ಬುಧವಾರ, ಆಗಸ್ಟ್ 17, 2022
23 °C

ಶ್ರೀದೇವಿ, ಮಾಧುರಿಯನ್ನಷ್ಟೇ ಅಲ್ಲ ಪ್ರೇಕ್ಷಕರನ್ನೂ ಕುಣಿಸಿದ್ದ ಸರೋಜ್ ಖಾನ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Saroj Khan

ಸರೋಜ್ ಖಾನ್ ಅವರನ್ನು ಹಿಂದಿ ಚಿತ್ರರಂಗ ಮಾಸ್ಟರ್‌ಜೀ ಎಂದು ಗೌರವಿಸುತ್ತದೆ. ಸಿನಿಮಾ ನೃತ್ಯ ಸಂಯೋಜನೆಯಲ್ಲಿ ಗಂಡಸರೇ ಅಧಿಪತ್ಯ ವಹಿಸಿದ್ದ ಕಾಲದಲ್ಲಿ ಸರೋಜ್ ಖಾನ್ ಎಂಬ ಈ ನೃತ್ಯ ಕಲಾವಿದೆ ಸಿನಿಮಾ ಡ್ಯಾನ್ಸ್ ಎಂದರೆ ನಾಯಕ ನಾಯಕಿಯರು ಮಾತ್ರವಲ್ಲ ಜನರೂ ಹುಚ್ಚೆದ್ದು ಕುಣಿಯಬೇಕು ಎಂಬ ಕ್ರೇಜ್ ಹುಟ್ಟಿಸಿದ್ದರು. 

1974ರಲ್ಲಿ 'ಗೀತಾ ಮೇರಾ ನಾಮ್' ಎಂಬ ಸಿನಿಮಾಗೆ ನೃತ್ಯ ಸಂಯೋಜಕಿಯಾಗಿದ್ದರೂ ಅವರಿಗೆ ಜನಪ್ರಿಯತೆ ತಂದುಕೊಟ್ಟಿದ್ದು 1987ರಲ್ಲಿ ತೆರೆಕಂಡ ಮಿಸ್ಟರ್ ಇಂಡಿಯಾದ 'ಹವಾ ಹವಾಯಿ' ಹಾಡಿನ ಹೆಜ್ಜೆಗಳು. ಅಂದರೆ ಬರೋಬ್ಬರಿ 13 ವರ್ಷಗಳ ನಂತರ ಅವರ ಪರಿಶ್ರಮ ಜನರ ಮನಸ್ಸು ಗೆದ್ದಿತ್ತು. ಲಕ್ಷ್ಮಿಕಾಂತ್ - ಪ್ಯಾರೇಲಾಲ್ ಸಂಗೀತ ನಿರ್ದೇಶನದಲ್ಲಿ ಕವಿತಾ ಕೃಷ್ಣಮೂರ್ತಿ ಹಾಡಿದ 'ಬಿಜಲೀ ಗಿರಾನೇ ಮೈ ಹೂಂ ಆಯೀ, ಕೆಹತೇ ಹೇ ಮುಜ್ ಕೋ ಹವಾ ಹವಾಯಿ' ಎಂಬ ಹಾಡಿಗೆ ಶ್ರೀದೇವಿಯ ಕುಣಿತದೊಂದಿಗೆ ಹಾಸ್ಯದ ಹಾವಭಾವ ಹೆಚ್ಚು ಗಮನ ಸೆಳೆದಿತ್ತು. ಇದರ ಹಿಂದಿರುವ ಮ್ಯಾಜಿಕ್ ಸರೋಜ್ ಖಾನ್ ಅವರದ್ದಾಗಿತ್ತು.

ನಗೀನಾ (1986)ದಲ್ಲಿ 'ಮೇ ತೇರಿ ದುಷ್ಮನ್, ದುಷ್ಮನ್ ತು ಮೇರಾ' ಎಂಬ ಹಾಡಿನಲ್ಲಿ ಶ್ರೀದೇವಿಯ ನಾಗಿನ್ ಡ್ಯಾನ್ಸ್, ಚಾಂದ್ನಿ ಸಿನಿಮಾದ ನೃತ್ಯಗಳ ಸಂಯೋಜನೆ ಸರೋಜ್ ಅವರದ್ದು. ಜಾನಪದ ನೃತ್ಯ ಮತ್ತು ಶಾಸ್ತ್ರೀಯ ನೃತ್ಯ ಹೆಜ್ಜೆಗಳನ್ನು ಬಳಸಿ ಸಿನಿಮಾ ನೃತ್ಯದ ಸಂಯೋಜನೆ ಮಾಡುವುದರಲ್ಲಿ ಸರೋಜ್ ಎತ್ತಿದ ಕೈ. ಶ್ರೀದೇವಿ ನಟನೆಯ ಸಿನಿಮಾಗಳಲ್ಲಿ ಸೀರೆ ಉಟ್ಟು ನರ್ತಿಸಿರುವುದನ್ನು ಗಮನಿಸಿದರೆ ಅಲ್ಲಿ ಸರೋಜ್ ಮ್ಯಾಜಿಕ್ ಕಾಣಿಸುತ್ತದೆ.

ಶ್ರೀದೇವಿಯ ನಂತರ ಸರೋಜ್ ಖಾನ್ ಅತೀ ಹೆಚ್ಚು ನೃತ್ಯ ಸಂಯೋಜನೆ ಮಾಡಿದ್ದು ಮಾಧುರಿ ದೀಕ್ಷಿತ್ ನಟನೆಯ ಸಿನಿಮಾಗಳಿಗೆ. ಮಾಧುರಿ ದೀಕ್ಷಿತ್ ಸಿನಿಮಾಗಳಲ್ಲಿ  ನೃತ್ಯಕ್ಕೆ ಹೆಚ್ಚು ಪ್ರಾಶಸ್ತ್ಯವಿರುತ್ತಿತ್ತು. ಲಾವಣಿ, ಶಾಸ್ತ್ರೀಯ ಅಥವಾ ಜನಪದ ನೃತ್ಯಗಳೇ ಆಗಿರಲಿ ಮಾಧುರಿ ದೀಕ್ಷಿತ್, ಆಕರ್ಷಕ ಹಾವಭಾವದ ನರ್ತನದ ಮೂಲಕ ಜನಮನ ಗೆಲ್ಲುತ್ತಿದ್ದರು. ಮಾಧುರಿಯ ನಟನೆಯೊಂದಿಗೆ ಆಕೆಯ ನೃತ್ಯವನ್ನು ಮತ್ತಷ್ಟು ಜನಪ್ರಿಯ ಮಾಡಿದವರು ಸರೋಜ್ ಖಾನ್. ಅದು 90ರ ದಶಕ. ತೇಜಾಬ್ ಸಿನಿಮಾದ 'ಏಕ್ ದೋ ತೀನ್' ಹಾಡಿನ ಕುಣಿತ ಜನರನ್ನು ಯಾವ ರೀತಿ ಮೋಡಿ ಮಾಡಿತ್ತು ಎಂದರೆ ಹಾಡು ಕೇಳುತ್ತಿದ್ದಂತೆ ಜನರು ಕುಣಿಯಲು ಆರಂಭಿಸುತ್ತಿದ್ದರು. ಅದೇ ರೀತಿ ಥಾಣೇದಾರ್ (1990) ಸಿನಿಮಾದ 'ಟಮ್ಮಾ ಟಮ್ಮಾ ಲೋಗೇ', ಬೇಟಾ (1992) ಸಿನಿಮಾದ 'ಧಖ್ ಧಖ್ ಕರ್‌ನೇ ಲಗಾ', ಕಳ್ನಾಯಕ್ (1993) ಸಿನಿಮಾದ 'ಚೋಲೀ ಕೇ ಪೀಚೇ ಕ್ಯಾ ಹೈ' ಹಾಡು ಅದೆಷ್ಟು ಜನಪ್ರಿಯ ಆಗಿತ್ತು ಎಂದರೆ 90ರ ದಶಕದ ನೆನಪುಗಳು ಎಂದು ಹೇಳುವಾಗ ಜನರು ಈ ಹಾಡುಗಳನ್ನು ಉಲ್ಲೇಖಿಸದೇ ಇರುವುದಿಲ್ಲ. ಮಾಧುರಿ ಮತ್ತು ಸರೋಜ್ ಖಾನ್ ಮತ್ತೆ ಒಂದಾಗಿ ಕೆಲಸ ಮಾಡಿದ್ದು ಗುಲಾಬ್ ಗ್ಯಾಂಗ್ (2014) ಮತ್ತು ಕಳೆದ ವರ್ಷ ತೆರೆಕಂಡ ಕಳಂಕ್ ಚಿತ್ರದಲ್ಲಾಗಿತ್ತು.

ಕುಣಿಯಲು ಬಾರದವರಿಗೆ ಕುಣಿಸುವುದು ಇಷ್ಟ
ಗೋವಿಂದ, ಅಕ್ಷಯ್ ಕುಮಾರ್ ಮೊದಲಾದವರಿಗೆ ಡ್ಯಾನ್ಸ್ ಗೊತ್ತಿದೆ. ಡ್ಯಾನ್ಸ್ ಗೊತ್ತಿರುವವರನ್ನು ಕುಣಿಸುವುದು ಅಷ್ಟೊಂದು ಖುಷಿ ಕೊಡುವುದಿಲ್ಲ. ಆದರೆ ಡ್ಯಾನ್ಸ್ ಗೊತ್ತಿಲ್ಲದವರಿಗೆ ಪ್ರತಿಯೊಂದನ್ನು ಹೇಳಿ ಕೊಟ್ಟು ಕುಣಿಸುವುದೆಂದರೆ ನನಗಿಷ್ಟ. ಉದಾಹರಣೆಗೆ ಸಂಜಯ್ ದತ್ ಅವರನ್ನು ಕುಣಿಸುವುದು ಚಾಲೆಂಜಿಂಗ್. ಅದು ನನಗೆ ಖುಷಿಕೊಡುತ್ತದೆ ಎಂದು ಸಂದರ್ಶನವೊಂದರಲ್ಲಿ ಸರೋಜ್ ಖಾನ್ ಹೇಳಿದ್ದರು.

ನೃತ್ಯ ಗುರುವನ್ನೇ ವರಿಸಿದ ಶಿಷ್ಯೆ
ನಿರ್ಮಲಾ ನಾಗ್‌ಪಾಲ್ ಎಂಬ ಬಾಲಕಿ ನೃತ್ಯ ಗುರು ಬಿ. ಸೋಹನ್‌ಲಾಲ್ ಅವರ ಶಿಷ್ಯೆಯಾಗಿದ್ದರು. ನಿರ್ಮಲಾ ಅವರ ಅಪ್ಪ ಕೃಷ್ಣಚಂದ್ ಸಂಧು ಸಿಂಗ್ , ಅಮ್ಮ- ನೋನಿ ಸಂಧು ಸಿಂಗ್. 1947ರಲ್ಲಿ ಭಾರತ-ಪಾಕಿಸ್ತಾನ ವಿಭಜನೆ ಆದಾಗ ಈ ಕುಟುಂಬ ಭಾರತಕ್ಕೆ ಬಂದಿದ್ದರು. 1948ರಲ್ಲಿ ಜನಿಸಿದ ನಿರ್ಮಲಾ ನಂತರ ಸರೋಜ್ ಖಾನ್ ಎಂಬ ಹೆಸರಿನಿಂದ ಖ್ಯಾತಿ ಪಡೆದರು. 13ನೇ ವರ್ಷದಲ್ಲಿ ಈಕೆ ತನಗಿಂತ 30 ವರ್ಷ ಹಿರಿಯರಾಗಿರುವ ಗುರು ಬಿ.ಸೋಹನ್‌ಲಾಲ್ ಅವರನ್ನು ಮದುವೆಯಾದರು. ಮದುವೆಗೆ ಮುನ್ನ ಇಸ್ಲಾಮ್ ಧರ್ಮ ಸ್ವೀಕರಿಸಿ ಸರೋಜ್ ಖಾನ್ ಆದೆ ಎಂದು ಈಕೆಯೇ ಟಿವಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಸೋಹನ್‌ಲಾಲ್‌ಗೆ ಆಗ 41 ವರ್ಷ, ಮದುವೆ ಆಗಿ ನಾಲ್ಕು ಮಕ್ಕಳಿದ್ದರು. ಎರಡನೇ ಪತ್ನಿಯಾದ ಸರೋಜ್ 14ನೇ ವಯಸ್ಸಿನಲ್ಲಿ ತಾಯಿಯಾಗಿದ್ದು ಈಕೆಯ ಮಗ ಹಮೀದ್ ಖಾನ್. ಇವರೂ ನೃತ್ಯ ಸಂಯೋಜಕರಾಗಿದ್ದು ರಾಜು ಖಾನ್ ಎಂದೇ ಖ್ಯಾತರಾಗಿದ್ದಾರೆ. 1965ರಲ್ಲಿ ಸೋಹನ್‌ಲಾಲ್ ಜತೆಗಿನ ವಿವಾಹ ಮುರಿದು ಬಿದ್ದಿದ್ದರೂ ಅವರ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಸೋಹನ್‌ಲಾಲ್‌ಗೆ ಹೃದಯಾಘಾತ ಸಂಭವಿಸಿದ ನಂತರ ಇವರಿಬ್ಬರೂ ಮತ್ತೆ ಒಂದಾದರು. ಈ ಸಂಬಂಧದಲ್ಲಿ ಮಗಳು ಹೀನಾ ಖಾನ್ ಜನಿಸಿದಳು. ಇಬ್ಬರು ಮಕ್ಕಳನ್ನು ತೊರೆದು ಸೋಹನ್‌ಲಾಲ್ ಮದ್ರಾಸ್‌ಗೆ ಹೋಗಿ ಬಿಟ್ಟರು. ಇದಾದನಂತರ ಸರೋಜ ಸರ್ದಾರ್ ರೋಶನ್ ಖಾನ್ ಅವರನ್ನು ಮದುವೆಯಾಗಿ ಅದರಲ್ಲಿ ಹುಟ್ಟಿದ ಮಗಳೇ ಸುಖೈನಾ ಖಾನ್. ಈಕೆ ದುಬೈನಲ್ಲಿ ನೃತ್ಯ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾರೆ.

ಹೊಸಬರು ಬಂದಾಗ ಕುಸಿದ ಬೇಡಿಕೆ
90 ದಶಕದಲ್ಲಿ ಸರೋಜ್ ಖಾನ್ ಖ್ಯಾತಿಯ ಉತ್ತುಂಗದಲ್ಲಿದ್ದಾಗಲೇ ಯುವ ನೃತ್ಯ ಸಂಯೋಜಕರಾದ ಫರ್ಹಾ ಖಾನ್ ಮತ್ತು ಶೈಮಾಕ್ ಧಾವರ್ ಮುನ್ನೆಲೆಗೆ ಬಂದರು. ಹೊಸ ನೃತ್ಯ ಸಂಯೋಜಕರ ಹೆಜ್ಜೆಗಳಿಂದ 'ದಿಲ್ ತೋ ಪಾಗಲ್ ಹೈ', 'ಜೋ ಜೀತಾ ವಹೀ ಸಿಖಂದರ್' ಸಿನಿಮಾ ಹಾಡುಗಳು ಜನಪ್ರಿಯತೆ ಗಳಿಸಲು ಆರಂಭವಾಗುತ್ತಿದ್ದಂತೆ ಸರೋಜ್ ಖಾನ್ ಬೇಡಿಕೆ ಕುಸಿಯಿತು. ಮಾಧುರಿ, ಸಲ್ಮಾನ್ ನಟನೆಯ 'ಹಮ್ ಆಪ್‌ಕೇ ಹೈ ಕೌನ್' ಸಿನಿಮಾದ ನೃತ್ಯ ಸಂಯೋಜನೆಗೂ ರಾಜಶ್ರೀ ಪ್ರೊಡೆಕ್ಷನ್ ಕೂಡಾ ಸರೋಜ್ ಖಾನ್‌ರನ್ನು ಪರಿಗಣಿಸಲಿಲ್ಲ.

ಶಾರುಖ್, ಐಶ್ವರ್ಯಾ, ಕರೀನಾ, ಕಂಗನಾಳನ್ನೂ ಕುಣಿಸಿದ್ದರು 

ಶಾರುಖ್ ಖಾನ್‌ ನಟನೆಯ 'ಡರ್', 'ಅಂಜಾಮ್', 'ದಿಲ್‌ವಾಲೇ ದುಲ್ಹನಿಯಾ ಲೇಜಾಯೆಂಗೇ', 'ವೀರ್ ಝರಾ' ಸಿನಿಮಾಗಳ ನೃತ್ಯ ಸಂಯೋಜನೆಯನ್ನು ಮಾಡಿದ್ದು ಸರೋಜ್ ಖಾನ್. ಐಶ್ವರ್ಯಾ ರೈ ನಟನೆಯ 'ತಾಲ್' ಸಿನಿಮಾದಲ್ಲಿ 'ತಾಲ್ ಸೇ ತಾಲ್ ಮಿಲಾ', ದೇವದಾಸ್ ಚಿತ್ರದ 'ಡೋಲರೇ'  ಹಾಡು, ಕರೀನಾ ನಟನೆಯ 'ಜಬ್ ವೀ ಮೆಟ್' ಚಿತ್ರದ 'ಏ ಇಷ್ಕ್ ಹಾಯೇ', ಕಂಗನಾ ರಣಾವತ್‌ ನಟಿಸಿದ 'ತನು ವೆಡ್ಸ್ ಮನು', 'ಮಣಿಕರ್ನಿಕಾ: ದಿ ಕ್ವೀನ್ ಆಫ್ ಝಾನ್ಸಿ' ಸಿನಿಮಾದಲ್ಲಿ 'ರಾಜಾಜೀ' ಹಾಡಿಗೆ ಸರೋಜ್ ಖಾನ್ ನೃತ್ಯ ಸಂಯೋಜನೆ ಮಾಡಿದ್ದರು.

ಅತಿ ವೇಗದ ಕುಣಿತ, ಮುಖಭಾವಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದ ನೃತ್ಯ ಶೈಲಿಗಳೇ ಸರೋಜ್ ಖಾನ್‌ರ ವಿಶೇಷತೆ. ಸದಾ ಕ್ರಿಯಾಶೀಲರಾಗಿದ್ದು ಕೊಂಡು ಹೊಸ ಜೋಷ್‌‌ನಿಂದ ಕೆಲಸ ಮಾಡುವ ಹುರುಪು, ಕಲಾರಾಧನೆ ಮತ್ತು ಹಾಡಿಗೆ ಜೀವ ತುಂಬುವಂಥಾ ಹಾವಭಾವಗಳೇ ಸರೋಜ್ ಖಾನ್ ಅವರನ್ನು ಬಾಲಿವುಡ್‌ನಲ್ಲಿ 'ಮಾಸ್ಟರ್‌' ಆಗಿ ಮಾಡಿದ್ದು. ಸಿನಿಮಾರಂಗದಲ್ಲಿ ತಮ್ಮದೇ ಛಾಪು ಮೂಡಿಸಿ ಮರೆಯಾದ ಸರೋಜ್ ಖಾನ್ ಎಂಬ ಲವಲವಿಕೆಯ ಕಲಾವಿದೆಗೆ ವಿದಾಯ.

ಇದನ್ನೂ ಓದಿ: ಬಾಲಿವುಡ್‌ನ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ನಿಧನ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು