ಮಂಗಳವಾರ, ಜನವರಿ 28, 2020
23 °C

ನಿರ್ದೇಶಕನ ಜೊತೆ ನಟಿ ನಾಪತ್ತೆ: ಮನನೊಂದು ಅಜ್ಜಿ ಸಾವು, ತಾಯಿ ಸ್ಥಿತಿ ಗಂಭೀರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ನಟಿಯೊಬ್ಬಳು ಮನೆ ಬಿಟ್ಟು ಹೋಗಿದ್ದಕ್ಕೆ ಮನನೊಂದು ಯುವತಿಯ ಅಜ್ಜಿ ಮತ್ತು ತಾಯಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚನ್ನಪಟ್ಟಣದಲ್ಲಿ ಬುಧವಾರ ನಡೆದಿದೆ. ಅಜ್ಜಿ ಮೃತಪಟ್ಟಿದ್ದು, ಇನ್ನೊಬ್ಬರ ಸ್ಥಿತಿ ಗಂಭೀರವಾಗಿದೆ.

ಯುವತಿಯ ಅಜ್ಜಿ ಚೆನ್ನಮ್ಮ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟರೆ, ತಾಯಿ ಸವಿತಾ ಮಂಡ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚನ್ನಪಟ್ಟಣದ ಬಸವೇಶ್ವರ ನಗರ ನಿವಾಸಿ ವಿಜಯಲಕ್ಷ್ಮಿ (19) ಇದೇ 3ರಂದು ಮನೆ ಬಿಟ್ಟು ಚಿತ್ರ ನಿರ್ದೇಶಕ ಆಂಜನಪ್ಪ ಎಂಬುವರ ಜೊತೆ ತೆರಳಿದ್ದರು. ಈ ಸಂಬಂಧ ಹುಡುಗಿಯ ತಾಯಿ ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮೆಳ್ಳಹಳ್ಳಿ ಗ್ರಾಮದವರಾದ ವಿಜಯಲಕ್ಷ್ಮಿ ತಂದೆ ಸ್ವಾಮಿ ಹಾಗೂ ತಾಯಿ ಸವಿತಾ ಅವರೊಟ್ಟಿಗೆ ಸದ್ಯ ಚನ್ನಪಟ್ಟಣದಲ್ಲಿ ವಾಸವಿದ್ದಾರೆ. ಆಕೆ ಈಗಾಗಲೇ ಆಯುಷ್ಮಾನ್‌ಭವ, ರಾಜೀವ ಸೇರಿದಂತೆ ವಿವಿಧ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇದಲ್ಲದೆ ಪ್ರೇಮಮಹಲ್, ಜವಾರಿ ಲವ್, ಪ್ರೊಡಕ್ಷನ್ ನಂ1 ಚಿತ್ರಗಳ ನಿರ್ಮಾಪಕರ ಬಳಿ ಮುಂಗಡ ಹಣ ಪಡೆದಿದ್ದರು ಎನ್ನಲಾಗಿದೆ.

ಯುವತಿ ನಾಪತ್ತೆಯಾದ ಹಿನ್ನೆಲೆಯಲ್ಲಿ ನಿರ್ಮಾಪಕರು ಆಕೆಯ ಮನೆ ಬಳಿ ಬಂದು ಪೋಷಕರ ಜೊತೆ ಗಲಾಟೆ ಮಾಡಿದ್ದಾರೆ. ಮಗಳನ್ನು ಹುಡುಕಿ ಚಿತ್ರೀಕರಣಕ್ಕೆ ಕಳುಹಿಸುವಂತೆ ತಾಕೀತು ಮಾಡಿದ್ದಾರೆ. ಇದರಿಂದ ಬೇಸತ್ತು ಇಬ್ಬರು ಆತ್ಮಹತ್ಯೆ ನಿರ್ಧಾರಕ್ಕೆ ಬಂದರು ಎಂದು ಅವರ ಸಂಬಂಧಿಕರು ಆರೋಪಿಸಿದ್ದಾರೆ.

ಹಿಂದೆಯೂ ಪರಾರಿ: ರಾಯಚೂರಿನಲ್ಲಿ ತುಂಗಭದ್ರಾ ಸಿನಿಮಾ ಚಿತ್ರೀಕರಣದ ವೇಳೆ ಆಂಜನಪ್ಪ ಹಾಗೂ ವಿಜಯಲಕ್ಷ್ಮಿ ನಡುವೆ ಪ್ರೀತಿ ಹುಟ್ಟಿತ್ತು. ಕಳೆದ ಡಿಸೆಂಬರ್‌ 15ರಂದು ಆಕೆ ಮನೆ ಬಿಟ್ಟು ಆಂಜನಪ್ಪ ಜೊತೆ ತೆರಳಿದ್ದರು. 15 ದಿನದ ಬಳಿಕ ಮತ್ತೆ ಮನೆಗೆ ಮರಳಿದ್ದ ಯುವತಿ, ತಾವು ಮಾಡಿದ್ದಕ್ಕೆ ಕ್ಷಮೆ ಕೋರಿ ಮುಂದೆ ಹೀಗೆ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದರು. ನಂತರದಲ್ಲಿ ಮತ್ತೆ ವಿಜಯಲಕ್ಷ್ಮಿ ಮನೆ ಬಿಟ್ಟು ಹೋದ ಕಾರಣ ಆಕೆಯ ಪೋಷಕರು ಮನ ನೊಂದಿದ್ದು, ಆತ್ಮಹತ್ಯೆ ನಿರ್ಧಾರಕ್ಕೆ ಬಂದರು ಎಂದು ದೂರಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು