ಭಾನುವಾರ, ಸೆಪ್ಟೆಂಬರ್ 19, 2021
23 °C
ಹಲ್ಲೆ ನಡೆಸಿದ ಮಹಿಳೆಯ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ನಟಿ ಸಂಯುಕ್ತಾ ಹೆಗ್ಡೆ ಮೇಲೆ ಪಾರ್ಕ್‌ನಲ್ಲಿ ನಡೆದಿದ್ದೇನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಕಿರಿಕ್‌ ಪಾರ್ಟಿ’ ಚಿತ್ರದ ಖ್ಯಾತಿಯ ನಟಿ ಸಂಯುಕ್ತಾ ಹೆಗ್ಡೆ ಮಾಡಿಕೊಳ್ಳುವ ಕಿರಿಕ್‌ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ಸುದ್ದಿಯಾಗುವುದು ಸರ್ವೇ ಸಾಮಾನ್ಯ. ಆದರೆ, ಈಗ ಸಂಯುಕ್ತಾ ಮತ್ತು ಆಕೆಯ ಸ್ನೇಹಿತೆಗೆ ಮಹಿಳೆಯೊಬ್ಬರು ಕಿರಿಕ್‌ ಮಾಡಿರುವ ಸುದ್ದಿ ಹೊರಬಿದ್ದಿದೆ. ಸೆಪ್ಟೆಂಬರ್‌ 4ರಂದು ನಡೆದಿರುವ ಈ ಘಟನೆ ಬಗ್ಗೆ ಸೋಷಿಯಲ್‌ ಮಿಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಅದು ಆಗಿರುವುದು ಇಷ್ಟೇ. ಸಂಯುಕ್ತಾ ಮತ್ತು ಆಕೆಯ ಸ್ನೇಹಿತೆ ಎಂದಿನಂತೆ ಬೆಂಗಳೂರಿನ ಅಗರ ಉದ್ಯಾನದಲ್ಲಿ ಬೆಳಿಗ್ಗೆಯೇ ವರ್ಕೌಟ್‌ಗೆ ಹೋಗಿದ್ದಾರೆ. ಇಬ್ಬರು ವರ್ಕೌಟ್‌ನಲ್ಲಿ ನಿರತರಾಗಿದ್ದಾರೆ. ಅಲ್ಲಿಯೇ ವ್ಯಾಯಾಮ ಮಾಡುತ್ತಿದ್ದ ಕವಿತಾ ರೆಡ್ಡಿ ಎಂಬುವರು ಇಬ್ಬರ ಬಳಿಗೆ ಬಂದಿದ್ದಾರೆ. ‘ಸಂಯುಕ್ತಾ ಸರಿಯಾದ ಬಟ್ಟೆ ಧರಿಸಿಲ್ಲ’ ಎಂದು ಆಕ್ಷೇಪಿಸಿದ್ದಾರೆ. ಅವರ ಮಾತಿಗೆ ಸಂಯುಕ್ತಾ ಮತ್ತು ಆಕೆಯ ಸ್ನೇಹಿತೆ ಪ್ರತ್ಯುತ್ತರ ನೀಡಿದ್ದಾರೆ. ಇದರಿಂದ ಕೋಪಗೊಂಡ ಕವಿತಾ, ಸಂಯುಕ್ತಾಳ ಸ್ನೇಹಿತೆ ಮೇಲೆ ಹಲ್ಲೆ ಮಾಡಿದ್ದಾರೆ. ಜೊತೆಗೆ, ವರ್ಕೌಟ್‌ ಅನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

‘ನಾನು ಮತ್ತು ನನ್ನ ಸ್ನೇಹಿತೆ ವರ್ಕೌಟ್‌ ಮಾಡುತ್ತಿದ್ದೆವು. ನಮ್ಮ ವರ್ಕೌಟ್‌ ಉಡುಪುಗಳ ಬಗ್ಗೆ ಕವಿತಾ ರೆಡ್ಡಿ ಆಕ್ಷೇಪಿಸಿದರು. ನಿಂದನೆ ಮತ್ತು ಅಪಹಾಸ್ಯ ಮಾಡಿದರು. ಇಂತಹ ನೈತಿಕ ಪೊಲೀಸ್‌ಗಿರಿ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಸಂಯುಕ್ತಾ ಇನ್‌ಸ್ಟಾಗ್ರಾಮ್‌ನಲ್ಲಿ ಕೋರಿದ್ದಾರೆ. ಕವಿತಾ ಜೊತೆಗೆ ವ್ಯಕ್ತಿಯೊಬ್ಬರು ಈ ಇಬ್ಬರಿಗೆ ಬೆದರಿಕೆ ಹಾಕಿದ್ದಾರಂತೆ.

‘ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯಾಯಾಮ ಮಾಡುತ್ತಿದ್ದ ನಮ್ಮನ್ನು ಕವಿತಾ ರೆಡ್ಡಿ ಸೇರಿದಂತೆ ಗುಂಪೊಂದು ನಿಂದಿಸಿದೆ. ಅವರಿಗೆ ಸಮಾಧಾನದಿಂದಲೇ ವಸ್ತುಸ್ಥಿತಿ ವಿವರಿಸಲು ನಾನು ಮುಂದಾದೆ. ಆದರೆ, ಆಕೆ ನನ್ನ ಸ್ನೇಹಿತೆಯನ್ನು ಹೊಡೆದರು. ಅವಾಚ್ಯ ಶಬ್ದಗಳಿಂದಲೂ ನಿಂದಿಸಿದರು. ಈ ಘಟನೆ ನಡೆಯುವಾಗ ಹತ್ತಿರದಲ್ಲಿಯೇ ಪೊಲೀಸರು ಇದ್ದರು. ಆದರೆ, ಅವರು ನೆರವಿಗೆ ಬರಲಿಲ್ಲ. ಇದು ನನಗೆ ನೋವು ತಂದಿದೆ’ ಎಂದು ತಿಳಿಸಿದ್ದಾರೆ.

ಕಾನೂನು ಕ್ರಮಕ್ಕೆ ಆಗ್ರಹ

ಹಲ್ಲೆ ಮಾಡಿರುವ ಮಹಿಳೆಯರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕನ್ನಡ ಚಿತ್ರರಂಗದ ಹಲವು ನಟ, ನಟಿಯರು ಟ್ವಿಟರ್‌ನಲ್ಲಿ ಆಗ್ರಹಿಸಿದ್ದಾರೆ.

‘ಸಂಯುಕ್ತಾ ಹೆಗ್ಡೆ ಮೇಲೆ ಇಂದು ಹಲ್ಲೆಯಾಗಿದೆ. ನಾಳೆ ನಮ್ಮ ನೆರೆಹೊರೆಯವರಿಗೆ ಇಂತಹ ಅನುಭವವಾಗಲಿದೆ. ಮುಂದೆ ನಮ್ಮ ಕುಟುಂಬದ ಸದಸ್ಯರಿಗೆಯೇ ಇಂಥದ್ದು ನಡೆಯಬಹುದು. ಈ ಮಹಿಳೆಗೆ ಶಿಕ್ಷೆ ಆಗಬೇಕು’ ಎಂದು ಟ್ವೀಟ್‌ ಮಾಡಿದ್ದಾರೆ ನಿರ್ದೇಶಕ ಸಂತೋಷ್‌ ಆನಂದ್‌ರಾಮ್. 

‘ಮಹಿಳೆಯರ ವಿರುದ್ಧ ಈ ಕೃತ್ಯ ಎಸಗಿರುವ ಕವಿತಾ ರೆಡ್ಡಿ ಅವರನ್ನು ಬಂಧಿಸಬೇಕು’ ಎಂದು ನಟಿ ಪಾರುಲ್‌ ಯಾದವ್‌ ಪ್ರತಿಕ್ರಿಯಿಸಿದ್ದಾರೆ.

 
 
 
 

 
 
 
 
 
 
 
 
 
 
 

A post shared by Samyuktha Hegde (@samyuktha_hegde) on

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು