ಶನಿವಾರ, ಮಾರ್ಚ್ 25, 2023
28 °C
'ಪತಿ-ಪತ್ನಿಯರಾಗಿರಲ್ಲ, ಮಗನಿಗೆ ತಂದೆ-ತಾಯಿಯಾಗಿರುತ್ತೇವೆ'

ಬಾಲಿವುಡ್‌ ನಟ ಅಮೀರ್ ಖಾನ್‌-ಕಿರಣ್‌ ರಾವ್‌ ದಂಪತಿ ವಿಚ್ಛೇದನಕ್ಕೆ ನಿರ್ಧಾರ

ಪಿಟಿಐ Updated:

ಅಕ್ಷರ ಗಾತ್ರ : | |

DH Photo

ನವದೆಹಲಿ: ಬಾಲಿವುಡ್‌ ನಟ ಆಮಿರ್‌ ಖಾನ್‌ ಮತ್ತು ಕಿರಣ್‌ ರಾವ್‌ 15 ವರ್ಷಗಳ ದಾಂಪತ್ಯ ಜೀವನವನ್ನು ವಿಚ್ಛೇದನದ ಮೂಲಕ ಅಂತ್ಯಗೊಳಿಸಲು ನಿರ್ಧರಿಸಿದ್ದಾರೆ ಶನಿವಾರ ಬೆಳಗ್ಗೆ ಇಬ್ಬರೂ ಪರಸ್ಪರ ದೂರವಾಗುತ್ತಿರುವುದಾಗಿ ಘೋಷಿಸಿದ್ದಾರೆ.

2005ರಲ್ಲಿ ಆಮಿರ್‌ ಖಾನ್‌ ಮತ್ತು ಕಿರಣ್‌ ರಾವ್‌ ವಿವಾಹವಾಗಿದ್ದರು. 2011ರಲ್ಲಿ ಮಗ 'ಆಜಾದ್‌' ಜನಿಸಿದ್ದ. 'ಲಗಾನ್‌' ಸಿನಿಮಾದ ಚಿತ್ರೀಕರಣದ ವೇಳೆ ಆಮಿರ್‌ ಖಾನ್‌ ಅವರು ಸಹ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್‌ ರಾವ್‌ ಅವರನ್ನು ಭೇಟಿಯಾಗಿದ್ದರು.

'ಕಳೆದ ಸುಂದರವಾದ 15 ವರ್ಷಗಳನ್ನು ನಾವಿಬ್ಬರು ಜೊತೆಯಾಗಿ ಕಳೆದಿದ್ದೇವೆ. ಜೀವನದ ಅನುಭಗಳು, ಸುಖ-ದುಃಖ, ಸಂತೋಷಗಳನ್ನು ಹಂಚಿಕೊಂಡಿದ್ದೇವೆ. ನಮ್ಮಿಬ್ಬರ ಸಂಬಂಧವು ಬೆಳೆದಿದ್ದೇ ಪರಸ್ಪರ ನಂಬಿಕೆ ಮತ್ತು ಪ್ರೀತಿಯಿಂದ. ಇದೀಗ ಇಬ್ಬರೂ ಹೊಸ ಜೀವನವನ್ನು ಆರಂಭಿಸಲು ನಿರ್ಧರಿಸಿದ್ದೇವೆ. ಪತಿ-ಪತ್ನಿಯಾಗಿ ಉಳಿಯದೆ, ಮಗ ಆಜಾದ್‌ನ ತಂದೆ-ತಾಯಿಯಾಗಷ್ಟೇ ಉಳಿಯಲಿದ್ದೇವೆ. ಸ್ವಲ್ಪ ದಿನಗಳ ಹಿಂದೆಯೇ ಪರಸ್ಪರ ದೂರವಾಗುವ ಬಗ್ಗೆ ಆಲೋಚನೆ ಮಾಡಿದ್ದೆವು. ಇದೀಗ ದೂರವಾಗಲು ಸಕಾಲವೆಂದೆನಿಸಿತು. ನಾವಿಬ್ಬರೂ ಮುಂದೆ ಕುಟುಂಬದ ಸದಸ್ಯರಾಗೇ ಇರಲಿದ್ದೇವೆ' ಎಂದು ಜಂಟಿ ಹೇಳಿಕೆಯಲ್ಲಿ ಆಮಿರ್‌ ಮತ್ತು ಕಿರಣ್‌ ರಾವ್‌ ತಿಳಿಸಿದ್ದಾರೆ.

'ಮಗ ಆಜಾದ್‌ನ ತಂದೆ-ತಾಯಿಯಾಗಿ ಮುಂದೆಯೂ ನಿಗಾ ವಹಿಸುತ್ತೇನೆ. ಆತನನ್ನು ಜೊತೆಯಾಗಿ ಬೆಳೆಸುತ್ತೇವೆ. ಇಬ್ಬರೂ ಪರಸ್ಪರ ಸಹಕಾರದೊಂದಿಗೆ ಸಿನಿಮಾ ಕ್ಷೇತ್ರದಲ್ಲೂ ಮುಂದುವರಿಯುತ್ತೇವೆ. ಪಾನಿ ಫೌಂಡೇಷನ್‌ ಹಾಗೂ ಮತ್ತಿತರ ಪ್ರಾಜೆಕ್ಟ್‌ಗಳಲ್ಲಿ ಜೊತೆಯಾಗಿ ಕೆಲಸ ಮಾಡುತ್ತೇವೆ. ನಮ್ಮನ್ನು ಪ್ರೀತಿಸಿ ಬೆಂಬಲಿಸಿದ ಕುಟುಂಬ ಸದಸ್ಯರಿಗೆ, ಹಿತೈಷಿಗಳಿಗೆ, ಸ್ನೇಹಿತರಿಗೆ ಧನ್ಯವಾದಗಳು' ಎಂದು ತಿಳಿಸಿದ್ದಾರೆ.

ಕಿರಣ್‌ ರಾವ್‌ ಅವರನ್ನು ವಿವಾಹವಾಗುವ ಮೊದಲು ಆಮಿರ್‌ ಖಾನ್‌ ರೀನಾ ದತ್ತಾರನ್ನು ಮದುವೆಯಾಗಿದ್ದರು. ಆಮಿರ್‌-ರೀನಾ ದಂಪತಿಗೆ ಮಗಳು ಐರಾ ಖಾನ್‌ ಮತ್ತು ಮಗ ಜುನೈದ್‌ ಇದ್ದಾರೆ. ಐರಾ ಸಂಗೀತದ ವಿದ್ಯಾರ್ಥಿನಿ. ಜುನೈದ್‌ ತಂದೆಯ ಜೊತೆ ಸಿನಿಮಾ ನಿರ್ಮಾಣದಲ್ಲಿ ಸಹಕರಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು