ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ‘ಭಾವನೆ’, ಕಾಂಗ್ರೆಸ್‌ ‘ಬದುಕು’: ರಾಹುಲ್‌ ಗಾಂಧಿ

Published 18 ಏಪ್ರಿಲ್ 2024, 3:02 IST
Last Updated 18 ಏಪ್ರಿಲ್ 2024, 3:02 IST
ಅಕ್ಷರ ಗಾತ್ರ

ಮೈಸೂರು: ಲೋಕಸಭೆ ಚುನಾವಣೆ ಘೋಷಣೆಯಾದ ಬಳಿಕ, ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಬಂದು, ‘ಪ್ರಜಾಧ್ವನಿ–2’ ಪ್ರಚಾರಸಭೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ಹಾಗೂ ಅಧಿಕಾರಕ್ಕೆ ಬಂದರೆ ಜಾರಿಗೊಳಿಸಲಿರುವ ಗ್ಯಾರಂಟಿಗಳ ವಿವರಗಳನ್ನು ಬಿಚ್ಚಿಟ್ಟು, ಕಾರ್ಯಕರ್ತರನ್ನು ಹುರಿದುಂಬಿಸಿದರು. ಮಂಡ್ಯದಲ್ಲಿ ಮಧ್ಯಾಹ್ನ ಕಾರ್ಯಕ್ರಮ ನಡೆದರೆ, ಮಾಲೂರು ಹಾಗೂ ಹೊಸಕೋಟೆ ನಡುವಿನ ಚೊಕ್ಕಂಡಹಳ್ಳಿ ಗೇಟ್‌ ಬಳಿ ಸಂಜೆ ಸಮಾವೇಶ ನಡೆಯಿತು. 

ಕೇಂದ್ರದ ಬಿಜೆಪಿ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಕಾರ್ಯವೈಖರಿ ಹಾಗೂ ಬಿಜೆಪಿ– ಜೆಡಿಎಸ್‌ ಮೈತ್ರಿ ವಿರುದ್ಧ ವಾಗ್ದಾಳಿ ನಡೆಸಿ, ‘ಬಿಜೆಪಿ ಎಂದರೆ ಭಾವನೆ, ಕಾಂಗ್ರೆಸ್‌ ಎಂದರೆ ಬದುಕು’ ಎಂಬ ಸಂದೇಶ ರವಾನಿಸಿದರು. ‘ಮಂಡ್ಯವನ್ನು ಗೆಲ್ಲುವ ಮೂಲಕ ಇಂಡಿಯಾವನ್ನೇ ಗೆಲ್ಲುವೆವು’ ಎಂಬ ವಿಶ್ವಾಸವನ್ನು ಮಂಡ್ಯ ಸಭೆಯಲ್ಲಿ ವ್ಯಕ್ತಪಡಿಸಿದರು. 

ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ, ತಮ್ಮ ಭಾಷಣದ ಹೆಚ್ಚು ಸಮಯವನ್ನು ಗ್ಯಾರಂಟಿಗಳ ಬಗ್ಗೆ ಮಾತನಾಡಲೆಂದೇ ರಾಹುಲ್‌ ಮೀಸಲಿಟ್ಟರು.

ಅವರ ಸುದೀರ್ಘ ಭಾಷಣದ ಕನ್ನಡ ಅನುವಾದವಿದ್ದರೂ, ಭಾಷಣ ಆರಂಭಿಸಿದ ಕೆಲ ಹೊತ್ತಿನಲ್ಲೇ ಎದ್ದು ಹೋಗತೊಡಗಿದ ಕಾರ್ಯಕರ್ತ ರನ್ನು ಮುಖಂಡರು ಹಿಡಿದು ಕೂರಿಸಲು ಯತ್ನಿಸಿದರು.

ಮೊದಲಿಗೆ ಮಾತನಾಡಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು, ‘ಭಾರತ್ ಜೋಡೊ ಯಾತ್ರೆ’ಯನ್ನು ಉಲ್ಲೇಖಿಸಿ, ರಾಹುಲ್‌ ಗಾಂಧಿಯವರ ಕಾಲ್ಗುಣವನ್ನು ಹೊಗಳಿದರು. ಜೆಡಿಎಸ್‌ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ವರಿಷ್ಠ ಎಚ್‌.ಡಿ.ದೇವೇಗೌಡರ ವಿರುದ್ಧ ಅಬ್ಬರಿಸಿ ಕಾರ್ಯಕ್ರಮಕ್ಕೆ ವೀರಾವೇಶದ ಚೌಕಟ್ಟನ್ನೂ ಹಾಕಿಕೊಟ್ಟರು.

ಅದನ್ನು ಮುಂದುವರಿಸಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ, ರಾಜ್ಯದ ಬಿಜೆಪಿ ಸಂಸದರು ಹಾಗೂ ಅವರೊಂದಿಗೆ ಸೇರಿಕೊಂಡಿರುವ ಜೆಡಿಎಸ್‌ ಸಂಸದರ ವಿರುದ್ಧವೂ ಕಿಡಿ ಕಾರಿದರು.

ಚೊಕ್ಕಂಡಹಳ್ಳಿ ಗೇಟ್‌ನಲ್ಲಿನ ಸಮಾವೇಶದಲ್ಲಿ ರಾಹುಲ್‌ ಸುಮಾರು 35 ನಿಮಿಷ ಭಾಷಣ ಮಾಡಿದರು. ದೇಶದ 22 ಶ್ರೀಮಂತ ಉದ್ಯಮಿಗಳ ಸಾಲವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮನ್ನಾ ಮಾಡಿದೆ ಎಂದು ಆರೋಪಿಸಿದ ಅವರು ರೈತರಿಗೆ ಆಗಿದೆ ಎನ್ನಲಾದ ಮೋಸವನ್ನು ಎಳೆ, ಎಳೆಯಾಗಿ ಬಿಡಿಸಿಟ್ಟರು.

‘ಮಿಸ್ಟರ್‌ ನರೇಂದ್ರ ಮೋದಿ, ನೀವು ಅದಾನಿ, ಅಂಬಾನಿಗೆ ಕೋಟಿ ಕೋಟಿ ಹಣ ಕೊಟ್ಟರೆ ನಾವು ಬಡ ಮಹಿಳೆಯರಿಗೆ ಕೋಟಿ ಕೋಟಿ ಹಣ ಕೊಡುತ್ತೇವೆ. ರಾಜ್ಯ ಕಾಂಗ್ರೆಸ್‌ ಸರ್ಕಾರ ತಾಯಂದಿರಿಗೆ ವರ್ಷಕ್ಕೆ ₹24 ಸಾವಿರ ಕೊಡುತ್ತಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಬಡ ಮಹಿಳೆಗೆ ವರ್ಷಕ್ಕೆ ತಲಾ ₹1 ಲಕ್ಷ ಕೊಡುತ್ತೇವೆ’ ಎಂದು ಹೇಳಿದರು.

‘ರೈತರ ಎಲ್ಲಾ ಸಾಲಮನ್ನಾ ಮಾಡುತ್ತೇವೆ. ಈ ದೇಶದಲ್ಲಿ ತಾರತಮ್ಯ ಮುಂದುವರಿಯಲು ಬಿಡಲ್ಲ. ಬಡವರಿಗೆ, ರೈತರಿಗೆ, ದಲಿತರಿಗೆ, ಹಿಂದುಳಿದ ವರ್ಗದವರಿಗೆ, ಅಲ್ಪಸಂಖ್ಯಾತರಿಗೆ ಅನ್ಯಾಯ ಆಗಲು ಬಿಡಲ್ಲ’ ಎಂದು ಭರವಸೆ ನೀಡಿದರು. ‘ನಾವು ಜಾತಿ ಗಣತಿ ಮಾತೆತ್ತಿದರೆ ಮೋದಿ ಮೌನವಾಗುತ್ತಾರೆ. ಮೋದಿಯವರೇ, ನೀವು ಜಾತಿ ಗಣತಿ ವಿರುದ್ಧವೋ ಪರವೋ ಈ ದೇಶದ ಪ್ರಜೆಗಳಿಗೆ ಉತ್ತರ ಕೊಡಿ’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT