ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ ಕಾಂಗ್ರೆಸ್‌ ಅಭ್ಯರ್ಥಿ ಗಣಿಗ ರವಿಕುಮಾರ್‌ ಬದಲಾವಣೆಗೆ ಒತ್ತಾಯ

ಮಂಡ್ಯ ಕ್ಷೇತ್ರ; ಮುಂದುವರಿದ ಭಿನ್ನಮತ, ಏ.14ರ ಗಡುವು ವಿಧಿಸಿದ ಹಿರಿಯ ಮುಖಂಡರು
Last Updated 10 ಏಪ್ರಿಲ್ 2023, 14:22 IST
ಅಕ್ಷರ ಗಾತ್ರ

ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಘೋಷಣೆಯಾಗಿರುವ ಗಣಿಗ ಪಿ.ರವಿಕುಮಾರ್‌ ಗೌಡ ಅವರ ವಿರುದ್ಧ ಭಿನ್ನಮತ ಮುಂದುವರಿದಿದೆ. ಮುಖಂಡರಾದ ಎಂ.ಎಸ್‌.ಆತ್ಮಾನಂದ, ಅಮರಾವತಿ ಚಂದ್ರಶೇಖರ್‌ ನೇತೃತ್ವದ ಹಿರಿಯ ಮುಖಂಡರ ತಂಡ ಸೋಮವಾರ ಭಿನ್ನಮತ ಹೊರಹಾಕಿದೆ.

ಅಮರಾವತಿ ಹೋಟೆಲ್‌ ಸಭಾಂಗಣದಲ್ಲಿ ಸಭೆ ನಡೆಸಿದ ಮುಖಂಡರು ಅಭ್ಯರ್ಥಿ ಬದಲಾವಣೆಗೆ ಒತ್ತಾಯಿಸುವ ನಿರ್ಧಾರ ಕೈಗೊಂಡರು. ಈ ಸಂದರ್ಭದಲ್ಲಿ ಮುಖಂಡ ಎಂ.ಎಸ್‌.ಆತ್ಮಾನಂದ ಮಾತನಾಡಿ ‘ನನನ್ನೂ ಸೇರಿದಂತೆ ಒಟ್ಟು 16 ಮಂದಿ ಅಭ್ಯರ್ಥಿಗಳು ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಅರ್ಜಿ ಸಲ್ಲಿಸಿದ್ದೆವು. ಇದರಲ್ಲಿ ನಾವು 10 ಮಂದಿ ಹಿಂದಿನಿಂದಲೂ ಒಟ್ಟಿಗೇ ಇದ್ದೇವೆ. ನಮ್ಮಲ್ಲೇ ಯಾರಿಗಾದರೂ ಟಿಕೆಟ್ ನೀಡಬೇಕು ಎಂದು ಕೋರಿದ್ದೆವು’ಎಂದರು.

‘ನಮ್ಮ ಹೆಸರು ಪರಿಗಣಿಸದೇ ಗಣಿಗ ರವಿಕುಮಾರ್‌ ಹೆಸರು ಘೋಷಣೆ ಮಾಡಲಾಗಿದೆ, ತಕ್ಷಣ ಬದಲಿಸಬೇಕು ಎಂದು ದೂರವಾಣಿ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಕೋರಿದ್ದೇವೆ. ಅದಕ್ಕೆ ಸಕಾರಾತ್ಮವಾಗಿ ಸ್ಪಂದಿಸಿದ್ದಾರೆ. ಅಲ್ಲಿಯವರೆಗೂ ಕಾದು ನೋಡುತ್ತೇವೆ’ ಎಂದರು.

‘ಏ.13 ಅಥವಾ 14 ರೊಳಗೆ ಹೈಕಮಾಂಡ್‌ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಹಿರಿತನ, ಅನುಭವದ ಆಧಾರದ ಮೇಲೆ ನಮ್ಮ ಈ ಹತ್ತು ಮಂದಿಯಲ್ಲಿ ಯಾರನ್ನಾದರೂ ಘೋಷಣೆ ಮಾಡಲಿ. ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಮುಂದಿನ ತೀರ್ಮಾನವನ್ನು ತಿಳಿಸುತ್ತೇವೆ’ ಎಂದರು.

ರಾಮಲಿಂಗಯ್ಯ ಮಾತನಾಡಿ ‘ಗಣಿಗ ರವಿಕುಮಾರ್‌ಗೌಡ ಅವರಿಗೆ ಕಳೆದ ಬಾರಿಯೂ ಟಿಕೆಟ್ ನೀಡಲಾಗಿತ್ತು. ಆದರೆ, ಕೊನೇ ಗಳಿಗೆಯಲ್ಲಿ ಏನೆಲ್ಲಾ ನಡೆಯಿತು ಎಂಬುದನ್ನು ಕ್ಷೇತ್ರದ ಜನತೆ ಮತ್ತು ಕಾಂಗ್ರೆಸ್ ಮುಖಂಡರಿಗೆ ತಿಳಿದಿದೆ. ಅದನ್ನು ಬಿಡಿಸಿ ಹೇಳಬೇಕಾಗಿಲ್ಲ. ಅಭ್ಯರ್ಥಿಯ ಲೋಪದಿಂದಾಗಿ ನಾವು ಮಂಡ್ಯ ಕ್ಷೇತ್ರವನ್ನು ಕಳೆದುಕೊಳ್ಳಬೇಕಾಗಿಯಿತು. ಮತ್ತೆ ಅದೇ ತಪ್ಪು ನಡೆಯಲು ನಾವು ಬಿಡುವುದಿಲ್ಲ’ ಎಂದರು.

ಅಮರಾವತಿ ಚಂದ್ರಶೇಖರ್‌ ಮಾತನಾಡಿ ‘ನಗರದ ಕಾಳಿಕಾಂಬ ಸಮುದಾಯ ಭವನದಲ್ಲಿ ಏ.13 ಅಥವಾ 14 ರಂದು ಬೃಹತ್‌ ಕಾರ್ಯಕರ್ತರ ಸಮಾವೇಶ ನಡೆಸಿ ಚರ್ಚೆ ಮಾಡುತ್ತೇವೆ. ಈಗಾಗಲೇ ನಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸಿದ್ದೇವೆ. ಪಕ್ಷ ಮಂದಿನ ದಿನಗಳಲ್ಲಿ ಯಾವ ನಿರ್ಧಾರ ಕೈಗೊಳ್ಳುತ್ತದೋ ಅದನ್ನು ನೋಡುತ್ತೇವೆ’ ಎಂದರು.

ಮುಖಂಡರಾದ ಎಚ್.ಬಿ.ರಾಮು, ಸಿದ್ದರಾಮೇಗೌಡ, ಎಂ.ಡಿ.ಜಯರಾಂ, ಹೊಸಹಳ್ಳಿ ಶಿವಲಿಂಗೇಗೌಡ, ಜಬೀವುಲ್ಲಾ, ಅಪೆಕ್ಸ್‌ ಬ್ಯಾಂಕ್ ನಿರ್ದೇಶಕ ಸಿ.ಅಶ್ವತ್ಥ್‌ ಇದ್ದರು.

***

6ಕ್ಕಿಳಿದ ಹಿರಿಯ ಮುಖಂಡರ ತಂಡ

‘ಆಂತರಿಕ ಸಮೀಕ್ಷೆ ಆಧರಿಸಿ ಗಣಿಗ ಪಿ ರವಿಕುಮಾರ್‌ಗೌಡ ಅವರ ಹೆಸರು ಘೋಷಣೆ ಮಾಡಲಾಗಿದೆ. ಜೊತೆಗೆ ಅವರಿಗೆ ಕಳೆದ ಬಾರಿ ಸೋಲಿನ ಅನುಕಂಪ ಇದೆ. ಟಿಕೆಟ್‌ ಬದಲಾವಣೆ ಮಾಡಿರುವ ಹಿರಿಯರ ತಂಡಕ್ಕೆ ರವಿಕಕುಮಾರ್‌ ಮೇಲೆ ಅಸೂಯೆ ಇದೆ. ಅದಕ್ಕಾಗಿ ಸಭೆ ನಡೆಸಿ ಭಿನ್ನ ಮಾತುಗಳನ್ನಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್‌ ಒಮ್ಮೆ ಕಣ್ಣು ಬಿಟ್ಟರೆ ಸಾಕು ಎಲ್ಲರೂ ಸುಮ್ಮನಾಗುತ್ತಾರೆ. ಅವರಲ್ಲೇ ಒಗ್ಗಟ್ಟು ಇಲ್ಲ, ಈಗಾಗಲೇ 10 ಮಂದಿ ಮುಖಂಡರ ತಂಡ 6ಕ್ಕೆ ಇಳಿದಿದೆ’ ಎಂದು ಕಾಂಗ್ರೆಸ್‌ನ ಮುಖಂಡರೊಬ್ಬರು ತಿಳಿಸಿದರು.

ಗಣಿಗ ರವಿಕುಮಾರ್‌ಗೌಡ ಪ್ರತಿಕ್ರಿಯಿಸಿ ‘ಎಂ.ಎಸ್‌.ಆತ್ಮಾನಂದ, ಅಮರಾವತಿ ಚಂದ್ರಶೇಖರ್‌ ಸೇರಿದಂತೆ ಹಿರಿಯರ ನೇತೃತ್ವದಲ್ಲೇ ಚುನಾವಣೆ ನಡೆಸಲಾಗುವುದು. ಎಲ್ಲರ ವಿಶ್ವಾಸ ಪಡೆದು ಮುನ್ನಡೆಯುತ್ತೇನೆ, ಯಾವುದೇ ಭಿನ್ನಮತ ಇಲ್ಲ. ಎಲ್ಲರೂ ನನ್ನ ಪರವಾಗಿ ಕೆಲಸ ಮಾಡಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT