ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ವಜನಾಂಗದ ಹಿತವೇ ಕಾಂಗ್ರೆಸ್‌ ಧ್ಯೇಯ: ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್‌.ಮುನಿಯಪ್ಪ

Last Updated 14 ಏಪ್ರಿಲ್ 2023, 6:44 IST
ಅಕ್ಷರ ಗಾತ್ರ

ತೂಬಗೆರೆ (ದೊಡ್ಡಬಳ್ಳಾಪುರ): ರಾಜ್ಯದಲ್ಲಿ ಕಾಂಗ್ರೆಸ್‌ ಪರವಾದ ಅಲೆ ಇದೆ. ಬಿಜೆಪಿ ಆಡಳಿತದ ಭ್ರಷ್ಟಾಚಾರ, ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ ಎಂದು ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ.ಎಚ್‌.ಮುನಿಯಪ್ಪ ಹೇಳಿದರು.

ಅವರು ತಾಲ್ಲೂಕಿನ ತೂಬಗೆರೆ ಹೋಬಳಿ ಬ್ಲಾಕ್‌ ಕಾಂಗ್ರೆಸ್‌ ಸಮಿತಿಯಿಂದ ವಿವಿಧ ಗ್ರಾಮಗಳಲ್ಲಿ ಗುರುವಾರ ನಡೆದ ಚುನಾವಣ ಪ್ರಚಾರ ಸಭೆಗಳಲ್ಲಿ ಮಾತನಾಡಿದರು.

ಕಾಂಗ್ರೆಸ್‌ ಪಕ್ಷ ಸರ್ವ ಜನಾಂಗವನ್ನು ಸಮಾನ ದೃಷ್ಠಿಯಿಂದ ನೋಡುವ ಮೂಲಕ ಜನಪರ ಆಡಳಿತ ನೀಡುತ್ತಲೇ ಬಂದಿದೆ. ಯಾವುದೇ ಜನರನ್ನು ಭಾವನಾತ್ಮಕವಾಗಿ ದೂರ ಮಾಡುವ ಕೆಲಸವನ್ನು ಎಂದೂ ಮಾಡಿಲ್ಲ. ಕುವೆಂಪು ಅವರ ಆಶಯದಂತೆ ಸರ್ವಜನಾಂಗದ ಶಾಂತಿಯ ತೋಟವನ್ನಾಗಿಯೇ ರಾಜ್ಯವನ್ನು ಮುನ್ನಡೆಸಿಕೊಂಡು ಬಂದಿದೆ ಎಂದು ಹೇಳಿದರು.

ಸಂವಿಧಾನಕ್ಕೆ ಗೌರವ ಕೊಡುವ ಹಾಗೂ ಅದನ್ನು ಅನುಷ್ಠಾನಗೊಳಿಸುವಲ್ಲಿ ಕಾಂಗ್ರೆಸ್‌ ಪಕ್ಷದ ಆಡಳಿತ ಎಂದೂ ಸಹ ಹಿಂದೆ ಉಳಿದಿಲ್ಲ. ಬಡವರು ಶ್ರೀಮಂತರ ನಡುವಿನ ಅಂತರ ಕಡಿಮೆ ಮಾಡುವ ನಿಟ್ಟಿನಲ್ಲಿ ಹಲವಾರು ಜನಪರವಾದ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ ಎಂದರು.

ಒಂದು ದಶಕಕ್ಕೂ ಹೆಚ್ಚಿನ ಕಾಲ ಕೇಂದ್ರದಲ್ಲಿ ಮಂತ್ರಿಯಾಗಿ ಸೇವೆ ಮಾಡಿರುವ ಅನುಭವದ ಆಧಾರದ ಮೇಲೆ ರಾಜ್ಯದಲ್ಲೂ ಉತ್ತಮ ಆಡಳಿತ ನೀಡಬೇಕು ಎನ್ನುವ ದೃ‍ಷ್ಟಿಯಿಂದ ಹೈಕಮಾಂಡ್‌ ರಾಜ್ಯ ವಿಧಾನ ಸಭೆಗೆ ಸ್ಪರ್ಧಿಸುವಂತೆ ಸೂಚಿಸಿದೆ. ಇದರ ಮೇರೆಗೆ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ ಎಂದು ತಿಳಿಸಿದರು.

ಕಾಂಗ್ರೆಸ್‌ ಹಿರಿಯ ಮುಖಂಡ ಆರ್‌.ಜಿ.ವೆಂಕಟಾಚಲಯ್ಯ ಮಾತನಾಡಿ, ರಾಜಕಾರಣದಲ್ಲಿ ಆರ್‌.ಎಲ್‌.ಜಾಲಪ್ಪ ಅವರು ರಾಜ್ಯದಿಂದ ಕೇಂದ್ರದವರೆಗೂ ಮಂತ್ರಿಗಳಾಗಿ ಕೆಲಸ ಮಾಡಲು ಶಕ್ತಿ ತುಂಬುವಲ್ಲಿ ತೂಬಗೆರೆ ಹೋಬಳಿಯ ಮತದಾರರದ್ದು ದೊಡ್ಡ ಪಾಲು ಇದೆ. ಜಾಲಪ್ಪ ಅವರ ಗರಡಿಯಲ್ಲೇ ಬೆಳೆದು ಬಂದಿರುವ ಮುನಿಯಪ್ಪ ಅವರನ್ನು ರಾಜ್ಯ ವಿಧಾನ ಸಭೆಗೆ ಆಯ್ಕೆ ಮಾಡಿಕಳುಹಿಸುವ ಹೊಣೆಗಾರಿ ತೂಬಗೆರೆ ಹೋಬಳಿಯ ಮತದಾರರ ಮೇಲಿದೆ ಎಂದರು.

ಚುನಾವಣ ಪ್ರಚಾರ ಸಭೆಗಳಲ್ಲಿ ಜಾಲಪ್ಪ ಅವರ ಹಿರಿಯ ಪುತ್ರ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ, ತೂಬಗೆರೆ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಜಿ.ರಂಗಪ್ಪ, ಮಾಜಿ ಸಂಸತ್‌ ಸದಸ್ಯ ಸಿ.ನಾರಾಯಣಸ್ವಾಮಿ, ಮಾಜಿ ಶಾಸಕ ಮುನಿನರಸಿಂಹಯ್ಯ, ಮುಖಂಡರಾದ ಆರ್‌.ಚಿದಾನಂದ್‌, ಎಸ್‌.ಆರ್‌.ಮುನಿರಾಜು, ಶ್ರೀಧರ್‌, ರವಿಸಿದ್ದಪ್ಪ, ಮೇಳೆಕೋಟೆ ಆಂಜಿನಪ್ಪ ಇದ್ದರು.

ಭಿನ್ನಾಭಿಪ್ರಾಯ ಇಲ್ಲ: ಕ್ಷೇತ್ರದಲ್ಲಿನ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ಟಿಕೆಟ್‌ ಘೋಷಣೆಯಾದಾಗ ಎಲ್ಲಾ ಪಕ್ಷಗಳಲ್ಲೂ ಇರುವಂತೆ ಅಲ್ಪಸ್ವಲ್ಪ ಇದ್ದ ಅಸಮಧಾನಗಳನ್ನು ಸರಿಪಡಿಸಿಕೋಳ್ಳಲಾಗಿದೆ ಎಂದು ಕೆ.ಎಚ್‌.ಮುನಿಯಪ್ಪ ತಿಳಿಸಿದರು.

ಈ ಬಾರಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಬಾವುಟವನ್ನು ಮತ್ತೊಮ್ಮೆ ಹಾರಿಸಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕಿದೆ. ಪಕ್ಷದ ಕೆಲಸ ಮಾಡುವಾಗ ಯಾರೂ ಸಹ ಮೇಲು ಕೀಳು ಎನ್ನುವ ತಾರತಮ್ಯ ಇಲ್ಲದೆ ಯುವಕರು ಹಿರಿಯರೊಂದಿಗೆ ಬೇರೆತು ಗೆಲುವಿಗಾಗಿ ಕೆಲಸ ಮಾಡಬೇಕಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT