‘ರಾಬರ್ಟ್’ ತೆಲುಗು ಹಾದಿ ಸುಗಮ: ಭಾರೀ ಮೊತ್ತಕ್ಕೆ ವಿತರಣೆ ಹಕ್ಕು ಮಾರಾಟ

ಬೆಂಗಳೂರು: ದರ್ಶನ್ ನಟನೆಯ ಬಹು ನಿರೀಕ್ಷೆಯ ‘ರಾಬರ್ಟ್’ ಚಿತ್ರ ಮಾ.11ರಂದೇ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಬಿಡುಗಡೆಯಾಗಲಿದ್ದು, ಚಟಲವಾಡ ಶ್ರೀನಿವಾಸ್ ರಾವ್ ಅವರ ಶ್ರೀವೆಂಕಟೇಶ್ವರ ಮೂವೀಸ್ ಸಂಸ್ಥೆಯು ವಿತರಣೆಯ ಹಕ್ಕು ಪಡೆದಿದೆ.
ಉಭಯ ರಾಜ್ಯಗಳ 400ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆಲುಗು ಅವತರಣಿಕೆಯು ಬಿಡುಗಡೆಯಾಗಲಿದೆ. ಚಿತ್ರತಂಡವು ಬುಧವಾರವಷ್ಟೇ ತೆಲುಗು ಟೀಸರ್ ಬಿಡುಗಡೆ ಮಾಡಿತ್ತು. ತರುಣ್ ಕಿಶೋರ್ ಸುಧೀರ್ ನಿರ್ದೇಶನದ ಈ ಚಿತ್ರದ ವಿತರಣೆಯ ಹಕ್ಕು ದಾಖಲೆ ಮೊತ್ತಕ್ಕೆ ಮಾರಾಟ ಆಗಿದೆ ಎನ್ನಲಾಗಿದೆ.
ಮಾರ್ಚ್ 11ರಂದು ತೆಲುಗಿನಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ಚಿತ್ರ ತಂಡ ಪ್ರಕಟಿಸಿತ್ತು. ಇದಕ್ಕೆ ಆಂಧ್ರಪ್ರದೇಶದಲ್ಲಿ ತೆಲುಗು ಚಿತ್ರರಂಗದಿಂದ ವಿರೋಧ ವ್ಯಕ್ತವಾಗಿತ್ತು. ಅದೇ ದಿನ ತೆಲುಗಿನ ಎರಡು ಚಿತ್ರಗಳು ಬಿಡುಗಡೆಯಾಗುತ್ತಿರುವ ಕಾರಣಕ್ಕೆ ತೆಲುಗು ಆವೃತ್ತಿಯ ‘ರಾಬರ್ಟ್’ ಚಿತ್ರ ಬಿಡುಗಡೆಗೆ ಆಂಧ್ರದಲ್ಲಿ ಅವಕಾಶ ಕೊಡಬಾರದೆಂದು ಅಲ್ಲಿನ ಚಿತ್ರರಂಗ ನಿರ್ಬಂಧ ಹೇರಿ, ಪ್ರದರ್ಶಕರ ಮೇಲೆ ಒತ್ತಡ ಹಾಕಿತ್ತು. ಈ ಕಾರಣದಿಂದ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಈ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು.
ಕಳೆದ ಭಾನುವಾರ ಚೆನ್ನೈಯಲ್ಲಿ ನಡೆದ ದಕ್ಷಿಣ ಭಾರತೀಯ ಚಲನಚಿತ್ರ ವಾಣಿಜ್ಯ ಮಂಡಳಿಗಳ ಒಕ್ಕೂಟದ ಸಭೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್. ಜೈರಾಜ್ ಈ ಸಂಬಂಧ ಮಾತುಕತೆ ನಡೆಸಿದ್ದರು. ಮಾತುಕತೆಯ ಫಲವಾಗಿ ‘ರಾಬರ್ಟ್’ ಬಿಡುಗಡೆಯ ಹಾದಿ ಸುಗಮವಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.