ಭಾನುವಾರ, ಏಪ್ರಿಲ್ 5, 2020
19 °C

ಸುದೀಪ್‌ ವಿರುದ್ಧ ಕೆಟ್ಟ ಕಮೆಂಟ್‌: ದರ್ಶನ್‌ ಅಭಿಮಾನಿ ಕ್ಷಮೆಯಾಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದರ್ಶನ್‌ ಮತ್ತು ಸುದೀಪ್‌ ಕನ್ನಡ ಚಿತ್ರರಂಗದ ಸ್ಟಾರ್‌ನಟರು ಎಂಬುದರಲ್ಲಿ ಎರಡು ಮಾತಿಲ್ಲ. ಇಬ್ಬರಿಗೂ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಮತ್ತೊಂದೆಡೆ ಸಮಯ ಸಿಕ್ಕಿದಾಗಲೆಲ್ಲಾ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವಾಕ್ಸಮರಕ್ಕೂ ಇಳಿದು ಬಿಡುತ್ತಾರೆ. ಇದು ತಾರಕಕ್ಕೇರಿದಾಗ ಅಭಿಮಾನಿಗಳ ಪರವಾಗಿ ನಟರು ಬ್ಯಾಟಿಂಗ್‌ ಮಾಡಲು ಹಿಂಜರಿಯುವುದಿಲ್ಲ.

ಸುದೀಪ್‌ ನಟನೆಯ ‘ಪೈಲ್ವಾನ್‌’ ಚಿತ್ರದ ಬಿಡುಗಡೆ ವೇಳೆ ಈ ನಟರ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ಮಾತಿನ ಕಾದಾಟ ನಡೆದಿತ್ತು. ಮತ್ತೆ ಅಂತಹದ್ದೇ ಸಂಘರ್ಷಕ್ಕೆ ಸಾಮಾಜಿಕ ಜಾಲತಾಣ ವೇದಿಕೆಯಾಗಿದೆ. ಅದು ಆಗಿರುವುದು ಇಷ್ಟೇ. ಶಶಿ ಎಸ್‌.ಕೆ. ಎಂಬಾತ ಟ್ವಿಟರ್‌ನಲ್ಲಿ ಸುದೀಪ್‌ ವಿರುದ್ಧ ಕೆಟ್ಟದ್ದಾಗಿ ಕಮೆಂಟ್‌ ಹಾಕಿದ್ದ. ಇದು ಕಿಚ್ಚಿನ ಅಭಿಮಾನಿಗಳನ್ನು ಕೆರಳಿಸಿತ್ತು. 

ಈ ಕಮೆಂಟ್‌ ನೋಡಿದ ಸುದೀಪ್‌ ಕೂಡ ಗರಂ ಆಗಿದ್ದರು. ಅಷ್ಟಕ್ಕೆ ಅವರು ಸುಮ್ಮನಾಗಿರಲಿಲ್ಲ. ‘ಆತನನ್ನು ಹುಡುಕಿಕೊಡಿ; ನಾನು ಆತನೊಂದಿಗೆ ಮಾತನಾಡಬೇಕು’ ಎಂದು ಟ್ವೀಟ್‌ ಮಾಡಿದ್ದರು.

ಟ್ವಿಟರ್‌ನಲ್ಲಿ ಜಗಳ ತಾರಕಕ್ಕೇರುತ್ತಿದ್ದಂತೆ ದರ್ಶನ್‌ ಅಭಿಮಾನಿ ರಾಹುಲ್‌ ಎಂಬುವರು ಸುದೀಪ್‌ ಬಳಿ ಈ ಬಗ್ಗೆ ಕ್ಷಮೆ ಕೋರಿದ್ದಾರೆ. ‘ನಮ್ಮ ಅಭಿಮಾನಿ ತಪ್ಪು ಎಸಗಿದ್ದಾರೆ. ಇದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ. ನಿಮ್ಮ ಕೆಲಸದ ಮೇಲೆ ನಮಗೆ ಅಪಾರ ಗೌರವವಿದೆ. ನಾವೆಂದಿಗೂ ನಿಮ್ಮ ಮತ್ತು ಡಿ ಬಾಸ್ ಸ್ನೇಹವನ್ನು ಮರೆಯುವುದಿಲ್ಲ. ಮತ್ತೆ ನೀವಿಬ್ಬರೂ ಸ್ನೇಹಿತರಾಗಬೇಕು. ಇಂತಹ ಕೊಳಕು ಅಭಿಮಾನಿಗಳಿಂದ ನೀವು ಬೇಸರ ಆಗಿಲ್ಲ ಎಂದು ಭಾವಿಸುತ್ತೇನೆ’ ಎಂದು ಟ್ವೀಟರ್‌ನಲ್ಲಿ ಕ್ಷಮೆ ಕೋರಿದ್ದಾರೆ.

ಇದಕ್ಕೆ ಸುದೀಪ್, ‘ಇಂದು ಮತ್ತು ಎಂದೆಂದಿಗೂ ನಾನು ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು