ಶನಿವಾರ, ಮೇ 28, 2022
26 °C
ಏಕತೆರೆಯ ಚಿತ್ರ ಮಂದಿರಗಳಲ್ಲಿ ವಿಶೇಷ ಸಿದ್ಧತೆ

ಆಸನಗಳ ನಡುವಿನ ಅಂತರ ಪಟ್ಟಿಗೆ ಗುಡ್‌ಬೈ; ಇಂದಿನಿಂದ ಚಿತ್ರಮಂದಿರ ಪೂರ್ಣ ಭರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೇಂದ್ರ ಸರ್ಕಾರವು ಫೆಬ್ರುವರಿ 1ರಿಂದ ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದ ಆಸನ ಭರ್ತಿಗೆ ಸಮ್ಮತಿ ನೀಡಿರುವುದರಿಂದ ಚಿತ್ರೋದ್ಯಮದಲ್ಲಿ ಹೊಸ ನಿರೀಕ್ಷೆಗಳು ಗರಿಗೆದರಿವೆ.

ಫಿಲ್ಮ್‌ ಫೆಡ್‌.ಆರ್ಗ್‌ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಸುಮಾರು 950ರಷ್ಟು ಏಕತೆರೆಯ ಚಿತ್ರ ಮಂದಿರಗಳಿವೆ. ಚಿತ್ರೋದ್ಯಮದ ಮೂಲಗಳ ಪ್ರಕಾರ ಅವುಗಳಲ್ಲಿ ಬಹಳಷ್ಟು ಇನ್ನೂ ತೆರೆದೇ ಇಲ್ಲ. ಸರ್ಕಾರದ ಹೊಸ ಆದೇಶದಿಂದಾಗಿ ಅವುಗಳು ಪುನರಾರಂಭಕ್ಕೆ ಸಿದ್ಧತೆ ನಡೆಸಿವೆ.

ಆಸನಗಳ ಮಧ್ಯೆ ಇದ್ದ ಪಟ್ಟಿಗಳನ್ನು ತೆರವು ಮಾಡಲಾಗುತ್ತಿದೆ. ಸ್ವಚ್ಛತೆ, ಸೋಂಕು ಮುಕ್ತಗೊಳಿಸುವ ಕಾರ್ಯಗಳು ಸಾಗಿವೆ ಎಂದು ಚಿತ್ರ ಮಂದಿರಗಳ ಮಾಲೀಕರೊಬ್ಬರು ಹೇಳಿದರು.

ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರ ಪ್ರದರ್ಶನಗಳು ಪೂರ್ಣ ಪ್ರಮಾಣದ ಬುಕ್ಕಿಂಗ್‌ ಮೇಲೆ ಆರಂಭವಾಗಿವೆ. ಕೆಲವು ಮಲ್ಟಿಪ್ಲೆಕ್ಸ್‌ಗಳಲ್ಲಿ ಸಂಜೆ ಹಾಗೂ ರಾತ್ರಿಯ ಪ್ರದರ್ಶನಗಳಿಗೆ ಪೂರ್ಣ ಆಸನಗಳು ಆನ್‌ಲೈನ್‌ ಮೂಲಕ ಬುಕ್ಕಿಂಗ್‌ ಆಗಿವೆ ಎಂದು ಬೆಂಗಳೂರಿನ ಗರುಡ ಮಾಲ್‌ನ ಮಲ್ಟಿಪ್ಲೆಕ್ಸ್‌ ಸಿಬ್ಬಂದಿಯೊಬ್ಬರು ಹೇಳಿದರು.

ಚಿತ್ರಮಂದಿರಗಳ ಮಾಲೀಕರೂ ಆಗಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಡಿ.ಆರ್‌. ಜೈರಾಜ್‌ ಪ್ರತಿಕ್ರಿಯಿಸಿ, ‘ಸರ್ಕಾರದ ಪ್ರಕಟಣೆ ಹೊಸ ಭರವಸೆ ಮೂಡಿಸಿದೆ. ಈಗಾಗಲೇ ಚಿತ್ರಗಳು ಬಿಡುಗಡೆ ಆಗುತ್ತಿದ್ದು ಉದ್ಯಮ ಚೇತರಿಸಿಕೊಳ್ಳುತ್ತಿರುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಕೋವಿಡ್‌ ನಿಯಂತ್ರಣ ಮಾರ್ಗಸೂಚಿಯಂತೆ ನಾವು(ಚಿತ್ರ ಮಂದಿರದ ಮಾಲೀಕರು) ಕಾರ್ಯನಿರ್ವಹಿಸಲೇಬೇಕು. ಅದಕ್ಕೆ ಬದ್ಧರಿದ್ದೇವೆ’ ಎಂದರು.

ಉತ್ತರ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳದ ಅಧ್ಯಕ್ಷ ಆರ್‌.ಆರ್‌. ಓದುಗೌಡರ್‌ ಪ್ರತಿಕ್ರಿಯಿಸಿ, ‘ಶೇ 100 ಆಸನ ಭರ್ತಿಗೆ ಸರ್ಕಾರ ಸಮ್ಮತಿ ಕೊಟ್ಟಿರುವುದು ಒಳ್ಳೆಯ ಬೆಳವಣಿಗೆ. ಕಷ್ಟವೋ ಸುಖವೋ ಪ್ರದರ್ಶನ ನಡೆಸಲೇಬೇಕು. ಕೋವಿಡ್‌ ಮಾರ್ಗ ಸೂಚಿಯನ್ನು ಪಾಲಿಸಲು ನಮಗೆ ಪ್ರತಿ ಚಿತ್ರಮಂದಿರಕ್ಕೆ ತಿಂಗಳಿಗೆ ₹ 30 ಸಾವಿರದಿಂದ ₹ 50 ಸಾವಿರದವರೆಗೆ ಹೆಚ್ಚುವರಿ ವೆಚ್ಚ ಬರುತ್ತದೆ. ಅದನ್ನು ಗಳಿಸಲು ಬೇರೆ ಯಾವುದೇ ದಾರಿ ಕಾಣುತ್ತಿಲ್ಲ. ದರ ಹೆಚ್ಚಿಸಲು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವೇ ಇಲ್ಲ. ಏಕೆಂದರೆ ಪ್ರೇಕ್ಷಕರು ಚಿತ್ರಮಂದಿರದತ್ತ ಬರುವುದೇ ಹೆಚ್ಚು. ಹಾಗಾಗಿ ನಾವೇ ಈ ವೆಚ್ಚವನ್ನು ಭರಿಸಬೇಕಿದೆ’ ಎಂದು ಹೇಳಿದರು.

ಸುರಕ್ಷತಾ ನಿಯಮಗಳೇನು?

ಪ್ರತಿ ಪ್ರೇಕ್ಷಕನ ತಾಪಮಾನ ತಪಾಸಣೆ, ಚಿತ್ರಮಂದಿರದಲ್ಲಿ ಸ್ವಚ್ಛತೆ, ಮಾಸ್ಕ್ ಧರಿಸುವುದು ಕಡ್ಡಾಯ, ಪ್ರತಿ ಪ್ರದರ್ಶನದ ಬಳಿಕ ಚಿತ್ರಮಂದಿರವನ್ನು ಸ್ಯಾನಿಟೈಸ್‌ ಮಾಡಬೇಕು ಇತ್ಯಾದಿ ನಿಯಮಗಳನ್ನು ವಿಧಿಸಲಾಗಿದೆ.

ಟಿಕೆಟ್‌ ಬುಕ್ಕಿಂಗ್‌ಗೆ ಆನ್‌ಲೈನ್‌ ವ್ಯವಸ್ಥೆಗೆ ಹೆಚ್ಚು ಆದ್ಯತೆ ಕೊಡಬೇಕು. ಕೌಂಟರ್‌ಗಳಲ್ಲಿ ದಟ್ಟಣೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ನಿಯಮ ಹೇಳಿದೆ.

ಕಂಟೈನ್‌ಮೆಂಟ್‌ ವಲಯಗಳ ಚಿತ್ರಮಂದಿರಗಳ ಮೇಲೆ ಈಗಿರುವ ನಿರ್ಬಂಧ ಮುಂದುವರಿಯಲಿದೆ. ಆದರೆ ಅಲ್ಲಿ ಪ್ರದರ್ಶನಕ್ಕೆ ಅನುಮತಿ ಕೊಡುವುದು ಅಥವಾ ಬಿಡುವುದು ರಾಜ್ಯ ಸರ್ಕಾರಗಳ ವಿವೇಚನೆಗೆ ಸೇರಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕನ್ನಡದಲ್ಲಿ ಶ್ಯಾಡೋ, ಮಂಗಳವಾರ ರಜಾದಿನ, ಇನ್ಸ್‌ಪೆಕ್ಟರ್‌ ವಿಕ್ರಂ ಚಿತ್ರಗಳು ಫೆ. 5ರಂದು ತೆರೆ ಕಾಣುತ್ತಿವೆ. ಬಹುತೇಕ ಹೊಸಬರ ಚಿತ್ರಗಳೇ ಇವೆ. ಪೂರ್ಣ ಪ್ರಮಾಣದ ಆಸನ ಭರ್ತಿಗೆ ಅವಕಾಶ ಸಿಕ್ಕಿರುವುದು ಈ ಚಿತ್ರ ತಂಡಗಳಲ್ಲಿ ಭರವಸೆ ಮೂಡಿಸಿದೆ.    

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು