ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ಮಂಡ್ಯದಲ್ಲೇ ನಿಲುವು ಪ್ರಕಟಿಸುವೆ; ಸುಮಲತಾ

Published 29 ಮಾರ್ಚ್ 2024, 20:43 IST
Last Updated 29 ಮಾರ್ಚ್ 2024, 20:43 IST
ಅಕ್ಷರ ಗಾತ್ರ

ಬೆಂಗಳೂರು: ‘ಲೋಕಸಭಾ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮನವಿ ಮಾಡಿದ್ದಾರೆ. ಮಂಡ್ಯದಲ್ಲೇ ನನ್ನ ನಿಲುವು ಪ್ರಕಟಿಸುತ್ತೇನೆ’ ಎಂದು ಸಂಸದೆ ಸುಮಲತಾ ಅಂಬರೀಷ್‌ ತಿಳಿಸಿದರು.

ವಿಜಯೇಂದ್ರ ಅವರು ಸುಮಲತಾ ಅವರ ಮನೆಗೆ ಶುಕ್ರವಾರ ಭೇಟಿ ನೀಡಿ ಮಾತುಕತೆ ನಡೆಸಿದರು. ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರ ಪರವಾಗಿ ಪ್ರಚಾರ ಕೈಗೊಳ್ಳುವಂತೆ ಮನವಿ ಮಾಡಿದರು. ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸುಮಲತಾ ‘ಚುನಾವಣೆಯಲ್ಲಿ ಬೆಂಬಲ ನೀಡುವಂತೆ ವಿಜಯೇಂದ್ರ ಕೇಳಿದ್ದಾರೆ. ಮಂಡ್ಯದಲ್ಲಿ ಶನಿವಾರ ಬೆಂಬಲಿಗರ ಸಭೆ ನಡೆಸುತ್ತೇನೆ. ಅವರೊಂದಿಗೆ ಚರ್ಚಿಸಿದ ಬಳಿಕ ಅಲ್ಲಿಯೇ ನನ್ನ ನಿರ್ಧಾರ ಪ್ರಕಟಿಸುತ್ತೇನೆ’ ಎಂದರು.

‘ಮಂಡ್ಯ ಕ್ಷೇತ್ರವನ್ನು ಬಿಟ್ಟು ಹೋಗುತ್ತೇನೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ಮಂಡ್ಯ ಲೋಕಸಭಾ ಕ್ಷೇತ್ರವನ್ನು ಬಿಜೆಪಿಯೇ ಉಳಿಸಿಕೊಳ್ಳಬೇಕಿತ್ತು’ ಎಂದು ಹೇಳಿದರು. ಭೇಟಿ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ ‘ಇದು ಮನವೊಲಿಕೆ ಯತ್ನ ಅಲ್ಲ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷನಾಗಿ ಸುಮಲತಾ ಅವರನ್ನು ಭೇಟಿಮಾಡಿ ಸಹಕಾರ ಕೇಳಿದ್ದೇನೆ. ಬೆಂಬಲಿಗರ ಜತೆ ಸಭೆ ನಡೆಸಿ ನಿರ್ಧಾರ ತಿಳಿಸುವುದಾಗಿ ಅವರು ಹೇಳಿದ್ದಾರೆ. ಅವರ ನಿರ್ಧಾರವೂ ಸರಿಯಾಗಿಯೇ ಇದೆ’ ಎಂದರು. ‘ಸುಮಲತಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅವರು ಒಳ್ಳೆಯ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ. ಈಗ ಅವರಿಗೆ ತಾತ್ಕಾಲಿಕ ಹಿನ್ನಡೆ ಆಗಿರಬಹುದು. ಭವಿಷ್ಯದಲ್ಲಿ ಒಳ್ಳೆಯದಾಗಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT