ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ದೌರ್ಜನ್ಯ: ಎಚ್‌.ಡಿ.ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

Published 30 ಏಪ್ರಿಲ್ 2024, 13:49 IST
Last Updated 30 ಏಪ್ರಿಲ್ 2024, 13:49 IST
ಅಕ್ಷರ ಗಾತ್ರ

ಬೆಂಗಳೂರು: ಮನೆ ಕೆಲಸದ ಮಹಿಳೆ ಹಾಗೂ ಅವರ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣದ ಆರೋಪಿಗಳಾದ ಜೆಡಿಎಸ್‌ ಶಾಸಕ ಎಚ್‌.ಡಿ. ರೇವಣ್ಣ ಹಾಗೂ ಅವರ ಮಗ, ಹಾಲಿ ಸಂಸದ ಪ್ರಜ್ವಲ್ ಅವರಿಗೆ ಎಸ್‌ಐಟಿ (ವಿಶೇಷ ತನಿಖಾ ತಂಡ) ಅಧಿಕಾರಿಗಳು ಮಂಗಳವಾರ ನೋಟಿಸ್ ನೀಡಿದ್ದು, 24 ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಹೊಳೆನರಸೀಪುರ ಟೌನ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸ್‌ಐಟಿ ಅಧಿಕಾರಿಗಳು, ಸಂತ್ರಸ್ತೆಯರ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಜೊತೆಗೆ, ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವು ಪುರಾವೆಗಳನ್ನು ಕಲೆ ಹಾಕುತ್ತಿದ್ದಾರೆ.

‘ಲೈಂಗಿಕ ದೌರ್ಜನ್ಯದ ಬಗ್ಗೆ ಸಂಬಂಧಪಟ್ಟವರಿಂದ ಹೇಳಿಕೆ ಪಡೆಯಲಾಗುತ್ತಿದೆ. ಹಾಸನ ಎಸ್‌ಪಿ ಹಾಗೂ ಪೊಲೀಸ್ ಸಿಬ್ಬಂದಿಯಿಂದಲೂ ಮಾಹಿತಿ ಪಡೆಯಲಾಗಿದೆ. ಜೊತೆಗೆ, ಪ್ರಕರಣದಲ್ಲಿ ಆರೋಪಿಗಳ ಹೇಳಿಕೆ ಅಗತ್ಯವಿದೆ. ಹೀಗಾಗಿ, ಸಿಆರ್‌ಪಿಸಿ 41 (ಎ) ಅಡಿ ಎಚ್‌.ಡಿ. ರೇವಣ್ಣ ಹಾಗೂ ಪ್ರಜ್ವಲ್‌ಗೆ ನೋಟಿಸ್ ಜಾರಿ ಮಾಡಲಾಗಿದೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

‘ನೋಟಿಸ್ ತಲುಪಿದ ನಿಗದಿತ ಅವಧಿಯೊಳಗೆ ಹಾಜರಾಗದಿದ್ದರೆ ಮುಂದಿನ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಪ್ರಕರಣದ ಸಂತ್ರಸ್ತೆಯರು ಹಾಗೂ ಇತರರು ನೀಡಿರುವ ಹೇಳಿಕೆಯ ಆಧಾರದಲ್ಲಿ ಕೆಲ ಪ್ರಶ್ನೆಗಳನ್ನು ಸಿದ್ಧಪಡಿಸಲಾಗಿದೆ. ಇವುಗಳಿಗೆ ಆರೋಪಿಗಳಿಂದ ಉತ್ತರ ಪಡೆಯಬೇಕಿದೆ. ಬಳಿಕ, ಪರಸ್ಪರ ಹೇಳಿಕೆ ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಮೂಲಗಳು ಹೇಳಿವೆ.

ಎಸ್‌ಐಟಿಗೆ 18 ಸಿಬ್ಬಂದಿ: ಸಿಐಡಿ ಎಡಿಜಿಪಿ ಬಿ.ಕೆ. ಸಿಂಗ್ ಮುಖ್ಯಸ್ಥರಾಗಿರುವ ವಿಶೇಷ ತನಿಖಾ ತಂಡದಲ್ಲಿ ಐಪಿಎಸ್‌ ಅಧಿಕಾರಿಗಳಾದ ಸುಮನ್ ಪೆನ್ನೇಕರ್ ಹಾಗೂ ಸೀಮಾ ಲಾಠ್ಕರ್ ಸದಸ್ಯರಾಗಿದ್ದಾರೆ. ಜೊತೆಗೆ, ಎಸ್‌ಐಟಿಗೆ ಹೊಸದಾಗಿ 18 ಸಿಬ್ಬಂದಿಯನ್ನು ನಿಯೋಜಿಸಿ ಡಿಜಿ–ಐಜಿಪಿ ಅವರು ಮಂಗಳವಾರ ಆದೇಶ ಹೊರಡಿಸಿದ್ದಾರೆ. ಇದರಲ್ಲಿ 10 ಮಂದಿ ಮಹಿಳಾ ಸಿಬ್ಬಂದಿ ಇದ್ದಾರೆ.

ಮೂವರು ಎಸಿಪಿಗಳು, ಐವರು ಇನ್‌ಸ್ಪೆಕ್ಟರ್‌ಗಳು, ನಾಲ್ವರು ಪಿಎಸ್‌ಐಗಳು, ನಾಲ್ವರು ಹೆಡ್ ಕಾನ್‌ಸ್ಟೆಬಲ್‌ಗಳು ಹಾಗೂ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಎಸ್‌ಐಟಿ ತಂಡ ಸೇರಿದ್ದಾರೆ. ಮಂಗಳವಾರವೇ ಅವರೆಲ್ಲ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಅರಮನೆ ರಸ್ತೆಯಲ್ಲಿರುವ ಸಿಐಡಿ ಕಟ್ಟಡದಲ್ಲಿ ಎಸ್‌ಐಟಿ ಕಚೇರಿ ತೆರೆಯಲಾಗಿದೆ. ಜೊತೆಗೆ, ಹಾಸನದಲ್ಲೂ ಎಸ್‌ಐಟಿ ಅಧಿಕಾರಿಗಳ ಕೆಲಸಕ್ಕಾಗಿ ಪ್ರತ್ಯೇಕ ಜಾಗ ನಿಗದಿಪಡಿಸಲಾಗಿದೆ.

ಪೆನ್‌ಡ್ರೈವ್‌ ಬಹಿರಂಗ: ಪರಸ್ಪರ ಆರೋಪ

ಸಾವಿರಾರು ವಿಡಿಯೊಗಳು ಇವೆ ಎನ್ನಲಾದ ಪೆನ್‌ಡ್ರೈವ್‌ ಅನ್ನು ಬಹಿರಂಗಗೊಳಿಸಿದ ವಿಷಯ ಕಾಂಗ್ರೆಸ್–ಜೆಡಿಎಸ್ ನಾಯಕರ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ.

‘ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿಗಳನ್ನು ಸೋಲಿಸಲೆಂದೇ ಮಹಾನಾಯಕರು ಪೆನ್‌ಡ್ರೈವ್ ಹಂಚಿದ್ದಾರೆ’ ಎಂದು ಡಿ.ಕೆ. ಶಿವಕುಮಾರ್ ಹೆಸರು ಹೇಳದೇ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು. ‘ಅಂತಹ ಚಿಲ್ಲರೆ ಕೆಲಸ ನಾನು ಮಾಡುವುದಿಲ್ಲ’ ಎಂದು ಪ್ರತಿಕ್ರಿಯಿಸಿರುವ ಶಿವಕುಮಾರ್ ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕುಮಾರಸ್ವಾಮಿ ಜತೆ ಚರ್ಚಿಸಿದ್ದರಲ್ಲವೇ ಎಂದು ಕೆಣಕಿದ್ದಾರೆ.

ಮೂಲ ವಿಡಿಯೊ ಹೊಂದಿದ್ದರು ಎನ್ನಲಾಗುತ್ತಿರುವ ಪ್ರಜ್ವಲ್ ಅವರ ಕಾರಿನ ಚಾಲಕರಾಗಿದ್ದ ಕಾರ್ತಿಕ್‌ ಎಂಬವರು ವಿಡಿಯೊ ಒಂದನ್ನು ಹರಿಬಿಟ್ಟಿದ್ದು ‘ವಿಡಿಯೊವನ್ನು ಬಿಜೆಪಿ ಮುಖಂಡ ದೇವರಾಜಗೌಡರಿಗೆ ಮಾತ್ರ ಕೊಟ್ಟಿದ್ದೆ. ಕಾಂಗ್ರೆಸ್‌ನವರಿಗೆ ಕೊಟ್ಟಿರಲಿಲ್ಲ’ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ದೇವರಾಜೇಗೌಡ ‘ಹಾಸನದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್‌ ಅವರ ಸಾಮಾಜಿಕ ಜಾಲತಾಣದ ಉಸ್ತುವಾರಿ ಹೊತ್ತಿದ್ದ ಕಾರ್ತಿಕ್‌ ವಿಡಿಯೊಗಳನ್ನು ಕಾಂಗ್ರೆಸ್‌ನವರಿಗೆ ಕೊಟ್ಟಿದ್ದಾನೆ’ ಎಂದಿದ್ದಾರೆ.

ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತು ವಿಶೇಷ ತನಿಖಾ ತಂಡದ ವರದಿಯೇ ಅಂತಿಮ. ವರದಿ ಬಂದ ಮೇಲೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಅಲ್ಲಿಯವರೆಗೆ ಏನೂ ಪ್ರತಿಕ್ರಿಯಿಸುವುದಿಲ್ಲ.
–ಸಿದ್ದರಾಮಯ್ಯ, ಮುಖ್ಯಮಂತ್ರಿ

ಡಿಜಿಗೆ ಮಹಿಳಾ ಆಯೋಗ ನೋಟಿಸ್

ಪ್ರಜ್ವಲ್‌ ರೇವಣ್ಣ ನಡೆಸಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖಾ ಪ್ರಗತಿಯ ಬಗ್ಗೆ ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್‌ ಅವರಿಗೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾಶರ್ಮ ಸೂಚಿಸಿದ್ದಾರೆ.

ಪ್ರಕರಣದ ಆರೋಪಿ ಅಪ್ರಾಪ್ತ ವಯಸ್ಕರನ್ನು ಬಳಸಿಕೊಂಡಿರುವ ಬಗ್ಗೆ ಅನುಮಾನಗಳಿದ್ದು ಈ ಬಗ್ಗೆ ವರದಿ ನೀಡುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ಎಸ್ಐಟಿಗೆ ಪತ್ರ ಬರೆದಿದೆ.

ಹಾಸನ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್ ಅಮಾನತು

ಹುಬ್ಬಳ್ಳಿ: ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಪಕ್ಷದ ಪ್ರಮುಖರ ಸಮಿತಿ ಅಧ್ಯಕ್ಷ ಜಿ.ಟಿ. ದೇವೇಗೌಡ ಮತ್ತು ರಾಜ್ಯ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರ ಉಪಸ್ಥಿತಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಂಡು ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರಿಗೆ ಶಿಫಾರಸು ಮಾಡಲಾಯಿತು.

ದೇವೇಗೌಡರ ಅನುಮೋದನೆ ಮೇರೆಗೆ ಅಮಾನತು ಆದೇಶ ಹೊರಬಿದ್ದಿತು. ಆದೇಶ ಪ್ರತಿಯನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದ ಎಚ್.ಡಿ.ಕುಮಾರಸ್ವಾಮಿ‘ಪ್ರಕರಣದ ಬಗ್ಗೆ ತನಿಖೆಗೆ ರಚಿಸಿರುವ ಎಸ್‌ಐಟಿಯಿಂದ ಸಂಪೂರ್ಣ ಸತ್ಯಾಸತ್ಯತೆ ಹೊರಬರಲಿ. ಪ್ರಜ್ವಲ್‌ ತಪ್ಪಿತಸ್ಥ ಎಂದು ವರದಿ ನೀಡಿದರೆ ಉಚ್ಚಾಟನೆ ಮಾಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT