ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪ ಹೇಳಿದ ನಟನೆ ಗುಟ್ಟು

Last Updated 17 ಮೇ 2019, 4:18 IST
ಅಕ್ಷರ ಗಾತ್ರ

‘ದೊಡ್ಡ ಕ್ಯಾಮೆರಾ ನಿನ್ನ ಮುಂದಿದೆ. ಅಕ್ಕ‍ಪಕ್ಕದಲ್ಲಿ ನೂರಾರು ಮಂದಿ ನೆರೆದಿದ್ದಾರೆ. ಅವರ ದೃಷ್ಟಿ ನನ್ನ ಮೇಲೆ ನೆಟ್ಟಿದೆ ಎಂದುಕೊಂಡರೆ ಭಯವಾಗುತ್ತದೆ. ನಿನ್ನೊಳಗೆ ಭಯ ಹೊಕ್ಕಿದರೆ ನಟನೆ ಕಷ್ಟವಾಗುತ್ತದೆ. ನಟನ ಜಾಗೃತ ಮನಸ್ಸು ನೋವು ಅನುಭವಿಸುತ್ತದೆ. ಧೈರ್ಯದಿಂದ ಕ್ಯಾಮೆರಾ ಎದುರಿಸಿದರೆ ಅಭಿನಯ ಸುಲಭವಾಗುತ್ತದೆ’

–ಅಪ್ಪ ಅಂಬರೀಷ್‌ ತನ್ನ ಪುತ್ರ ಅಭಿಷೇಕ್‌ಗೆ ಹೇಳಿದ ನಟನೆಯ ಗುಟ್ಟು ಇದು. ಅಪ್ಪನ ಈ ಮಾತು ಪಾಲಿಸಿದ ಅಭಿಗೆ ನಟನೆಯು ಮಸೂರದೊಳಗಿನಿಂದ ಭಿನ್ನವಾಗಿ ಕಾಣಿಸಿತು. ಅಂಬರೀಷ್, ಸುಮಲತಾ ಅವರ ಜನಪ್ರಿಯತೆಯ ಭಾರ ಮತ್ತು ತನ್ನೊಳಗಿನ ನಟನೆಯ ತುಡಿತವನ್ನು ಅವರು ಸವಾಲಾಗಿ ಸ್ವೀಕರಿಸಿದ್ದಾರೆ.

ಅಪ್ಪ, ಅಮ್ಮನನ್ನು ನೋಡಿಯೇ ಹುಟ್ಟಿಕೊಂಡ ಅವರೊಳಗಿನ ನಟನೆಯ ವ್ಯಾಮೋಹ ‘ಅಮರ್‌’ ಚಿತ್ರದ ಮೂಲಕ ಅಭಿವ್ಯಕ್ತಿಗೊಳ್ಳುತ್ತಿದೆ. ಲವರ್‌ಬಾಯ್‌ ಆಗಿಯೇ ನೋಡುಗರ ಮನಸ್ಸಿನ ಕೋಟೆಗೆ ಲಗ್ಗೆ ಇಟ್ಟು, ಆ ನಂತರ ವಿಭಿನ್ನವಾದ ಪಾತ್ರಗಳಿಗೆ ಜೀವ ತುಂಬುವುದು ಅವರ ಇರಾದೆ.

ಅಂಬರೀಷ್‌ ಅವರನ್ನು ಕಂಡರೆ ಅಭಿಷೇಕ್‌ಗೆ ಭಯವಾಗುತ್ತಿತ್ತಂತೆ. ‘ತೆರೆಯ ಮೇಲೆ ಅಪ್ಪ ನಟಿಸಿದ ಪಾತ್ರಗಳನ್ನು ನೋಡಿ ಭಯಪಡುವ ಪ್ರಮೇಯವೇ ನನಗೆ ಇರುತ್ತಿರಲಿಲ್ಲ. ಏಕೆಂದರೆ ಅವರನ್ನು ಕಂಡರೆ ನನಗೆ ಭಯವಾಗುತ್ತಿತ್ತು’ ಎನ್ನುತ್ತಾರೆ.

ಚಿಕ್ಕವಯಸ್ಸಿನಿಂದಲೂ ಅವರು ತೆರೆಯ ಮೇಲೆ ಅಮ್ಮ ಸುಮಲತಾ ಅವರು ನಟಿಸಿದ ಚಿತ್ರಗಳನ್ನು ನೋಡಿಯೇ ಇಲ್ಲವಂತೆ. ‘ನನ್ನ ಅಮ್ಮ ಇನ್ನೊಬ್ಬರಿಗೆ ತಾಯಿಯಾಗಿ ನಟಿಸುವುದು ನನಗಿಷ್ಟವಿಲ್ಲ’ ಎನ್ನುವುದು ಅವರ ಮನದಾಳದ ಮಾತು.

‘ಅಮ್ಮ ತಂದೆಯ ಜೊತೆಗೆ ನಟಿಸಿರುವ ಚಿತ್ರಗಳನ್ನು ನೋಡುತ್ತಿರಲಿಲ್ಲ. ಅಮ್ಮ ನಾಯಕಿಯಿಂದ ತಾಯಿ, ಅಕ್ಕ, ಅಜ್ಜಿ ಪಾತ್ರಕ್ಕೆ ಹಿಂಬಡ್ತಿ ಪಡೆದರು. ಆ ಪಾತ್ರಗಳನ್ನೂ ನೋಡಲು ಆಗುತ್ತಿರಲಿಲ್ಲ. ಆದರೆ, ಅವರು ನನ್ನ ಸಿನಿಮಾದಲ್ಲಿ ನನಗೆ ಅಮ್ಮನಾಗಿ ನಟಿಸಿದರೆ ನಿಜವಾಗಿಯೂ ಖುಷಿಯಾಗುತ್ತದೆ. ಅವರೊಟ್ಟಿಗೆ ಸಿನಿಮಾದಲ್ಲಿ ನಟಿಸಬೇಕು ಎನ್ನುವುದು ನನ್ನ ಕನಸು. ಅಪ್ಪನೊಟ್ಟಿಗೆ ಸಿನಿಮಾ ಮಾಡುವ ಆಸೆಯಿತ್ತು. ಅದು ಈಡೇರಲಿಲ್ಲ’ ಎಂದು ನೆನಪಿನ ಆಳಕ್ಕೆ ಜಾರಿದರು.

* ‘ಅಮರ್‌’ ಚಿತ್ರದ ಕಥೆ ಎಂತಹದ್ದು?

ಇದೊಂದು ಲವ್‌ಸ್ಟೋರಿ. ಕಥೆ ಚೆನ್ನಾಗಿದ್ದರಿಂದ ಒಪ್ಪಿಕೊಂಡೆ. ಒಳ್ಳೆಯ ಲೊಕೇಶನ್‌ನಲ್ಲಿ ಶೂಟಿಂಗ್‌ ನಡೆಸಲಾಗಿದೆ. ಛಾಯಾಗ್ರಹಣವೂ ಚೆನ್ನಾಗಿದೆ. ಹಾಡುಗಳು ಚೆನ್ನಾಗಿ ಮೂಡಿಬಂದಿವೆ. ಅಂಬರೀಷ್‌ ಅವರಿಗೆ ಇಷ್ಟವಾದ ಕಥೆ ಇದು. ಲವ್‌ಸ್ಟೋರಿ ಮೂಲಕವೇ ನನ್ನನ್ನು ಸಿನಿಮಾ ಇಂಡಸ್ಟ್ರಿಗೆ ಪರಿಚಯಿಸಬೇಕೆಂಬುದು ಅವರ ಅವರ ಆಸೆಯಾಗಿತ್ತು. ಹಾಗಾಗಿ, ಈ ಕಥೆಯನ್ನು ಆಯ್ಕೆ ಮಾಡಲಾಯಿತು.

* ಚಿತ್ರರಂಗಕ್ಕೆ ಬರುವುದು ನಿಮ್ಮ ಆಸಕ್ತಿ ಆಗಿತ್ತಾ ಅಥವಾ ಅಪ್ಪ, ಅಮ್ಮನ ಪ್ರಭಾವವೋ?

ನಾನು ಬಣ್ಣದಲೋಕಕ್ಕೆ ಬರುವುದು ಇಡೀ ಕುಟುಂಬದ ನಿರ್ಧಾರ. ಅವರ ಪ್ರಭಾವ ಇಲ್ಲದೆ ಇದ್ದರೆ ಯಾವುದೂ ಸಾಧ್ಯವಿಲ್ಲ. ನನಗೂ ನಟನೆ ಮೇಲೆ ಒಲವು ಇತ್ತು. ಅಭಿನಯದ ಬಗ್ಗೆ ಆಸಕ್ತಿ ಇಲ್ಲದಿದ್ದರೆ ಕ್ಯಾಮೆರಾ ಎದುರಿನ ನಟನಾ ಪಯಣ ಕ‌ಷ್ಟ.

* ಅಪ್ಪ, ಅಮ್ಮನ ಜನಪ್ರಿಯತೆ ನಿಮಗೆ ಭಾರ ಅನಿಸುವುದಿಲ್ಲವೇ?

ನನಗೆ ಭಾರ ಎನಿಸುತ್ತಿಲ್ಲ. ಆದರೆ, ಒಂದು ನಿರೀಕ್ಷೆ ಇರುವುದಂತೂ ನಿಜ. ನಾನು ಚೆನ್ನಾಗಿ ನಟಿಸಿದರಷ್ಟೇ ಜನರ ಆಶೀರ್ವಾದ ಸಿಗುತ್ತದೆ. ಪ್ರಸ್ತುತ ಹೊಸಬರು ಸಾಕಷ್ಟು ಸಂಖ್ಯೆಯಲ್ಲಿ ಇಂಡಸ್ಟ್ರಿಗೆ ಬರುತ್ತಿದ್ದಾರೆ. ಅವರ ಸಂಕಷ್ಟ ನನಗೆ ಗೊತ್ತಿದೆ. ನಾನು ಕಲಾವಿದರ ಮಗನಾಗಿರುವುದರಿಂದ ಅಂತಹ ಕಷ್ಟ ನನಗಿಲ್ಲ. ಆದರೆ, ಜನರ ನಿರೀಕ್ಷೆಯನ್ನು ಹುಸಿಗೊಳಿಸಬಾರದು ಅಷ್ಟೇ.

* ‘ಅಮರ್‌’ ಚಿತ್ರದ ಪಾತ್ರಕ್ಕೆ ತಯಾರಿ ಹೇಗಿತ್ತು?

ಬಣ್ಣದಲೋಕದಲ್ಲಿ ಕಲಿಯುವುದು ಸಾಕಷ್ಟಿದೆ. ತೆರೆಯ ಮೇಲೆ ನಟಿಸುವುದು ಹೇಗೆಂದು ಕಲಿಯುವುದು ಅತಿಮುಖ್ಯ. ನಿರ್ದೇಶಕರು ಹೇಳಿದಂತೆ ಎಲ್ಲವನ್ನೂ ಕಲಿತಿದ್ದೇನೆ. ಅವರು ತೃಪ್ತಿಯಾಗುವವರೆಗೂ ಕೆಲಸ ಮಾಡಿರುವ ಖುಷಿಯಿದೆ. ನನಗೆ ಬೈಕ್‌ ಓಡಿಸಲು ಬರುತ್ತಿಲಿಲ್ಲ. ಅದನ್ನು ಕಲಿತುಕೊಂಡೆ. ಬೈಕ್‌ ಓಡಿಸುತ್ತಲೇ ನಟನೆ ಹೇಗೆ ಮಾಡಬೇಕು ಎನ್ನುವುದನ್ನೂ ಅವರಿಂದ ಕಲಿತೆ.

* ಇನ್ನು ಮುಂದೆ ಯಾವ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಇಷ್ಟಪಡುತ್ತೀರಿ?

ಜನರಿಗೆ ಆ್ಯಕ್ಷನ್‌, ಲವ್‌ಸ್ಟೋರಿ ಅಥವಾ ದುರಂತ ಕಥೆಯೊಂದನ್ನು ತೋರಿಸುತ್ತೇವೆ ಎನ್ನುವುದು ಮುಖ್ಯವಲ್ಲ. ಜೀವನದ ಎಲ್ಲ ಜಂಜಡ ತೊರೆದು ಕಥೆಯಲ್ಲಿ ಮುಳುಗಿ ಹೋಗುವುದೇ ನನ್ನ ಪ್ರಕಾರ ಉತ್ತಮ ಸಿನಿಮಾ. ನೋಡುಗರು ಕೂಡ ಕಥೆಯ ಭಾಗವಾಗಬೇಕು. ಅಂತಹ ಕಥೆಗಳನ್ನು ತೆರೆಯ ಮೇಲೆ ತೋರಿಸಬೇಕೆಂಬುದು ನನ್ನಾಸೆ.

* ನಿರ್ದೇಶಕ ನಾಗಶೇಖರ್‌ ಅವರೊಟ್ಟಿಗೆ ಕೆಲಸ ಮಾಡಿದ ಅನುಭವ ಹೇಗಿತ್ತು?

ಅವರು ನಿಜವಾದ ಕಲಾವಿದ. ಎಷ್ಟೇ ಒತ್ತಡ ಇದ್ದರೂ ಅದನ್ನು ಕಲಾವಿದರ ಹೆಗಲಿಗೆ ವಿಸ್ತರಿಸುತ್ತಿರಲಿಲ್ಲ. ಅವರದು ಅಚ್ಚುಕಟ್ಟಾದ ಕೆಲಸ. ಸೆಟ್‌ನಲ್ಲಿ ನಿರ್ದೇಶನ ಮಾಡುತ್ತಲೇ ಕಾಮಿಡಿ ಮಾಡುತ್ತಿದ್ದರು. ಹಾಗಾಗಿ, ನಮ್ಮ ಕೆಲಸ ಸುಲಭವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT