವಾದದಿಂದ ನನ್ನ ಬಲ ವೃದ್ಧಿಸಲಿದೆ. ಇನ್ನೂ ಉತ್ತಮ ರೀತಿಯಲ್ಲಿ ಕೆಲಸ ಮಾಡಲು ಪ್ರೇರಣೆ ಸಿಗಲಿದೆ’ ಎಂದರು.

ಭಾಷಣ ಆರಂಭಕ್ಕೂ ಮುನ್ನ ಕನ್ನಡದಲ್ಲಿ ಮಾತನಾಡಿದ ಮೋದಿ ಅವರು, ‘ಎಲ್ಲಾ ಸಹೋದರ, ಸಹೋದರಿಯರಿಗೆ ಅಭಿನಂದನೆ. ಭುವನೇಶ್ವರಿ ದೇವಿ, ಸವದತ್ತಿ ಯಲ್ಲಮ್ಮಗೆ ಪ್ರಾರ್ಥನೆ ಸಲ್ಲಿಸುವೆ’ ಎಂದರು. ಸುಮಾರು 30ಕ್ಕೂ ಹೆಚ್ಚು ನಿಮಿಷ ಅವರು ಮಾತನಾಡಿದರು.

ಬಿಜೆಪಿ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಅಭ್ಯರ್ಥಿಗಳಾದ ಜಗದೀಶ ಶೆಟ್ಟರ್, ಅಣ್ಣಾಸಾಹೇಬ ಜೊಲ್ಲೆ, ಶಾಸಕರು ಮತ್ತು ಪ್ರಮುಖರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT