ಶನಿವಾರ, ಜುಲೈ 24, 2021
27 °C

ಇಂದಿಗೂ ರಾಣಿ ಸುಧಾರಾಣಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟಿ ಸುಧಾರಾಣಿ

ಶಿವರಾಜ್‌ ಕುಮಾರ್ ಅವರು ನಾಯಕನಾಗಿ ನಟಿಸಿದ ‘ಆನಂದ್’ ಚಿತ್ರದ ಮೂಲಕ ನಾಯಕಿಯಾಗಿ ಸಿನಿಮಾ ರಂಗ ಪ್ರವೇಶಿಸಿದರು ನಟಿ ಸುಧಾರಾಣಿ. ಈ ಚಿತ್ರ ತೆರೆಗೆ ಬಂದು 34 ವರ್ಷಗಳು ಕಳೆದಿವೆ. ‘ಒಂದು ವಯಸ್ಸು ದಾಟಿಬಿಟ್ಟರೆ ಹೆಣ್ಣುಮಕ್ಕಳಿಗೆ ಕನ್ನಡ ಸಿನಿಮಾ ರಂಗದಲ್ಲಿ ಪಾತ್ರಗಳು ಸಿಗುವುದಿಲ್ಲ’ ಎನ್ನುವ ಅಭಿಪ್ರಾಯದ ನಡುವೆಯೇ, ಈಗಲೂ ನಾಲ್ಕು ಸಿನಿಮಾಗಳನ್ನು ಕೈಯಲ್ಲಿ ಇಟ್ಟುಕೊಂಡಿದ್ದಾರೆ ಸುಧಾರಾಣಿ!

‘ಇದು ಹೇಗೆ ಸಾಧ್ಯವಾಯಿತು’ ಎಂದು ಪ್ರಶ್ನಿಸಿದರೆ, ‘ಇದರ ಅಷ್ಟೂ ಶ್ರೇಯಸ್ಸು ನಾನು ನಟಿಸಿದ ಎಲ್ಲ ಸಿನಿಮಾಗಳ ನಿರ್ದೇಶಕರು, ನಿರ್ಮಾಪಕರು ಹಾಗೂ ಆ ಸಿನಿಮಾಗಳನ್ನು ವೀಕ್ಷಿಸಿದ ಸಿನಿಮಾ ಪ್ರೇಮಿಗಳಿಗೆ ಸಲ್ಲಬೇಕು. ಅವರು ನನಗೆ ಇಷ್ಟೊಂದು ಅವಕಾಶ ಕೊಡದೆ ಇದ್ದಿದ್ದರೆ ಇದೆಲ್ಲ ಸಾಧ್ಯವಾಗುತ್ತಿರಲಿಲ್ಲ. ಹಾಗೆಯೇ, ನನಗೆ ಸಿಕ್ಕ ಪಾತ್ರಗಳು ಕೂಡ ಇದಕ್ಕೆ ಕಾರಣ. ಆನಂದ್ ಸಿನಿಮಾದಿಂದ ಶುರುವಾಗಿ ನನಗೆ ನನ್ನ ವೃತ್ತಿಯುದ್ದಕ್ಕೂ ಒಳ್ಳೆಯ ಪಾತ್ರಗಳು ಸಿಕ್ಕಿವೆ. ಮೊದಲ (ಆನಂದ್) ಸಿನಿಮಾದಲ್ಲೇ ಅಂಥದ್ದೊಂದು ಅವಕಾಶ ಸಿಗುವುದು ಅಪರೂಪ’ ಎಂದು ಉತ್ತರ ನೀಡುತ್ತಾರೆ ಸುಧಾರಾಣಿ.

‘ನನಗೆ ಗ್ಲಾಮರ್ ಇರುವ ಪಾತ್ರಗಳು ಸಿಕ್ಕವು. ಹಾಗೆಯೇ, ಅಭಿನಯಕ್ಕೆ ಹೆಚ್ಚಿನ ಮಹತ್ವ ಇರುವ ಪಾತ್ರಗಳೂ ದೊರೆತವು. ನಾಯಕಿ ಕೇಂದ್ರಿತ ಸಿನಿಮಾಗಳೂ ನನಗೆ ದೊರೆತವು. ನನ್ನ ವೃತ್ತಿ ಜೀವನದಲ್ಲಿ ಇಂತಹ ಪಾತ್ರಗಳು ಸಿಗುವುದು ತಡವಾಗಲಿಲ್ಲ. ಅವನೇ ನನ್ನ ಗಂಡ ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿತ್ತು. ಪಂಚಮವೇದ ಚಿತ್ರದಲ್ಲಿ ಕೂಡ ಒಳ್ಳೆಯ ಪಾತ್ರ ಸಿಕ್ಕಿತು. ಈ ಚಿತ್ರಗಳೆಲ್ಲ ನನಗೆ ವೃತ್ತಿ ಜೀವನದಲ್ಲಿ ಬಹುಬೇಗ ಸಿಕ್ಕವು’ ಎಂದು ತಮ್ಮ ಸಿನಿಮಾ ಜೀವನದ ಆರಂಭದ ದಿನಗಳನ್ನು ಅವರು ನೆನಪಿಸಿಕೊಳ್ಳುತ್ತಾರೆ.

ವರ್ಷಕ್ಕೆ ಒಂದೇ ಸಿನಿಮಾದಲ್ಲಿ ನಟಿಸಿದರೂ ಚಿಂತೆಯಿಲ್ಲ. ಆದರೆ ಆ ಚಿತ್ರದಲ್ಲಿ ಸಿಗುವ ಪಾತ್ರವು ವೀಕ್ಷಕರ ಮನಸ್ಸಿನಲ್ಲಿ ಉಳಿದುಕೊಳ್ಳಬೇಕು ಎಂದು ಸುಧಾರಾಣಿ ಬಯಸಿದ್ದರು. ಅದೃಷ್ಟವಶಾತ್ ಅವರಿಗೆ ಅಂತಹ ಪಾತ್ರಗಳು ಸಿಕ್ಕವು. ‘ಎಲ್ಲ ಬಗೆಯ ಪಾತ್ರಗಳೂ ನನಗೆ ಸಿಕ್ಕವು. ಕನ್ನಡ ಸಿನಿಮಾ ರಂಗದ ಅತ್ಯುತ್ತಮ ನಿರ್ದೇಶಕರ ಜೊತೆ ಕೆಲಸ ಮಾಡುವ ಅವಕಾಶ ಕೂಡ ನನ್ನದಾಯಿತು. ಅವರೆಲ್ಲರೂ ನಾನು ಚೆನ್ನಾಗಿ ಅಭಿನಯಿಸುವಂತೆ ಮಾಡಿದರು. ನಟನೆಯ ಯಾವ ಹಿನ್ನೆಲೆಯೂ ನನಗೆ ಇರಲಿಲ್ಲ. ರಂಗಭೂಮಿಯ ಅನುಭವ ಕೂಡ ಇರಲಿಲ್ಲ’ ಎಂದರು.

ಪೋಷಕ ಪಾತ್ರಗಳನ್ನು ನಿಭಾಯಿಸಬೇಕಾದ ಜವಾಬ್ದಾರಿ ಎದುರಾದಾಗ ಕೂಡ ಸುಧಾರಾಣಿ ಹಿಂದೆ–ಮುಂದೆ ನೋಡುತ್ತ ಕೂರಲಿಲ್ಲ. ತಾವು ಸದಾ ನಾಯಕಿ ಆಗಿಯೇ ಉಳಿಯಬೇಕು ಎಂದು ಬಯಸಲಿಲ್ಲ. ‘ನಾವು ಎಲ್ಲ ಬಗೆಯ ಪಾತ್ರಗಳನ್ನು ನಿಭಾಯಿಸುತ್ತ ಬರಬೇಕು. ಕೆಲವೊಮ್ಮೆ ಪೋಷಕ ಪಾತ್ರಗಳ ಕಾರಣದಿಂದಾಗಿಯೇ ಹೀರೊ, ಹಿರೋಯಿನ್ ಪಾತ್ರ ವೀಕ್ಷಕರ ಮನಸ್ಸಿನಲ್ಲಿ ನೆಲೆ ಕಂಡುಕೊಳ್ಳುವುದಿದೆ. ಹಾಗಾಗಿ ಎಲ್ಲ ಬಗೆಯ ಪಾತ್ರಗಳನ್ನೂ ನಾನು ನಿಭಾಯಿಸಿದೆ’ ಎಂದು ಅವರು ಹೇಳುತ್ತಾರೆ.

‘ಒಂದು ಹಂತ ದಾಟಿದ ನಂತರ ಕನ್ನಡದಲ್ಲಿ ಹೆಣ್ಣುಮಕ್ಕಳಿಗೆ ಒಳ್ಳೆಯ ಪಾತ್ರಗಳು ಸಿಗುವುದಿಲ್ಲ’ ಎಂದು ಬೇಸರಪಟ್ಟುಕೊಳ್ಳುವವರಿಗೆ ಸುಧಾರಾಣಿ ಕೆಲವು ಮಾತುಗಳನ್ನು ಹೇಳುತ್ತಾರೆ. ‘ಸಿಕ್ಕ ಅವಕಾಶಗಳ ಪೈಕಿ ಉತ್ತಮ ಆಗಿರುವುದನ್ನು ಆಯ್ಕೆ ಮಾಡಿಕೊಳ್ಳಬೇಕು. ನಾಳೆ ಊಟ ಸಿಗಲಾರದು ಎಂಬ ಭಯ ಇದ್ದರೂ ಇಂದು ಹೊಟ್ಟೆ ಒಡೆದುಹೋಗುವಷ್ಟು ತಿನ್ನಲು ಆಗದು. ಹಾಗೆ ತಿನ್ನಬಾರದು. ಹತ್ತು ಆಫರ್‌ಗಳು ಬಂದರೆ, ನಾಲ್ಕು ಒಳ್ಳೆಯ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಆ ಚಿತ್ರಗಳಲ್ಲಿನ ಪಾತ್ರ ಜನರ ಮನಸ್ಸಿನಲ್ಲಿ ಉಳಿದುಕೊಳ್ಳುವಂತೆ ಆಗಬೇಕು. ಆಗ ಕಲಾವಿದರು ಬಹುಕಾಲ ಬಾಳಬಹುದು’ ಎನ್ನುವುದು ಅವರ ಮಾತು.

‘ಸಿನಿಮಾ ಕ್ಷೇತ್ರದಲ್ಲಿ ಹೆಣ್ಣುಮಕ್ಕಳು ನಿರ್ದಿಷ್ಟ ವಯಸ್ಸು ದಾಟಿದ ನಂತರ, ಅವರನ್ನು ಅಮ್ಮ, ಅತ್ತಿಗೆ, ಅತ್ತೆಯ ಪಾತ್ರಕ್ಕೆ ಸೀಮಿತ ಮಾಡಿಬಿಡುವ ಸಾಧ್ಯತೆ ಇದೆ. ಹಾಗಂತ, ಅವಕಾಶಗಳು ಸಿಗುವುದೇ ಇಲ್ಲವೆಂಬ ಭೀತಿಯೂ ಬೇಡ. ನಾನು ಈಗ ಸಿನಿಮಾಗಳಲ್ಲಿ ತೆರೆಯ ಮೇಲೆ ಎಷ್ಟು ಹೊತ್ತು ಕಾಣಿಸಿಕೊಳ್ಳುತ್ತೇನೆ ಎಂದು ಆಲೋಚಿಸುವುದನ್ನು ಬಿಟ್ಟುಬಿಟ್ಟಿದ್ದೇನೆ. ಬದಲಿಗೆ, ನನ್ನ ಪಾತ್ರವು ವೀಕ್ಷಕರ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ಗಮನಿಸುವೆ’ ಎಂದು ತಾವು ಪಾಲಿಸಿಕೊಂಡು ಬಂದಿರುವ ಸೂತ್ರವನ್ನು ವಿವರಿಸಿದರು.

**

ನಾನು ನಿರ್ದಿಷ್ಟ ಬಗೆಯ ಪಾತ್ರಗಳಿಗೆ ಸೀಮಿತ ಆಗಲಿಲ್ಲ. ಹಾಗೆಯೇ, ಪಾತ್ರಗಳ ಆಯ್ಕೆಯಲ್ಲಿ ಯಾವತ್ತೂ ಯಾವುದೇ ರೀತಿಯಲ್ಲೂ ರಾಜಿ ಮಾಡಿಕೊಳ್ಳಲಿಲ್ಲ.
– ಸುಧಾರಾಣಿ, ನಟಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು