ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಳವಾಗಿ ನಾಮಪತ್ರ ಸಲ್ಲಿಸಿದ ಪ್ರಿಯಾಂಕಾ ಜಾರಕಿಹೊಳಿ; ನಾಯಕರ ಒಗ್ಗಟ್ಟು ಪ್ರದರ್ಶನ

Published 18 ಏಪ್ರಿಲ್ 2024, 13:38 IST
Last Updated 18 ಏಪ್ರಿಲ್ 2024, 13:38 IST
ಅಕ್ಷರ ಗಾತ್ರ

ಚಿಕ್ಕೋಡಿ: 'ಚುನಾವಣೆಗಳಲ್ಲಿ ಈಗ ಶಕ್ತಿ ಪ್ರದರ್ಶನಕ್ಕಿಂತ ಒಗ್ಗಟ್ಟು ಪ್ರದರ್ಶನ ಮಾಡುವುದು ಮುಖ್ಯವಾಗಿದೆ. ಇದನ್ನು ಕಾಂಗ್ರೆಸ್ ಪಕ್ಷ ಚಿಕ್ಕೋಡಿಯಲ್ಲಿ ಬಹಳ ಅಚ್ಚುಕಟ್ಟಾಗಿ ಮಾಡಿದ್ದನ್ನು ಪಕ್ಷದ ಅಭ್ಯರ್ಥಿಯಾಗಿ ಪ್ರಿಯಾಂಕಾ ಜಾರಕಿಹೊಳಿ ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ತೋರಿಸಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಪಟ್ಟಣದ ಮಿನಿ ವಿಧಾನಸೌಧದಲ್ಲಿ ಚಿಕ್ಕೋಡಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕಾ ಜಾರಕಿಹೊಳಿ ತಮ್ಮ ಉಮೇದುವಾರಿಕೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಪಕ್ಷದ ಶಾಸಕರು, ಮಾಜಿ ಶಾಸಕರು, ಬ್ಲಾಕ್ ಅಧ್ಯಕ್ಷರು ಸೇರಿ ಪ್ರಿಯಾಂಕಾ ನಾಮಪತ್ರ ಸಲ್ಲಿಕೆಯಲ್ಲಿ ಉಪಸ್ಥಿತರಿದ್ದು ಒಗ್ಗಟ್ಟು ಮೆರೆದಿದ್ದಾರೆ. ಇಂದಿನಿಂದಲೇ ಮತ್ತೊಂದು ಹಂತದ ಪ್ರಚಾರ ಕಾರ್ಯವನ್ನು ಮಾಡುತ್ತೇವೆ. ಪ್ರಿಯಾಂಕಾ ಗೆಲುವು ಗ್ಯಾರಂಟಿ. ಎಷ್ಟು ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಈಗಲೇ ಹೇಳಲಾಗುವುದಿಲ್ಲ’ ಎಂದರು.

ಪ್ರಿಯಾಂಕಾ ಜಾರಕಿಹೊಳಿ ಮಾತನಾಡಿ, ‘ನಾಮಪತ್ರ ಸಲ್ಲಿಕೆ ಮಾಡಿದ್ದು ಖುಷಿ ತಂದಿದೆ. ಜಿಲ್ಲೆಯ ಎಲ್ಲಾ ನಾಯಕರ ಹಾಗೂ ಕ್ಷೇತ್ರದ ಜನರ ಆಶೀರ್ವಾದ ಇರುವುದರಿಂದ ಗೆಲ್ಲುವ ವಿಶ್ವಾಸವಿದೆ’ ಎಂದರು.

‘ಸಾಮಾಜಿಕ ನ್ಯಾಯ ದೃಷ್ಟಿಯಿಂದ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಬೆಳಗಾವಿಯಲ್ಲಿ ಲಿಂಗಾಯತ, ಚಿಕ್ಕೋಡಿಯಲ್ಲಿ ಪರಿಶಿಷ್ಟ ಪಂಗಡ, ಉತ್ತರ ಕನ್ನಡದಲ್ಲಿ ಮರಾಠಾ ಸಮುದಾಯಗಳಿಗೆ ಟಿಕೆಟ್‌ ನೀಡಿದೆ. ಹೀಗಾಗಿ, ಎಲ್ಲ ಸಮುದಾಯಗಳ ಬೆಂಬಲ ಪಡೆಯುವ ಉಪಾಯ ಫಲಿಸಲಿದೆ. ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ’ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ಚಿಕ್ಕೋಡಿಯಲ್ಲಿ ಪ್ರಿಯಾಂಕಾ ಹಾಗೂ ಬೆಳಗಾವಿಯಲ್ಲಿ ಮೃಣಾಲ್‌ ಗೆಲುವು ನಿಶ್ಚಿತ ಎಂದರು.

ಚಿಕ್ಕೋಡಿ ಚುನಾವಣಾಧಿಕಾರಿ ರಾಹುಲ್‌ ಶಿಂಧೆ ಅವರಿಗೆ ಪ್ರಿಯಾಂಕಾ ಜಾರಕಿಹೊಳಿ ನಾಲ್ಕು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದರು. ರಾಜ್ಯ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ–2 ಪ್ರಕಾಶ ಹುಕ್ಕೇರಿ, ಶಾಸಕರಾದ ಲಕ್ಷ್ಮಣ ಸವದಿ, ರಾಜು ಕಾಗೆ, ಗಣೇಶ ಹುಕ್ಕೇರಿ, ವಿಶ್ವಾಸ ವೈದ್ಯ, ಆಸೀಫ್‌ ಶೇಠ್, ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ, ಮಾಜಿ ಸಚಿವರಾದ ಎ.ಬಿ. ಪಾಟೀಲ, ವೀರಕುಮಾರ ಪಾಟೀಲ, ಮಾಜಿ ಶಾಸಕರಾದ ಕಾಕಾಸಾಹೇಬ ಪಾಟೀಲ, ಶ್ಯಾಮ ಘಾಟಗೆ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ, ಎನ್‍ಸಿಪಿ ಮುಖಂಡ ಉತ್ತಮ ಪಾಟೀಲ ಮುಂತಾದವರು ಇದ್ದರು.

ನಾಮಪತ್ರ ಸಲ್ಲಿಕೆ ವೇಳೆಯಲ್ಲಿ ಮಿನಿವಿಧಾನಸೌಧದ ಎದುರಿನಲ್ಲಿ ನಿಷೇಧಿತ ಪ್ರದೇಶದಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಗುಂಪು ಗುಂಪಾಗಿ ಜಮಾವಣೆಯಾಗಿದ್ದು ಕಂಡುಬಂತು. ಮಿನಿ ವಿಧಾನಸೌಧದ ಆವರಣದಲ್ಲಿಯೇ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಪರವಾಗಿ ಘೋಷಣೆ ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT