ಪಂ ಜಾಬ್ನ ಜಲಂಧರ್ ಜಿಲ್ಲೆಯ ದೊಸಾಂಝ್ ಕಾಲನ್ ಎಂಬ ಹಳ್ಳಿಯಲ್ಲಿ ಹುಟ್ಟಿದ ಪ್ರತಿಭೆ ದಲ್ಜಿತ್ ಸಿಂಗ್. ತನ್ನ ಹೆಸರಿನ ಜೊತೆಗೆ ಊರ ಹೆಸರೂ ಸದಾ ಇರಬೇಕು ಎನ್ನುವ ಬಯಕೆ. ಅದಕ್ಕೇ ದಲ್ಜಿತ್ ದೊಸಾಂಝ್ ಎಂದೇ ಜನಪ್ರಿಯ. ಅಪ್ಪ ಬಲಬೀರ್ ಸಿಂಗ್ ಪಂಜಾಬ್ ರೋಡ್ ವೇಸ್ನಲ್ಲಿ ಕೆಲಸ ಮಾಡುತ್ತಿದ್ದರು. ಅಮ್ಮ ಸುಖ್ವಿಂದರ್ ಗೃಹಿಣಿ.

ಗುರುದ್ವಾರದಲ್ಲಿ ಕೀರ್ತನೆಗಳನ್ನು ಹಾಡಿಸುತ್ತಾ ಮಗನಲ್ಲಿ ಹಾಡಿನ ಸಂಸ್ಕಾರ ತುಂಬಿದ ಅಮ್ಮ, ಮಲಗುವಾಗ ಕತೆಗಳನ್ನು ಹೇಳುತ್ತಿದ್ದರು. ಅದರಲ್ಲೂ ನೀತಿಯೇ ಪ್ರಧಾನ. ಯಾರಾದರೂ ಟಿ.ವಿ. ಮೇಲೆ ಕಣ್ಣು ಕೀಲಿಸಿ ಕುಳಿತಿದ್ದರೆ ಅಮ್ಮನಿಗೆ ಕೆಂಡಾಮಂಡಲ ಕೋಪ. ಅದರಲ್ಲೂ ಮಕ್ಕಳು ಸಿನಿಮಾ ನೋಡುವ ಗೀಳು ಬೆಳೆಸಿಕೊಂಡರೆ ಹಾಳಾಗುತ್ತಾರೆ ಎನ್ನುವುದು ಅವರ ನಂಬಿಕೆಯಾಗಿತ್ತು. ‘ಸಿನಿಮಾ ಮಾತ್ರ ನೋಡಬೇಡ’ ಎಂದು ಮಗನಿಗೆ ಕಿವಿಮಾತು ಹೇಳುತ್ತಲೇ ಇದ್ದರು.

‘ಅಮ್ಮ ಯಾಕೆ ಪದೇಪದೇ ಸಿನಿಮಾ ನೋಡಬೇಡ ಎನ್ನುತ್ತಾಳೆ. ಅದರಲ್ಲಿ ಅಂಥದ್ದೇನಿದೆಯೋ ನೋಡಿಯೇ ಬಿಡೋಣ’ ಎಂದು ದಲ್ಜಿತ್ ಮನಸು ಹೇಳಿತು. ಶಾಲೆಗೆ ಚಕ್ಕರ್ ಹೊಡೆದು ಸಿನಿಮಾ ನೋಡಿದ್ದಾಯಿತು. ಮೊದಲು ನೋಡಿದ ಹಿಂದಿ ಸಿನಿಮಾ ‘ಸೋಲ್ಜರ್’. ಆಮೇಲೆ ‘ಹಮ್ ದಿಲ್ ದೇ ಚುಕೇ ಸನಮ್’.

ಸಿನಿಮಾ ಯಾಕೆ ಅಷ್ಟು ಜನಪ್ರಿಯ ಎಂದು ಒಮ್ಮೆ ಮಲಗಿದ್ದಾಗ ಅಮ್ಮನನ್ನು ದಲ್ಜಿತ್ ಕೇಳಿದ್ದೇ, ಎರಡು ದಿನ ಆ ಮಹಾತಾಯಿ ಮಾತೇ ಆಡಿಸಿರಲಿಲ್ಲ. ಪಂಜಾಬ್ನಲ್ಲಿ ಹಿಂದಿ ಸಿನಿಮಾಗಳಿಗಿಂತ ಹೆಚ್ಚು ಜನಪ್ರಿಯ ಪಾಶ್ಚಾತ್ಯ ಸಂಗೀತ. ಅದರಲ್ಲೂ rap ಹಾಗೂ rock. ಭಜನೆ ಹಾಡುತ್ತಿದ್ದ ಹುಡುಗ ಗಿಟಾರ್ ಹಿಡಿದದ್ದೇ ಸಿನಿಮಾ ಪ್ರಭಾವದಿಂದ. ತನ್ನದೇ ಹಾಡುಗಳ ಹೊಸ ಭಜನೆಗೆ ಶುರುವಿಟ್ಟುಕೊಂಡಾಗ ಫೈನ್ ಟೋನ್ ಎಂಬ ‘ಟಿ-ಸೀರೀಸ್’ನ ಶಾಖಾ ಕಂಪನಿ ಕಣ್ಣುಬಿಟ್ಟಿತು. ಆ ಕಂಪನಿಯ ರಾಜೇಂದರ್ ಸಿಂಗ್ ಎನ್ನುವವರು
ದಲ್ಜಿತ್ ಗೆ ‘ದಿಲ್ಜಿತ್’ ಎಂದು ಮರುನಾಮಕರಣ ಮಾಡಿದರು. ಆಗ ಪಂಜಾಬ್ನಲ್ಲಿ ಸ್ವರ ಸಂಯೋಜಕರಾಗಿ ಸ್ವಲ್ಪ ಹೆಸರು ಮಾಡಿದ್ದ ಬಬ್ಲು ಮಹೇಂದ್ರೂ ಕೈಲಿ ಎಂಟು ಮಟ್ಟುಗಳನ್ನು ಹಾಕಿಸಿದರು. ಸಾಹಿತ್ಯ ಬರೆದದ್ದು ಬಲ್ವೀರ್ ಬೋಪರೈ. ‘ಇಷ್ಕ್ ದಾ ಉಡಾ ಅದಾ’ ಎಂಬ ಮೊದಲ ಆಲ್ಬಂ ಸದ್ದು ಮಾಡಿತು. ಅದರ ಬೆನ್ನಿಗೇ ‘ದಿಲ್’, ‘ಸ್ಮೈಲ್’ ಆಲ್ಬಂಗಳು ಬಂದವು. ‘ಮೇಲ್ ಕರ್ ದೇ ರಬ್ಬಾ’ ಹಾಡಿಗೆ ನಟ ಜಿಮ್ಮಿ ಶೆರ್ಗಿಲ್ ತುಟಿಚಲನೆ ಮಾಡಿದರಲ್ಲದೆ, ಅದು ಸಿನಿಮಾದಲ್ಲಿಯೂ ಬಳಕೆಯಾಯಿತು.

2004ರಿಂದ 2010ರ ಸಂಗೀತ ಪಯಣದಿಂದ ದಲ್ಜಿತ್ ಮನೆಮಾತಾದರು. ಮರುವರ್ಷವೇ ಪಂಜಾಬ್ ಸಿನಿಮಾ ಲೋಕಕ್ಕೆ ನಟನಾಗಿ ಕಾಲಿಟ್ಟಿದ್ದು. ‘ದಿ ಲಯನ್ ಆಫ್ ಪಂಜಾಬ್’ ಆ ಸಿನಿಮಾ ಹೆಸರು. ಸಿನಿಮಾ ಸೋತಿತು. ಆದರೆ, ಅದರಲ್ಲಿದ್ದ ‘ಲಕ್ 28 ಕುಡೀ ದಾ’ ಎಂಬ ಹಾಡು ಮಾತ್ರ ಸೂಪರ್ ಹಿಟ್ ಆಯಿತು. ದಲ್ಜಿತ್ ಒಳಗಿನ ಗಾನಸತ್ವಕ್ಕೆ ಅದೇ ನಿದರ್ಶನ. ಎರಡನೇ ಸಿನಿಮಾ ಪರವಾಗಿಲ್ಲ ಎನ್ನುವಷ್ಟು ಓಡಿತು.

ಒಂದು ಕಡೆ ಪಂಜಾಬಿ ನಟನಾಗಿ ಬೆಳೆಯುತ್ತಲೇ ಇನ್ನೊಂದು ಕಡೆ ಸಂಗೀತದ ಪಯಣವನ್ನೂ ಮುಂದುವರಿಸಿದರು. ಯೋಯೋ ಹನಿ ಸಿಂಗ್ ಅಭಿನಯಿಸಿ ಚಿತ್ರಿತವಾಗಿದ್ದ ’15 ಸಾಲ್’ ಎಂಬ ಹಾಡು ಅನೇಕರ ಭಾವನೆಗಳಿಗೆ ಧಕ್ಕೆ ಮಾಡೀತು ಎಂಬ ಆತಂಕದಿಂದ ದಲ್ಜಿತ್ ಅದನ್ನು ವಾಪಸ್ ಪಡೆದು ಸುದ್ದಿಯಾದರು. ‘ಅರ್ಬನ್ ಪೆಂಡು’ ಎಂಬ ಬರಹದ ಟೀ-ಶರ್ಟ್ ಹಾಕಿಕೊಂಡು ಅಂಥ ಸಾಲುಗಳಿಗೆ ಪ್ರತಿರೋಧ ವ್ಯಕ್ತಪಡಿಸಿದ್ದೂ ಪತ್ರಿಕೆಗಳಿಗೆ ಶೀರ್ಷಿಕೆಯಾಯಿತು.

ತಲೆ ಮೇಲೆ ಸದಾ ಪಗಡಿ ಇದ್ದೂ ಹಿಂದಿ ಸಿನಿಮಾ, ಹಾಲಿವುಡ್ ಕನಸು ಕಾಣುತ್ತಿದ್ದ ದಲ್ಜಿತ್ಗೆ ಅದೃಷ್ಟ ಖುಲಾಯಿಸಿದ್ದು ಎರಡು ವರ್ಷಗಳ ಹಿಂದೆ; ‘ಉಡ್ತಾ ಪಂಜಾಬ್’ ಹಿಂದಿ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಸಿಕ್ಕಾಗ. ಕರೀನಾ ಕಪೂರ್ ಕೂಡ ಈ ನವನಟನ ಎದುರು ಡಲ್ ಹೊಡೆದರು.

ಅನುಷ್ಕಾ ಶರ್ಮ ತಾವೇ ನಿರ್ಮಿಸಿ, ನಟಿಸಿದ ‘ಫಿಲ್ಲೌರಿ’ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಈ ಪಂಜಾಬಿ ಪ್ರತಿಭೆಗೆ ನೀಡಿದರು. ಈಗ ‘ದಲ್ಜಿತ್’ ಇನ್ನೊಂದು ಹೊಸ ಹಿಂದಿ ಸಿನಿಮಾ ಮೂಲಕ ಪರೀಕ್ಷೆಗೆ ತಯಾರಾಗಿದ್ದಾರೆ. ‘ಸೂರ್ಮಾ’ ಈ ವಾರ ತೆರೆ ಕಂಡಿದ್ದು, ಹಿಂದಿ ಚಿತ್ರರಂಗದಲ್ಲಿ ಅವರ ನೆಲೆ ಗಟ್ಟಿಯೋ, ಅಭದ್ರವೋ ಗೊತ್ತಾಗಲಿದೆ. ಸಿನಿಮಾ ನೋಡಬೇಡ ಎಂದಿದ್ದ ಅದೇ ಅಮ್ಮ ಆಮೇಲೆ ಮಗನ ಬೆಳವಣಿಗೆ ಕಂಡು ಆನಂದಬಾಷ್ಪ ಸುರಿಸಿದ್ದು ಬೇರೆ ಮಾತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.