ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ದಿನಗಳಲ್ಲೂ ಲಿಂಗಾಯತರಿಗೆ ಮುಖ್ಯಮಂತ್ರಿ ಸ್ಥಾನ: ನಳಿನ್ ಕುಮಾರ್

Last Updated 17 ಏಪ್ರಿಲ್ 2023, 10:20 IST
ಅಕ್ಷರ ಗಾತ್ರ

ಮಂಗಳೂರು: ಲಿಂಗಾಯತರಿಗೆ ಅತಿ ಹೆಚ್ಚು ಆದ್ಯತೆ ನೀಡಿದ್ದು ಬಿಜೆಪಿ. ಮೂವರಿಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟಿದೆ. ಮುಂದಿನ ದಿನಗಳಲ್ಲೂ ಲಿಂಗಾಯತ ಮುಖ್ಯಮಂತ್ರಿ ಮಾಡುವ ಏಕೈಕ ಪಕ್ಷ ಬಿಜೆಪಿಯಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಮಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಿ ಶಾಸಕ ವೇದವ್ಯಾಸ ಕಾಮತ್‌ ನಾಮಪತ್ರ ಸಲ್ಲಿಸುವ ವೇಳೆ ಜತೆಗಿದ್ದ ನಳಿನ್‌ಕುಮಾರ್‌ ಸುದ್ದಿಗಾರರೊಂದಿಗೆ ಮಾತನಾಡಿದರು. 'ಜಗದೀಶ್ ಶೆಟ್ಟರ್ ಹಿರಿಯ ನಾಯಕರು. ಅವರನ್ನು ಪಕ್ಷ ಇಷ್ಟು ಎತ್ತರಕ್ಕೆ ಬೆಳೆಸಿದೆ. ಅವರಿಗೆ ಎಲ್ಲ ಹುದ್ದೆಗಳನ್ನು ನೀಡಿದೆ. ಅವರು ರಾಜ್ಯ ಮಟ್ಟದ ನಾಯಕರಾಗಿ ಬೆಳೆಯುವಲ್ಲಿ ಬಿಜೆಪಿ ಕೊಡುಗೆ ದೊಡ್ಡದಿದೆ. ಶಾಸಕರಾಗಿ, ಸಚಿವರಾಗಿ ಮುಖ್ಯಮಂತ್ರಿಯಾಗಿ ಜವಾಬ್ದಾರಿ ನಿರ್ವಹಣೆ ಮಾಡಿದವರು. ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಕೇಂದ್ರದ ನಾಯಕರೇ ಅವರ ಮನೆಯಲ್ಲಿ ಬಂದು ಕುಳಿತು ಮಾತುಕತೆ ಮಾಡಿ, ಅವರ ಎಲ್ಲ ಬೇಡಿಕೆ ಈಡೇರಿಸುವುದಾಗಿ ಹೇಳಿದ್ದರು. ಆದರೂ ಅವರು ಪಕ್ಷವನ್ನು ತೊರೆದಿದ್ದಾರೆ. ಕಾಂಗ್ರೆಸ್‌ನಲ್ಲಿ ಪರಿಸ್ಥಿತಿ ಏನು ಅಂತ ಅವರಿಗೂ ಅನುಭವವಾಗುತ್ತದೆ' ಎಂದರು.

'ಮಂಗಳೂರು ದಕ್ಷಿಣ ಕ್ಷೇತ್ರದಿಂದ ವೇದವ್ಯಾಸ ಕಾಮತ್ ನಾಮಪತ್ರ ಸಲ್ಲಿಸಿದ್ದು, ಅಧಿಕ ಮತಗಳಿಂದ ಆಯ್ಕೆಯಾಗಲಿದ್ದಾರೆ ಎಂದರು.
ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದೆ. ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರ ಮಾಡುತ್ತೇವೆ' ಎಂದು ಹೇಳಿದರು.

ಪುತ್ತೂರಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಹಿಂದುತ್ವವಾದಿ ಅರುಣ್ ಕುಮಾರ್ ಪುತ್ತಿಲ ಅವರು ಸಾವಿರಾರು ಜನರೊಂದಿಗೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ‌ ಸಲ್ಲಿಸಿದ್ದು, ಈ ಬೆಳವಣಿಗೆ ಬಿಜೆಪಿಗೆ ಹಿನ್ನಡೆಯಾಗುವುದಿಲ್ಲವೇ ಎಂಬ ಪ್ರಶ್ನೆಗೆ 'ಹಿರಿಯರು ಮಾತುಕತೆ ಮಾಡುತ್ತಾರೆ' ಎಂದಷ್ಟೇ ಉತ್ತರಿಸಿ ಸುಮ್ಮನಾದರು.

ಪೂಜೆ ಸಲ್ಲಿಕೆ: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಅವರು ನಗರದ ಕದ್ರಿ ಮಂಜುನಾಥ, ಕ್ಷೇತ್ರ ದೇವತೆ ಮಂಗಳಾದೇವಿ, ರಥಬೀದಿಯ, ವೆಂಕಟರಮಣ ದೇವರಿಗೆ ಪೂಜೆ ಸಲ್ಲಿಸಿ, ನಂತರ ಕದ್ರೋಳಿ ಗೋಕರ್ಣನಾಥ ದೇವಾಲಯದಿಂದ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಿದರು.

ಮೆರವಣಿಗೆ ಹೊರಡುವ ಪೂರ್ವದಲ್ಲಿ, ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 100ಕ್ಕೂ ಹೆಚ್ಚು ದೇವಾಲಯಗಳಲ್ಲಿ ಪಕ್ಷದ ಪದಾಧಿಕಾರಿಗಳು ಪೂಜೆ ಸಲ್ಲಿಸಿ ತಂದಿದ್ದ ಪ್ರಸಾದವನ್ನು ಸ್ವೀಕರಿಸಿದರು.

ಈ ವೇಳೆ ಮಾತನಾಡಿದ ಅವರು, 'ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ₹2,000 ಕೋಟಿ ಕಾಮಗಾರಿಗಳು ನಡೆದಿದ್ದು, ಇನ್ನುಳಿದ ಮೊತ್ತದ ಕಾಮಗಾರಿ ಮುಂದಿನ ಅವಧಿಯಲ್ಲಿ ಆಗಲಿದೆ. ಕ್ಷೇತ್ರದಲ್ಲಿ ಬಿಜೆಪಿ ಪರ ವಾತಾವರಣ ಇದ್ದು, ಅಧಿಕ ಮತಗಳಿಂದ ಗೆಲ್ಲುವ ವಿಶ್ವಾಸ ಇದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT