ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆವ್ವದ 'ಗಿಮಿಕ್' ಮಾಡಲು ಮಗಳೇ ಪ್ರೇರಣೆ: ನಟ ಗಣೇಶ್‌

Last Updated 15 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

‘ದೆವ್ವ ಎನ್ನುವುದು ಭ್ರಮೆ. ದೆವ್ವಗಳಿವೆ ಎಂದು ನಾನು ನಂಬುವುದಿಲ್ಲ. ಇಷ್ಟಪಟ್ಟು ಹಾರರ್‌, ಲವ್‌ ಜಾನರ್‌ ಸಿನಿಮಾಗಳನ್ನೂ ನೋಡುವುದಿಲ್ಲ. ಸಸ್ಪೆನ್ಸ್‌, ಥ್ರಿಲ್ಲರ್‌ ಚಿತ್ರಗಳೆಂದರೆ ನನಗಿಷ್ಟ. ಮಗಳಿಗೂ ನನ್ನ ಸಿನಿಮಾ ನೋಡಿ ಬೇಸರವಾಗಿರಬೇಕು. ಹಾರರ್‌ ಚಿತ್ರ ಮಾಡುವಂತೆ ಹೇಳುತ್ತಿದ್ದಳು. ಅವಳೇ ಈ ಸಿನಿಮಾಕ್ಕೆ ಪ್ರೇರಣೆ’

ಇಷ್ಟನ್ನು ಒಂದೇ ಉಸುರಿಗೆ ಹೇಳಿ ನಕ್ಕರು ನಟ ಗಣೇಶ್‌. ‘ಗಿಮಿಕ್’ ಚಿತ್ರದ ಮೂಲಕ ಮೊದಲ ಬಾರಿಗೆ ಹಾರರ್‌ ಜಾಡಿಗೆ ಹೊರಳಿದ ಖುಷಿ ಮತ್ತು ಪುತ್ರಿಯ ಕನಸು –ಎರಡನ್ನೂ ಈಡೇರಿಸಿದ ಸಂತಸ ಅವರ ಮೊಗದಲ್ಲಿತ್ತು.

‘ಹಾರರ್‌ ಸಿನಿಮಾದಲ್ಲಿ ನಟಿಸುವ ಆಸೆ ಇದ್ದಿದ್ದು ನಿಜ. ಸಂದರ್ಶನವೊಂದರಲ್ಲಿ ಅದನ್ನು ತೋಡಿಕೊಂಡಿದ್ದೆ. ನಿರ್ದೇಶಕ ನಾಗಣ್ಣ ಈ ಮಾದರಿಯ ಸಿನಿಮಾ ಮಾಡೋಣ ಎಂದಾಗ ತಕ್ಷಣವೇ ಒಪ್ಪಿಕೊಂಡೆ. ಚಿತ್ರದಲ್ಲಿ ಕಾಮಿಡಿಯೂ ಇದೆ. ರಿಯಲ್‌ ಆತ್ಮ ಯಾವುದು, ಡೂಪ್ಲಿಕೇಟ್‌ ಆತ್ಮ ಯಾವುದು, ನಾಟಕ ಮಾಡುವ ಆತ್ಮ ಯಾವುದು ಎಂಬುದೇ ಈ ಚಿತ್ರದ ಹೂರಣ. ನೋಡುಗರಿಗೆ ಒಳ್ಳೆಯ ರಂಜನೆ ಸಿಗುತ್ತದೆ’ ಎಂದು ವಿವರಿಸಿದರು.

* ‘ಗಿಮಿಕ್‌’ ಚಿತ್ರದ ಹೈಲೈಟ್ಸ್ ಏನು?

ಹಾರರ್‌ ಚಿತ್ರಗಳಲ್ಲಿ ದೆವ್ವಗಳು ಇರುವುದಿಲ್ಲ. ಅವುಗಳನ್ನು ಕಲ್ಪಿಸಿಕೊಂಡು ನಟಿಸಬೇಕು. ಶ್ರೀಲಂಕಾದ ದೊಡ್ಡ ಬಂಗಲೆಯೊಂದರಲ್ಲಿ 20 ದಿನಗಳ ಕಾಲ ಶೂಟಿಂಗ್‌ ನಡೆಸಿದ್ದು ವಿಶೇಷ ಅನುಭವ. ರಾತ್ರಿವೇಳೆಯೇ ಚಿತ್ರೀಕರಣ ನಡೆಸುತ್ತಿದ್ದ ಪರಿಣಾಮ ನಿರ್ದೇಶಕರೊಟ್ಟಿಗೆ ಕಳ್ಳಾಟ ಆಡಿದ್ದೂ ಇದೆ.ನನ್ನದು ಮಧ್ಯಮ ವರ್ಗದ ಹುಡುಗನ ಪಾತ್ರ. ಆತ ಹುಡುಗಿಯ ಹಿಂದೆ ಬೀಳುತ್ತಾನೆ. ಅವಳ ಕಡೆಯಿಂದ ಏನೆಲ್ಲಾ ತೊಂದರೆ ಎದುರಾಗುತ್ತದೆ. ಅದಕ್ಕೆ ಹೇಗೆ ಪರಿಹಾರ ಹುಡುಕುತ್ತಾನೆ ಎನ್ನುವುದೇ ಇದರ ತಿರುಳು.

* ನಿರ್ದೇಶಕ ನಾಗಣ್ಣ ಅವರೊಟ್ಟಿಗೆ ಕೆಲಸ ಮಾಡುವಾಗ ನಿಮ್ಮಲ್ಲಿ ಮೂಡಿದ ಭಾವನೆ ಎಂಥದ್ದು?

ನಾನು 6ನೇ ತರಗತಿಯಲ್ಲಿ ಇದ್ದಾಗ ನೆಲಮಂಗಲದಲ್ಲಿ ವಿಷ್ಣು ಸರ್ ನಟನೆಯ ‘ಸಾಮ್ರಾಟ್‌’ ಸಿನಿಮಾ ವೀಕ್ಷಿಸಿದ್ದೆ. ಪೋಸ್ಟರ್‌ನಲ್ಲಿ ನಿರ್ದೇಶಕ ನಾಗಣ್ಣ ಎಂದು ಬರೆದಿದ್ದನ್ನು ನೋಡಿದ್ದೆ. ಅವರು ಈಗ ನನಗೆ ಸಿನಿಮಾ ನಿರ್ದೇಶನ ಮಾಡಿರುತ್ತಿರುವುದು ಖುಷಿ ನೀಡಿದೆ. ಕಲಾವಿದರ ಮೇಲೆ ಅವರಿಗಿರುವ ಪ್ರೀತಿ, ಜವಾಬ್ದಾರಿ ಮಾದರಿಯಾದುದು.

* ಮತ್ತೆ ‘ಗಾಳಿಪಟ’ದ ಸೂತ್ರ ಹಿಡಿದ ಬಗ್ಗೆ ಹೇಳಿ...

‘ಗಾಳಿಪಟ’ ನನ್ನ ಬ್ರಾಂಡ್‌. ನಾನು ನಟಿಸುವುದಿಲ್ಲ ಎಂದು ಹೇಳಿಯೇ ಇರಲಿಲ್ಲ. ನಟಿಸುವುದಿಲ್ಲ ಎಂದು ಹೇಳಿದರೂ ತಪ್ಪಾಗುತ್ತದೆ. ನಿನ್ನನ್ನು ಬಿಟ್ಟರೆ ‘ಗಾಳಿಪಟ 2’ ಹಾರಿಸುವುದು ಕಷ್ಟವೆಂದರು ಯೋಗರಾಜ ಭಟ್ಟರು. ‘ಗಾಳಿಪಟ’ ನನ್ನ ಐದನೇ ಸಿನಿಮಾ. ಏನು ಇಲ್ಲದಿದ್ದಾಗ ಮಾಡಿದ ಚಿತ್ರ ಅದು. ಆಗ ಸಿನಿಮಾ ಹಿಟ್‌ ಅಂದರೇನು, ಸ್ಟಾರ್‌ ಗಿರಿ ಎಂದರೇನು ಎಂಬುದು ಗೊತ್ತಿರಲಿಲ್ಲ. ಅಂತಹ ದಿನಗಳಲ್ಲಿ ಮಜಾ ಮಾಡಿಕೊಂಡು ನಟಿಸಿದ ಸಿನಿಮಾ.

ಹಳೆಯ ಗಾಳಿಪಟಕ್ಕೂ, ಹೊಸ ಗಾಳಿಪಟಕ್ಕೂ ವ್ಯತ್ಯಾಸ ಏನೆಂದು ನನಗೆ ಗೊತ್ತಿಲ್ಲ. ಇದು ಹೊಸ ಕಥೆ ಎನ್ನುವುದಷ್ಟೇ ಗೊತ್ತು. ಶರಣ್‌ ಮತ್ತು ರಿಷಿಗೆ ಈಗಾಗಲೇ ಸಿದ್ಧ‍ಪಡಿಸಿರುವ ಕಥೆಯನ್ನು ಹೊಸ ಟೈಟಲ್‌ ಇಟ್ಟುಕೊಂಡು ನಿರ್ದೇಶಿಸುತ್ತೇನೆಂದು ಭಟ್ಟರು ಹೇಳಿದ್ದಾರೆ. ಹಾಗಾಗಿ, ಗಾಳಿಪಟ 2ರಲ್ಲಿ ನಟಿಸಲು ಒಪ್ಪಿಕೊಂಡೆ. ಹಂದಿ ಬಾಲ ಹಿಡಿದುಕೊಂಡೇ ಸಾಗುತ್ತೇವೆ. ಪಾತ್ರಗಳನ್ನು ಮತ್ತಷ್ಟು ಗಟ್ಟಿಗೊಳಿಸಿ ಹೇಳುತ್ತೇವೆ. ಮನರಂಜನೆಯೇ ನಮ್ಮ ಧ್ಯೇಯ.

* ‘ಮುಂಗಾರು ಮಳೆ’ಯಿಂದ ಇಲ್ಲಿಯವರೆಗೆ ನಿಮ್ಮ ವೃತ್ತಿ ಬದುಕಿನಲ್ಲಿ ಆಗಿರುವ ಬದಲಾವಣೆ ಏನು?

‘ಮುಂಗಾರು ಮಳೆ’ ಚಿತ್ರಕ್ಕೆ ಸಂಭಾವನೆ ಪಡೆಯದೇ ನಟಿಸಿದೆ. ಕಾಮಿಡಿ ಟೈಮ್‌ನಲ್ಲಿದ್ದ ನನ್ನನ್ನು ಕರೆದುಕೊಂಡು ಹೋಗಿ ಗೋಲ್ಡನ್‌ ಸ್ಟಾರ್‌ ಮಾಡಿದ ಸಿನಿಮಾವದು. ದೇವರು ನನ್ನ ಯೋಗ್ಯತೆ ಮೀರಿ ಎಲ್ಲವನ್ನೂ ಕೊಟ್ಟಿದ್ದಾನೆ. ಜನರಿಗೆ ಒಳ್ಳೆಯ ಕೆಲಸ ಮಾಡುವುದೇ ನನ್ನ ಉದ್ದೇಶ. ಮನಸ್ಸಿಗೆ ಬೇಜಾರಾದರೆ ದೂರವಿದ್ದು ಬಿಡುತ್ತೇನೆ. ಯಾರ ಮನಸ್ಸಿಗೂ ನೋವುಂಟು ಮಾಡುವುದು ನನಗಿಷ್ಟವಿಲ್ಲ.

ಥಿಯೇಟರ್‌ನ ಪ್ರೊಜೆಕ್ಷರ್‌ ಕೊಠಡಿಯಲ್ಲಿ ಕುಳಿತು ನನ್ನ ಎಂಟ್ರಿ, ಎಮೋಷನ್‌, ಕ್ಲೈಮ್ಯಾಕ್ಸ್‌ನಲ್ಲಿ ವಿಲನ್‌ಗೆ ಹೊಡೆಯುವಾಗ ಅಥವಾ ಹೀರೊಯಿನ್‌ ಅನ್ನು ತಬ್ಬಿಕೊಳ್ಳುವಾಗ ಬೀಳುವ ಸಿಳ್ಳೆ, ಚಪ್ಪಾಳೆಗಳೇ ಕಲಾವಿದನಿಗೆ ಬಹುದೊಡ್ಡ ಬಹುಮಾನ. ಆಗ ಆತ ಸಿನಿಮಾಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾನೆ, ಅವನ ಬ್ಯಾಂಕ್‌ ಬ್ಯಾಲೆನ್ಸ್‌ ಎಷ್ಟಿದೆ ಎನ್ನುವುದು ನೆನಪಾಗುವುದಿಲ್ಲ.

‘ಶೈಲು’ ಚಿತ್ರದಲ್ಲಿ ಕ್ರಾಕ್‌ ವಾಯ್ಸ್‌ನಲ್ಲಿಯೇ ಡಬ್ಬಿಂಗ್‌ ಮಾಡಿದ್ದೇನೆ. ಅದರಲ್ಲಿ ಕೇರಳದ ಒಂದು ದೃಶ್ಯ ಬರುತ್ತದೆ. ಆ ದೃಶ್ಯ ಬಂದಾಗ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ತಿಳಿಯಲು ಸಾಗರ್‌ ಥಿಯೇಟರ್‌ಗೆ ಹೋಗಿದ್ದೆ. ಇಡೀ ಚಿತ್ರಮಂದಿರ ಮೌನವಾಗಿತ್ತು.ಆ ದೃಶ್ಯ ಬಂದಾಗ ಶಿಳ್ಳೆ, ಚಪ್ಪಾಳೆ ಬಿತ್ತು. ‘ಚಮಕ್‌’ ಚಿತ್ರದಲ್ಲಿ ಗಣೇಶ್‌ನ ಕಣ್ಣೀರು ಬಂದಾಗ ಜನರು ಶಿಳ್ಳೆ ಹಾಕಿದರು. ನಾನು ಬಾಲ್ಕನಿಯ ಕಿಟಕಿಯಲ್ಲಿ ನಿಂತು ಕೇಳಿಸಿಕೊಂಡೆ. ಐ ಲವ್‌ ಯು ಗಣೇಶ್‌... ಎಂದಾಗ ನನಗೆ ಗೊತ್ತಿಲ್ಲದೆ ಗಳಗಳನೇ ಕಣ್ಣೀರು ಬಂದಿತು. ಬಡ್ಡಿಮಗ ಏನು ಆ್ಯಕ್ಟಿಂಗ್‌ ಮಾಡಿದ್ದಾನೆ ಎಂದು ಶಿಳ್ಳೆ ಹೊಡೆದರೆ, ಚಪ್ಪಾಳೆ ತಟ್ಟಿದರೆ? ನನಗಂತೂ ಇಂದಿಗೂ ಗೊತ್ತಿಲ್ಲ.

* ‘ಗೀತಾ’ ಚಿತ್ರ ಯಾವ ಹಂತದಲ್ಲಿದೆ?

ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ. ಇನ್ನೊಂದು ವಾರದೊಳಗೆ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಮುಂದೆ ಹೋಗಲಿದೆ. ಮೊದಲ ಬಾರಿಗೆ ಗೋಕಾಕ್‌ ಚಳವಳಿಯನ್ನು ತೆರೆಯ ಮೇಲೆ ತರಲಾಗುತ್ತಿದೆ. ಡೈಲಾಗ್‌ನಿಂದ ಹಿಡಿದು ಎಲ್ಲವೂ ಹೊಸದು. ಇದು ನನ್ನ ಪ್ರಾಡೆಕ್ಟ್‌. ಅದಕ್ಕೆ ಏನು ಬೇಕೋ ಅಷ್ಟು ಶ್ರಮ ಹಾಕಿರುವೆ. ಅದರ ಬಗ್ಗೆ ನನಗೆ ತೃಪ್ತಿಯೂ ಇದೆ.

* ನಿರೀಕ್ಷೆಯ ಗಡಿ ದಾಟದ ನೀವು ಇಷ್ಟಪಟ್ಟು ಮಾಡಿದ ಸಿನಿಮಾ ಯಾವುದು?

‘96’ ಸಿನಿಮಾ. ಕಮರ್ಷಿಯಲ್‌ ಹೀರೊ ಎಂಬ ಇಮೇಜ್‌ ಅನ್ನು ತಲೆಯಿಂದ ತೆಗೆದುಹಾಕಿ ನಟಿಸಿದ ಚಿತ್ರ ಅದು. ನಟನಾ ಸಾಮರ್ಥ್ಯವನ್ನಷ್ಟೇ ಪರಿಗಣನೆಗೆ ತೆಗೆದುಕೊಂಡು ಮಾಡಿದ ಚಿತ್ರ. ಮನಸ್ಸಿನಿಂದ ಮಾಡಿದ ಕೆಲಸ ಜನರಿಗೆ ತಲುಪಬೇಕು ಎಂಬುದೇ ನನ್ನಾಸೆ. ಅಮೆಜಾನ್‌ ಪ್ರೇಮ್‌ನಲ್ಲಿ ಟಾಪ್‌ ಮೂವಿ ಆಗಿತ್ತು. ಆದರೆ, ಜನರಿಗೆ ತಲುಪಲಿಲ್ಲ.

* ಹೊಸ ಪ್ರತಿಭೆಗಳಿಗೆ ನಿಮ್ಮ ಪ್ರೊಡಕ್ಷನ್‌ನಡಿ ಅವಕಾಶ ನೀಡುವ ಯೋಚನೆ ಇದೆಯೇ?

ಹೊಸಬರಿಗೆ ಅವಕಾಶ ನೀಡಲು ನಾನು ಸದಾ ಸಿದ್ಧ. ಸ್ಕ್ರಿಪ್ಟ್‌ ಉತ್ತಮವಾಗಿರಬೇಕು ಅಷ್ಟೇ. ಗೋಲ್ಡನ್‌ ಮೂವೀಸ್‌ ಮೂಲಕ ಸಣ್ಣ ಬಜೆಟ್‌ನಲ್ಲಿ ಒಳ್ಳೆಯ ಕಥೆಗಳು ಬಂದರೆ ನಿರ್ಮಾಣ ಮಾಡುತ್ತೇನೆ. ಪ್ರಯೋಗಾತ್ಮಕ ಸಿನಿಮಾಗಳಿಗೂ ಹಣ ಹೂಡುತ್ತೇನೆ. ನನ್ನ ಪ್ರೊಡಕ್ಷನ್‌ನಡಿ ನಿರ್ಮಿಸುವ ಸಿನಿಮಾಕ್ಕೆ ನಾನು ತೆಗೆದುಕೊಳ್ಳುವ ಸಂಭಾವನೆಗಿಂತಲೂ ಶೇಕಡ 10ರಷ್ಟು ಹೆಚ್ಚು ಬಂಡವಾಳ ಹೂಡಿರುತ್ತೇನೆ.

ಅಪ್ಪನ ಸಾವು ಮತ್ತು ನಟನೆ

‘ಗಿಮಿಕ್‌’ ಚಿತ್ರದ ಶೂಟಿಂಗ್‌ ವೇಳೆ ಅಪ್ಪನ ಸಾವಿನ ಸುದ್ದಿಯ ನಡುವೆಯೂ ಗಣೇಶ್‌ ಚಿತ್ರೀಕರಣ ಪೂರ್ಣಗೊಳಿಸಿದ ಸಂಗತಿ ಯಾರಿಗೂ ಗೊತ್ತಿಲ್ಲ. ಅಂದಿನ ದುಃಖದ ಸನ್ನಿವೇಶ ಮತ್ತು ವೃತ್ತಿಬದುಕಿನ ಸವಾಲಿನ ಕ್ಷಣವನ್ನು ಅವರು ನೆನಪಿಸಿಕೊಂಡಿದ್ದು ಹೀಗೆ:

‘ಅಂದು ಮಧ್ಯಾಹ್ನ 3.30. ಯಲಹಂಕದ ಬಳಿ ಶೂಟಿಂಗ್‌ ನಡೆಯುತ್ತಿತ್ತು. ಮನೆಯಿಂದ ಫೋನ್‌ ಬಂತು. ಫೋನ್‌ನಲ್ಲಿ ಕೇಳಿದ ಸುದ್ದಿಯಿಂದ ಕಲಾವಿದನ ಕಷ್ಟ ಏನೆಂಬುದು ಅರ್ಥವಾಯಿತು. ಮಾಧ್ಯಮದವರು ನನ್ನನ್ನು ನ್ಯಾಚುರಲ್‌ ನಟ ಎಂದು ಬರೆಯುತ್ತಾರೆ. ಅದಕ್ಕೆ ನಾನೆಷ್ಟು ಅರ್ಹ ಎಂಬುದು ಗೊತ್ತಿಲ್ಲ. ಆದರೆ, ನಟನೊಬ್ಬ ಮಾನಸಿಕ ತೊಂದರೆಗೆ ಸಿಲುಕಿದರೆ ನಟನೆ ಎಷ್ಟು ಕಷ್ಟ ಎಂಬುದು ಅಂದು ಅರಿವಾಯಿತು’.

‘ಅಪ್ಪನ ಸಾವಿನ ಸುದ್ದಿಯನ್ನು ರವಿಶಂಕರ್‌ ಗೌಡಗೆ ಮಾತ್ರ ಹೇಳಿದ್ದೆ. ನಿರ್ದೇಶಕ ನಾಗಣ್ಣ ಅವರ ಬಳಿಗೆ ತೆರಳಿ ಇನ್ನೆಷ್ಟು ಸೀನ್‌ಗಳಿವೆ ಎಂದು ಕೇಳಿದೆ. ಮೂರ್ನಾಲ್ಕು ಸೀನ್‌ಗಳಿವೆ ಎಂದರು. ಅದು ಕಾಮಿಡಿ ದೃಶ್ಯ. ಗುರುದತ್‌ ಮನೆಗೆ ಹೆಣ್ಣು ನೋಡಲು ಹೋಗಿರುತ್ತೇನೆ. ಆಗ ಅವರು ನನ್ನನ್ನು ಸಂದರ್ಶನ ಮಾಡುತ್ತಾರೆ. ಶ್ರೀಮಂತನ ವ್ಯಕ್ತಿಯ ಪ್ರಶ್ನೆಗೆ ಒಬ್ಬ ಮಧ್ಯಮ ವರ್ಗದ ಹುಡುಗ ಹೇಗೆ ಉತ್ತರಿಸುತ್ತಾನೆ ಎನ್ನುವುದೇ ಆ ದೃಶ್ಯದ ಸಾರಾಂಶ’.

‘ನನ್ನಿಂದ ಇನ್ನೊಬ್ಬರಿಗೆ ತೊಂದರೆಯಾಗಬಾರದು ಎಂಬ ಕಾರಣದಿಂದ ಶೂಟಿಂಗ್‌ ಮುಗಿದ ಬಳಿಕ ಮನೆಗೆ ಹೋದೆ. ಆ ದೃಶ್ಯಕ್ಕೆ ಡಬ್ಬಿಂಗ್‌ ಮಾಡುವಾಗಲೂ ಆ ದಿನದ ಟೆನ್ಷನ್‌ ನನ್ನನ್ನು ಕಾಡುತ್ತಿತ್ತು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT