ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಚ್ಚ ಸುದೀಪ್ ಅಭಿನಯದ 'ದಿ ವಿಲನ್' ಟೀಸರ್ ಬಿಡುಗಡೆ

Last Updated 30 ಜೂನ್ 2018, 15:25 IST
ಅಕ್ಷರ ಗಾತ್ರ

ಉಗುಳುವ ಬೆಂಕಿಕಿಡಿಗಳು, ಎದುರಿನವರು ಸ್ಪಷ್ಟವಾಗಿ ಕಾಣದಷ್ಟು ಹೊಗೆ, ಸುರಂಗದಂಥ ಜಾಗವದು.

‘ಶ್... ಸೌಂಡ್ ಮಾಡ್ಬೇಡ’. ಒಬ್ಬನಿಗೆ ಎತ್ತಿದ ಕಾಲನ್ನು ಕೆಳಗಿಳಿಸಬೇಡ ಎಂದು ಬುದ್ದಿವಾದ ಹೇಳುತ್ತಾನೆ ಮತ್ತೊಬ್ಬ. ಅಷ್ಟರಲ್ಲಿಯೇ ಮತ್ತೊಬ್ಬ ಮಚ್ಚೆಳೆದುಬಿಡುತ್ತಾನೆ. ಮೊದಲನೆಯವನಿಗೆ ಎಚ್ಚರಿಸಿದವ ಹಣೆ ಹಣೆ ಚಚ್ಚಿಕೊಳ್ಳುತ್ತ ‘ಅಯ್ಯೋ ಅಯ್ಯೋ ಮಚ್ಚೆಳ್ದೇ ಬಿಟ್ಯಲ್ಲೋ... ಎಲ್ಲೇ ಮಚ್ಚು ಎಳೆದರೂ ಆ ಸೌಂಡ್ ಕೇಳ್ಸೋದು ಒಬ್ನಿಗೆ... ಅಲ್ನೋಡು ಬಂದೇ ಬಿಟ್ಟ’ ಎನ್ನುತ್ತಾನೆ.

ಮಸುಕಿನ ಮರೆಯಿಂದ ರಪ್‌ನೆ ಬಂದು ನೆಲಕ್ಕಪ್ಪಳಿಸುತ್ತದೆ ದೇಹವೊಂದು. ಅದರ ಹಿಂದೆಯೇ ರಗಡ್ ಲುಕ್‌ನಲ್ಲಿ ಶಿವರಾಜ್‌ಕುಮಾರ್‌. ‘ನಾನು ಸೈಲೆಂಟಾಗಿದ್ರೆ ರಾಮ. ವೈಲೆಂಟ್‌ ಆದ್ನೋ... ರಾವಣ..!!’ ಎಂದು ಆರ್ಭಟಿಸಿದ ಗತ್ತಿಗೆ ಅವರ ಮುಖದಲ್ಲಿ ಹತ್ತು ತಲೆಗಳು ಮೂಡುತ್ತವೆ. ಮುಖದ ಮುಂದೆ ಬಾವಲಿಗಳು ಹಾರಾಡುತ್ತವೆ.

ಟೀಸರ್ ಮುಗಿದ ಮರುಕ್ಷಣವೇ ಚಿತ್ರಮಂದಿರದೊಳಗೆ ‘ಒನ್ಸ್‌ಮೋರ್... ಒನ್ಸ್‌ಮೋರ್..’ ಕೂಗು...

ಅವರ ಕೂಗಿಗೆ ಪ್ರತಿಕ್ರಿಯೆಯಾಗಿ ಬಂದಿದ್ದು ಅದೇ ಚಿತ್ರದ ಮತ್ತೊಂದು ಟೀಸರ್. ಅದರಲ್ಲಿ ಸುದೀಪ್ ಗಡಸು ಧ್ವನಿ.

ಬೆಂಗಳೂರಿನ ಜಿ.ಟಿ. ಮಾಲ್‌ನಲ್ಲಿ ಗುರುವಾರ ರಾತ್ರಿ ಅಕ್ಷರಶಃ ಹಬ್ಬದ ವಾತಾವರಣವಿತ್ತು. ಸಿನಿಮಾಸ್‌ ಪ್ರವೇಶದ್ವಾರದಲ್ಲಿ ಕಿಕ್ಕಿರಿದ ಅಭಿಮಾನಿಗಳು. ಅವರನ್ನು ನಿಯಂತ್ರಿಸಲು ಹರಸಾಹಸಪಡುತ್ತಿದ್ದ ಪೊಲೀಸರು. ಸಾಮಾನ್ಯವಾಗಿ ವಾರಾಂತ್ಯಗಳಲ್ಲಷ್ಟೇ ಹೆಚ್ಚು ಜನ ಸೇರುವ ಜಿ.ಟಿ. ಮಾಲ್‌ನಲ್ಲಿ ಅಂದು ಗುರುವಾರವಾದರೂ ಕಿಕ್ಕಿರಿದು ಜನ ಸೇರಲು ಕಾರಣವಾಗಿದ್ದು ‘ದಿ ವಿಲನ್’ ಟೀಸರ್ ರಿಲೀಸ್ ಕಾರ್ಯಕ್ರಮ. ಕರ್ನಾಟಕದ ಮುಖ್ಯಮಂತ್ರಿ ಬಿಡುಗಡೆ ಮಾಡಲಿದ್ದಾರೆ ಎಂಬ ಸಂಗತಿಯೂ ಕಾರ್ಯಕ್ರಮದ ಕುರಿತು ಇನ್ನಷ್ಟು ಕುತೂಹಲ ಹುಟ್ಟಲು ಕಾರಣವಾಗಿತ್ತು.

‘ಕನ್ನಡ ಚಿತ್ರರಂಗದಲ್ಲಿ ಬೇರೆ ಯಾವುದೇ ಭಾಷೆಗೆ ಕಮ್ಮಿ ಇಲ್ಲದಂಥ ಸಿನಿಮಾಗಳು ಬರುತ್ತಿವೆ. ಇದು ಚಿತ್ರರಂಗದ ಬೆಳವಣಿಗೆಯನ್ನು ಸೂಚಿಸುತ್ತದೆ. ಅದರಲ್ಲಿಯೂ ಕನ್ನಡ ಚಿತ್ರರಂಗದ ಇಬ್ಬರು ಅತ್ಯುತ್ತಮ ಕಲಾವಿದರಾದ ಶಿವರಾಜ್‌ಕುಮಾರ್ ಮತ್ತು ಸುದೀಪ್ ಅವರನ್ನಿಟ್ಟುಕೊಂಡು ಮೈಲಿಗಲ್ಲಿನ ಚಿತ್ರ ಮಾಡುವಲ್ಲಿ ಪ್ರೇಮ್ ಶ್ರಮಪಟ್ಟಿದ್ದಾರೆ. ಅವರಿಗೆ ಒಳ್ಳೆಯದಾಗಲಿ’ ಎಂದು ಟೀಸರ್ ಬಿಡುಗಡೆ ಮಾಡಿ ಹಾರೈಸಿದರು ಎಚ್‌.ಡಿ. ಕುಮಾರಸ್ವಾಮಿ.ಟೀಸರ್ ಬಿಡುಗಡೆ ಕಾರ್ಯಕ್ರಮದ ಟಿಕೆಟ್‌ನಿಂದ ಬಂದ ಹಣವನ್ನು ಮುಖ್ಯಮಂತ್ರಿಗಳು, ಅನಾರೋಗ್ಯದಿಂದ ನಿರ್ದೇಶಕರಾದ ಎ.ಟಿ. ರಘು, ಬೂದಾಳ್ ಕೃಷ್ಣಮೂರ್ತಿ, ಆನಂದ ಪಿ. ರಾಜು ಅವರ ಚಿಕಿತ್ಸೆಗೆ ಸಹಾಯವಾಗಿ ನೀಡಿದರು.

‘ಜನರು ಸಿನಿಮಾ ನೋಡಿ ಆಶೀರ್ವದಿಸಿದರೆ ಅದೇ ನಮಗೆ ಭಾಗ್ಯ. ಇಷ್ಟವಾದರೆ ಹೊಗಳಿ, ಇಲ್ಲದಿದ್ದರೆ ಟೀಕಿಸಿ. ನಿಮಗೆ ಏನನಿಸುತ್ತದೆಯೋ ಹಾಗೆ ಮಾಡಿ’ ಎಂದರು ಶಿವಣ್ಣ. ‘ಪೈಲ್ವಾನ್’ ಚಿತ್ರದ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ಹೋಗಿದ್ದರಿಂದ ಸುದೀಪ್ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಟ್ವಿಟರ್ ಮೂಲಕವೇ ಖುಷಿಯನ್ನು ಹಂಚಿಕೊಂಡರು.

‘ನಮ್ಮ ಇಡೀ ತಂಡದ ಶ್ರಮ ಮತ್ತು ಸಹಕಾರದಿಂದ ಈ ಚಿತ್ರ ರೂಪುಗೊಳ್ಳಲು ಸಾಧ್ಯವಾಗಿದೆ’ ಎಂದರು ನಿರ್ದೇಶಕ ಪ್ರೇಮ್. ಅರ್ಜುನ್‌ ಜನ್ಯ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಸಿ.ಆರ್. ಮನೋಹರ್ ಹಣ ಹೂಡಿದ್ದಾರೆ. ವರಮಹಾಲಕ್ಷ್ಮೀ ಪೂಜೆಯ ದಿನ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯನ್ನು ತಂಡ ಹಾಕಿಕೊಂಡಿದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT