ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಜ ಕಲಾವಿದನಿಗೆ ಸಾವಿಲ್ಲ: ‘ಶೋಕಿವಾಲ’ ಅಜಯ್‌ ರಾವ್‌ ಮಾತು

Last Updated 21 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಸಿನಿ ಬದುಕು ಹೇಗಿದೆ?

ಸದ್ಯ ಚೆನ್ನಾಗಿದೆ. ಸಾಕಷ್ಟು ಏರಿಳಿತ ಕಂಡಿದ್ದೇನೆ. ಪ್ರತಿಯೊಂದೂ ಕಲಿಕೆಯೇ ಆಗಿದೆ. ಗೆಲುವು, ಸೋಲು, ಸನ್ಮಾನ–ಅವಮಾನ ಎಲ್ಲವನ್ನೂ ನೋಡಿದ್ದೇನೆ. ಹಾಗಾಗಿ ಹೀಗೇ, ಇಂತಿಷ್ಟೇ ಎಂದು ಅಲ್ಲ. ಹಾಗಿದ್ದರೂ ಚಿತ್ರರಂಗ ನನ್ನನ್ನು ವಿಶ್ವಾಸದಿಂದ ಉಳಿಸಿಕೊಂಡಿದೆ. ನಿರ್ಮಾಪಕರು ನಂಬಿಕೆ ಇಟ್ಟು ಅವಕಾಶ ಕೊಡುತ್ತಿದ್ದಾರೆ. ಅಷ್ಟರಮಟ್ಟಿಗೆ ಈ ಚಿತ್ರರಂಗಕ್ಕೆ ನಾನು ಕೃತಜ್ಞನಾಗಿದ್ದೇನೆ.

ಯಾರು ಈ ‘ಶೋಕಿವಾಲ’?

ಎಲ್ಲರೂ ಅವರವರ ಬದುಕಿನ ಒಂದು ವಯಸ್ಸಿನಲ್ಲಿ ‘ಶೋಕಿವಾಲ’ರೇ ಆಗಿರುತ್ತಾರೆ. ತುಂಟತನ, ಚೇಷ್ಟೆ, ಯಾಮಾರಿಸುವುದು, ಹಾಸ್ಯಪ್ರವೃತ್ತಿ ಇವೆಲ್ಲವೂ ಆ ಶೋಕಿತನದಲ್ಲಿ ಇರುತ್ತದೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಶೋಕಿ ಮಾಡುವುದಕ್ಕೇನೂ ಕಡಿಮೆ ಇರುವುದಿಲ್ಲ. ಇನ್ನೊಬ್ಬರನ್ನು ಯಾಮಾರಿಸುವುದರಲ್ಲೂ ಒಂದು ತರಹದ ಸವಿ ಇರುತ್ತದೆ. ಅದು ಯಾರಿಗೂ ಹಾನಿ ಮಾಡದ ಯಾಮಾರಿಸುವಿಕೆ. ‘ಶೋಕಿವಾಲ’ನ ವಯಸ್ಸಿನಲ್ಲಿರುವವವರಿಗೆ ನಾವೂ ಹೀಗೆ ಇದ್ದೇವೆ ಅನಿಸುತ್ತದೆ. ಮಕ್ಕಳಿಗೆ ನಾವೂ ಹೀಗಾಗಬೇಕು ಅನಿಸುತ್ತದೆ. ಆ ವಯಸ್ಸು ಕಳೆದವರಿಗೆ ನಾವು ಹೀಗಿದ್ದೆವು ಅನಿಸುವ ಪಾತ್ರವಿದು.

ಏನು ಹೇಳಲು ಹೊರಟಿದ್ದೀರಿ?

ಯಾವುದೇ ಗಂಭೀರ ಬೋಧನೆಗೆ ಹೋಗಿಲ್ಲ. ಸಣ್ಣ ಸಣ್ಣ ಸಂಗತಿಗಳನ್ನು ಸೂಕ್ಷ್ಮವಾಗಿ ಹೇಳುತ್ತಲೇ ಹೋಗಿದ್ದೇವೆ. ಒಟ್ಟಾರೆ ತುಂಬು ಮನೋರಂಜನಾ ಪ್ರಧಾನ ಚಿತ್ರ. ಹುಡುಗಿಯರಿಗಂತೂ ತುಂಬಾ ಇಷ್ಟವಾಗುತ್ತದೆ. ಶೋಕಿವಾಲ ಎಷ್ಟು ಹುಡುಗಿಯರ ಹಿಂದೆ ಬೀಳುತ್ತಾನೋ ಲೆಕ್ಕವಿಲ್ಲ. ನೋಡಿದಾಗ ಚಿಲ್‌ ಅನಿಸುವ ಸಿನಿಮಾ.

ನಿಮ್ಮ ಮತ್ತು ಸಂಜನಾ ಆನಂದ್‌ ಅವರ ಕಾಂಬಿನೇಷನ್‌ ಹೇಗಿದೆ?

– ತುಂಬಾ ಚೆನ್ನಾಗಿದೆ. ತೆರೆಯ ಮೇಲೆ ಅವರು ತುಂಬಾ ಮುದ್ದಾಗಿ ಕಾಣಿಸುತ್ತಾರೆ. ‘ಶೋಕಿವಾಲ’ನಿಗೆ ತಕ್ಕ ಜೋಡಿಯಾಗಿ ಅವರು ಹೊಂದಾಣಿಕೆಯಿಂದ ತಮ್ಮ ಅಭಿನಯ ತೋರಿಸಿದ್ದಾರೆ. ಅವರ ಪಾತ್ರ ಖಂಡಿತವಾಗಿಯೂ ಎಲ್ಲರಿಗೂ ಇಷ್ಟವಾಗುತ್ತದೆ.

ಕೆಲವು ಚಿತ್ರಗಳ ಸಂದರ್ಭದಲ್ಲಿ ತಾವು ಚರ್ಚೆಗೆ ಒಳಗಾಗಿದ್ದಿರಿ? ನಿಮ್ಮ ನಿಲುವು ಏನು?

ನನ್ನ ನಿಲುವು ಸಿನಿಮಾ ಪರವಾದ ಪ್ರಾಮಾಣಿಕತೆ. ನಮ್ಮ ಕೆಲಸಗಳು ಸಿನಿಮಾ ಮೇಲೆ ಪರಿಣಾಮವಾಗುತ್ತದೆ ಎಂದರೆ ಅದನ್ನು ನೇರವಾಗಿ ನಿರ್ಮಾಪಕರಿಗೆ ಹೇಳಿಬಿಡುತ್ತೇನೆ. ಏಕೆಂದರೆ ನಾಳೆ ಸಿನಿಮಾ ಏನಾದರೂ ಹೆಚ್ಚು ಕಡಿಮೆ ಆದರೆ ‘ನನಗೆ ಮೊದಲೇ ಗೊತ್ತಿತ್ತು’ ಎಂದು ಹೇಳುವಂತಾಗಬಾರದು. ತಪ್ಪುಗಳಾಗುವ ಸಾಧ್ಯತೆಯನ್ನು ತಡೆಯುವುದೇ ನನ್ನ ನೇರವಂತಿಕೆಯ ಉದ್ದೇಶ. ಅಲ್ಲಿ ನಾನು ಕೆಟ್ಟವನೆನಿಸಿಕೊಂಡರೂ ಚಿಂತೆಯಿಲ್ಲ. ಅದನ್ನು ಯಾರೂ ‘ಅಹಂ’ ನೆಲೆಯಲ್ಲಿ ತೆಗೆದುಕೊಳ್ಳಬಾರದು. ಹಾಗೆಂದು ನಾನು ಹೇಳಿದ್ದೇ ಅಂತಿಮ ಅಲ್ಲ. ನಿರ್ಧಾರ ನಿರ್ಮಾಪಕರದ್ದು. ನಾವು ಚರ್ಚೆಗೆ ಒಳಗಾಗಲೇಬೇಕು. ಇಲ್ಲವಾದರೆ ನಮಗೆ ಜೀವಂತಿಕೆ ಇರಬೇಕಲ್ಲವಾ?

ಚರ್ಚೆಯ ಮೂಲಕ ನಾವು ತೆರೆದುಕೊಳ್ಳಬೇಕು. ನಿಜವಾದ ಕಲಾವಿದ ಯಾವತ್ತೂ ಸಾಯುವುದಿಲ್ಲ. ಅದನ್ನು ನಮ್ಮ ಉದ್ಯಮದ ಹಿರಿಯ ಕಲಾವಿದರು ತೋರಿಸಿಕೊಟ್ಟಿದ್ದಾರೆ. ಹಾಗಾಗಿ ಚರ್ಚೆ, ಮಾತು ಜೀವಂತವಾಗಿರಲೇಬೇಕು.

‘ಶೋಕಿವಾಲ’ನ ನಿರ್ದೇಶಕರು ಹೇಗಿದ್ದರು?

ತುಂಬಾ ಫೋಕಸ್ಡ್‌ ವ್ಯಕ್ತಿ. ಚಿತ್ರದ ಮೇಲೆ ಗಮನ ಕೇಂದ್ರೀಕರಿಸಿದರೆ ಮುಗಿಯಿತು. ಅದು ಪೂರ್ಣಗೊಳ್ಳುವವರೆಗೆ ಬೇರೆ ವಿಚಾರಗಳೇ ಅವರಲ್ಲಿಲ್ಲ. ಅವರೊಂದಿಗೆ ಕೆಲಸ ಮಾಡಿದ್ದು ಒಳ್ಳೆಯ ಅನುಭವ.

ನಿಮ್ಮ ನಿರ್ಮಾಣ ಸಂಸ್ಥೆಯ ಯೋಜನೆಗಳು?

ಶ್ರೀಕೃಷ್ಣ ಆರ್ಟ್ಸ್‌ ಆ್ಯಂಡ್‌ ಕ್ರಿಯೇಟರ್ಸ್‌ ಸಂಸ್ಥೆಯಿಂದ ಹೊಸ ಪ್ರಕಟಣೆ ಶೀಘ್ರವೇ ಹೊರಡಿಸುತ್ತೇವೆ. ಈಗ ಅವೆಲ್ಲವೂ ಮಾತುಕತೆಯ ಹಂತದಲ್ಲಿವೆ. ಒಳ್ಳೆಯ ಕಂಟೆಂಟನ್ನು ಸಿನಿ ಪ್ರೇಕ್ಷಕರಿಗೆ ಕೊಡುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT