ಗುರುವಾರ , ಏಪ್ರಿಲ್ 22, 2021
24 °C

ಖ್ಯಾತ ಚಿತ್ರ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರಿಗೆ 70ರ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಂತರರಾಷ್ಟ್ರೀಯ ಖ್ಯಾತಿಯ ಚಿತ್ರ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರಿಗೆ ಮಂಗಳವಾರ 70 ವರ್ಷ ತುಂಬಲಿದೆ. ತಮ್ಮ ಸಿನಿಮಾಗಳಿಗೆ ಈವರೆಗೆ 14 ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಕಾಸರವಳ್ಳಿ, ಕನ್ನಡ ಸಿನಿಮಾ ಉದ್ಯಮಕ್ಕೆ ಅಂತರರಾಷ್ಟ್ರೀಯ ಮನ್ನಣೆಯನ್ನು ತಂದುಕೊಟ್ಟವರು. ಅವರ ಹಲವು ಸಿನಿಮಾಗಳು ದೇಶ, ವಿದೇಶಗಳ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದ್ದು ಪ್ರಶಸ್ತಿಗಳನ್ನೂ ಗಳಿಸಿವೆ.

9 ವರ್ಷಗಳ ಬಳಿಕ ಅವರು ನಿರ್ದೇಶಿಸುತ್ತಿರುವ ‘ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ’ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದೆ. ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು, ಅದರ ನಡುವೆಯೇ ಚಿತ್ರೀಕರಣ ಮುಗಿಸಿದ್ದಾರೆ. ‘ಈಗ ಹುಷಾರಾಗಿದ್ದೇನೆ. ಮುಂದಿನ ವಾರ ಬೈಪಾಸ್‌ ಸರ್ಜರಿ ನಡೆಯುವುದಿದೆ’ ಎಂದು ತಮ್ಮನ್ನು ಅಭಿನಂದಿಸಿದ ‘ಪ್ರಜಾವಾಣಿ’ಗೆ ಅವರು ತಿಳಿಸಿದರು.

ಕಾಸರವಳ್ಳಿ ನಿರ್ದೇಶನದ ಈ ಹೊಸ ಸಿನಿಮಾ ಖ್ಯಾತ ಕಥೆಗಾರ ಜಯಂತ ಕಾಯ್ಕಿಣಿ ಅವರ 1992ರಲ್ಲಿ ಪ್ರಕಟವಾದ ‘ಹಾಲಿನ ಮೀಸೆ’ ಸಣ್ಣಕಥೆಯನ್ನು ಆಧರಿಸಿದ್ದು, ಹಳ್ಳಿಯಿಂದ ನಗರಕ್ಕೆ ವಲಸೆ ಬಂದ ಬಾಲಕನೊಬ್ಬನ ತಲ್ಲಣವನ್ನು ಹೇಳುತ್ತದೆ. ಇದು ಅವರು ನಿರ್ದೇಶಿಸುತ್ತಿರುವ 14ನೇ ಸಿನಿಮಾ. ಅವರು ನಿರ್ದೇಶಿಸಿರುವ ‘ತಬರನ ಕಥೆ’, ‘ಘಟಶ್ರಾದ್ಧ’, ‘ತಾಯಿ ಸಾಹೇಬ’ ಮತ್ತು ‘ದ್ವೀಪ’ ಚಿತ್ರಗಳು ‘ಅತ್ಯುತ್ತಮ ಸಿನಿಮಾ’ ಎಂದು ರಾಷ್ಪ್ರ ಪ್ರಶಸ್ತಿ ಗೆದ್ದುಕೊಂಡಿವೆ.

ಕಾಸರವಳ್ಳಿಯವರ 70ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ‘ಸುಚಿತ್ರಾ ಫಿಲಂ ಸೊಸೈಟಿ’  ಮುಂದಿನ ಶನಿವಾರ ಮತ್ತು ಭಾನುವಾರ  ‘ಘಟಶ್ರಾದ್ಧ’ ಮತ್ತು ‘ಕೂರ್ಮಾವತಾರ’ ಸಿನಿಮಾಗಳ ಹಾಗೂ ವಿಧಾನಸೌಧ ಕುರಿತ ಸಾಕ್ಷ್ಯಚಿತ್ರದ ಪ್ರದರ್ಶನ ಏರ್ಪಡಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು