ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ ಗಾಂಧಿ ಫೋಟೊಗಳೆಲ್ಲ ಸತ್ಯವೇ?: ಸಿ.ಟಿ.ರವಿ ಪ್ರಶ್ನೆ

Published 2 ಮೇ 2024, 14:18 IST
Last Updated 2 ಮೇ 2024, 14:18 IST
ಅಕ್ಷರ ಗಾತ್ರ

ಬೆಳಗಾವಿ: ‘ಲೈಂಗಿಕ ದೌರ್ಜನ್ಯ ವಿಚಾರದಲ್ಲಿ ಕಾಂಗ್ರೆಸ್‌ ಸರ್ಕಾರದ ನಡೆಯೇ ಅನುಮಾನಾಸ್ಪದ. ಅವರು ಹೇಳಿದ್ದೆಲ್ಲವೂ ಸತ್ಯ ಎಂಬಂತೆ ವಾದಿಸುತ್ತಿದ್ದಾರೆ. ಹಾಗಾದರೆ, ರಾಹುಲ್‌ ಗಾಂಧಿ ಅವರ ಹಲವು ಫೋಟೊಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಅವುಗಳೆಲ್ಲ ಸತ್ಯ ಎಂದು ನಾವೂ ನಂಬೋಣವೇ?’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದರು.

ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣಕ್ಕೂ ಬಿಜೆಪಿಗೂ ತಳಕು ಹಾಕುತ್ತಿದ್ದಾರೆ. ರಾಹುಲ್‌ ಗಾಂಧಿ ಅಮೆರಿಕದಲ್ಲಿ ‘ಸಿಕ್ಕಿಹಾಕಿಕೊಂಡಿದ್ದರಂತೆ’ ಎಂಬ ಸುದ್ದಿಯೂ ಹರಿದಾಡಿತ್ತು. ರಜಾದಿನಗಳನ್ನು ಕಳೆಯಲು ಅವರು ಒಬ್ಬೊಬ್ಬರ ಜತೆಗೆ ಒಂದೊಂದು ದೇಶಕ್ಕೆ ಹೋಗುತ್ತಾರೆ ಎಂಬ ಆರೋಪವೂ ಇದೆ. ಅವರ ಫೋಟೊಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಬಂದಿವೆ. ಆ ಆರೋಪಗಳೆಲ್ಲ ಸತ್ಯ ಎಂದು ನಂಬಬೇಕೆ ಎಂದು ಕಾಂಗ್ರೆಸ್ಸಿಗರು ತಿಳಿಸಲಿ’ ಎಂದರು.

‘ರಾಹುಲ್‌ ಅವರು ಅಫ್ಗಾನಿಸ್ತಾನ, ಪಾಕಿಸ್ತಾನ, ನೇಪಾಳ, ಶ್ರೀಲಂಕಾ, ಸ್ವಿಟ್ಜರ್‌ಲ್ಯಾಂಡ್, ಇಟಲಿ ಹೀಗೆ ಎಲ್ಲಿಯೇ ಹೋದರೂ ಒಬ್ಬೊಬ್ಬರ ಜತೆ ಹೋಗುತ್ತಾರೆ ಎನ್ನಲಾಗುತ್ತದೆ. ನಾನೇನು ಆರೋಪ ಮಾಡುತ್ತಿಲ್ಲ. ಕಾಂಗ್ರೆಸ್ಸಿಗರ ಈಗಿನ ನಡೆ ಇದೆಲ್ಲ ನಂಬಬೇಕು ಎಂಬಂತಿದೆ’ ಎಂದರು.

‘ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಮಹಿಳಾ ನ್ಯಾಯಾಧೀಶರ ನೇತೃತದಲ್ಲೇ ತನಿಖೆ ಮಾಡಿಸಬೇಕು. ಎಸ್‌ಐಟಿ ನ್ಯಾಯಾಧೀಶರಿಗೆ ವರದಿ ಸಲ್ಲಿಸಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು’ ಎಂದೂ ಆಗ್ರಹಿಸಿದರು.

‘ಪ್ರಜ್ವಲ್‌ ಏ.27ಕ್ಕೆ ವಿದೇಶಕ್ಕೆ ಹೋದರು. ಸರ್ಕಾರ ಏ.28ಕ್ಕೆ ಎಫ್‌ಐಆರ್‌ ದಾಖಲಿಸಿದೆ. ಮುಂಚಿತ ಎಲ್ಲ ಗೊತ್ತಿದ್ದರೂ ಏಕೆ ಕ್ರಮ ವಹಿಸಲಿಲ್ಲ? ಪ್ರಜ್ವಲ್‌ ಅವರನ್ನು ತಡೆಯಬೇಡಿ ಎಂದು ಯಾರಾದರೂ ಒತ್ತಡ ಹೇರಿದ್ದರೇ? ನೀವೇಕೆ ಅವರನ್ನು ಹೋಗಲು ಬಿಟ್ಟಿರಿ? ಸಂತ್ರಸ್ತೆ ಒಬ್ಬರು ದೂರು ನೀಡಿದ್ದಾರೆ. ಆ ಎಫ್‌ಐಆರ್‌ ಕೂಡ ದುರ್ಬಲ ಆಗಿದೆ ಎಂಬ ವಿಚಾರ ಈಗ ಹೊರಗೆ ಬಂದಿದೆ. ಎಫ್‌ಐಆರ್‌ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಚುನಾವಣೆ ಮುಗಿದ ಬಳಿಕ ಈ ಪ್ರಕರಣವೇ ಮಾಯ ಆಗಬಹುದು’ ಎಂದೂ ಹೇಳಿದರು.

‘ಪೆನ್‌ಡ್ರೈವ್‌ನ ಎಲ್ಲ ಪ್ರಕರಣಗಳು 4–5 ವರ್ಷ ಹಿಂದಿನವು. ಆಗ ಜೆಡಿಎಸ್‌ ಪಕ್ಷವು ಕಾಂಗ್ರೆಸ್‌ನ ಭಾಗವಾಗಿತ್ತು’ ಎಂದೂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT