ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಟ್ವಾಳ | ‘ಧರ್ಮಕಾರಣ’ದಲ್ಲಿ ಗೆಲುವು ಯಾರಿಗೆ?

ಬಂಟ್ವಾಳದಲ್ಲಿ ಕಾಂಗ್ರೆಸ್‌– ಬಿಜೆಪಿ ಮಧ್ಯೆ ಹಣಾಹಣಿ: 3ನೇ ಬಾರಿ ರಮಾನಾಥ ರೈ– ರಾಜೇಶ್ ನಾಯ್ಕ್‌ ಮುಖಾಮುಖಿ
Published 7 ಮೇ 2023, 6:51 IST
Last Updated 7 ಮೇ 2023, 6:51 IST
ಅಕ್ಷರ ಗಾತ್ರ

ಬಂಟ್ವಾಳ: ಕಲ್ಲಡ್ಕದ ಶಾಲೆಯೊಂದರ ಮಕ್ಕಳ ಬಿಸಿಯೂಟದ ವಿಚಾರ, ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಶರತ್‌ ಮಡಿವಾಳ ಹತ್ಯೆ ಪ್ರಕರಣ, ‘ಒಂದು ಧರ್ಮೀಯರ ಮತಗಳಿಂದಲೇ ಗೆದ್ದೆ’ ಎಂದು ನೀಡಿದ್ದ ಹೇಳಿಕೆ (ಅದನ್ನು ತಿರುಚಲಾಗಿದೆ ಎಂದು ಸ್ಪಷ್ಟಪಡಿಸಿದ್ದರೂ ಅಷ್ಟರಲ್ಲಿ ತಡವಾಗಿತ್ತು)... ಹೀಗೆ ಕೆಲವು ಸೂಕ್ಷ್ಮ ವಿಚಾರಗಳು ‘ವಿವಾದ’ದ ರೂಪ ಪಡೆದು ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮುತ್ಸದ್ದಿ ರಮಾನಾಥ ರೈ ಅವರು ಸೋಲುವಂತಾಗಿತ್ತು. ಇದರಿಂದ ಪಾಠ ಕಲಿತಿರುವ ರೈ ಅವರು, ಈ ಬಾರಿ ಅತ್ಯಂತ ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿದ್ದಾರೆ.

ಬಂಟ್ವಾಳದಲ್ಲಿ ಅಭಿವೃದ್ಧಿ, ಪ್ರಣಾಳಿಕೆ, ಗ್ಯಾರಂಟಿ ಮುಂತಾದವು ಗಳಿಗಿಂತ ಧರ್ಮದ ವಿಚಾರ ಮುನ್ನೆಲೆ ಯಲ್ಲಿದೆ. ರಾಜ್ಯದ ಕೂಮು ಸೂಕ್ಷ್ಮ ಪ್ರದೇಶಗಳಲ್ಲಿ ಒಂದು ಎನ್ನಿಸಿಕೊಡಿರುವ ‘ಕಲ್ಲಡ್ಕ’ ಇರುವುದು ಈ ಕ್ಷೇತ್ರದಲ್ಲೇ. ಕಳೆದ ಐದು ವರ್ಷಗಳಲ್ಲಿ ಇಲ್ಲಿ ಯಾವುದೇ ವಿವಾದ– ಗಲಭೆ ಆಗಿಲ್ಲ ಎಂಬುದನ್ನೇ ಮುಂದಿಟ್ಟುಕೊಂಡು ಬಿಜೆಪಿ ಪ್ರಚಾರ ಮಾಡುತ್ತಿದ್ದರೆ, ‘ಗದ್ದಲ ಎಬ್ಬಿಸುತ್ತಿದ್ದವರು ಅವರೇ. ತಾವೇ ಅಧಿಕಾರದಲ್ಲಿದ್ದಾಗ ಸುಮ್ಮನಿರುತ್ತಾರೆ, ಬೇರೆಯವರು ಬಂದಾಗ ಗಲಭೆ ಮಾಡುತ್ತಾರೆ’ ಎಂದು ಕಾಂಗ್ರೆಸ್‌ ಆರೋಪಿಸುತ್ತಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಮಧ್ಯೆ ನೇರಾನೇರ ಸ್ಪರ್ಧೆ ಇದೆ ಎಂಬುದನ್ನು ಮನವರಿಕೆ ಮಾಡಿಕೊಡಲು ಇವಿಷ್ಟು ವಿಚಾರಗಳು ಸಾಕು.

ಬಂಟ್ವಾಳದಲ್ಲಿ ಅಭಿವೃದ್ಧಿಯೇ ಆಗಿಲ್ಲ ಎಂದು ಹೇಳುವಂತಿಲ್ಲ. ಹಳ್ಳಿಗಳ ರಸ್ತೆಗಳು ಡಾಂಬರು, ಕಾಂಕ್ರೀಟ್‌ ಕಂಡಿವೆ. ಸರ್ಕಾರಿ ಯೋಜನೆಗಳು ಜನರನ್ನು ತಲುಪಿವೆ ಎಂಬುದು ನಿಜ. ಆದರೆ, ಬಂಟ್ವಾಳ ಪಟ್ಟಣದ ಕಿಷ್ಕಿಂದೆಯಂಥ ಸ್ಥಿತಿ, ರಾಷ್ಟ್ರೀಯ ಹೆದ್ದಾರಿ ಹಾಗೂ ಅವೈಜ್ಞಾನಿಕ ಮೇಲ್ಸೇತುವೆ ಅಧ್ವಾನಗಳಿಗೆ ಮುಕ್ತಿ ಸಿಕ್ಕಿಲ್ಲ. ಪೇಟೆಯ ರಸ್ತೆಯನ್ನು ಅಗಲಗೊಳಿಸುವ ವಿಚಾರ ಬಂದಾಗಲೆಲ್ಲ ರಸ್ತೆಯ ಒಂದು ಭಾಗದವರು ಕಾಂಗ್ರೆಸ್‌ ಶಾಸಕರ ಬಳಿಗೆ, ಇನ್ನೊಂದು ಭಾಗದವರು ಬಿಜೆಪಿ ಶಾಸಕರ ಬಳಿಗೆ ಹೋಗಿ ನಿಂತುಬಿಡುತ್ತಾರೆ. ರಸ್ತೆ ವಿಸ್ತರಣೆಯ ಯೋಜನೆ ರಾಜಕೀಯ ಮತ್ತು ಕೋಮು ಬಣ್ಣಗಳನ್ನು ಬಳಿದುಕೊಂಡು ಅಲ್ಲಿಗೇ ಮಲಗಿಬಿಡುತ್ತದೆ. ಎಲ್ಲ ಸೌಲಭ್ಯ ಹೊಂದಿರುವ ಬಸ್‌ ನಿಲ್ದಾಣ
ಪಟ್ಟಣದಲ್ಲಿ ಇದ್ದರೂ, ಮಳೆ– ಬಿಸಿಲಿನಲ್ಲಿ ರಸ್ತೆ ಬದಿಯಲ್ಲೇ ಬಸ್ಸಿಗೆ ಕಾಯುತ್ತಾ ನಿಲ್ಲುವ ಗೋಳು ಜನರಿಗೆ ತಪ್ಪಿಲ್ಲ. ಮೂರು ನದಿಗಳಿಂದ, ನಾಲ್ಕೈದು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಜಾರಿಯಾಗಿದ್ದರೂ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುವುದು ಅನಿವಾರ್ಯವಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ಆಗಬೇಕು, ಉದ್ಯೋಗ ಸೃಷ್ಟಿಗೆ ಅವಕಾಶಗಳಿದ್ದರೂ ಯೋಜನೆಗಳು ಜಾರಿಯಾಗುತ್ತಿಲ್ಲ... ಪಟ್ಟಿ ಮಾಡುತ್ತಾ ಹೋದರೆ ಇಂಥ ಇನ್ನೂ ಹತ್ತಾರು ಸಮಸ್ಯೆಗಳಿವೆ. ಆದರೆ, ಧರ್ಮದ ಅಜೆಂಡಾ ಮುಂದೆ ಅವೆಲ್ಲವೂ ಗೌಣವಾಗಿವೆ.

ಕಳೆದ ಬಾರಿ ರೈ ಅವರಿಗೆ ಎದುರಾಳಿಯಾಗಿ, ಗೆಲುವಿನ ನಗೆ ಬೀರಿದ್ದ ರಾಜೇಶ್‌ ನಾಯ್ಕ್‌ ಉಳಿಪಾಡಿ ಅವರೇ ಈ ಬಾರಿಯೂ ಬಿಜೆಪಿಯಿಂದ ಸ್ಪರ್ಧೆಯಲ್ಲಿದ್ದಾರೆ. ‘₹2500 ಕೋಟಿಗೂ ಹೆಚ್ಚು ಅನುದಾನ ತಂದು ಅಭಿವೃದ್ಧಿ ಕಾಮಗಾರಿ ನಡೆಸಿದ್ದೇನೆ’ ಎಂದು ಹೇಳಿದ್ದಾರೆ. ಅನೇಕ ಯೋಜನೆಗಳು ಜಾರಿಯಾಗಿವೆ. ವಿವಾದ, ಆರೋಪ, ಟೀಕೆಗಳಿಂದ ದೂರವಿದ್ದಾರೆ ಎಂಬುದು ಇವರ ಹೆಚ್ಚುಗಾರಿಕೆ. ‘ಸರಳವಾಗಿದ್ದಾರೆ ಸಜ್ಜನ ರಾಜಕಾರಣಿ’ ಎಂದು ಸ್ಥಳೀಯರು ಹೇಳುತ್ತಾರೆ. ಜೊತೆಗೇ ‘ರಮಾನಾಥ ರೈ ಅವರಂತೆ ಯಾವಾಗ ಬೇಕಾದರೂ ಜನಸಾಮಾನ್ಯರ ಕೈಗೆ ಸಿಗುವವರಲ್ಲ’ ಎಂಬುದನ್ನೂ ಸೇರಿಸುತ್ತಾರೆ. ಅಭಿವೃದ್ಧಿ ಕಾರ್ಯಗಳ ಜೊತೆಗೆ ಅನೇಕ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಕೈಜೋಡಿಸಿದ್ದಾರೆ. ಅನೇಕ ಸರ್ಕಾರಿ ಕಾರ್ಯಕ್ರಮಗಳನ್ನು ತಮ್ಮ ಕ್ಷೇತ್ರದಲ್ಲಿ ಆಯೋಜಿಸುವ ಮೂಲಕ ಪಕ್ಷದ ಹಿರಿಯರ ಮನಸ್ಸನ್ನೂ ಗೆದ್ದಿದ್ದಾರೆ.

ಇವೆಲ್ಲವನ್ನೂ ಮುಂದಿಟ್ಟುಕೊಂಡೇ ಮತ ಕೇಳುತ್ತಿರುವ ಬಿಜೆಪಿ, ಈ ಬಾರಿ ಕನಿಷ್ಠ 20 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ಹೇಳುತ್ತಿದೆ.

ಚುನಾವಣೆಯ ಸಂದರ್ಭದಲ್ಲಿ ಬಾಯಿ ತಪ್ಪಿ ಆಡಿದ ಮಾತು ಎಂಥ ಪರಿಣಾಮ ಬೀರಬಲ್ಲದು ಎಂಬ ಪಾಠವನ್ನು ಕಳೆದ ಚುನಾವಣೆಯಲ್ಲಿ ಕಲಿತಿರುವ ರಮಾನಾಥ ರೈ, ಈ ಬಾರಿ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಟ್ಟಿದ್ದಾರೆ. ಒಂದೇ ಸಮುದಾಯದವರು ಹೆಚ್ಚಾಗಿ ಜೊತೆಯಲ್ಲಿ ಕಾಣಿಸಿಕೊಳ್ಳದಂತೆ ಎಚ್ಚರ ವಹಿಸಿದ್ದಾರೆ. ಪ್ರಚಾರ ಸಭೆಯ ವೇದಿಕೆಗಳಲ್ಲಿ, ಕರಪತ್ರ ಮುಂತಾದ ಪ್ರಚಾರ ಸಾಮಗ್ರಿಗಳಲ್ಲಿ ಯಾರ್‍ಯಾರು ಇರಬೇಕು ಎಂಬುದನ್ನೂ ಬಲು ಎಚ್ಚರಿಕೆಯಿಂದ ನೋಡಿಕೊಂಡಿದ್ದಾರೆ. ಇತ್ತೀಚಿನ ಆರೇಳು ತಿಂಗಳುಗಳಿಂದ ಪಾಲ್ಗೊಂಡ ಎಲ್ಲಾ ಕಾರ್ಯಕ್ರಮಗಳಲ್ಲೂ, ‘ನನ್ನ ವಿರುದ್ಧ ಮಾಡಿದ ಅಪ ಪ್ರಚಾರದಿಂದ ನಾನು ಸೋಲುವಂತಾಯಿತು. ಈ ಬಾರಿ ಅವಕಾಶ ಕೊಡಿ‍’ ಎಂದು ಮನವಿ ಮಾಡಿದ್ದಾರೆ. ‘ಇದು ನನ್ನ ಕೊನೆಯ ಚುನಾವಣೆ’ ಎಂದೂ ರೈ ಹೇಳಿಕೊಂಡಿದ್ದಾರೆ. ಬಾಯಿ ತಪ್ಪಿಯೂ ಯಾವುದೇ ಧರ್ಮ, ಸಂಘಟನೆಯ ಬಗ್ಗೆ ಮಾತುಗಳನ್ನಾಡುತ್ತಿಲ್ಲ. ಆರು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿರುವ, ಒಂಬತ್ತನೇ ಬಾರಿ ಕಣಕ್ಕೆ ಇಳಿದಿರುವ ರೈ ಅವರಿಗೆ ಕ್ಷೇತ್ರದಲ್ಲಿ ಕೆಲವು ಸಾಂಪ್ರದಾಯಿಕ ಮತಗಳಿವೆ. ‘ರೈ ಅವರ ಜನಪರ ಕೆಲಸಗಳು, ಕ್ಷೇತ್ರದ ಜನರಿಗೆ ಅವರ ಮೇಲೆ ಇರುವ ನಂಬಿಕೆಗಳೇ ಅವರನ್ನು ಈ ಬಾರಿ ಗೆಲ್ಲಿಸಲಿದೆ’ ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್‌ ನಾಯಕರು ಇದ್ದಾರೆ. ‘ತೀವ್ರ ಸ್ಪರ್ಧೆ ಇದೆ. ಭಾರಿ ಅಂತರದ ಗೆಲುವು ಅಲ್ಲದಿರಬಹುದು, 10 ಸಾವಿರದಿಂದ 15 ಸಾವಿರ ಮತಗಳ ಅಂತರದಲ್ಲಿ ರೈಗಳು ಗೆದ್ದೇ ಗೆಲ್ಲುತ್ತಾರೆ’ ಎಂದು ಕಾಂಗ್ರೆಸ್‌ ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT