ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷದಲ್ಲಿ ಇದ್ದಾಗಲೇ ಬೇರೆ ಅಭ್ಯರ್ಥಿ ಘೋಷಣೆ: ಎ.ಟಿ. ರಾಮಸ್ವಾಮಿ

ದೇವೇಗೌಡರ ಮೊಮ್ಮಕ್ಕಳ ಮುಂದೆಯೂ ಕೈಕಟ್ಟಿ ನಿಲ್ಲಬೇಕೇ: ಎ.ಟಿ. ರಾಮಸ್ವಾಮಿ
Last Updated 8 ಏಪ್ರಿಲ್ 2023, 5:54 IST
ಅಕ್ಷರ ಗಾತ್ರ

ಕೊಣನೂರು: ಗೌರವದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರ ಮುಂದೆ ಕೈಕಟ್ಟಿ ನಿಲ್ಲಲು ನಮಗೆ ಹೆಮ್ಮೆ, ಪ್ರೀತಿಯಿದೆ. ಆದರೆ ಅವರ ಮೊಮ್ಮಕ್ಕಳ ಮುಂದೆಯೂ ಕೈಕಟ್ಟಿ ನಿಲ್ಲಬೇಕೇ ಎಂದು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಹೋಬಳಿಯ ಬಿಸಲಹಳ್ಳಿಯ ತಮ್ಮ ಮನೆಯ ಬಳಿ ಆಯೋಜಿಸಿದ್ದ ಹಿತೈಷಿಗಳು ಮತ್ತು ಅಭಿಮಾನಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ತಾಲ್ಲೂಕಿನಲ್ಲಿ ₹ 690 ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರು ಯೋಜನೆ ಶಂಕುಸ್ಥಾಪನೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರನ್ನು ಆಹ್ವಾನಿಸಲು ಹೋದಾಗ, ಅವರು ನನ್ನ ಕೈ ಹಿಡಿದುಕೊಂಡು, ‘ನಿಮಗೆ ಪಕ್ಷದ ಒಳಗೆ ಆಗುತ್ತಿರುವ ನೋವುಗಳು ನನಗೆ ಗೊತ್ತಿದೆ. ನಾನು ಬದುಕಿರುವವರೆಗೂ ನಿಮಗೆ ನೋವಾಗಲು ಬಿಡಲ್ಲ’ ಎಂದಿದ್ದರು.
ಇದನ್ನು ಸಹಿಸದ ಕೆಲವರು ನನ್ನ ಬಗ್ಗೆ ಪಿತೂರಿ ಮಾಡಿ ಕೆಲವರನ್ನು ಎತ್ತಿಕಟ್ಟಿ ಪ್ರತಿಭಟನೆ ಮಾಡುವಂತೆ ಮಾಡಿದರು. ರಾಮಸ್ವಾಮಿ ಕೆಟ್ಟವರು ಎಂದು ಬಿಂಬಿಸಿ, ಪಕ್ಷದಲ್ಲಿ ನಾನು ಇದ್ದಾಗಲೇ ಬೇರೆ ಅಭ್ಯರ್ಥಿಯನ್ನು ಪ್ರಕಟಿಸಿದರು‘ ಎಂದು ರಾಮಸ್ವಾಮಿ ಹೇಳಿದರು.

‘ಒಂದು ಸಭೆಯನ್ನೂ ಕರೆಯದೇ, ಕಾರ್ಯಕರ್ತರ ಅಭಿಪ್ರಾಯವನ್ನೂ ಕೇಳದೇ, ಏಕಾಏಕಿ ನನ್ನನ್ನು ಪಕ್ಷದಿಂದ ಹೊರಹಾಕಿದ ನಿಮ್ಮ ನಡೆಯನ್ನು ಜನರು ಮನಗಾಣಬೇಕಿದೆ. ಕೆಲ ತಿಂಗಳ ಹಿಂದೆ ತಮ್ಮ ದಾಯಾದಿ ಪಾಪಣ್ಣಿ ತಾನೇ ಜೆಡಿಎಸ್ ಅಭ್ಯರ್ಥಿ ಎಂದು ಕ್ಷೇತ್ರದೆಲ್ಲೆಡೆ ಸುತ್ತಲು ಬಿಟ್ಟಾಗ ನನಗೆ ನೋವಾಗಲಿಲ್ಲವೆ’ ಎಂದು ಎಚ್.ಡಿ. ರೇವಣ್ಣ ಮತ್ತು ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು.

ನನಗೆ ಬಿಜೆಪಿ ಕೊಟ್ಟಿರುವ ಗೌರವಕ್ಕೆ ತಲುಪಲು ನನಗೆ ಶಕ್ತಿ ತುಂಬಿದ ನಿಮಗೆ ಸಲ್ಲಬೇಕು. ನಿಮಗೆ ಮತ್ತು ನನಗೆ ಪ್ರೀತಿ ತೋರಿಸಿರುವ ಪಕ್ಷವನ್ನು ಗೆಲ್ಲಿಸುವ ಮೂಲಕ ವಿಶ್ವದ ರಾಷ್ಟ್ರಗಳ ಪೈಕಿ ಭಾರತವನ್ನು ವಿಶೇಷ ಸ್ಥಾನದಲ್ಲಿ ನಿಲ್ಲಿಸಲು ಮುಂದಾಗಿರುವ ಮೋದಿಯವರಿಗೆ ಮತ್ತಷ್ಟು ಶಕ್ತಿ ತುಂಬುವ ಸಂಕಲ್ಪ ನಮ್ಮದಾಗಬೇಕು. ಮೋದಿಯವರನ್ನು ವಿಶ್ವ ನಾಯಕನೆಂದು ಗುರುತಿಸುತ್ತಿರುವ ಪರಿಸ್ಥಿತಿಯಲ್ಲಿ ಅವರ ಮಾರ್ಗದರ್ಶನಲ್ಲಿ ಮುಂದುವರಿಯುವುದು ಎಲ್ಲರಿಗೂ ಗೌರವ ತಂದುಕೊಡುತ್ತದೆ ಎಂದರು.

ಬಿಜೆಪಿಯ ಎಸ್ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರು, ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ನಟೇಶ್ ಕುಮಾರ್ ಮಾತನಾಡಿದರು. ಮುಖಂಡ ದಿವಾಕರ್ ಗೌಡ, ರವಿಕುಮಾರ್, ಗಣೇಶ್ ಮೂರ್ತಿ, ವೆಂಕಟೇಶ್, ಜನಾರ್ದನ ಗುಪ್ತಾ, ಬಷೀರ್ ಸಾಬ್, ಕೇಶವಮೂರ್ತಿ, ನಳಿನಿ ಅರಸ್, ಹೂವಣ್ಣ, ಕೃಷ್ಣಯ್ಯ, ಮಾದೇಶ್ ಮತ್ತು ತಾಲ್ಲೂಕಿನ ವಿವಿಧ ಭಾಗಗಳಿಂದ ಬಂದಿದ್ದ ಕಾರ್ಯಕರ್ತರು ಇದ್ದರು.

‘ಕಾಂಗ್ರೆಸ್‌ನಿಂದ ದ್ವಂದ್ವ ನೀತಿ’

ಸದಾಶಿವ ಆಯೋಗದ ವರದಿಯನ್ನು ಪ್ರಸ್ತುತ ಸರ್ಕಾರ ಅನುಷ್ಠಾನಗೊಳಿಸಲು ಮುಂದಾದಾಗ, ವರದಿಯ ಅನುಷ್ಠಾನಕ್ಕೆ ಒತ್ತಾಯಿಸುತ್ತಿದ್ದ ವಿಪಕ್ಷಗಳು, ಇದೀಗ ಅಮಾಯಕರನ್ನು ಅನುಷ್ಠಾನದ ವಿರುದ್ಧ ಎತ್ತಿಗಟ್ಟುತ್ತಿವೆ ಎಂದು ಎ.ಟಿ. ರಾಮಸ್ವಾಮಿ ಹೇಳಿದರು.

ವರದಿಯ ಕುರಿತಂತೆ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡುತ್ತ, ರಾಜಕೀಯ ಅರಾಜಕತೆಯನ್ನು ಸೃಷ್ಟಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅಲ್ಪಸಂಖ್ಯಾತರಿಗೆ ಶೇ 4 ಮೀಸಲಾತಿ ನೀಡಲಾಗಿತ್ತು. ವಿವಿಧ ಜಾತಿ ಧರ್ಮದವರು ಮೀಸಲಾತಿಯ ಹೆಚ್ಳಳ ಮಾಡುವಂತೆ ಒತ್ತಾಯಿಸಿದ್ದರಿಂದ ಆರ್ಥಿಕವಾಗಿ ಹಿಂದುಳಿದಿದವರಿಗೆ ಇದ್ದ ಶೇ 10 ರಲ್ಲಿ ಉಳಿಕೆ ಪ್ರಮಾಣವನ್ನು ಅಲ್ಪಸಂಖ್ಯಾತರಿಗೆ ನೀಡಲಾಗಿದೆ. ಇದಕ್ಕೆ ಒಪ್ಪದೇ ಕಾಂಗ್ರೆಸ್‌ ದ್ವಂದ್ವ ನೀತಿಯನ್ನು ಕಾಂಗ್ರೆಸ್ ಪ್ರದರ್ಶಿಸುತ್ತಿದೆ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT