ಮಂಗಳೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ಸಿನಿಮಾ ಹಾಗೂ ಧಾರಾವಾಹಿ ನಟಿ ಪದ್ಮಜಾ ರಾವ್ ಅವರಿಗೆ ಇಲ್ಲಿನ 8ನೇ ಜೆಎಂಎಫ್‌ಸಿ ನ್ಯಾಯಾಲಯವು ಮೂರು ತಿಂಗಳು ಸಾದಾ ಕಾರಾಗೃಹ ಶಿಕ್ಷೆ ಹಾಗೂ ₹ 40.20 ಲಕ್ಷ ದಂಡ ವಿಧಿಸಿದೆ.
‘ನಟಿ ಪದ್ಮಜಾ ರಾವ್ ಅವರು ₹ 40 ಲಕ್ಷ ಕೈ ಸಾಲ ಪಡೆದಿದ್ದರು. ಇದಕ್ಕೆ ಭದ್ರತೆಯಾಗಿ 2020ರ ಜೂನ್ 17ರಂದು ಐಸಿಐಸಿಐ ಬ್ಯಾಂಕಿನ ಬೆಂಗಳೂರಿನ ಬನಶಂಕರಿ ಶಾಖೆಯಲ್ಲಿರುವ ತಮ್ಮ ಖಾತೆಗೆ ಸಂಬಂಧಿಸಿದ ಚೆಕ್ ನೀಡಿದ್ದರು. ಈ ಚೆಕ್ ಅನ್ನು ನಗದೀಕರಿಸಲು ಹಾಕಿದಾಗ, ಪದ್ಮಜಾ ರಾವ್ ಅವರ ಖಾತೆಯಲ್ಲಿ ಅಷ್ಟೊಂದು ಮೊತ್ತ ಇರಲಿಲ್ಲ. 15 ದಿನಗಳ ಒಳಗೆ ಸಾಲದ ಹಣ ಪಾವತಿಸುವಂತೆ 2020ರ ಜೂನ್ 30ರಂದು ಪದ್ಮಜಾ ರಾವ್ ಅವರಿಗೆ ನೋಟಿಸ್ ನೀಡಿದರೂ ಅವರು ಹಣ ಪಾವತಿಸಿರಲಿಲ್ಲ‘ ಎಂದು ‘ವೀರೂ ಟಾಕೀಸ್’ ಸಂಸ್ಥೆಯ ಮಾಲೀಕ, ಮಂಗಳೂರು ಮೇರಿಹಿಲ್ ನಿವಾಸಿ ವೀರೇಂದ್ರ ಶೆಟ್ಟಿ ನ್ಯಾಯಾಲಯದ ಮೊರೆ ಹೋಗಿದ್ದರು.