ಬುಧವಾರ, ಅಕ್ಟೋಬರ್ 21, 2020
21 °C

ಸಂಭಾವನೆ ಹೆಚ್ಚಿಸಿಕೊಂಡ ‘ಮಿಲ್ಕಿ ಬ್ಯೂಟಿ’ ತಮನ್ನಾ ಭಾಟಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಅಂಧಾದುನ್’ ಎರಡು ವರ್ಷದ ಹಿಂದೆ ತೆರೆಕಂಡ ಶ್ರೀರಾಮ್ ರಾಘವನ್ ನಿರ್ದೇಶನದ ಕ್ರೈಮ್‌, ಥ್ರಿಲ್ಲರ್ ಚಿತ್ರ. ಇದರಲ್ಲಿ ಅಂಧನ ಪಾತ್ರಕ್ಕೆ ಬಣ್ಣ ಹಚ್ಚಿದ್ದು ಬಾಲಿವುಡ್‌ ನಟ ಆಯುಷ್ಮಾನ್ ಖುರಾನ. ನಟಿ ಟಬು ಬೋಲ್ಡ್‌ ಪಾತ್ರದಲ್ಲಿ ನಟಿಸಿದ್ದರು. ಅಂಧನಂತೆ ನಟಿಸುತ್ತಲೇ ಯುವಕನೊಬ್ಬ ತನ್ನ ಸುತ್ತಲೂ ನಡೆಯುವ ಅಪರಾಧ ಕೃತ್ಯಗಳಿಗೆ ಸಾಕ್ಷಿಯಾಗುತ್ತಾ ಕೊನೆಗೆ ತಾನೂ ಆ ಷಡ್ಯಂತ್ರದ ಜಾಲದೊಳಕ್ಕೆ ಸಿಲುಕಿಕೊಳ್ಳುವುದೇ ಇದರ ಕಥಾಹಂದರ.

ಗಲ್ಲಾಪೆಟ್ಟಿಗೆಯಲ್ಲಿ ಸೂಪರ್‌ ಹಿಟ್ ಆಗಿದ್ದ ಈ ಚಿತ್ರ ಈಘ ತೆಲುಗಿಗೂ ರಿಮೇಕ್‌ ಆಗುತ್ತಿದೆ. ಆಯುಷ್ಮಾನ್‌ ನಟಿಸಿದ್ದ ಪಾತ್ರದಲ್ಲಿ ನಿತಿನ್‌ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ತಬು ಪಾತ್ರದಲ್ಲಿ ಬಣ್ಣ ಹಚ್ಚುತ್ತಿರುವುದು ನಟಿ ತಮನ್ನಾ ಭಾಟಿಯಾ. ಈ ಪಾತ್ರಕ್ಕೆ ಆಕೆ ಕೇಳಿರುವ ದುಬಾರಿ ಸಂಭಾವನೆಯಿಂದ ನಿರ್ಮಾಪಕರು ಪೇಚಿಗೆ ಸಿಲುಕಿದ್ದಾರೆ. ತಮನ್ನಾ ಸಂಭಾವನೆ ಹೆಚ್ಚಿಸಿಕೊಂಡಿರುವುದು ಟಾಲಿವುಡ್‌ ಅಂಗಳದಲ್ಲಿ ಚರ್ಚೆಗೆ ಗ್ರಾಸವಾಗಿದೆ. 

ಟಬು ಅವರನ್ನೇ ರಿಮೇಕ್‌ ಚಿತ್ರಕ್ಕೂ ಕರೆತರಲು ಚಿತ್ರತಂಡ ನಿರ್ಧರಿಸಿತ್ತು. ಆದರೆ, ಆಕೆ ದುಬಾರಿ ಸಂಭಾವನೆ ಮುಂದಿಟ್ಟ ಪರಿಣಾಮ ಹಿಂದೆ ಸರಿದಿತ್ತು. ಕೊನೆಗೆ, ನಟಿ ನಯನ ತಾರಾ ಅವರೊಟ್ಟಿಗೂ ಮಾತುಕತೆ ನಡೆಸಲಾಗಿತ್ತು. ಆದರೆ, ಆಕೆ ಬೋಲ್ಡ್‌ ಪಾತ್ರದಲ್ಲಿ ನಟಿಸಲು ಸಿದ್ಧಳಿಲ್ಲ ಎಂದು ತಿರಸ್ಕರಿಸಿದ್ದರು. ಕೊನೆಗೆ, ತಮನ್ನಾ ಇದರಲ್ಲಿ ನಡೆಸುತ್ತಿದ್ದಾರೆ.

ಈ ಬೋಲ್ಡ್‌ ಪಾತ್ರಕ್ಕೆ ‘ಮಿಲ್ಕಿ ಬ್ಯೂಟಿ’ ಬರೋಬ್ಬರಿ ₹ 2 ಕೋಟಿ ಸಂಭಾವನೆ ಕೇಳಿದ್ದಾರಂತೆ. ನಾಯಕನಿಗಿರುವಷ್ಟೇ ಪ್ರಾಧಾನ್ಯ ಈ ಪಾತ್ರಕ್ಕೂ ಇದೆ. ಮತ್ತೊಂದೆಡೆ ನಿರ್ಮಾಪಕರಿಗೆ ಬೇರೆ ಆಯ್ಕೆಗಳಿಲ್ಲ. ಹಾಗಾಗಿ, ಆಕೆ ಕೇಳಿರುವಷ್ಟು ಸಂಭಾವನೆ ನೀಡಲು ಸಮ್ಮತಿಸಿದ್ದಾರಂತೆ.

ಕಳೆದ ಫೆಬ್ರುವರಿಯಲ್ಲಿಯೇ ಈ ಚಿತ್ರದ ಮುಹೂರ್ತ ನೆರವೇರಿದೆ. ಪಾತ್ರವರ್ಗದ ಆಯ್ಕೆಯ ಜೊತೆಗೆ ಶೂಟಿಂಗ್‌ಗೆ ಸಿದ್ಧತೆ ನಡೆಸಿದ್ದ ಚಿತ್ರತಂಡಕ್ಕೆ ಕೋವಿಡ್‌–19 ಬಿಸಿ ತಟ್ಟಿತು. ಇದರಲ್ಲಿ ನಿತಿನ್‌ಗೆ ಜೋಡಿಯಾಗಿ ನಭಾ ನಟೇಶ್‌ ನಟಿಸುತ್ತಿದ್ದಾರೆ. ಮೆರ್ಲಪಾಕ ಗಾಂಧಿ ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.

ಇದಕ್ಕೆ ಬಂಡವಾಳ ಹೂಡುತ್ತಿರುವುದು ಎನ್‌. ಸುಧಾಕರ್‌ ರೆಡ್ಡಿ ಮತ್ತು ನಿಖಿತಾ ರೆಡ್ಡಿ. ನವೆಂಬರ್‌ನಿಂದ ಇದರ ಶೂಟಿಂಗ್‌ ಶುರುವಾಗಲಿದೆ. ಮಹತಿ ಸ್ವರ ಸಾಗರ್‌ ಸಂಗೀತ ಸಂಯೋಜಿಸಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು