ತಾರಾ ಮಕ್ಕಳ ಎಂಟ್ರಿ

ಮಂಗಳವಾರ, ಏಪ್ರಿಲ್ 23, 2019
29 °C

ತಾರಾ ಮಕ್ಕಳ ಎಂಟ್ರಿ

Published:
Updated:

ಶಾರೂಕ್‌ ಖಾನ್‌ ಮಗ ಆರ್ಯನ್‌ ಖಾನ್‌ ಬಾಲಿವುಡ್‌ ರಂಗಪ್ರವೇಶ ಖಚಿತವಾಗಿದೆ. ಕರಣ್‌ ಜೋಹರ್‌ ನಿರ್ದೇಶನದ ‘ತಖ್ತ್‌’ ಚಿತ್ರದಲ್ಲಿ ಆರ್ಯನ್‌ ಖಾನ್‌ ಸಹನಿರ್ದೇಶಕನಾಗಿ ಕೆಲಸ ಮಾಡಲಿದ್ದಾನಂತೆ. ಕೆಲವು ದಿನಗಳ ಹಿಂದೆ ಪತ್ರಕರ್ತರು ಶಾರೂಕ್‌ ಖಾನ್‌ನನ್ನು ‘ನಿಮ್ಮ ಮಗ ಅಥವಾ ಮಗಳು ಬಾಲಿವುಡ್‌ ಸಿನಿಮಾದಲ್ಲಿ ಶೀಘ್ರದಲ್ಲೇ ನಟಿಸುತ್ತಾರಂತೆ, ನಿಜವೆ?’ ಎಂದು ಪ್ರಶ್ನಿಸಿದ್ದರು. ‘ಇಲ್ಲ, ಈ ಸುದ್ದಿ ನಿಜವಲ್ಲ’ ಎಂದು ಶಾರೂಕ್‌ ಉತ್ತರಿಸಿದ್ದ.

ಆರ್ಯನ್‌ ಖಾನ್‌ಗೆ ನಟನೆಯಲ್ಲಿ ಆಸಕ್ತಿ ಇಲ್ಲವಂತೆ. ಆತನಿಗೆ ಚಿತ್ರ ನಿರ್ಮಾಣದಲ್ಲಿ ಆಸಕ್ತಿ. ಅದಕ್ಕೆಂದೇ ಅಮೆರಿಕದಲ್ಲಿ ಚಿತ್ರ ನಿರ್ಮಾಣದ ಕೋರ್ಸ್‌ ಮಾಡಿದ್ದಾನೆ. ಕರಣ್‌ ಜೋಹರ್‌ ಬಾಲಿವುಡ್‌ಗೆ ಹೊಸ ನಟ– ನಟಿಯರನ್ನು ಪರಿಚಯಿಸಿ ಸೈ ಎನ್ನಿಸಿಕೊಂಡಿರುವ ನಿರ್ದೇಶಕ. ಅಲಿಯಾ ಭಟ್‌, ವರುಣ್‌ ಧವನ್‌, ಜಾಹ್ನವಿ ಕಪೂರ್‌, ಇಶಾನ್‌ ಖಟ್ಟರ್‌, ಸಾರಾ ಅಲಿ ಖಾನ್‌ ಮುಂತಾದ ತಾರಾಮಕ್ಕಳನ್ನು ಬಾಲಿವುಡ್‌ನಲ್ಲಿ ನಟಿಸುವಂತೆ ಮಾಡಿದವನು ಕರಣ್‌. ಈಗ ತಾರಾಪುತ್ರನೊಬ್ಬನ ನಿರ್ದೇಶನದ ಎಂಟ್ರಿಗೂ ಆತನೇ ಮಾರ್ಗದರ್ಶಕ.

ಶಾರೂಕ್‌ ಖಾನ್‌ ಪುತ್ರಿ ಸುಹಾನಾ ನಟಿಯಾಗಿ ಬಾಲಿವುಡ್‌ಗೆ ಎಂಟ್ರಿ ಕೊಡುವ ಸಾಧ್ಯತೆ ಇದೆ. ಆದರೆ ಅದು ಶೀಘ್ರವೇ ಆಗುವ ಹಾಗಿಲ್ಲ. ‘ಆಕೆಗೆ ನಟನೆಯಲ್ಲಿ ಆಸಕ್ತಿ ಇದೆ. ಆದರೆ ಈಗಲೇ ನಟನೆಗೆ ಇಳಿಯುವುದಿಲ್ಲ. ಸ್ಕೂಲ್‌ ಮುಗೀತಲ್ಲ, 4–5 ವರ್ಷ ಕಾಲೇಜಿನಲ್ಲಿ ನಟನೆಯನ್ನು ಕಲಿಯಬೇಕು’ ಎನ್ನುವುದು ಶಾರೂಕ್‌ ಅನಿಸಿಕೆ. ಆಕೆ ಇತ್ತೀಚೆಗೆ ಷೇಕ್ಸ್‌ಪಿಯರ್‌ನ ನಾಟಕದಲ್ಲಿ ಮ್ಯಾಕ್‌ಬೆತ್‌ ಪಾತ್ರ ಮಾಡಿದ್ದು ಸುದ್ದಿಯಾಗಿತ್ತು.

ನೋಡೋದಕ್ಕೆ ಆರ್ಯನ್ ಅಪ್ಪನಂತೆಯೇ ಇದ್ದಾನೆ. ಇನ್‌ಸ್ಟಾಗ್ರಾಮ್‌ನಲ್ಲಿ ಈತನ ವಿಭಿನ್ನ ಭಾವಚಿತ್ರಗಳನ್ನು ಆಗಾಗ್ಗೆ ನೋಡಿದವರು, ‘ಹೀರೊ ಆಗಬಹುದಪ್ಪಾ...’ ಎಂದದ್ದಿದೆ. ಆದರೆ ಆತ ಮಾತ್ರ ನಿರ್ಮಾಣ, ನಿರ್ದೇಶನ ಎಂದು ಹೊರಟಿದ್ದಾನೆ. ಅದೆಲ್ಲ ಮುಗಿದ ಬಳಿಕ ಮುಂದೊಂದು ದಿನ ನಟನಾಗಿಯೂ ಬರಬಹುದೇನೋ!

ಅಮೀರನ ಮಗಳು
ಅಮೀರ್‌ಖಾನ್‌ ಮಕ್ಕಳೂ ಬೆಳೆದು ದೊಡ್ಡವರಾಗಿದ್ದಾರೆ. ಮಗಳು ಇರಾ ಮತ್ತು ಜುನೈದ್‌ ಕೂಡಾ ಬಾಲಿವುಡ್‌ ಮೇಲೆ ಒಂದು ಕಣ್ಣಿಟ್ಟಿದ್ದಾರೆ ಎನ್ನುವುದು ಸುದ್ದಿ. ಇಬ್ಬರೂ ಮೊದಲ ಪತ್ನಿ ರೀನಾಳ ಮಕ್ಕಳು. ‘ನಿಮ್ಮ ಮಗಳು ಸಿನಿಮಾಕ್ಕೆ ಬರುತ್ತಿದ್ದಾಳಾ?’ ಎಂದು ಪತ್ರಕರ್ತರು ಅಮೀರ್‌ಗೆ ಕೇಳಿದಾಗ, ‘ಬರಲೂಬಹುದು’ ಎಂದಿದ್ದ ಅಮೀರ್‌. ‘ಸಿನಿಮಾಕ್ಕೆ ಬರುತ್ತಾರೆ ಎಂದು ನಾನು ಹೇಳಲಾಗದು. ಮಗಳ ಮನಸ್ಸಿನಲ್ಲಿ ಏನಿದೆಯೋ ನನಗೆ ಗೊತ್ತಿಲ್ಲ. ಆದರೆ ಆಕೆಗೆ ಸಿನಿಮಾ ಮತ್ತು ಸಿನಿಮಾ ನಿರ್ಮಾಣದಲ್ಲಿ ಆಸಕ್ತಿ ಇದೆ ಎನ್ನುವುದಂತೂ ನಿಜ’ ಎನ್ನುವುದು ಅಮೀರ್‌ನ ಉತ್ತರ.

ಅಮೀರ್‌ ಮಗಳು 22ರ ತರುಣಿ. ಗುಳಿಕೆನ್ನೆಯ ಸುಂದರಿ. ಇನ್‌ಸ್ಟಾಗ್ರಾಮ್‌ ಫೋಟೊಗಳ ಮೂಲಕ ಹಲವು ಸಲ ಈಕೆ ಸುದ್ದಿಯಾಗಿದ್ದಾಳೆ. ಇತ್ತೀಚೆಗೆ ಮಿಶಾಲ್‌ ಎನ್ನುವ ಹುಡುಗನ ಜೊತೆಗೆ ಹೆಚ್ಚು ಸುತ್ತಾಟ ನಡೆಸಿದ ಚಿತ್ರಗಳಿವೆ. ಇಬ್ಬರ ಫೋಟೊ ಪೋಸ್‌ಗಳನ್ನು ನೋಡಿ ಈತ ಈಕೆಯ ಬಾಯ್‌ಫ್ರೆಂಡ್‌ ಇರಬಹುದೆ ಎನ್ನುವ ಅನುಮಾನವೂ ಮೂಡಿದೆ.

ಅಮೀರನ ಮಗ ಜುನೇದ್‌ ತಾನು ನಟ, ನಿರ್ದೇಶಕ ಆಗಬೇಕೆಂಬ ಆಸೆಯನ್ನು ಅಪ್ಪನ ಬಳಿ ಹೇಳಿಕೊಂಡಿದ್ದಾನಂತೆ. ‘ಇದೆಲ್ಲ ಅಷ್ಟು ಸುಲಭದ ಕೆಲಸವಲ್ಲ. ನಿನಗೆ ಸಾಮರ್ಥ್ಯ ಇದೆಯೆ ಎನ್ನುವುದನ್ನು ಮೊದಲು ಖಚಿತಪಡಿಸಿಕೊ. ಅಮೀರನ ಮಗ ಎಂದಾಕ್ಷಣ ಜನರ ನಿರೀಕ್ಷೆಗಳು ಏರುತ್ತವೆ. ಈ ಕ್ಷೇತ್ರದಲ್ಲಿ ಸೂಕ್ತ ಸಿದ್ಧತೆ ಇರಲೇಬೇಕು’ ಎಂದು ಅಮೀರ್‌ ಮಗನಿಗೆ ಬುದ್ಧಿವಾದ ಹೇಳಿದ್ದಾನಂತೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !