ಬೆಂಗಳೂರು: ತಮಿಳಿನ ಖ್ಯಾತ ನಟ ಜಯಂ ರವಿ ಅವರು ಪತ್ನಿ ಆರತಿ ಅವರಿಗೆ ವಿಚ್ಛೇದನ ನೀಡಿದ್ದು, 18 ವರ್ಷಗಳ ತಮ್ಮ ಸುದೀರ್ಘ ದಾಂಪತ್ಯವನ್ನು ಕೊನೆಗೊಳಿಸಿದ್ದಾರೆ.
ವಿಚ್ಛೇದನ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಜಯಂ ರವಿ, ‘ವೈಯಕ್ತಿಕ ಕಾರಣಗಳಿಂದ ಬೇರ್ಪಟ್ಟಿರುವುದಾಗಿ’ ತಿಳಿಸಿದ್ದಾರೆ.
‘ತರಾತುರಿಯಲ್ಲಿ ಈ ನಿರ್ಧಾರಕ್ಕೆ ಬಂದಿಲ್ಲ. ವಿಚ್ಛೇದನ ತೆಗೆದುಕೊಳ್ಳುವ ಮುನ್ನ ಈ ಬಗ್ಗೆ ಹಲವು ಬಾರಿ ಚರ್ಚಿಸಿದ್ದೇವೆ. ಇಬ್ಬರ ಹಿತದೃಷ್ಟಿಯನ್ನು ಪರಿಗಣಿಸಿ ದಾಂಪತ್ಯ ಜೀವನವನ್ನು ಕೊನೆಗೊಳಿಸಿದ್ದೇವೆ‘ ಎಂದು ಹೇಳಿದ್ದಾರೆ.
‘ಇಂತಹ ಸಮಯದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಬೇಕಾಗಿ ಎಲ್ಲರಲ್ಲಿಯೂ ಮನವಿ ಮಾಡುತ್ತೇನೆ. ಈ ವಿಷಯದಲ್ಲಿ ಯಾವುದೇ ಊಹೆ, ವದಂತಿ ಅಥವಾ ಆರೋಪಗಳಿಗೆ ಕಿವಿ ಕೊಡಬೇಡಿ. ಜನರಿಗೆ ಮನರಂಜನೆ ನೀಡುವುದು ನನ್ನ ಮೊದಲ ಆದ್ಯತೆಯಾಗಿದ್ದು, ನನಗೆ ಬೆಂಬಲ ನೀಡಿದ್ದಕ್ಕಾಗಿ ಧನ್ಯವಾದಗಳು’ ಎಂದು ತಿಳಿಸಿದ್ದಾರೆ.