ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್‌ ಕ್ಷೇತ್ರ: ಹ್ಯಾಟ್ರಿಕ್‌ ಗೆಲುವು ತಡೆಯಲು ಬಿಜೆಪಿ ಪೈಪೋಟಿ

ಕಾಂಗ್ರೆಸ್‌ –ಬಿಜೆಪಿ ನಡುವೆ ನೇರ ಹಣಾಹಣಿ
Published 7 ಮೇ 2023, 21:30 IST
Last Updated 7 ಮೇ 2023, 21:30 IST
ಅಕ್ಷರ ಗಾತ್ರ

ಆನೇಕಲ್: ಬೆಂಗಳೂರು ನಗರದ ಸೆರಗಿನಲ್ಲಿರುವ ಆನೇಕಲ್‌ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಗೆದ್ದಿರುವ ಬಿ.ಶಿವಣ್ಣ ಈಗ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಬಿಜೆಪಿಯಿಂದ ಮೊದಲ ಬಾರಿಗೆ ಕಣ್ಣಕ್ಕಿಳಿದಿರುವ ಶ್ರೀನಿವಾಸ್ ಸಿ.ಹುಲ್ಲಹಳ್ಳಿ ಅವರು ಪ್ರಬಲ ಪೈಪೋಟಿ ನೀಡುತ್ತಿದ್ದು, ನೇರ ಹಣಾಹಣಿ ಏರ್ಪಟ್ಟಿದೆ.

ಹೆಬ್ಬಗೋಡಿ ನಗರಸಭೆ, ನಾಲ್ಕು ಪುರಸಭೆ ಮತ್ತು ಬಿಬಿಎಂಪಿ ವ್ಯಾಪ್ತಿಯ ಕೂಡ್ಲು ವಾರ್ಡ್‌ ಮತ್ತು 21 ಗ್ರಾಮ ಪಂಚಾಯಿತಿಗಳನ್ನು ಆನೇಕಲ್‌ ಮೀಸಲು ವಿಧಾನಸಭಾ ಕ್ಷೇತ್ರ (ಎಸ್‌ಸಿ) ಹೊಂದಿದೆ. ಎಲೆಕ್ಟ್ರಾನಿಕ್‌ಸಿಟಿ ಸೇರಿದಂತೆ ನಾಲ್ಕು ಕೈಗಾರಿಕ ಪ್ರದೇಶಗಳನ್ನು ಹೊಂದಿದೆ. ಪರಿಶಿಷ್ಟ ಜಾತಿ ಒಕ್ಕಲಿಗ, ರೆಡ್ಡಿ ಸಮುದಾಯಗಳ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಿ.ಶಿವಣ್ಣ ಎರಡು ಬಾರಿಯೂ ಬಿಜೆಪಿಯ ಎ.ನಾರಾಯಣಸ್ವಾಮಿ ವಿರುದ್ಧ ಗೆಲುವು ಸಾಧಿಸಿದ್ದಾರೆ. 2013ರಲ್ಲಿ 40 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದರೆ, ಎರಡನೇ ಬಾರಿ 2018ರಲ್ಲಿ 8 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು.

ಈ ಬಾರಿ ಬಿಜೆಪಿಯಿಂದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶ್ರೀನಿವಾಸ್‌.ಸಿ.ಹುಲ್ಲಹಳ್ಳಿ ಮೊದಲ ಬಾರಿಗೆ ಕಣಕ್ಕಿಳಿದ್ದಾರೆ. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ಎರಡೂ ಪಕ್ಷಗಳ ನಡುವೆ ನೇರ ಪೈಪೋಟಿ ಇದೆ.

ಜೆಡಿಎಸ್‌ ಅಭ್ಯರ್ಥಿ ಕೆ.ಪಿ.ರಾಜು ಮತ್ತು ಬಿಎಸ್‌ಪಿ ಅಭ್ಯರ್ಥಿ ಡಾ.ಚಿನ್ನಪ್ಪ ವೈ.ಚಿಕ್ಕಹಾಗಡೆ ಕೂಡ ಸ್ಪರ್ಧೆಯಲ್ಲಿದ್ದಾರೆ. ಸಂಘಟನೆ ಮತ್ತು ತಮ್ಮದೇ ಕಾರ್ಯತಂತ್ರ ಮೂಲಕ ಮತ ಸೆಳೆಯಲು ಶ್ರಮಿಸುತ್ತಿದ್ದಾರೆ.

ಎರಡು ಅವಧಿಗಳಲ್ಲಿ ಕಾಂಗ್ರೆಸ್‌ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳೇ ಕೈ ಹಿಡಿಯಲಿವೆ ಎಂಬ ವಿಶ್ವಾಸದಲ್ಲಿ ಬಿ.ಶಿವಣ್ಣ ಮತಯಾಚನೆ  ಮಾಡುತ್ತಿದ್ದಾರೆ. ಕ್ಷೇತ್ರದಾದ್ಯಂತ ಒಂದು ಸುತ್ತು ಪ್ರಚಾರ ಮುಗಿಸಿದ್ದು, ಕಾರ್ಯಕರ್ತರೊಂದಿಗೆ ಕಸಬಾ, ಅತ್ತಿಬೆಲೆ, ಸರ್ಜಾಪುರ ಹೋಬಳಿಗಳಲ್ಲಿ ಪ್ರತಿನಿತ್ಯ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಆನೇಕಲ್‌ ಕ್ಷೇತ್ರದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮತ್ತು ಸಂಸದ ಡಿ.ಕೆ.ಸುರೇಶ್‌ ಅವರ ಪ್ರಭಾವವಿದ್ದು, ಅವರೂ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ನೆರೆಯ ತಮಿಳುನಾಡಿನ ಥಳೀ ಶಾಸಕ ರಾಮಚಂದ್ರನ್‌ ಮತ್ತು ಹೊಸೂರು ಶಾಸಕ ವೈ.ಪ್ರಕಾಶ್‌  ನಿತ್ಯ ಆನೇಕಲ್‌ನ ವಿವಿಧ ಭಾಗಗಳಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ.

ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್‌.ಸಿ ಹುಲ್ಲಹಳ್ಳಿ ಅವರಿಗೆ ಬಿಜೆಪಿ ಕಾರ್ಯಕರ್ತರೇ ಶ್ರೀರಕ್ಷೆ. ಶಿವಣ್ಣ ಅವರ ಹ್ಯಾಟ್ರಿಕ್ ಗೆಲುವಿಗೆ ತಡೆಯೊಡ್ಡಲು ಕಾರ್ಯಕರ್ತರು ಹುರುಪಿನಿಂದ ಕೆಲಸ ಮಾಡುತ್ತಿದ್ದಾರೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲಿಯೂ ಮತಯಾಚನೆ, ಪ್ರಚಾರ ಸಭೆ ನಡೆಸುತ್ತಿದ್ದಾರೆ. 

ಆನೇಕಲ್‌ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿದ್ದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಮ್ಮದೇ ಪ್ರಭಾವ ಹೊಂದಿದ್ದಾರೆ. ಅವರು ಕೂಡ ಕಳೆದ ಎರಡು ದಿನಗಳಿಂದ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.  

ಬಿಜೆಪಿಯಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಸರ್ಜಾಪುರದ ಜಿ.ನಾಗರಾಜು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

ಜೆಡಿಎಸ್‌ ಅಭ್ಯರ್ಥಿ ಕೆ.ಪಿ.ರಾಜು ಕೂಡ ಬಿರುಸಿನಿಂದ ಪ್ರಚಾರ ನಡೆಸುತ್ತಿದ್ದು, ಗೆಲುವಿನ ದಡ ಸೇರಲು ಶ್ರಮಿಸುತ್ತಿದ್ದಾರೆ. ಪಂಚರತ್ನ ಯಾತ್ರೆ ಮೂಲಕ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಈಗಾಗಲೇ ಪ್ರಚಾರ ನಡೆಸಿದ್ದಾರೆ. ಎಚ್‌ಡಿಕೆ ಅವಧಿಯಲ್ಲಿ ರಾಜ್ಯದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟು ಜೆಡಿಎಸ್ ಅಭ್ಯರ್ಥಿ ಮತಯಾಚನೆ ಮಾಡುತ್ತಿದ್ದಾರೆ.

ಬಿಎಸ್‌ಪಿ ಅಭ್ಯರ್ಥಿ ಡಾ.ಚಿನ್ನಪ್ಪ ವೈ.ಚಿಕ್ಕಹಾಗಡೆ ಯುವ ಮತದಾರರು ಮತ್ತು ದಲಿತ, ಹಿಂದುಳಿದ ವರ್ಗಗಳನ್ನು ನೆಚ್ಚಿಕೊಂಡು ಪ್ರಚಾರ ನಡೆಸುತ್ತಿದ್ದಾರೆ. ತಾಲ್ಲೂಕಿನ ಎಲ್ಲ ಗ್ರಾಮಗಳನ್ನು ತಲುಪಿದ್ದಾರೆ. ಆಮ್ ಆದ್ಮಿ ಪಕ್ಷದಿಂದ ಎಂ.ಮುನೇಶ, ಕೆಆರ್‌ಎಸ್‌ ಪಕ್ಷದಿಂದ ನಿವೃತ್ತ ಯೋಧ ಅನ್ಬುರಾಜ್ ಕಣದಲ್ಲಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಬಿ.ಶಿವಣ್ಣ
ಕಾಂಗ್ರೆಸ್‌ ಅಭ್ಯರ್ಥಿ ಬಿ.ಶಿವಣ್ಣ
ಬಿಜೆಪಿ ಅಭ್ಯರ್ಥಿ ಸಿ.ಶ್ರೀನಿವಾಸ್‌ ಹುಲ್ಲಹಳ್ಳಿ
ಬಿಜೆಪಿ ಅಭ್ಯರ್ಥಿ ಸಿ.ಶ್ರೀನಿವಾಸ್‌ ಹುಲ್ಲಹಳ್ಳಿ
ಜೆಡಿಎಸ್‌ ಅಭ್ಯರ್ಥಿ ಕೆ.ಪಿ.ರಾಜು
ಜೆಡಿಎಸ್‌ ಅಭ್ಯರ್ಥಿ ಕೆ.ಪಿ.ರಾಜು
ಬಿಎಸ್‌ಪಿ ಅಭ್ಯರ್ಥಿ ಡಾ.ಚಿನ್ನಪ್ಪ ವೈ.ಚಿಕ್ಕಹಾಗಡೆ
ಬಿಎಸ್‌ಪಿ ಅಭ್ಯರ್ಥಿ ಡಾ.ಚಿನ್ನಪ್ಪ ವೈ.ಚಿಕ್ಕಹಾಗಡೆ
Anekal Voters Info 06.05.2023.pdf
Anekal Voters Info 06.05.2023.pdf

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT